ಸುಪ್ರೀಂ ತೀರ್ಪು ಎದುರು ನೋಡುತ್ತಲೇ ರಂಗೇರಿದ ಕಣ

Team Udayavani, Nov 6, 2019, 3:00 AM IST

ಮೈಸೂರು: ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಹೊರಬೀಳುವ ಮುನ್ನವೇ ಎದುರಾಗಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಚುನಾವಣಾ ಆಯೋಗ ಎರಡನೇ ಬಾರಿಗೆ ಚುನಾವಣಾ ದಿನಾಂಕ ಪ್ರಕಟಿಸಿರುವಂತೆ ಡಿ.5ರಂದು ಚುನಾವಣೆ ನಡೆದರೆ, ನ.11ರಂದು ಉಪ ಚುನಾವಣೆ ಅಧಿಸೂಚನೆ ಹೊರಬೀಳುವುದರೊಂದಿಗೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅಂದಿನಿಂದಲೇ ಚುನಾವಣಾ ನೀತಿ ಸಂಹಿತೆಯೂ ಜಾರಿಯಾಗಲಿದೆ.

ಕಾಂಗ್ರೆಸ್‌ ಈಗಾಗಲೇ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌, ಈಗಾಗಲೇ ಚುನಾವಣೆ ತಯಾರಿ ನಡೆಸಿ ಜಾತೀವಾರು ಸಮಾವೇಶಗಳನ್ನು ಆಯೋಜಿಸಿ, ಪಕ್ಷದಲ್ಲಿನ ಆ ಸಮುದಾಯದ ನಾಯಕರನ್ನು ಕರೆಸಿ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾ ಕ್ಷೇತ್ರ ಪ್ರವಾಸ ಆರಂಭಿಸಿದ್ದಾರೆ.

ಇತ್ತ ಅನರ್ಹ ಶಾಸಕ ಎಚ್‌.ವಿಶ್ವನಾಥ್‌, ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎನ್ನುತ್ತಾ ತಮ್ಮ 14 ತಿಂಗಳ ಶಾಸಕತ್ವದ ಅವಧಿಯಲ್ಲಿ ಬಿಡುಗಡೆ ಮಾಡಿಸಿದ ಅನುದಾನದಲ್ಲಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹೆಸರಲ್ಲಿ ಕ್ಷೇತ್ರ ಪ್ರವಾಸ ಆರಂಭಿಸಿದ್ದಾರೆ.

ಜೊತೆಗೆ ಹುಣಸೂರು ಉಪ ವಿಭಾಗ ಕೇಂದ್ರವನ್ನು ನೂತನ ಜಿಲ್ಲೆ ಮಾಡಿಸುವ ವಿಚಾರವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಸುಪ್ರೀಂ ಕೋರ್ಟ್‌ ಸ್ಪೀಕರ್‌ ಆದೇಶವನ್ನು ಎತ್ತಿಹಿಡಿದರೆ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಬಿಜೆಪಿಯಿಂದ ಕಣಕ್ಕಿಳಿಯಲು ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್‌ ಕೂಡ ಉತ್ಸುಕತೆ ತೋರಿದ್ದಾರೆ.

ಜತೆಗೆ ಎರಡು ವರ್ಷಗಳ ಹಿಂದೆ ಪಕ್ಷ ತೊರೆದು ಕಾಂಗ್ರೆಸ್‌ ಸೇರಿ ಲೋಕಸಭಾ ಚುನಾವಣೆ ಎದುರಿಸಿದ್ದ ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಕೂಡ ಬಿಜೆಪಿಗೆ ವಾಪಸ್ಸಾಗಿ 90ರ ದಶಕದಲ್ಲಿ ಹುಣಸೂರಿನಿಂದ ತಾವು ಬಿಜೆಪಿ ಶಾಸಕರಾಗಿದ್ದ ಕಾರಣಕ್ಕೆ ಪಕ್ಷ ಮತ್ತೂಮ್ಮೆ ಅವಕಾಶ ನೀಡಿದರೆ ಸ್ಪರ್ಧೆಗೆ ಸಿದ್ಧ ಎಂದಿದ್ದಾರೆ.

ದಳಪತಿಗಳ ನಡೆ ನಿಗೂಢ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಒಕ್ಕಲಿಗ ಮತದಾರರು ಸಂಪೂರ್ಣವಾಗಿ ಜೆಡಿಎಸ್‌ ಪರ ನಿಂತಿದ್ದರಿಂದ ಕ್ಷೇತ್ರಕ್ಕೆ ಹೊರಗಿನಿಂದ ಬಂದ ಎಚ್‌.ವಿಶ್ವನಾಥ್‌ ಗೆಲುವು ಸಾಧ್ಯವಾಗಿತ್ತು. ಆದರೆ, ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಎಚ್‌.ವಿಶ್ವನಾಥ್‌ ಕಾರಣರು ಎಂಬ ಕಾರಣಕ್ಕೆ ಆ ಸಮುದಾಯ ಈಗ ತಿರುಗಿ ಬಿದ್ದಿದೆ. ಇದರ ಲಾಭ ಪಡೆಯಲು ಕಾಂಗ್ರೆಸ್‌ ಹವಣಿಸುತ್ತಿದೆ.

ಇದೇ ಕಾರಣಕ್ಕೆ ಹುಣಸೂರು ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿ, ಇಂದಿಗೂ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಹೊಂದಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಸಮ್ಮಿಶ್ರ ಸರ್ಕಾರದಲ್ಲಿ ತಾವು ಕೇಳಿದ ಖಾತೆ ಕೊಡಲಿಲ್ಲ ಎಂದು ಅಸಮಾಧಾನಗೊಂಡು ಸರ್ಕಾರ ಪತನದ ನಂತರ ಜೆಡಿಎಸ್‌ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವ ಜಿ.ಟಿ.ದೇವೇಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳೂ ಯತ್ನಿಸುತ್ತಿವೆ.

ಉಪ ಚುನಾವಣೆಯಲ್ಲಿ ತಟಸ್ಥರಾಗಿರುವುದಾಗಿ ಜಿಟಿಡಿ ಹೇಳುತ್ತಾ ಬಂದಿದ್ದರೂ ಕ್ಷೇತ್ರದಲ್ಲಿ ಮತ ಪರಿವರ್ತನೆ ಮಾಡುವ ಶಕ್ತಿಯನ್ನು ಅವರ ಕುಟುಂಬ ಉಳಿಸಿಕೊಂಡಿದೆ. ಆ ಕಾರಣಕ್ಕೆ ಅವರ ನಿರ್ಧಾರ ಕೂಡ ಹುಣಸೂರು ಉಪ ಚುನಾವಣೆಯಲ್ಲಿ ಮಹತ್ವ ಪಡೆದಿದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಬಿಜೆಪಿ ಅದರಲ್ಲೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಗೆಗೆ ಮೃದುಧೋರಣೆ ತೋರುತ್ತಿರುವುದನ್ನು ನೋಡಿದರೆ, ತಮ್ಮ ಪ್ರಬಲ ರಾಜಕೀಯ ವೈರಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತವರು ಜಿಲ್ಲೆಯಲ್ಲೇ ಹಣಿಯಲು, ನೆಪಮಾತ್ರಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿಗೆ ಪರೋಕ್ಷ ಬೆಂಬಲ ನೀಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಇತ್ತ ತನ್ನ ವೈರಿ ಎಚ್‌.ವಿಶ್ವನಾಥ್‌ರನ್ನು ಹಣಿಯಲು ಸಿದ್ದರಾಮಯ್ಯ ಕೂಡ ಪ್ರತ್ಯಸ್ತ್ರ ಹೂಡಿದ್ದಾರೆ. ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭವಾಗದಿದ್ದರೂ ಹುಣಸೂರು ಉಪ ಚುನಾವಣೆಯ ಕಣ ರಂಗೇರುತ್ತಿದೆ.

ಹುಣಸೂರು ಉಪ ಚುನಾವಣೆಗೂ ನನಗೂ ಏನೇನೂ ಸಂಬಂಧ ಇಲ್ಲ. ನಾನು ಶಾಸಕನಾಗಿದ್ದೇನೆ. ನನ್ನ ಪತ್ನಿ, ಮಗನಿಗೂ ಶಾಸಕರಾಗುವ ಅರ್ಹತೆ ಇದೆ. ಯಾವುದೇ ಪಕ್ಷದಿಂದ ಆಹ್ವಾನ ಬಂದಿಲ್ಲ. ನಾವೂ ಯಾವ ಪಕ್ಷಕ್ಕೂ ಬೇಡಿಕೆ ಇಟ್ಟಿಲ್ಲ.
-ಜಿ.ಟಿ.ದೇವೇಗೌಡ, ಮಾಜಿ ಸಚಿವರು

ಹುಣಸೂರು ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದು ನನ್ನ ಗುರಿ. ಹುಣಸೂರು ಉಪ ಚುನಾವಣೆ ನನ್ನ ಪ್ರತಿಷ್ಠೆಯ ವಿಚಾರವಾಗಿದೆ. ನೀವು ಅಭ್ಯರ್ಥಿ ಆಗಬೇಕು ಎಂದು ಪಕ್ಷ ಹೇಳಿದರೆ ಸ್ಪರ್ಧೆಗೆ ಹಿಂದೇಟು ಹಾಕಲ್ಲ. ಅವಕಾಶಕೊಡದಿದ್ದರೆ ಬೇರೆ ಅಭ್ಯರ್ಥಿ ಪರ ಕೆಲಸ ಮಾಡಿ ಗೆಲುವಿಗೆ ಶ್ರಮಿಸುತ್ತೇನೆ.
-ಸಿ.ಎಚ್‌.ವಿಜಯಶಂಕರ್‌, ಮಾಜಿ ಸಚಿವ

* ಗಿರೀಶ್‌ ಹುಣಸೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ