ಮೇಲ್ವರ್ಗದ ಶೇ.10 ಮೀಸಲಾತಿ ಆರ್ಥಿಕಮಿತಿ ಕಡಿತಗೊಳಿಸಿ  

Team Udayavani, Feb 27, 2019, 6:56 AM IST

ಕೋಲಾರ: ಮೀಸಲಾತಿಯಲ್ಲಿ ಕೆನೆಪದರ ನೀತಿ ಜಾರಿಯಾಗಬೇಕು ಮತ್ತು ಮೇಲ್ವರ್ಗದವರಿಗೆ ನೀಡಿರುವ ಶೇ.10 ಮೀಸಲಾತಿಯ ಆರ್ಥಿಕ ಮಿತಿ ಕಡಿಮೆ ಮಾಡಬೇಕೆಂದು ಅಖೀತ ಭಾರತ ದಲಿತ ಕ್ರಿಯಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಡಾ.ಚಿ.ನಾ.ರಾಮು ಆಗ್ರಹಿಸಿದರು. ನಗರದ ಪತ್ರಕರ್ತರ ಭವನದಲ್ಲಿ ತಾವು ಬರೆದಿರುವ “ಬಲಿತ ದಲಿತರ ತುಳಿತ, ನನ್ನ ಜನ ಅನಾಥ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಮೀಸಲಾತಿ ಜಾರಿಗೆ ಬಂದಾಗಿನಿಂದಲೂ ಪ್ರತಿ ಹತ್ತು ವರ್ಷಕ್ಕೊಮ್ಮೆ ವಿಸ್ತರಣೆಯಾಗುತ್ತಿದೆ. ವೋಟ್‌ ಬ್ಯಾಂಕ್‌ ರಾಜಕೀಯಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಮುಂದುವರೆಸುತ್ತಿವೆ. ಈ ಮೀಸಲಾತಿ ಸೌಲಭ್ಯ ಪಡೆದುಕೊಂಡವರೆ ಮತ್ತೇ ಮತ್ತೇ ಪಡೆದು ಅರ್ಹರನ್ನು ವಂಚಿಸುತ್ತಿದ್ದಾರೆಂದು ದೂರಿದರು. 

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ 7 ಬಾರಿ ಸಂಸದರಾಗಿ ಕೇಂದ್ರ ಸಚಿವರೂ ಆಗಿದ್ದ ಕೆ.ಎಚ್‌.ಮುನಿಯಪ್ಪ ಜಿಪಂ ಚುನಾವಣೆ, ವಿಧಾನಸಭಾ ಚುನಾವಣೆ ಇರಲಿ ತಮ್ಮ ಪುತ್ರಿಯರನ್ನು ಮಾತ್ರವೇ ನಿಲ್ಲಿಸಲು ಪ್ರಯತ್ನಿಸುತ್ತಾರೆ. ತಮ್ಮ ಕುಟುಂಬಕ್ಕೆ ರಾಜಕೀಯ ಮೀಸಲಾತಿ ಮೀಸಲಿಟ್ಟುಕೊಂಡಿದ್ದಾರೆ. ಇದೇ ರೀತಿ ಮಲ್ಲಿಕಾರ್ಜುನ ಖರ್ಗೆ ಮೀಸಲಾತಿ ಸೌಲಭ್ಯದಡಿ ಗೆದ್ದು ತಮ್ಮ ಪುತ್ರನನ್ನು ಗೆಲ್ಲಿಸಿ ಮಂತ್ರಿಯಾಗಿಸಿದ್ದಾರೆಂದು ದೂರಿದರು.

ದಲಿತರ ಮೇಲೆ ಹಲ್ಲೆ ದೌರ್ಜನ್ಯ ನಡೆಯಲು ಮೇಲ್ವರ್ಗದವರು ಯಾರೂ ಕಾರಣರಲ್ಲ, ಸೌಲಭ್ಯ ಕಸಿದುಕೊಳ್ಳುತ್ತಿರುವ ಬಲಿತ ದಲಿತರೇ ಕಾರಣ. ಕೆಲವೇ ಕುಟುಂಬಗಳು ಮೀಸಲಾತಿ ಸೌಲಭ್ಯವನ್ನು ತಮ್ಮ ಕುಟುಂಬಕ್ಕೆ ಮಾತ್ರವೇ ಸಿಗುವಂತೆ ಅನುಭವಿಸುತ್ತಿದ್ದಾರೆಂದರು.

ಇದರಿಂದ ದಲಿತರಿಗೆ ಸೌಲಭ್ಯಗಳು ಸಿಗದೆ ಅವರು ನೂರಾರು ದಲಿತ ಸಂಘಟನೆಗಳನ್ನು ಕಟ್ಟಿಕೊಂಡು ಬದುಕುವಂತಾಗಿದೆ. ಊನಾದಲ್ಲಿ ಗೋ ಚರ್ಮ ಸುಲಿಯುವ ಘಟನೆಗಳು ನಡೆಯುತ್ತಿವೆ. ಸರಿಯಾದ ರೀತಿಯಲ್ಲಿ ಮೀಸಲಾತಿ ಕಲ್ಪಿಸಿದ್ದರೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಪ್ರತಿಪಾದಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಮೇಲ್ವರ್ಗದವರಿಗೆ ಶೇ.10 ಮೀಸಲಾತಿ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ, ಮೀಸಲಾತಿ ಸೌಲಭ್ಯ ಪಡೆಯಲು ಆರ್ಥಿಕ ಮಿತಿಯನ್ನು 8 ಲಕ್ಷ ಇಟ್ಟಿರುವುದರಿಂದ ಉಳ್ಳವರು ಮೀಸಲಾತಿ ಸೌಲಭ್ಯ ಪಡೆದುಕೊಳ್ಳುತ್ತಾರೆ. ಹೀಗಾಗಿ ಆರ್ಥಿಕ ಮಿತಿ ಕಡಿಮೆ ಇಡಬೇಕೆಂದು ಒತ್ತಾಯಿಸಿದರು.

ಮೀಸಲಾತಿ ಸಮಸ್ಯೆಗಳ ಬಗ್ಗೆ ತಾವು ಪುಸ್ತಕ ಬರೆದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಪ್ರಕಟಿಸಲು ಮುಂದಾಗಿದ್ದೇವೆ. ಈಗಾಗಲೇ ಕನ್ನಡ ಭಾಷೆಯಲ್ಲಿ ಪ್ರಕಟವಾಗಿರುವ ಪುಸ್ತಕವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಲಾಗುತ್ತಿದೆ ಎಂದು ಹೇಳಿದರು. ಯಾವುದೇ ರಾಜಕೀಯ ಪಕ್ಷಕ್ಕೆ ಹಾಗೂ ರಾಜಕೀಯ ಲಾಭಕ್ಕಾಗಿ ತಾವು ಈ ಪುಸ್ತಕ ಬರೆದಿಲ್ಲ.

ಈ ಪುಸ್ತಕದಿಂದ ತಮಗೆ ರಾಜಕೀಯವಾಗಿ ನಷ್ಟವಾದರೂ ಚಿಂತಿಸುವುದಿಲ್ಲ. ಪುಸ್ತಕದ ವಿಚಾರಗಳನ್ನು ದೇಶಾದ್ಯಂತ ಪ್ರಚಾರಪಡಿಸುವುದಾಗಿ ಹೇಳಿದರು. ಅಖೀಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಹನುಮಂತಪ್ಪ, ವೆಂಕಟಾಚಲಪತಿ, ಪುಸ್ತಕದ ನಿರ್ವಹಣೆ ಮಾಡಿದ ನೀರಕಲ್ಲು ಶಿವಕುಮಾರ್‌, ವಕೀಲ ಎನ್‌.ಡಿ.ಶ್ರೀನಿವಾಸ್‌ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ