ಏಕೀಕರಣಕ್ಕಾಗಿ ಒಡೆಯರ್‌ ರಾಜಪ್ರಮುಖ ಪದವಿ ತ್ಯಾಗ

Team Udayavani, Jun 23, 2019, 3:00 AM IST

ಮೈಸೂರು: ಕಲೆ, ಸಾಹಿತ್ಯ, ಸಂಗೀತವನ್ನು ಉಳಿಸಿ-ಬೆಳೆಸುವ ಸಲುವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತನ್ನು ಮುಂದುವರಿಸಿಕೊಂಡು ಬರುವ ಜೊತೆಗೆ ಈ ಕ್ಷೇತ್ರಕ್ಕೆ ಜಯಚಾಮರಾಜೇಂದ್ರ ಒಡೆಯರ್‌ ಅಪಾರ ಕೊಡುಗೆ ನೀಡಿದ್ದಾರೆ ಎಂದು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಸ್ಮರಿಸಿದರು.

ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಜಯ ಚಾಮರಾಜೇಂದ್ರ ಒಡೆಯರ್‌ ಜನ್ಮ ಶತಾಬ್ಧಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಏಕೀಕರಣ ಚಳವಳಿ: 1915ರಲ್ಲಿ ಕಲೆ, ಸಾಹಿತ್ಯ, ಸಂಗೀತವನ್ನು ಉಳಿಸಿ -ಬೆಳೆಸುವ ಉದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಕಸಾಪ ಸ್ಥಾಪಿಸಿದರು. ಅದೇ ವೇಳೆಗೆ ಏಕೀಕರಣ ಚಳವಳಿಯೂ ನಡೆಯುತ್ತಿತ್ತು. ಸ್ವಾತಂತ್ರಾ ನಂತರವು 1955ರವರೆಗೂ ಕನ್ನಡ ಭಾಷೆ ಮಾತನಾಡುವ ಪ್ರಾಂತ ಒಂದಾಗಿರಲಿಲ್ಲ. ಕನ್ನಡ ಮಾತನಾಡುವ ಪ್ರಾಂತ ಏಕೀಕರಣವಾಗಲಿ ಎಂಬ ಉದ್ದೇಶದಿಂದ ಜಯ ಚಾಮರಾಜೇಂದ್ರ ಒಡೆಯರ್‌ ಅವರು ರಾಜ ಪ್ರಮುಖ ಪದವಿಯನ್ನು ತ್ಯಾಗ ಮಾಡಿದರು ಎಂದು ಹೇಳಿದರು.

ಜಯಚಾಮರಾಜೇಂದ್ರ ಒಡೆಯರ್‌ ಅವರು ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಾಹಿತ್ಯ, ಸಂಗೀತ, ಸಂಪ್ರದಾಯ ರಕ್ಷಣೆಗೆ ಎಲ್ಲರೂ ಒಂದಾಗಿ ಹೋಗೋಣ ಎಂದರು. ಅವರ ಜೀವನ ಮತ್ತು ಸಾಧನೆ ಸ್ಮರಿಸುವುದು ಅವಶ್ಯ. ಈ ಕಾರ್ಯವನ್ನು ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಲೇಖನ ಪ್ರಕಟಿಸಿ: ಜಯ ಚಾಮರಾಜೇಂದ್ರ ಒಡೆಯರ್‌ ಕುರಿತು ವಿಶೇಷ ಉಪನ್ಯಾಸ ನೀಡಿದ ವಿದ್ವಾಂಸ ಡಾ.ಎನ್‌.ಎಸ್‌. ತಾರಾನಾಥ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌, ಮುಮ್ಮಡಿ ಕೃಷ್ಣರಾಜ ಒಡೆಯರ್‌, ಚಾಮರಾಜ ಒಡೆಯರ್‌ ಅವರ ಬಗ್ಗೆ ಅನೇಕ ಪುಸ್ತಕಗಳಿವೆ. ಆದರೆ, ಜಯಚಾಮರಾಜೇಂದ್ರ ಒಡೆಯರ್‌ ಅವರ ಜೀವನ-ಸಾಧನೆ- ಜನಮುಖೀ ಕೆಲಸಗಳ ಬಗ್ಗೆ ಬಿಡಿ ಬಿಡಿಯಾಗಿ ಲೇಖನಗಳಿವೆ.

ಹೀಗಾಗಿ ಅವರ ಬಗ್ಗೆ ಸಾಹಿತ್ಯ ಪರಿಷತ್ತು ಸಮಗ್ರ ಪುಸ್ತಕ ಹೊರತರಬೇಕು. ಜೊತೆಗೆ ಜಯಚಾಮರಾಜೇಂದ್ರ ಒಡೆಯರ್‌ ಅವರ ಬಗ್ಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಬಿಎಂಶ್ರೀ ಬರೆದಿರುವ ಲೇಖನಗಳನ್ನು ಸಾಹಿತ್ಯ ಪರಿಷತ್ತು ಪ್ರಕಟಿಸಲಿ ಎಂದು ಆಗ್ರಹಿಸಿದರು.

ಅಧ್ಯಕ್ಷತೆವಹಿಸಿದ್ದ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಮಾತನಾಡಿ, ಮೈಸೂರಿನಲ್ಲಿ ಜಯ ಚಾಮರಾಜೇಂದ್ರ ಒಡೆಯರ್‌ ಅವರ ಜನ್ಮ ಶತಾಬ್ಧಿ ಉದ್ಘಾಟನಾ ಸಮಾರಂಭ ಆಯೋಜಿಸಿದ್ದು, ಜುಲೈ 18ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಮುಕ್ತಾಯ ಸಮಾರಂಭ ಏರ್ಪಡಿಸಲಿದ್ದು, ಚಿತ್ರದುರ್ಗದಲ್ಲೂ ಜಯ ಚಾಮರಾಜೇಂದ್ರ ಒಡೆಯರ್‌ ಅವರನ್ನು ಕುರಿತ ಸಮಾರಂಭ ಏರ್ಪಡಿಸುವುದಾಗಿ ತಿಳಿಸಿದರು.

ಶ್ರೀಗೆ ಒಡೆಯರ್‌ ಪತ್ರ: ಸಾನ್ನಿಧ್ಯವಹಿಸಿದ್ದ ಸುತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಅರಮನೆಗೂ ಸುತ್ತೂರು ಮಠಕ್ಕೂ ನಿಕಟ ಸಂಬಂಧವಿತ್ತು. ಜಯ ಚಾಮರಾಜೇಂದ್ರ ಒಡೆಯರ್‌ ಅವರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರಿಗೆ ಬರೆದಿರುವ ಪತ್ರಗಳನ್ನು ಪ್ರಕಟಿಸಿದರೆ ಒಂದು ಸಂಪುಟವಾಗಲಿದೆ. ಒಡೆಯರ್‌ ಅವರು ಶಿಕಾರಿಗೆ, ಊಟಿ, ಮದ್ರಾಸ್‌ಗೆ ಹೋಗುವಾಗೆಲ್ಲ ರಾಜೇಂದ್ರ ಸ್ವಾಮೀಜಿಯವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು ಎಂದು ನೆನೆದರು.

ವಿಚಾರ ಸಂಕಿರಣ: ಜಯ ಚಾಮರಾಜೇಂದ್ರ ಒಡೆಯರ್‌ ಜನ್ಮ ಶತಾಬ್ಧಿಯನ್ನು ಸರ್ಕಾರ ಯಾಂತ್ರಿಕವಾಗಿ ಆಚರಿಸಬಹುದು. ಕಸಾಪ ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು, ಸುತ್ತೂರು ಶ್ರೀಕ್ಷೇತ್ರದ ವತಿಯಿಂದಲೂ ಜಯ ಚಾಮರಾಜೇಂದ್ರ ಒಡೆಯರ್‌ ಅವರ ಜೀವನ-ಸಾಧನೆ ಕುರಿತು ವಿಚಾರ ಸಂಕಿರಣ ಏರ್ಪಡಿಸುವುದಾಗಿ ಹೇಳಿದರು.
ಮೇಯರ್‌ ಪುಷ್ಪಲತಾ ಜಗನ್ನಾಥ್‌ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಉಪಸ್ಥಿತರಿದ್ದರು.

ನೆಹರೂಗೆ ಒಡೆಯರ್‌ ಪ್ರೇರಣೆ: 1942ರಲ್ಲೇ ಪಂಚವಾರ್ಷಿಕ ಯೋಜನೆ ಜಾರಿಗೆ ತರುವ ಮೂಲಕ ಸಂಸ್ಥಾನವನ್ನು ಸಂಪನ್ನಗೊಳಿಸುವ ಪ್ರಯತ್ನ ಮಾಡಿದ್ದರು. ಇದನ್ನೇ ಮಾದರಿಯಾಗಿಸಿಕೊಂಡು ಜವಹರಲಾಲ್‌ ನೆಹರೂ ಅವರು 1952ರಲ್ಲಿ ಪಂಚವಾರ್ಷಿಕ ಯೋಜನೆ ಜಾರಿಗೆ ತಂದರು. ಜೊತೆಗೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಭಿಕ್ಷುಕರ ಸಮಸ್ಯೆ ಅರಿತು ಪುರ್ನವಸತಿ ಕೇಂದ್ರ ಸ್ಥಾಪಿಸಿದರು. ಕಬ್ಬಿಗೆ ನುಸಿ ರೋಗ ತಗುಲುತ್ತಿದ್ದನ್ನು ಕಂಡು ಮಂಡ್ಯದಲ್ಲಿ ಪ್ರಯೋಗಾಲಯ ಸ್ಥಾಪಿಸಿದರು. 1944ರಲ್ಲೇ ಮುಜರಾಯಿ ದೇವಾಲಯಗಳಲ್ಲಿ ದಲಿತರ ಪ್ರವೇಶಕ್ಕೆ ರಾಜಾಜ್ಞೆ ಹೊರಡಿಸಿದ್ದರು ಎಂದು ವಿದ್ವಾಂಸ ಡಾ.ಎನ್‌.ಎಸ್‌. ತಾರಾನಾಥ್‌ ಸ್ಮರಿಸಿದರು.

ಒಡೆಯರ್‌ ಬಗ್ಗೆ ಸಮಗ್ರ ಗ್ರಂಥ ಬರೆದರೆ ಪ್ರಕಟಣೆ: ಜಯ ಚಾಮರಾಜೇಂದ್ರ ಒಡೆಯರ್‌ ಭಾಷಣಗಳು ಮತ್ತು ಅವರ ಕುರಿತ ಸಣ್ಣ ಗ್ರಂಥಗಳನ್ನು ಮರು ಮುದ್ರಣ ಮಾಡಲು ಕಸಾಪ ಸಿದ್ಧವಿದೆ. ಜೊತೆಗೆ ಜಯ ಚಾಮರಾಜೇಂದ್ರ ಒಡೆಯರ್‌ ಅವರ ಬಗ್ಗೆ ಸಮಗ್ರ ಗ್ರಂಥ ಬರೆದುಕೊಟ್ಟರೆ ಪ್ರಕಟಿಸಲು ಸಿದ್ಧ ಎಂದು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಭರವಸೆ ನೀಡಿದರು. ಜಯ ಚಾಮರಾಜೇಂದ್ರ ಒಡೆಯರ್‌ ಜನ್ಮ ಶತಮಾನೋತ್ಸವವನ್ನು ಸರ್ಕಾರ ಕೂಡ ಆಚರಿಸಬೇಕು ಎಂದು ಒತ್ತಾಯ ಮಾಡಿದರು. ಋಗ್ವೇದ ಸಂಪುಟ ಮರು ಮುದ್ರಣಕ್ಕೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ