ಪಿಯು ಫಲಿತಾಂಶ: ಕಲಬುರಗಿ 1 ಸ್ಥಾನ ಜಿಗಿತ

Team Udayavani, Apr 16, 2019, 12:25 PM IST

ಕಲಬುರಗಿ: ಹಿಂದುಳಿದ ಹೈದ್ರಾಬಾದ್‌ -ಕರ್ನಾಟಕ ಪ್ರದೇಶದ ಕೇಂದ್ರ ಸ್ಥಾನವಾದ ಕಲಬುರಗಿ ಜಿಲ್ಲೆ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶದಲ್ಲಿ ಈ ವರ್ಷವೂ ನೆಲ ಕಚ್ಚಿದೆ. ಕಳೆದ ಐದು ವರ್ಷದ ಹಿಂದೆ ಹೇಳಿಕೊಳ್ಳುವಂತ ಸ್ಥಾನದಲ್ಲಿದ್ದ ಜಿಲ್ಲೆಯ ಫಲಿತಾಂಶ ಕಳೆದ ವರ್ಷದಿಂದ ಮತ್ತೆ ಕಳಪೆಯಾಗಿದೆ. ಆದರೆ, ಹಿಂದಿನ ವರ್ಷಕ್ಕಿಂತ ಪ್ರಸಕ್ತ ವರ್ಷ ಒಂದು ಸ್ಥಾನ ಜಿಗಿತ ಕಂಡಿರುವುದೇ ಸಮಾಧಾನಕರ ಸಂಗತಿ. 2018-19ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಜಿಲ್ಲೆಗೆ ಶೇ.56.09ರಷ್ಟು ಪ್ರತಿಶತ ಫಲಿತಾಂಶ ಬಂದಿದೆ. ರಾಜ್ಯದ ಶೇಕಡಾವಾರು ಫಲಿತಾಂಶದ ಪಟ್ಟಿಯಲ್ಲಿ 29ನೇ ಸ್ಥಾನವನ್ನು ಕಲಬುರಗಿ ಪಡೆದಿದೆ. ಕೆಳ ಹಂತದಿಂದ ಕಲಬುರಗಿ ನಾಲ್ಕನೇ ಸ್ಥಾನದಲ್ಲಿದೆ. ಅದರಲ್ಲಿ ಪ್ರಸಕ್ತ ವರ್ಷ ಶೇ.2.28ರಷ್ಟು ಫಲಿತಾಂಶ ಪ್ರಗತಿ ಕಂಡಿರುವುದರಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ. ಕಳೆದ ವರ್ಷದ ಜಿಲ್ಲೆಯ ಫಲಿತಾಂಶ ಶೇ.53.61ರಷ್ಟಿತ್ತು. ಶೇಕಡಾವಾರು ಫಲಿತಾಂಶದಲ್ಲಿ 30ನೇ ಸ್ಥಾನ ಪಡೆದಿತ್ತು.
ಹೈದ್ರಾಬಾದ್‌-ಕರ್ನಾಟಕದ ಜಿಲ್ಲೆಗಳ ಫಲಿತಾಂಶಕ್ಕೆ ಹೋಲಿಸಿದರೆ ಕೇಂದ್ರ ಸ್ಥಾನ ಕಲಬುರಗಿಯ ಸಾಧನೆಯೇ ತೀರಾ ಕಳಪೆಯಾಗಿದೆ. ಬಳ್ಳಾರಿ (ಶೇ.64.87), ಕೊಪ್ಪಳ (ಶೇ.63.15) ಕ್ರಮವಾಗಿ 19 ಮತ್ತು 20 ಸ್ಥಾನ ಪಡೆದು, ಹೈ-ಕ ಭಾಗದಲ್ಲಿ ಪ್ರಥಮ, ದ್ವಿತೀಯ ಸ್ಥಾನದಲ್ಲಿರುವುದು ಗಮನಾರ್ಹ. ತೃತೀಯ ಸ್ಥಾನದಲ್ಲಿರುವ ರಾಯಚೂರು (ಶೇ.56.09) 27ನೇ ಸ್ಥಾನ ಪಡೆದು ಕಲಬುರಗಿಕ್ಕಿಂತ ಎರಡು ಸ್ಥಾನಗಳಲ್ಲಿ ಮುಂದಿದೆ. ಬೀದರ ಮತ್ತು ಯಾದಗಿರಿ ಜಿಲ್ಲೆಗಳು ಕಲಬುರಗಿ ಜಿಲ್ಲೆಯ ನಂತರದ ಸ್ಥಾನದಲ್ಲಿದ್ದು, ಶೇಕಡಾವಾರು ಫಲಿತಾಂಶದಲ್ಲಿ ಬೀದರ (ಶೇ.55.78) 30 ಹಾಗೂ ಯಾದಗಿರಿ (ಶೇ.53.02) 31ನೇ ಸ್ಥಾನ ಪಡೆದಿವೆ.
23ನೇ ಸ್ಥಾನ ಪಡೆದಿತ್ತು: ಪಿಯು ಫಲಿತಾಂಶ ಎಂಬುವುದು ಶಿಕ್ಷಣ ಇಲಾಖೆ, ಉಪನ್ಯಾಸಕರು, ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಒಂದು ರೀತಿಯಲ್ಲೇ ನುಂಗಲಾಗದ ಕಹಿ ಮಾತ್ರೆಯೇ ಆಗಿದೆ. ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ
ಅನೇಕ ಕ್ರಮಗಳನ್ನು ಕೈಗೊಂಡಿರುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಲೇ ಇರುತ್ತಾರೆ. ಆದರೆ, ಫಲಿತಾಂಶ
ಪ್ರಕಟವಾದಾಗ ಮತ್ತದೇ ಕಳಪೆ ಸಾಧನೆ ಎನ್ನೋದು ಸಾಮಾನ್ಯವಾಗಿದೆ. 2013-14ನೇ ಸಾಲಿನಲ್ಲಿ ಶೇ.57.89ರಷ್ಟು ಫಲಿತಾಂಶದೊಂದಿಗೆ 29ನೇ ಸ್ಥಾನವನ್ನು ಕಲಬುರಗಿ ಪಡೆದಿತ್ತು. ಆದರೆ, ಆಶ್ಚರ್ಯಕರ ರೀತಿಯಲ್ಲಿ ಮಾರನೆ ವರ್ಷ 2014-15ರಲ್ಲಿ ಶೇ.61.06ರಷ್ಟು ಫಲಿತಾಂಶ ಬಂದಿತ್ತು. ಆ ವರ್ಷ ಫಲಿತಾಂಶ ಪಟ್ಟಿಯಲ್ಲಿ 23ನೇ ಸ್ಥಾನ ಪಡೆಯುವ ಮೂಲಕ ಆರು ಸ್ಥಾನಗಳ ಜಿಗಿತವನ್ನು ಜಿಲ್ಲೆ ಕಂಡಿತ್ತು. ನಂತರದಲ್ಲಿ ಮತ್ತೆ ಸತತ ಕುಸಿತವನ್ನು ಜಿಲ್ಲೆ ಕಂಡಿದೆ. 2015-16ರಲ್ಲಿ ಶೇ.57.05ರಷ್ಟು ಫಲಿತಾಂಶದೊಂದಿಗೆ 25ನೇ ಸ್ಥಾನ, 2016 -17ರಲ್ಲಿ ಶೇ.44ರಷ್ಟು ಫಲಿತಾಂಶದೊಂದಿಗೆ 27ನೇ ಸ್ಥಾನ
ಪಡೆದಿತ್ತು. 2017-18ರಲ್ಲಿ 53.61ರಷ್ಟು ಫಲಿತಾಂಶದೊಂದಿಗೆ 30ನೇ ಸ್ಥಾನ ಪಡೆದಿತ್ತು. ಈ ವರ್ಷ 29ನೇ ಸ್ಥಾನ ಪಡೆದು ಒಂದು ಸ್ಥಾನ ಜಿಗಿತ ಕಂಡಿದ್ದು, ಮುಂದಿನ ಸ್ಥಾನ ಪಡೆಯಲಿದೆ ಎಂಬ ಸಹಜ ಕುತೂಹಲ ಇದ್ದೇ ಇದೆ.
ಬಾಲಕಿಯರದ್ದೇ ಮೇಲುಗೈ ಈ ವರ್ಷ ಪಿಯು ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ ಒಟ್ಟು 28,865 ವಿದ್ಯಾರ್ಥಿಗಳಲ್ಲಿ 14,290 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಇದರಲ್ಲಿ 7,392 ಬಾಲಕಿಯರು, 6,898 ಬಾಲಕರು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು 12,546 ವಿದ್ಯಾರ್ಥಿಗಳ ಪೈಕಿ 4,821, ವಾಣಿಜ್ಯ ವಿಭಾಗದಲ್ಲಿ 5,620 ವಿದ್ಯಾರ್ಥಿಗಳ ಪೈಕಿ 2,014 ಮತ್ತು ವಿಜ್ಞಾನ ವಿಭಾಗದಲ್ಲಿ 10,699 ವಿದ್ಯಾರ್ಥಿಗಳ ಪೈಕಿ 6,655 ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ನಗರ ಪ್ರದೇಶದಲ್ಲಿ 12,044 ಹಾಗೂ ಗ್ರಾಮೀಣ ಪ್ರದೇಶದಲ್ಲಿ 2,246 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಮಹೇಶ ಜಿಲ್ಲೆಗೆ ಟಾಪರ್‌ ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಘೋಷಿತ ಪಿಯುಸಿ ಫಲಿತಾಂಶದಲ್ಲಿ ಖಣದಾಳದ ಶರಣಮ್ಮ ಡಿಗ್ಗಾವಿ ಸ್ಮರಣಾರ್ಥದ ಶ್ರೀಗುರು ವಿದ್ಯಾಪೀಠದ ಮಹೇಶ ಭಕರೆ ಜಿಲ್ಲೆಗೆ ಟಾಪರ್‌ ಸ್ಥಾನ ಪಡೆದಿದ್ದಾನೆ. 587  ಕಗಳನ್ನು
ಪಡೆಯುವ ಮೂಲಕ ಸಾಧನೆ ತೋರಿದ್ದು, ಗ್ರಾಮೀಣ ಭಾಗದಿಂದ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿರುವ ಮಹೇಶ ಮಾದರಿಯಾಗಿ ಹೊರ ಹೊಮ್ಮಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಡಿಗ್ಗಾವಿ ಹಾಗೂ ಕಾರ್ಯದರ್ಶಿ ಶಿವರಾಜ ಡಿಗ್ಗಾವಿ ಹರ್ಷ ವ್ಯಕ್ತಪಡಿಸಿದ್ದಾರೆ.
ಶೈಕ್ಷಣಿಕ ವರ್ಷಕ್ಕೆ ಐದು ತಿಂಗಳು ಬಾಕಿಯಿರುವಾಗ ಜಿಲ್ಲೆಗೆ ಬಂದಿದ್ದೇನೆ. ಐದು ತಿಂಗಳಲ್ಲಿ ಉತ್ತಮ ಫಲಿತಾಂಶ
ಪಡೆಯಲು ಸಾಕಷ್ಟು ಪ್ರಯತ್ನ ಪಡಲಾಗಿದೆ. ಚುನಾವಣಾ ಮತ್ತು ಪರೀಕ್ಷೆಗಳು ಒಟ್ಟಾಗಿ ಬಂದಿದ್ದರಿಂದ ಫಲಿತಾಂಶಕ್ಕೆ ತೊಡಕಾಗಿದೆ. ಮುಂದಿನ ವರ್ಷ ಸಮಗ್ರವಾದ ಯೋಜನೆ ಹಾಕಿಕೊಂಡು ಫಲಿತಾಂಶ ಸುಧಾರಣೆಗೆ ಶ್ರಮಿಸಲಾಗುವುದು.
 ಶಿವಶರಣಪ್ಪ ಮೂಳೆಗಾಂವ ಉಪನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಐಎನ್‌ಎಕ್ಸ್‌ ಪ್ರಕರಣದಲ್ಲಿ ಮಾಜಿ ಸಚಿವ ಪಿ. ಚಿದಂಬರಂಗೆ ಜಾಮೀನು ಕೊಡಲೇಬಾರದು ಎಂದು ಸಿಬಿಐ ದಿಲ್ಲಿ ಹೈಕೋರ್ಟ್‌ ನಲ್ಲಿ ಒತ್ತಾಯಿಸಿದೆ. ಇದೊಂದು...

  • ಉಡುಪಿ: ಶ್ರೀ ಕೃಷ್ಣಾಷ್ಣಮಿ ಪ್ರಯುಕ್ತ "ಉದಯವಾಣಿ'ಯು ನಗರದ ಗೀತಾಂಜಲಿ ಸಿಲ್ಕ್ಸ್ ನ ಸಹಯೋಗದಲ್ಲಿ ಏರ್ಪಡಿಸಿದ್ದ ಯಶೋದಾ ಕೃಷ್ಣ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ...

  • ಹೊಸದಿಲ್ಲಿ: ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇದೇ ಮೊದಲ ಬಾರಿಗೆ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ...

  • ಕೋಲ್ಕತಾ: ಪಶ್ಚಿಮ ಬಂಗಾಲದ ಜಾಧವ್‌ಪುರ ವಿವಿಯಲ್ಲಿ ವಿದ್ಯಾರ್ಥಿಗಳು ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ ಮೇಲೆ ಹಲ್ಲೆ ನಡೆಸಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ....

  • ಹ್ಯೂಸ್ಟನ್‌: ಅಮೆರಿಕದ ಹ್ಯೂಸ್ಟನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಬೃಹತ್‌ ಕಾರ್ಯಕ್ರಮ ಹೌಡಿ ಮೋದಿ ತಯಾರಿಗೆ ಭಾರಿ ಮಳೆ ಅಡ್ಡಿ ಯಾಗಿದೆ. ಈ ಭಾಗದಲ್ಲಿ ಬಿರು ಗಾಳಿ...