ಪರಿಹಾರದಲ್ಲಿ ಪಕ್ಷ ರಾಜಕಾರಣ ಸಹಿಸಲ್ಲ

ವಿವಿಧ ಇಲಾಖೆ ಅಧಿಕಾರಿಗಳ ತುರ್ತು ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಖಡಕ್‌ ಎಚ್ಚರಿಕೆ

Team Udayavani, Sep 6, 2019, 3:46 PM IST

ಕೊಪ್ಪ: ಬಾಳಗಡಿಯ ತಾಪಂ ಸಭಾಂಗಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ತುರ್ತು ಸಭೆ ನಡೆಯಿತು.

ಕೊಪ್ಪ: ಅತಿವೃಷ್ಟಿ ಪರಿಹಾರ ಹಣವನ್ನು ನೈಜ ಫಲಾನುಭವಿಗಳಿಗೇ ತಲುಪಿಸಲು ಆಯಾ ಇಲಾಖೆ ಅಧಿಕಾರಿಗಳು ನ್ಯಾಯಯುತವಾಗಿ ಕೆಲಸ ಮಾಡಬೇಕು. ಇನ್ನೊಂದು ಬಾರಿ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಸರಿಯಾದ ವರದಿ ನೀಡಬೇಕು. ಪರಿಹಾರದ ಹಣ ನೀಡುವ ವಿಚಾರದಲ್ಲಿ ಅಧಿಕಾರಿಗಳು ಪಕ್ಷ ರಾಜಕಾರಣ ಮಾಡಿದರೇ ಸಹಿಸಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿವಿಧ ಇಲಾಖೆ ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಗುರುವಾರ ಬಾಳಗಡಿಯ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದರು.

ನೆರೆಯಿಂದ ಹಾನಿಯಾದ ಪ್ರದೇಶದ ಕುರಿತು ನೈಜ ಮಾಹಿತಿಯೊಂದಿಗೆ ವರದಿ ಸಿದ್ಧಪಡಿಸಿ, ಇದುವರೆಗೂ ಮಳೆಯಿಂದ ಹಾನಿಯಾದ ಮನೆಯಲ್ಲಿ ಮುಂದಿನ ದಿನಗಳಲ್ಲಿ ವಾಸಿಸಲು ಕಷ್ಟಕರವಾಗಿದ್ದರೆ ಅಂತಹ ಮನೆಯನ್ನು ಪೂರ್ಣ ಹಾನಿ ಎಂದು ನಮೂದಿಸಿ ಬಡವರಿಗೆ ಸರ್ಕಾರದಿಂದ ನೆರವು ನೀಡುವಲ್ಲಿ ಅಧಿಕಾರಿಗಳು ಸಹಕರಿಸಬೇಕು ಎಂದರು.

ನೆರೆಯಿಂದ ಹಾನಿಯಾದ ರೈತರಿಗೆ, ಬಡವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರ್‌ ಎರ್ರಿಸ್ವಾಮಿ ಅವರಿಗೆ ತಾಕೀತು ಮಾಡಿದರು. ಸಂಸದರ ಮಾತಿಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಎರ್ರಿಸ್ವಾಮಿ, ತಾಲೂಕಿನ ಮೂರು ಹೋಬಳಿಯಲ್ಲಿ ಒಂದು ಸುತ್ತಿನ ಸರ್ವೆ ನಡೆಸಿದ್ದೇವೆ. ಮನೆ ಹಾನಿ, ವಾಸಿಸಲು ಯೋಗ್ಯವಲ್ಲದ ಮನೆಗಳ ಪಟ್ಟಿ ಮಾಡಿದ್ದೇವೆ. ಕಂದಾಯ ಅಧಿಕಾರಿಗಳು ಜನರ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ತಿಳಿಸಿದರು. ಮನೆ ಕಳೆದುಕೊಂಡವರಿಗೆ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಜಾಗವನ್ನು ನೀಡುವಂತೆ ತಹಶೀಲ್ದಾರ್‌ಗೆ ಸಂಸದೆ ಸೂಚಿಸಿದರು. ಆಗ ತಾಪಂ ಸದಸ್ಯ ಎನ್‌.ಕೆ.ಉದಯ್‌ ಮಾತನಾಡಿ, ಗ್ರಾಪಂನಲ್ಲಿ ಜಾಗ ನೀಡುವುದಕ್ಕೆ ಸೆಕ್ಷನ್‌ 4 ಅಡ್ಡಿಯಾಗುತ್ತದೆ. ಈ ಹಿಂದೆ ತಾಲೂಕಿನ 22 ಗ್ರಾಪಂಗಳಲ್ಲಿ ಮನೆಯಿಲ್ಲದವರಿಗೆ ಬಡವಣೆಗೆ ಜಾಗ ಇರಿಸಲಾಗಿತ್ತು. ಆದರೆ, ಇಂದು ಅರಣ್ಯ ಇಲಾಖೆಯವರು ಸೆಕ್ಷನ್‌ 4 ಆಗಿದೆ. ಅಲ್ಲಿ ಮನೆ ನಿರ್ಮಿಸುವಂತಿಲ್ಲ ಎನ್ನುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ಸಂಸದೆ ಮಾತನಾಡಿ, ಜಿಲ್ಲಾಧಿಕಾರಿಗೆ ಸೆಕ್ಷನ್‌ 4ರದ್ದುಗೊಳಿಸುವ ಬಗ್ಗೆ ವರದಿ ಸಹಿತ ಮಾಹಿತಿ ನೀಡಿ. ಸೆಕ್ಷನ್‌ 4 ಕೈಬಿಡುವಂತೆ ಮುಖ್ಯಮಂತ್ರಿಗಳ ಬಳಿ ಚರ್ಚಿಸುತ್ತೇನೆ ಎಂದು ತಿಳಿಸಿದರು.

ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಹಾಗೂ ಧರೆಯಿಂದ ಮಣ್ಣುಗಳು ಬಂದು ಶೇಖರಣೆಯಾದ ರೈತ ಜಮೀನಿಗೆ ಕುದ್ದು ಕೃಷಿ ಇಲಾಖೆ ಅಧಿಕಾರಗಳು ಭೇಟಿ ನೀಡಿ ಜಿಪಿಎಸ್‌ ಮಾಡಿ, ರೈತರನ್ನು ಕಚೇರಿಗಳಿಗೆ ಅಲೆದಾಡುವಂತೆ ಮಾಡಬೇಡಿ ಎಂದು ಎಡಿಎ ಕೆ.ಟಿ.ಮಂಜುನಾಥ್‌ ಅವರಿಗೆ ಸಂಸದೆ ಸೂಚಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಕಚೇರಿಗೆ ರೈತರೇ ಹಾನಿಯಾದ ಗದ್ದೆಯ ಫೋಟೋ ತಂದು ಇಲಾಖೆಗೆ ನೀಡುತ್ತಿದ್ದಾರೆ. ಹೆಚ್ಚಿನ ಪ್ರದೇಶಗಳಿಗೆ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದಾರೆ. ಅಂದಾಜಿನಲ್ಲಿ ಹಾನಿಯಾದ ಪ್ರದೇಶದ ಬಗ್ಗೆ ವರದಿ ಸಿದ್ಧಪಡಿಸಿದ್ದೇವೆ. ಮತ್ತೂಮ್ಮೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲಾಗುವುದು ಎಂದರು.

ಮೇಸ್ಕಾಂ ಇಲಾಖೆಗೆ ಸೇರಿದಂತೆ ಒಟ್ಟು 302 ವಿದ್ಯುತ್‌ ಕಂಬಗಳು ಹಾಳಾಗಿದ್ದು, ಅದರಲ್ಲಿ ಇನ್ನೂ 24ಕಂಬಗಳನ್ನು ಬದಲಾಯಿಸಲು ಮಾತ್ರ ಬಾಕಿ ಎಂದು ಸಭೆಗೆ ಎಇಇ ಚಂದ್ರಶೇಖರ್‌ ಮಾಹಿತಿ ನೀಡಿದರು. ತಾಪಂ ಸದಸ್ಯರಾದ ಎನ್‌.ಕೆ.ಉದಯ್‌ ಮಾತನಾಡಿ, ದೀನ್‌ದಯಾಳ್‌ ಉಪಾಧ್ಯಾಯ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಅತ್ತಿಕುಡಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಿಲ್ಲ ಎಂದು ಸಭೆಯ ಗಮನಕ್ಕೆ ತಂದಾಗ, ಸಂಸದೆ ಶೋಭಾ ಕರಂದ್ಲಾಜೆ ಎಇಇ ಚಂದ್ರಶೇಖರ್‌ ಅವರನ್ನು ತರಾಟೆಗೆ ತೆಗೆದುಕೊಂಡು, ಯಾಕೆ ಇನ್ನೂ ಪೂರ್ಣ ಕೆಲಸ ಮಾಡಿಲ್ಲ. ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಿ. ಅದಷ್ಟು ಬೇಗ ಕೆಲಸ ಮುಗಿಸಲು ಹೇಳಿ. ಸರ್ಕಾರದ ಸೇವೆಯನ್ನು ಜನರಿಗೆ ನೀಡುವಲ್ಲಿ ಮೀನಮೇಷ ಏಣಿಸುವ ಗುತ್ತಿದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಸೂಚಿಸಿದರು.

ಸಭೆಯಲ್ಲಿ ಆರೋಗ್ಯ, ಪಶುವೈದ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಅರಣ್ಯ ಅಧಿಕಾರಿಗಳು ಗೈರಾದ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಸದಸ್ಯೆ ದಿವ್ಯಾ ದಿನೇಶ್‌, ತಾಪಂ ಅಧ್ಯಕ್ಷೆ ಜಯಂತಿ ನಾಗರಾಜ್‌, ಉಪಾಧ್ಯಕ್ಷೆ ಲಲಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್‌ ಮಡಬಳ್ಳಿ, ಸದಸ್ಯರಾದ ಮಧುರಾ ಶಾಂತಪ್ಪ, ಭವಾನಿ ಹೆಬ್ಟಾರ್‌, ಮಂಜುಳಾ, ಕೃಷ್ಣಯ್ಯ ಶೆಟ್ಟಿ, ತಾಲೂಕು ವೈದ್ಯಾಧಿಕಾರಿ ಮಹೇಂದ್ರ ಕೀರಿಟಿ, ತಾಪಂ ಇಒ ನವೀನ್‌ ಕುಮಾರ್‌ ಮುಂತಾದವರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ