ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗಿಲ್ಲ ಔಷಧಿ ಭಾಗ್ಯ
ಕಳೆದ ಆರು ತಿಂಗಳುಗಳಿಂದ ಪೂರೈಕೆಯಲ್ಲಿ ವ್ಯತ್ಯಯ
Team Udayavani, Aug 21, 2019, 5:08 PM IST
ಮುದಗಲ್ಲ: ಸಮುದಾಯ ಆರೋಗ್ಯ ಕೇಂದ್ರದ ಹೊರನೋಟ.
•ದೇವಪ್ಪ ರಾಠೊಡ
ಮುದಗಲ್ಲ: ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಡ ರೋಗಿಗಳಿಗೆ ಔಷದಿ ಕೊರತೆ ಉಂಟಾಗಿದೆ.
ಕಳೆದ ಆರು ತಿಂಗಳಿಂದ ಸರಕಾರ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಔಷಧ ಪೂರೈಸದ ಕಾರಣ ವೈದ್ಯರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲಾಗಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆಯಿಂದ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ 30 ಹಾಸಿಗೆ ಹೊಂದಿದೆ. ಇಲ್ಲಿಗೆ ನಿತ್ಯ ಸುಮಾರು 200 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ ಸಾಮಾನ್ಯವಾಗಿ ಬೇಕಾಗುವ ಅಗತ್ಯ ಔಷಧಿ ಪೂರೈಕೆಯಲ್ಲಿ ಆರು ತಿಂಗಳಿಂದ ಏರುಪೇರಾಗಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಮೂಲಗಳು ಮಾಹಿತಿ ನೀಡಿವೆ.
ಇಲ್ಲಿನ ವೈದ್ಯರ, ಸಿಬ್ಬಂದಿ ವೇತನ ಸೇರಿದಂತೆ ಅಗತ್ಯ ಔಷಧ, ಇನ್ನಿತರ ಸಾಮಗ್ರಿ ಖರೀದಿಸಲು ಆಸ್ಪತ್ರೆ ಖಾತೆಗೆ ಹಣ ಜಮೆಯಾಗಿಲ್ಲ, 3-4 ತಿಂಗಳಿಂದ ವೇತನ ವಿಲ್ಲದೇ ಆಸ್ಪತ್ರೆ ಸಿಬ್ಬಂದಿ ಎರಡು-ಮೂರು ತಿಂಗಳಿಂದ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ ಎನ್ನಲಾಗಿದೆ.
ಸಮುದಾಯ ಆರೋಗ್ಯ ಕೇಂದ್ರಕ್ಕೆ ಔಷಧಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇಲಾಖೆ ನಿರ್ದೇಶನದಂತೆ ಜನೌಷಧಿ ಕೇಂದ್ರಗಳಿಂದ ಅಗತ್ಯವಿರುವ ಔಷಧಿ ಖರೀದಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
•ಡಾ| ಅಮರೇಗೌಡ ಪಾಟೀಲ ಮಾಕಾಪುರ,
ಮುದಗಲ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ
ಜಿಲ್ಲಾಮಟ್ಟದ ಸಭೆಯಲ್ಲಿ ಔಷಧಿ ಕೊರತೆ ಬಗ್ಗೆ ಚರ್ಚೆಯಾಗಿದೆ. ಈಗ ಆನ್‌ಲೈನ್ ಮೂಲಕ ಔಷಧಿ ಬೇಡಿಕೆ ಸಲ್ಲಿಸಬೇಕು. ತಾಂತ್ರಿಕ ತೊಂದರೆಯಿಂದ ಔಷಧಿ ಸರಬರಾಜಿನಲ್ಲಿ ತೊಂದರೆಯಾಗಿದೆ. ಒಂದು ವಾರದಲ್ಲಿ ಎಲ್ಲ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಔಷಧಿ ಪೂರೈಕೆಯಾಗಲಿದೆ.
•ಡಾ| ರುದ್ರಗೌಡ,
ತಾಲೂಕು ಆರೋಗ್ಯ ಅಧಿಕಾರಿ