ಹೊದ್ದು ಮಲಗಿದೆ ದನಕನದೊಡ್ಡಿ ಜನ

Team Udayavani, Oct 2, 2019, 12:53 PM IST

ಕೊಪ್ಪಳ: ತಾಲೂಕಿನ ದನಕನದೊಡ್ಡಿ ಗ್ರಾಮದಲ್ಲಿ 80ಕ್ಕೂ ಹೆಚ್ಚು ಜನರು ಜ್ವರ ಬಾಧೆಯಿಂದ ಹೊದ್ದು ಮಲಗಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯರು ಜನರಲ್ಲಿ ಶಂಕಿತ ಡೆಂಘೀ ಜ್ವರ ಎನ್ನುವ ಮಾತನ್ನಾಡುತ್ತಿದ್ದಾರೆ. ಆದರೆ ಸರ್ಕಾರಿ ವೈದ್ಯರು ಮಾತ್ರ ಏಕಾ ಏಕಿ ಡೆಂಘೀ ಎಂದು ಒಪ್ಪಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಗ್ರಾಮದ ಜನರ ನರಳಾಟ ತಪ್ಪುತ್ತಿಲ್ಲ.

ದನಕನದೊಡ್ಡಿ ಗ್ರಾಮದಲ್ಲಿ ಕಳೆದೊಂದು ವಾರದಿಂದ ಜನರಲ್ಲಿ ಜ್ವರ ಬಾಧೆ ಕಾಣಿಸಿಕೊಳ್ಳುತ್ತಿದೆ. ರೋಗ ಬಾಧೆಯಿಂದ ಜನತೆ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲು ಕೆಮ್ಮು, ನಗಡಿ ಎಂದರೆ, ಬಳಿಕ ಮೈಕೈ ನೋವು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. ಸುಮಾರು 80ಕ್ಕೂ ಹೆಚ್ಚು ಜನರು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲವರು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯರು ರೋಗಿಯಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಶಂಕಿತ ಡೆಂಘೀ ಇದೆ ಎನ್ನುವ ಮಾತನ್ನಾಡುತ್ತಿರುವುದು ರೋಗಿಗಳಲ್ಲಿ ಮತ್ತಷ್ಟು ಆತಂಕ ಮೂಡುತ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಯಾವುದೇ ಡೆಂಘೀ ಇಲ್ಲ. ಸೋಂಕಿನಿಂದ ಜ್ವರ ಕಾಣಿಸಿಕೊಂಡಿವೆ. ಯಾವುದೇ ತೊಂದರೆಯಿಲ್ಲ. ಸುಮ್ಮನೆ ಖಾಸಗಿ ಆಸ್ಪತ್ರೆ ವೈದ್ಯರು ಜನರಲ್ಲಿ ಭಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ.

ಗ್ರಾಮದ ಜನತೆ ಮಾತ್ರ, ನಮ್ಮೂರಲ್ಲಿ ಯಾರೂ ಸರಿಯಾಗಿ ವೈದ್ಯರು ಬರುತ್ತಿಲ್ಲ. ರೋಗ ಬಾಧೆ ಹೆಚ್ಚಾದಾಗಿನಿಂದ ಯಾವುದೇ ಕ್ಯಾಂಪ್‌ಗ್ಳನ್ನು ಮಾಡುತ್ತಿಲ್ಲ. ವೃದ್ಧರು, ಮಹಿಳೆಯರು, ಮಕ್ಕಳಿಗೆ ಗ್ರಾಮದಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಕಾಟಾಚಾರಕ್ಕೆ ಒಂದೆರಡು ಸಲ ಬಂದು ಜನರಿಗೆ ಚಿಕಿತ್ಸೆ ನೀಡಿ ತೆರಳುತ್ತಿದ್ದಾರೆ ಎಂದು ಸರ್ಕಾರಿ ವೈದ್ಯರ ವಿರುದ್ಧವೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಆರೋಗ್ಯ ಇಲಾಖೆ ಮಾತ್ರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿದೆ. ನದಿಯಿಂದ ನೇರವಾಗಿ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿದ್ದು, ಶುದ್ಧೀಕರಣ ಇಲ್ಲದ ನೀರನ್ನು ಕುಡಿದು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸೋಂಕಿನಿಂದ ಜನರಿಗೆ ಜ್ವರ ಕಾಣಿಸಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ.

ದನಕನದೊಡ್ಡಿ ಗ್ರಾಮದಲ್ಲಿ ಡೆಂಘೀ ಕಾಣಿಸಿಕೊಂಡಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿದೆಯಂತೆ. ನದಿಯಿಂದ ನೀರು ಪೂರೈಕೆಯಾಗುತ್ತಿದ್ದು, ಅದೇ ನೀರನ್ನು ಕುಡಿದು ಜನರಲ್ಲಿ ಸೋಂಕು ಕಾಣಿಸಿಕೊಂಡು ಜ್ವರ ಬಾಧೆ ಉಲ್ಬಣಿಸಿದೆ. ಖಾಸಗಿ ವೈದ್ಯರು ಜನರಿಗೆ ಡೆಂಘೀ ಇದೆ ಹೇಳಿರಬಹುದು. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ರಕ್ತ ತಪಾಸಣೆ ಮಾಡಿಸಲಿ. ಅಲ್ಲದೇ, ತಾಲೂಕು ವೈದ್ಯಾ ಕಾರಿಗಳಿಗೆ ಸೂಚನೆ ನೀಡಿದ್ದು, ಗ್ರಾಮದಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ತಿಳಿಸಿದ್ದೇನೆ.– ಡಾ| ರಾಜಕುಮಾರ ಯರಗಲ್‌, ಡಿಎಚ್‌ಒ, ಕೊಪ್ಪಳ

 

-ದತ್ತು ಕಮ್ಮಾರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ