ಬಾರ್‌ಕೋಲ್‌, ಬಿಂದಿಗೆ ಹಿಡಿದು ಬೃಹತ್‌ ಪ್ರತಿಭಟನೆ

Team Udayavani, Nov 17, 2019, 3:00 AM IST

ನಂಜನಗೂಡು: ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡ ರಾಜ್ಯ ರೈತ ಸಂಘವು, ತಾಲೂಕು ಆಡಳಿತವನ್ನು ಬಡಿದೆಬ್ಬಿಸಲು ಬಾರ್‌ಕೋಲ್‌ ಹಾಗೂ ಖಾಲಿ ಬಿಂದಿಗೆ ಹಿಡಿದು ಬೃಹತ್‌ ಪ್ರತಿಭಟನೆ ನಡೆಸಿತು.

ಶನಿವಾರ ನಗರದ ಅಂಬೇಡ್ಕರ್‌ ಪುತ್ಥಳಿ ಎದರಿನಿಂದ ಹೊರಟ ಸಹಸ್ರಾರು ರೈತರು ಮಹಾತ್ಮ ಗಾಂಧಿ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ತಲುಪಿ ತಾಲೂಕು ಆಡಳಿತದ ಸಮುಚ್ಛಯದ ಮಿನಿ ವಿಧಾನಸೌಧದವರಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ಅಲ್ಲಿ ಸಭೆ ನಡೆಸಿದರು.

ಕುಡಿಯುವ ನೀರು, ಸ್ಮಶಾನ ವ್ಯವಸ್ಥೆ, ಕಾರ್ಖಾನೆಗಳಿಗೆ ಭೂಮಿ ಕೊಟ್ಟವರಿಗೆ ಉದ್ಯೋಗ, ಫ‌ಸಲು ಬಿಮಾ ಯೋಜನೆಯ ಪರಿಹಾರ, ಕಾಡಂಚಿನ ವನ್ಯಜೀವಿಗಳ ಹಾವಳಿ ತಡೆ ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ವೃತ್ತದಲ್ಲಿ ಯುವ ರೈತ ನಾಯಕ ದರ್ಶನ್‌ ಪುಟ್ಟಣ್ಣಯ್ಯ ತಮಟೆ ಬಾರಿಸಿ ಹಸಿರು ಬಾವುಟದ ಮೆರವಣಿಗೆಗೆ ಚಾಲನೆ ನೀಡಿದರು. ಕಾರ್ಯಕರ್ತರು ದಾರಿಯುದ್ದಕ್ಕೂ ಬಾರ್‌ಕೋಲ್‌ ಝುಳಪಿಸಿದರೆ, ನೂರಾರು ಮಹಿಳೆಯರು ಖಾಲಿ ಬಿಂದಿಗೆ ಹಿಡಿದು, ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿದರು.

ಗಡುವು: ತಾಲೂಕಿನ ಹುಣಸನಾಳು, ತರದಲೆ, ಕುರಹಟ್ಟಿ, ಕುಡ್ಲಾಪುರ, ಬಾಗೂರು ಮುಂತಾದ ಗ್ರಾಮಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಬೇಸಿಗೆಗೂ ಮುನ್ನವೇ ಹಾಹಾಕಾರ ಶುರುವಾಗಿದೆ. ಕುಡಿಯುವ ನೀರು, ಸಮರ್ಪಕ ವಿದ್ಯುತ್‌ ಪೂರೈಕೆ, ನಾಲೆಗಳ ದುರಸ್ತಿ ಸೇರಿದಂತೆ 16 ಬೇಡಿಕೆಗಳ ಕುರಿತು ಅಧಿಕಾರಿಗಳು ಡಿಸೆಂಬರ್‌ 9 ರೊಳಗೆ ವರದಿ ನೀಡಬೇಕು. ಇಲ್ಲದಿದ್ದರೆ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ