ಅಂಬರೀಶ್‌ ಸಾಧನೆ ಜನರಿಗೆ ಗೊತ್ತಿದೆ: ಸಿಎಂಗೆ ತಿರುಗೇಟು

Team Udayavani, Mar 1, 2019, 7:12 AM IST

ನಾಗಮಂಗಲ: ಮಂಡ್ಯ ಜಿಲ್ಲೆಯಲ್ಲಿ ಅಂಬರೀಶ್‌ ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ತಿಳಿಸಲು ಸಿಎಂ ಕುಮಾರಸ್ವಾಮಿ ನಮಗೆ ಒಂದು ಅವಕಾಶ ಕಲ್ಪಿಸಿದ್ದಾರೆ ಎಂದು ಮಂಡ್ಯ ಜಿಲ್ಲೆಗೆ ಅಂಬರೀಶ್‌ ಕೊಡುಗೆ ಶೂನ್ಯ ಎಂಬ ಸಿಎಂ ಹೇಳಿಕೆಗೆ ಮಂಡ್ಯ ಲೋಕಸಭಾ ಸ್ಪರ್ಧಾಕಾಂಕ್ಷಿ ಸುಮಲತಾ ತಿರುಗೇಟು ನೀಡಿದರು.

ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರು ಹಾಗೂ  ಅಂಬರೀಶ್‌ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ಅಂಬರೀಶ್‌ ಜಿಲ್ಲೆಗೆ ನೀಡಿರುವ ಕೊಡುಗೆಗಳ ಬಗ್ಗೆ ನಾನು ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ ಜಿಲ್ಲೆಯ ಪ್ರತಿಯೊಬ್ಬ ಮತದಾರನಿಗೂ ಗೊತ್ತಿದೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು. ಅವರು ಎಂದೂ ಪ್ರಚಾರಕ್ಕೋಸ್ಕರ ಕೆಲಸ ಮಾಡಿದರವರಲ್ಲ. ಅವರ ಸಾಧನೆಗಳನ್ನು ಅವರ ಕೆಲಸಗಳೇ ಹೇಳುತ್ತವೆ. ಅವರ ಸಾಧನೆಗಳು ಏನು ಎಂಬುದಕ್ಕೆ ಜನತೆ ಈ ಬಾರಿಯ ಚುನಾವಣೆಯಲ್ಲಿ ಉತ್ತರಿಸಲಿದ್ದಾರೆ ಎಂದು ಹೇಳಿದರು. 

ನನ್ನ ನಿರ್ಧಾರ ವೈಯಕ್ತಿಕ: ಅಂಬರೀಶ್‌ ಬದುಕಿರುವವರೆಗೂ ದೇವೇಗೌಡರನ್ನು ತಂದೆ ಸಮಾನರಾಗಿ ಕಾಣುತ್ತಿದ್ದರು. ನಾನು ಕೂಡ ಇಂದಿಗೂ ಅವರನ್ನು ಅದೇ ಗೌರವದಿಂದ ಕಾಣುತ್ತಿದ್ದೇನೆ. ನನಗೆ ದ್ವೇಷದ ರಾಜಕಾರಣ ಮಾಡಲು ಬರುವುದಿಲ್ಲ. ಯಾರ ವಿರುದ್ಧವೂ ಮಾತನಾಡುವುದಿಲ್ಲ, ನನ್ನ ನಿರ್ಧಾರ ವೈಯಕ್ತಿಕ. ಇದನ್ನು ಅಂಬರೀಶ್‌ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬೆಂಬಲಿಸಿದ್ದಾರೆ.

ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರಾಜಕೀಯ ಪ್ರವೇಶಿಸಿದ್ದೇನೆಯೇ ಹೊರತು ಅಧಿಕಾರ ಗಳಿಸುವುದಕ್ಕೆ, ಸ್ವಾರ್ಥಕ್ಕಾಗಿ ಅಲ್ಲ. ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷ ಜಿಲ್ಲೆಯಲ್ಲಿ ಸರ್ವನಾಶವಾಗುತ್ತಿದೆ. ಆದ್ದರಿಂದ ನೀವು ಸ್ಪರ್ಧಿಸಬೇಕು ಎಂದು ದುಂಬಾಲು ಬಿದ್ದಿದ್ದಾರೆ. ಅವರ ಒತ್ತಡಕ್ಕೆ ಮಣಿದು ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದೇನೆ ಎಂದು ಹೇಳಿದರು.

ಅಂಬಿ ಹೆಸರು ಉಳಿಸುವೆ: ನನಗೆ ರಾಜಕೀಯದಿಂದ ಜೀವನ ಸಾಗಿಸುವ ಅನಿವಾರ್ಯತೆ ಇಲ್ಲ, ನಾನು ಮತ್ತು ನನ್ನ ಮಗ ಜೀವನ ನಿರ್ವಹಣೆ ಮಾಡಲು ನನ್ನ ಪತಿ ಅಂಬಿ ಸಂಪಾದಿಸಿರುವುದೇ ಸಾಕು. ಅಂಬರೀಶ್‌ ಹೆಸರು ಅಳಿಸಲು ನಾನು ಬಿಡುವುದಿಲ್ಲ, ಅವರ ಹೆಸರನ್ನು ನಾನು ಉಳಿಸುತ್ತೇನೆ.

ಅಭಿಮಾನಿಗಳ ಮೇಲೆ ಹೊಂದಿದ್ದ ಪ್ರೀತಿಯಂತೆ ಅವರ ಮಾರ್ಗದಲ್ಲಿಯೇ ಅಭಿಮಾನಿಗಳನ್ನು ಉಳಿಸಿಕೊಳ್ಳುತ್ತೇನೆ, ಅಂಬಿ ಸ್ವಭಾವ, ವ್ಯಕ್ತಿತ್ವ ಇತರೆ ಯಾವುದೇ ರಾಜಕಾರಣಿಗಳಿಗೂ ಇಲ್ಲ, ಅವರ ವ್ಯಕ್ತಿತ್ವ ಎಂತಹದ್ದು ಎಂಬುದು ಇಡೀ ನಾಡಿಗೆ ಗೊತ್ತಿದೆ ಎಂದರು. ನನ್ನ ಮುಂದಿನ ತೀರ್ಮಾನ ನಿಮ್ಮಗಳ ಆಶಯದಂತೆ, ಆದ್ದರಿಂದ ನಿಮ್ಮೆಲ್ಲರ ಆಶೀರ್ವಾದ ನನಗೆ ಅವಶ್ಯವೆಂದು ಸುಮಲತಾ ಕಾರ್ಯಕರ್ತರಲ್ಲಿ ಕೈಮುಗಿದು ಮನವಿ ಮಾಡಿದರು. 

ಬೆಂಬಲಕ್ಕೆ ನಿಂತ ಕೈ ಕಾರ್ಯಕರ್ತರು: ಸುಮಲತಾ ಈ ಬಾರಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದರೆ ಸಂತೋಷ. ಒಂದು ವೇಳೆ ಟಿಕೆಟ್‌ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವಂತೆ ಕಾಂಗ್ರೆಸ್‌ ಕಾರ್ಯಕರ್ತರು ಸಭೆಯಲ್ಲಿ ಸುಮಲತಾರನ್ನು ಒತ್ತಾಯಿಸಿದರು. ನೀವು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಸರಿ, ಆದರೆ ನೀವು ಸ್ಪರ್ಧಿಸಬೇಕು. ನಿಮ್ಮ ಜೊತೆ ನಾವಿದ್ದೇವೆ, ನಿಮಗಾಗಿ ನಾವು ಪ್ರಾಣ ನೀಡಲು ಸಿದ್ದರಿದ್ದೇವೆ.

ನೀವು ಎದೆಗುಂದುವುದು ಬೇಡ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಹಿಂದೆ ಸರಿಯಬೇಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ನಾನು ದಿಟ್ಟ ಹೆಜ್ಜೆ ಇಟ್ಟಿದ್ದೇನೆ, ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ ಎಂದು ಭರವಸೆ ನೀಡಿದರು. ನಾನು ಕಾಂಗ್ರೆಸ್‌ ಪಕ್ಷ ಜಿಲ್ಲೆಯಲ್ಲಿ ನಶಿಸಲು ಬಿಡುವುದಿಲ್ಲ, ಪಕ್ಷ ಬಲವರ್ಧನೆಗಾಗಿ ಶ್ರಮಿಸುತ್ತೇನೆ ಎಂದರು.

ಅಂಬಿ ಸಾಧನೆ ಪ್ರಶ್ನಿಸುವ ನೈತಿಕತೆ ಇಲ್ಲ: ಸಭೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ ಮಾತನಾಡಿ, ದೇವೇಗೌಡರ ಕುಟುಂಬ ಜಿಲ್ಲೆಗೆ ನೀಡಿರುವ ಕೊಡುಗೆಯಾದರು ಏನು ? ಅಂಬರೀಶ್‌ ಸಾಧನೆಯನ್ನು ಪ್ರಶ್ನಿಸುವ ನೈತಿಕತೆ ಅವರಿಗಿಲ್ಲ. ನಮಗೆ ನಮ್ಮ ಜಿಲ್ಲೆಯವರು ಬೇಕು. ನಾವು ಸ್ವಾಭಿಮಾನಿಗಳು. ನಮ್ಮ ಜಿಲ್ಲೆಗೆ ಹೊರ ಜಿಲ್ಲೆಯ ಅಭ್ಯರ್ಥಿ ಅವಶ್ಯಕತೆ ಇಲ್ಲ, ಮುಖ್ಯಮಂತ್ರಿಗಳಾಗಿ ಅವರ ಹುದ್ದೆಗೆ ತಕ್ಕಂತೆ ಮಾತನಾಡುವುದನ್ನು ಕಲಿಯಲಿ ಎಂದು ಛೇಡಿಸಿದರು.

ಅಂಬರೀಶ್‌ ಮರಣ ಹೊಂದಿದ ನಂತರ ಅವರ ಬಗ್ಗೆ ಮಾತನಾಡುವವರು ಅವರು ಬದುಕಿರುವಾಗ ಏಕೆ ಸುಮ್ಮನಿದ್ದರು. ಸುಮಲತಾ ಅವರೂ ಜಿಲ್ಲೆಗೆ ಏನು ಮಾಡದೆ ಹೋದರೂ ಪರವಾಗಿಲ್ಲ ಅವರು ಗೆದ್ದು ಸುಮ್ಮನೆ 5 ವರ್ಷ ಪೂರೈಸಲಿ. ಜೆಡಿಎಸ್‌ನವರು ಹೇಳಿಕೊಳ್ಳುವ ಏಳು ಜನ ಶಾಸಕರೇ ಅದೇನು ಅಭಿವೃದ್ಧಿ ಮಾಡುತ್ತಾರೆ ಅಂತ ನಾವು ನೋಡೋಣ ಎಂದು ಹೇಳಿದರು. 

ಸಭೆಯಲ್ಲಿ ಅಂಬರೀಶ್‌ ಪುತ್ರ ಅಭಿಷೇಕ್‌, ಕಾಂಗ್ರೆಸ್‌ ಮುಖಂಡ ಸಚ್ಚಿದಾನಂದ, ಹೆಚ್‌.ಟಿ.ಕೃಷ್ಣೇಗೌಡ, ರಾಜೇಶ್‌, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಶರತ್‌ರಾಮಣ್ಣ, ಧನಂಜಯ, ತುರುಬನಹಳ್ಳಿ ರಾಜೇಗೌಡ, ವಸಂತ್‌ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೈಸೂರು: ಕೆಆರ್‌ಎಸ್‌ ಅಣೆಕಟ್ಟೆಯ ಹಿತದೃಷ್ಟಿ ಯಿಂದ ಮಂಡ್ಯ ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಅಣೆಕಟ್ಟೆಯ ಸುತ್ತಮುತ್ತ...

  • ಕೆ.ಆರ್‌.ಪೇಟೆ: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆ, ಪ್ರವಾಹಕ್ಕೆ ಸಿಲುಕಿ ಬದುಕು ಕಳೆದುಕೊಂಡಿರುವ ಸಂತ್ರಸ್ತರ ನೆರವಿಗೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ...

  • ಮದ್ದೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕೆ ಹಲವು ಸವಲತ್ತುಗಳನ್ನು ನೀಡುತ್ತಿದ್ದು ಅವು ಸದ್ಬಳಸಿಕೊಂಡು ಆರ್ಥಿಕಾಭಿವೃದ್ಧಿ ಹೊಂದುವಂತೆ...

  • ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪ್ರಸಿದ್ಧ ಪ್ರವಾಸಿ ಕೇಂದ್ರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ವಿವಿಧೆಡೆಗಳಿಂದ ಬರುವ ಪ್ರವಾಸಿಗರ ಅನುಕೂಲಕ್ಕೆ...

  • ಮಂಡ್ಯ: ಕೆರೆ ಭರ್ತಿಯಾಗಿ ಕೋಡಿ ಹರಿದ ಪರಿಣಾಮ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ಸುಮಾರು 60 ಎಕರೆಯಷ್ಟು ಜಮೀನು ಜಲಾವೃತವಾಗಿರುವ ಘಟನೆ ತಾಲೂಕಿನ ಕಿರಗಂದೂರು ಗ್ರಾಮದಲ್ಲಿ...

ಹೊಸ ಸೇರ್ಪಡೆ