ಮನೆಯಲ್ಲೇ ಈಜಿ ಸಾಮಗ್ರಿ ತಂದೆವು!
ಮಲ್ಲಾಪುರ ಪಿ.ಜಿ ಗಡಿ ಗ್ರಾಮದ ಗೋಳು•ಜೀವ ಉಳಿಸಿಕೊಳ್ಳಲು ಪಟ್ಟ ಕಷ್ಟ ಹೇಳಲಾಗಲ್ಲ•ಬದುಕು ಬದಲಾಗೋದು ಯಾವಾಗ ?
Team Udayavani, Aug 22, 2019, 12:39 PM IST
ಮಹಾಲಿಂಗಪುರ: ಮಲ್ಲಾಪುರ ಪಿಜೆ ಗ್ರಾಮದಲ್ಲಿ ಪ್ರವಾಹದಿಂದ ಬಿದ್ದ ಅವಶೇಷಗಳ ನಡುವೆ ಅನಾಥವಾಗಿರುವ ಮಕ್ಕಳ ತೊಟ್ಟಿಲು
•ಚಂದ್ರಶೇಖರ ಮೋರೆ
ಮಲ್ಲಾಪುರ ಪಿಜಿ (ಮಹಾಲಿಂಗಪುರ): ಮನೆ ತುಂಬ ನೀರು ಬಂದಿತ್ತು. ಜೀವ ಉಳಿಸಿಕೊಳ್ಳಲು ಹೊರಗೆ ಓಡಿ ಬಂದೇವು. ಆದರೆ ಎಲ್ಲಿಗೆ ಹೋಗೋದು, ಹೊಟ್ಟೆಗೆ ಏನು ತಿನ್ನೋದು ಎಂದು ವಿಚಾರ ಮಾಡಿ, ಮನೆಯೊಳಗೆ ಹೊಕ್ಕ ನೀರಿನಲ್ಲಿ ಈಜಿ ಒಳಹೋಗಿದ್ದೆ. ಕೈಗೆ ಸಿಕ್ಕ ಸಾಮಾನು ತಗೊಂಡು ಹೊರಗೆ ಬಂದೆ. ಮಲಗಲು ಇರುವ ಮನೆಯಲ್ಲೇ ಈಜುವಂತ ಪರಿಸ್ಥಿತಿ ಈ ಬಾರಿ ಬಂತಲ್ರಿ.
ಘಟಪ್ರಭಾ ನದಿ ಪ್ರವಾಹಕ್ಕೆ ಸಂಪೂರ್ಣ ಮುಳುಗಿದ್ದ ಮುಧೋಳ ತಾಲೂಕು ಗಡಿ ಗ್ರಾಮ ಮಲ್ಲಾಪುರ ಪಿಜಿಯ ವೆಂಕಪ್ಪ ತಳವಾರ, ಪ್ರವಾಹದಲ್ಲಿ ಅನುಭವಿಸಿದ ಸಂಕಷ್ಟ ಹೇಳಿಕೊಂಡರು.
ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚಿನ ರೀತಿಯಲ್ಲಿ ಘಟಪ್ರಭಾ ನದಿಯ ಪ್ರವಾಹ ಬಂದ ಹಿನ್ನೆಲೆಯಲ್ಲಿ ಮಹಾಲಿಂಗಪುರ ಭಾಗದ ರಬಕವಿ-ಬನಹಟ್ಟಿ ತಾಲೂಕಿನ ಮಾರಾಪುರ, ನಂದಗಾಂವ, ಢವಳೇಶ್ವರ, ಮುಧೋಳ ತಾಲೂಕಿನ ಮಿರ್ಜಿ, ಮಲ್ಲಾಪುರ ಪಿಜಿ, ಒಂಟಗೋಡಿ, ಚನ್ನಾಳ, ಉತ್ತೂರ, ಜಾಲಿಬೇರಿ, ಚನ್ನಾಳ ಸೇರಿದಂತೆ ಹತ್ತಕ್ಕೂ ಅಧಿಕ ಗ್ರಾಮಗಳ ಸಂತ್ರಸ್ತರ ಬದುಕು ನಿಜಕ್ಕೂ ಹೇಳತೀರದ್ದಾಗಿದೆ.
ನಮ್ಮ ಬದುಕು ನಾಶವಾಯ್ತುರಿ: ನನಗೆ ಗೊತ್ತಿರುವ ಹಾಗೆ ಕಳೆದ 50 ವರ್ಷಗಳಲ್ಲಿಯೇ ಇಂತಹ ಪ್ರವಾಹವನ್ನು ನೋಡಿಲ್ಲ. ಏಕಾಏಕಿ ನೀರು ಬಂದಿದ್ದರಿಂದ ಮನೆಯಲ್ಲಿನ ಯಾವುದೇ ಸಾಮಾನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಜೀವ ಉಳಿದರ ಸಾಕ್ ಅಂತ ಮನೆ ಬಿಟ್ಟು ಹೋದೇವು. ಪ್ರವಾಹದಿಂದ ಮನೆ ಬಿದ್ದು ಇಂದು ನಮ್ಮ ಬದುಕು ಮೂರಾಬಟ್ಟೆ ಆಗೈತರಿ ಎಂದು ಮುಧೋಳ ತಾಲೂಕಿನ ಗಡಿಗ್ರಾಮ ಮಲ್ಲಾಪುರ ಪಿಜಿ ಗ್ರಾಮದ ಸಂತ್ರಸ್ತ ಶಂಕರೆಪ್ಪ ನಾವಿ ಹೀಗೆ ಹೇಳುವಾಗ ಅವರ ಕಣ್ಣಲ್ಲಿ ನೀರು ಬರುತ್ತಿದ್ದವು.
ಘಟಪ್ರಭಾ ನದಿಯಿಂದ 1 ಕಿ.ಮೀ. ದೂರದಲ್ಲಿರುವ ಮಲ್ಲಾಪುರ ಪಿಜಿ ಮತ್ತು ನದಿಯ ಪಕ್ಕದಲ್ಲೆ ಇರುವ ಮಿರ್ಜಿ ಗ್ರಾಮಗಳಿಗೆ ಇತಿಹಾಸದಲ್ಲಿ ಒಮ್ಮೆಯೂ ಇಷ್ಟೊಂದು ಪ್ರವಾಹ ಬಂದಿರಲ್ಲಿಲ್ಲ. ಈ ಬಾರಿಯ ಪ್ರವಾಹಕ್ಕೆ ಈ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿವೆ. ಇಲ್ಲಿನ ಸಂತ್ರಸ್ತರು ತೋಟ ಮತ್ತು ಪರಿಹಾರ ಕೇಂದ್ರಗಳಲ್ಲಿ ಆಸರೆ ಪಡೆದಿದ್ದಾರೆ.
ಅತಂತ್ರವಾದ ಬದುಕು: ಪ್ರವಾಹದಿಂದ ಹಳೆಯ ಮಣ್ಣಿನ ಮನೆಗಳು ಸಂಪೂರ್ಣ ನೆಲಕ್ಕುರುಳಿವೆ. ಕಲ್ಲಿನ ಮತ್ತು ಕಾಂಕ್ರೀಟ್ ಮನೆಗಳು ಸಹ ಬಿರುಕು ಬಿಟ್ಟಿವೆ. ಇದರಿಂದಾಗಿ ಪ್ರವಾಹ ಇಳಿಮುಖವಾಗಿ ಮನೆಗಳತ್ತ ಬಂದರು, ಮನೆಯು ಯಾವಾಗ ಬೀಳುತ್ತದೆಯೋ ಎಂಬ ಭಯದಿಂದ ಮನೆಯಲ್ಲಿ ವಾಸಿಸುತ್ತಿಲ್ಲ. ಸಂತ್ರಸ್ತರ ಬದುಕು ಇಂದು ಅಕ್ಷರಶ: ಅತಂತ್ರವಾಗಿದೆ.
ಬೀದಿಗೆ ಬಂದ ರೊಟ್ಟಿ ತಟ್ಟೆ: ನದಿ ಅಕ್ಕಪಕ್ಕದಲ್ಲಿನ ಒಂದರಿಂದ ಎರಡು ಕೀಮಿ ಅಂತರದಲ್ಲಿರುವ ಪ್ರತಿಯೊಂದು ಗ್ರಾಮಗಳಿಗೆ ಪ್ರವಾಹವು ನುಗ್ಗಿ ಅಲ್ಲಿನ ಜನರ ಬದುಕನ್ನು ಅಕ್ಷರಶ: ಮುಳುಗಿಸಿದೆ. ಗ್ರಾಮಗಳಲ್ಲಿ ಆಳೆತ್ತರದವರೆಗೆ ನೀರು ನುಗ್ಗಿ ಏಳೆಂಟು ದಿನಗಳವರೆಗೆ ನೀರು ನಿಂತ ಪರಿಣಾಮವಾಗಿ ಗೋಡೆಗಳು ಕುಸಿದು, ಮನೆಯು ಬಿದ್ದು ಮನೆಯಲ್ಲಿ ಪ್ರತಿಯೊಂದು ಪಾತ್ರೆ-ಪಗಡೆ, ಸಾಮಾನು-ಸರಂಜಾಮುಗಳು ಬೀದಿಗೆ ಬಿದ್ದಿವೆ.
ಇದರಿಂದಾಗಿ ಇರಲು ಮನೆಯಿಲ್ಲದೇ, ತಿನ್ನಲು ಅನ್ನವಿಲ್ಲದೇ ಗಂಜಿ ಕೇಂದ್ರದಲ್ಲೇ ವಾಸಿಸುವಂತಾಯಿತು. ಈ ಪರಿಸ್ಥಿಗೆ ಕೈಗನ್ನಡಿಯಂಬತೆ ಮಲ್ಲಾಪುರ ಪಿಜಿ ಗ್ರಾಮದಲ್ಲಿ ಪ್ರವಾಹಕ್ಕೆ ಸಿಕ್ಕ ರೊಟ್ಟಿ ತಟ್ಟೆಗಳು, ಪ್ರವಾಹ ಇಳಿದ ನಂತರ ಯಾರದೋ ಮನೆಯೊಂದರ ಗೋಡೆಗಳು ಬಿದ್ದ ಕಲ್ಲುಗಳ ಮಧ್ಯೆ ಬಂದು ಕುಂತಿವೆ. ಈ ದೃಶ್ಯವು ನಿಜಕ್ಕೂ ಪ್ರವಾಹಕ್ಕೆ ತುತ್ತಾದ ಜನರ ಮನಕಲುವ ದೃಶ್ಯವಾಗಿದೆ.
ಮನಕಲಕುವ ದೃಶ್ಯ: ಮಿರ್ಜಿ ಮತ್ತು ಮಲ್ಲಾಪುರ ಗ್ರಾಮಗಳಲ್ಲಿ ಹಳೆಯ ಮನೆಗಳೆಲ್ಲು ಸಂಪೂರ್ಣ ನೆಲಕಚ್ಚಿವೆ. ಅದರಲ್ಲೂ ಕೆಲವು ಮನೆಗಳಲ್ಲಿನ ದೃಶ್ಯಗಳು ನಿಜಕ್ಕೂ ಮನಕಲಕುವಂತಿವೆ. ಮನೆಯೊಂದರಲ್ಲಿ ಅವಶೇಷಗಳ ನಡುವೆ ಸಿಕ್ಕಿ ಹಾಕಿಕೊಂಡ ತೊಟ್ಟಿಲು, ಮಕ್ಕಳ ಆಟಿಕೆಯ ಮೂರು ಗಾಲಿಯ ಗಾಡಿ, ಪ್ರವಾಹಕ್ಕೆ ತುತ್ತಾಗಿ ಮನೆ ಬಿದ್ದರೂ ಸಹ ಗೋಡೆಗಳ ಮೇಲಿರುವ ವಿವಿಧ ವಸ್ತುಗಳು, ಬಾಸ್ಕೆಟ್‌ಗಳು, ಶಾಲಾ ಮಕ್ಕಳ ಸ್ಕೂಲ್ ಬ್ಯಾಗ್‌ಗಳು, ಬಾಗಿಲು ಪಕ್ಕದಲ್ಲಿ ಜೋತು ಬಿಟ್ಟ ಮನೆದೇವರ ಪೋಟೋಗಳು, ಅವಶೇಷಗಳ ನಡುವೆ ಸಿಕ್ಕಿಕೊಂಡು ನಾಶವಾಗಿರುವ ಗ್ರಾಮೀಣ ಜನರ ಬದುಕಿನ ಆಧಾರವಾಗಿರುವ ವಿವಿಧ ಬಗೆಯ ಪಾತ್ರೆ-ಪಗಡೆಗಳನ್ನು ನೋಡಿದರೇ ಎಂತವರಿಗೂ ಮನಕಲಕುತ್ತದೆ.
ಸ್ವಚ್ಚತೆಗಾಗಿ ಪರದಾಟ: ಪ್ರವಾಹ ಇಳಿಮುಖವಾದ ನಂತರ ಪರಿಹಾರ ಕೇಂದ್ರದಿಂದ ಬಂದು ತಮ್ಮ -ತಮ್ಮ ಮನೆಗಳನ್ನು ಹುಡುಕಿಕೊಂಡು ಬಂದು, ಮನೆಯಲ್ಲಿ ಬಿದ್ದ ಕಸದ ತಾಜ್ಯ, ಪ್ರವಾಹದಿಂದ ಉಂಟಾದ ರಾಡಿಯ ರಾಶಿಯನ್ನು ಹೊರಹಾಕಲು ಸಂತ್ರಸ್ತರು ಇಂದಿಗೂ ಪರದಾಡುತ್ತಿದ್ದಾರೆ. ಪ್ರವಾಹವು ಗ್ರಾಮದಿಂದ ಇಳಿದು ನಾಲ್ಕೈದು ದಿನಗಳು ಕಳೆದರೂ ಸಹ ಇಂದಿಗೂ ಸಂತ್ರಸ್ತರು ಪ್ರವಾಹಕ್ಕೆ ತುತ್ತಾಗಿ, ಮನೆಯಲ್ಲಿ ಅಳಿದು-ಉಳಿದ ವಸ್ತುಗಳನ್ನು ತೊಳೆಯುವದು, ಬಟ್ಟೆಗಳನ್ನು ಒಗೆದು ಒಣಗಿಸುವದು, ಮನೆಯ ಸಾಮಗ್ರಿಗಳನ್ನು ಸರಿಪಡಿಸುವ ಕಾಯಕದಲ್ಲೇ ಮಗ್ನರಾಗಿದ್ದಾರೆ. ಗ್ರಾಮದ ತುಂಬೆಲ್ಲಾವು ರಾಡಿ ಮತ್ತು ಹೊಲಸು ತುಂಬಿರುವದರಿಂದ ಗಬ್ಬೆದ್ದು ನಾರುವ ಪರಿಸರದ ನಡುವೆ, ತಮ್ಮ ಬದುಕಿಗೆ ಆಸರೆಯಾಗಿದ್ದ ಮನೆಯ ಸ್ವಚ್ಛತೆಗಾಗಿ ಸಂತ್ರಸ್ತರು ಕಷ್ಟಪಡುತ್ತಿರುವ ದೃಶ್ಯ ಪ್ರವಾಹದ ರುದ್ರನರ್ತನಕ್ಕೆ ನಲುಗಿದವರ ಸಂಕಷ್ಟಗಳನ್ನು ಒತ್ತಿ ಒತ್ತಿ ತಿಳಿಸುವಂತಿವೆ.
ಕೆಲಸವಿಲ್ಲ ದುಡಿದ ತಿನ್ನುದ ಬೀರಿ ಆಗೈತರೀ: ಗ್ರಾಮದಲ್ಲಿಯೇ ಕೂಲಿ-ನಾಲಿ ಮಾಡಿ ಬದುಕುತ್ತಿದ್ದ ನಮ್ಮಂತವರಿಗೆ ಪ್ರವಾಹ ಪರಿಣಾಮದ ಹಿನ್ನೆಲೆ ಎಲ್ಲ ಹೊಲಗದ್ದೆಗಳಿಗೆ ನೀರು ನುಗ್ಗಿ ಯಾವುದೇ ಕೆಲಸ ಇಲ್ಲದಾಗಿದೆ. ಅಲ್ಲದೇ ಸಂಸಾರದ ಜಂಜಾಟಕ್ಕೆ ಮಾಡಿದ ವಾರದ ಸಂಘಗಳಲ್ಲಿನ ಸಾಲ ತುಂಬುವುದು ಬೀರಿ ಆಗೈತರೀ, ಇಲ್ಲಿಯವರೆಗೆ ಸರಕಾರದ ಗಂಜಿ ಕೇಂದ್ರ ಮತ್ತು ಸಾಲ್ಯಾಗ ಊಟ ಮಾಡಿದೀವರಿ. ಎಷ್ಟು ದಿನ ಅಂತ ಇಲ್ಲೇ ಇರುನರೀ, ಪ್ರವಾಹ ಇಳಿದ ಮ್ಯಾಲಿಂದ ನಮ್ಮ ನಮ್ಮ ಮನೆಗೋಳ್ ಸ್ವಚ್ಛ ಮಾಡುವದ್ ಒಂದು ದೊಡ್ಡ ಕೆಲಸ ಆಗೈತರೀ ಎಂಬುದು ಮಲ್ಲಾಪುರ ಪಿಜಿ ಮತ್ತು ಮಿರ್ಜಿ ಗ್ರಾಮದ ಕೂಲಿಕಾರ ಮಹಿಳೆಯರ ಅಳಲಾಗಿದೆ.
ಮಲ್ಲಾಪುರ ಪಿಜಿ ಗ್ರಾಮದ ನಿವಾಸಿ, ಸದ್ಯ ಮಹಾಲಿಂಗಪುರ ಪಟ್ಟಣದಲ್ಲಿ ವಾಸವಾಗಿರುವ ತಾಪಂ ಮಾಜಿ ಸದಸ್ಯ ಮಹಾಲಿಂಗಪ್ಪ, ಸುಭಾಸ ತಟ್ಟಿಮನಿಯವರು ಪ್ರವಾಹ ಸಮಯದಲ್ಲಿ ಮಲ್ಲಾಪುರ ಪಿಜಿ ಗ್ರಾಮದ ಸಂತ್ರಸ್ತರಿಗೆ ಆಶಾಕಿರಣವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.
ಪ್ರವಾಹ ಹಿನ್ನ್ನೆಲೆಯಲ್ಲಿ ಎಲ್ಲ ಸೇತುವೆಗಳು ಬಂದಾಗಿ ಮಲ್ಲಾಪುರ ಪಿಜಿ ಗ್ರಾಮಕ್ಕೆ ಯಾವುದೇ ಸಂಪರ್ಕವಿಲ್ಲದ ಕಾರಣ, ಮಹಾಲಿಂಗಪುರದಿಂದ ಮುಧೋಳ, ಬೀಳಗಿ, ಅನಗವಾಡಿ, ಗದ್ದನಕೇರಿ, ಲೋಕಾಪುರ, ಯಾದವಾಡ ಮಾರ್ಗವಾಗಿ ಸುಮಾರು ಇನ್ನೂರು ಕಿ.ಮೀ. ಸುತ್ತುವರಿದು ಮಲ್ಲಾಪುರ ಪಿಜಿ ಗ್ರಾಮಕ್ಕೆ ಬಂದು, ವಾರಗಳ ಕಾಲ ಗ್ರಾಮದಲ್ಲೇ ಇದ್ದು, ಸಂತ್ರಸ್ತರಿಗೆ ಊಟ-ಉಪಹಾರ, ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ವ್ಯವಸ್ಥೆ, ನೆರೆಯ ಬೆಳಗಾವಿ ಜಿಲ್ಲೆಯ ಯರಗುದ್ರಿ ಗ್ರಾಮದಿಂದ ವಿದ್ಯುತ್ ಸಂಪರ್ಕ ಕೊಡಿಸುವ ಮೂಲಕ ನಮ್ಮ ಗ್ರಾಮದ ಜನರಿಗೆ ಪ್ರವಾಹದ ಸಮಯದಲ್ಲಿ ಎಲ್ಲಾ ರೀತಿಯಿಂದ ಸಹಾಯ ಮಾಡಿದ ತಾಪಂ ಮಾಜಿ ಸದಸ್ಯ ಮಹಾಲಿಂಗಪ್ಪ ಸುಭಾಸ ತಟ್ಟಿಮನಿಯವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಮಲ್ಲಾಪುರ ಪಿಜಿ ಗ್ರಾಮದ ಸಂತ್ರಸ್ತರು.
ಗ್ರಾಮಕ್ಕೆ ಬಾರದ ಕಾರಜೋಳ: ಮುಧೋಳ ತಾಲೂಕಿನ ಗಡಿಗ್ರಾಮವಾದ ಮಲ್ಲಾಪುರ ಪಿಜಿ ಗ್ರಾಮವು ಪ್ರವಾಹಕ್ಕೆ ತುತ್ತಾಗಿದ್ದರೂ ಸಹ, ಸಚಿವ ಗೋವಿಂದ ಕಾರಜೋಳ ಒಮ್ಮೆಯು ನಮ್ಮ ಗ್ರಾಮಕ್ಕೆ ಬಂದಿಲ್ಲ. ಪಕ್ಕದ ಮಿರ್ಜಿಗೆ ಎರಡಮೂರು ಸಲ್ ಬಂದ ಹೋಗ್ಯಾರ, ನಮ್ಮ ಗ್ರಾಮಕ್ಕೆ ಬಂದಿಲ್ಲ. ನಮ್ಮ ಸಂಕಷ್ಟ ಕೇಳಿಲ್ಲ. ಊರಾಗಿನ ಗೌಡರ ಪೋನ್ ಮೂಲಕ ವಿಷಯ ತಿಳಿಸಿದರೂ ಸಹ ಬಂದಿಲ್ಲ ಎಂದು ನಿರಾಶ್ರಿತರು ಆಕ್ರೋಶ ಹೊರ ಹಾಕುತ್ತಾರೆ.