ಸಮರ್ಪಕ ಉದ್ಯೋಗ ಖಾತ್ರಿ ಕೆಲಸ ಕೊಡಿ

Team Udayavani, Jul 23, 2019, 1:47 PM IST

ಭಾರತೀನಗರದ ಶೆಟ್ಟಹಳ್ಳಿ ಗ್ರಾಪಂಗೆ ಕೃಷಿ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕವಾಗಿ ಕೆಲಸ ನೀಡುವಂತೆ ಜಿಲ್ಲಾಧ್ಯಕ್ಷ ಪುಟ್ಟಮಾದು ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಭಾರತೀನಗರ: ಉದ್ಯೋಗ ಖಾತ್ರಿ ಕೆಲಸ ಸಮರ್ಪಕವಾಗಿ ನೀಡಿ, ಗುತ್ತಿಗೆದಾರರ ಹಾವಳಿ ತಪ್ಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಹೋಬಳಿಯ ಶೆಟ್ಟಹಳ್ಳಿ ಗ್ರಾಪಂಗೆ ಕೂಲಿಕಾರ್ಮಿಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಂಚಾಯ್ತಿ ವ್ಯಾಪ್ತಿಯ ಹನುಮಂತನಗರ, ಕರಡಕೆರೆ, ಅರೆಚಾಕನಹಳ್ಳಿ, ಶೆಟ್ಟಹಳ್ಳಿ ಕೂಲಿ ಕಾರ್ಮಿಕರು ಕಚೇರಿಗೆ ಜಮಾಯಿಸಿ, ಗ್ರಾಮೀಣರ ಗುಳೆ ತಪ್ಪಿಸಲು ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಆದರೆ, ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನೀಡದೆ ಯಂತ್ರಗಳ ಮೂಲಕ ಕೆಲಸ ಮಾಡಿಸಿ ಕೂಲಿಕಾರ್ಮಿಕರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟ ಮಾದು ಮಾತನಾಡಿ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಿಲ್ಲೆಗೆ ಜಾರಿಯಾಗಿ 11 ವರ್ಷ ಕಳೆದರೂ ಇದುವರೆಗೂ ಜಿಲ್ಲಾದ್ಯಂತ ಗ್ರಾಪಂಗಳು ಕೂಲಿಕಾರರಿಗೆ ಸಮರ್ಪಕ ಕೆಲಸ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆಲಸ ಕೇಳಿ ನಮೂನೆ -7ರಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲಾ ಕೂಲಿಕಾರರಿಗೂ ಕೆಲಸ ನೀಡಬೇಕು. ಎನ್‌ಎಂಆರ್‌ ತೆಗೆಯದೆ ಕಾನೂನು ಬಾಹಿರವಾಗಿ ಕೆಲಸ ಮಾಡಿಸಬಾರದು. ಉದ್ದೇಶ ಪೂರಕವಾಗಿ ಕೆಲಸ ನೀಡದೆ ಕೂಲಿಕಾರರನ್ನು ವಂಚಿಸಬಾರದು ಎಂದು ಹೇಳಿದರು.

ಈಗಾಗಲೇ ಆರ್‌ಬಿಐ ನಿರ್ದೇಶನದಂತೆ ಷರತ್ತಿಲ್ಲದೆ ಬ್ಯಾಂಕ್‌ಗಳಿಗೆ ಸಾಲ ಕೇಳಿ ಅರ್ಜಿ ಸಲ್ಲಿಸಿರುವ ಕೂಲಿಕಾರರಿಗೆ ಸಾಲ ನಿಡಬೇಕು. ಕೂಲಿಕಾರರಿಗೆ ಗುರುತಿನ ಚೀಟಿ ನೀಡಬೇ ಕೆಂದು ಆಗ್ರಹಿಸಿದರು. ಸ್ಥಳಕಾಗಮಿಸಿದ ಇಂಜಿನೀಯರ್‌ ಲೋಹಿತ್‌ ಮತ್ತು ಎ.ಡಿ.ಮಂಜುನಾಥ್‌ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಕೂಲಿಕಾರರಿಗೆ ಸಮರ್ಪಕ ಉದ್ಯೋಗ ನೀಡಲು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಪುಟ್ಟಚನ್ನಮ್ಮ, ಚಂದ್ರಕಲಾ, ಶಶಿಕಲಾ, ಪದ್ಮಮಮ್ಮ, ಸವಿತಾ, ಚಂದ್ರಮ್ಮ, ವರಲಕ್ಷ್ಮೀ, ತಿಮ್ಮಯ್ಯ, ಕಮಲಮ್ಮ, ಅನಿತಾ, ಜಯಲಿಂಗೇ ಗೌಡ, ಆಶಾ, ರಾಧ ಇತರರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ