10 ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿ

ಕಾಮಗಾರಿ ಪರಿಶೀಲಿಸಿದ ಇಒ ಶಿವರಾಮ್‌ • ಗ್ರಾಪಂ ಸಭೆ ಚಿಂತನೆಗೆ ಕಾರ್ಯರೂಪ

Team Udayavani, May 15, 2019, 4:36 PM IST

ಕನಕಪುರ: ನಮ್ಮ ಪೂರ್ವವರು ಅನುಕೂಲಕ್ಕೆ ತಕ್ಕಂತೆ ಪೂರ್ವಾಲೋಚನೆಯಿಂದ ಅಗತ್ಯಕ್ಕಿಂತ ಲೂ ಹೆಚ್ಚು ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿದ್ದರು. ಇಂದು ಅವುಗಳ ಉಪಯೋಗ ಮತ್ತು ನಿರ್ವಹಣೆ ಸೂಕ್ತವಾಗಿ ನಡೆಯುತ್ತಿಲ್ಲ. ಇಂತಹ ಕೆರೆಕುಂಟೆಗಳನ್ನು ನರೇಗಾ ಯೋಜನೆಯಡಿಯಲ್ಲಿ ಅಬಿವೃದ್ಧಿ ಮಾಡ ಲಾಗುತ್ತಿದೆ ಎಂದು ತಾಪಂ ಕಾರ್ಯನಿರ್ವಣಾಧಿಕಾರಿ ಟಿ.ಎಸ್‌.ಶಿವರಾಮ್‌ ಹೇಳಿದರು.

ತಾಲೂಕಿನ ಬೂದಿಗುಪ್ಪೆ ಗ್ರಾಪಂಗೆ ಭೇಟಿ ನೀಡಿ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿ, ಪಂಚಾಯ್ತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಪಂಚಾಯ್ತಿ ಮುಂಭಾಗದಲ್ಲಿದ್ದ ನೀರಿನ ಕೆರೆಯನ್ನು ಪಂಚಾಯ್ತಿಯಿಂದಲೇ 10 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಿಸುತ್ತಿರುವುದನ್ನು ಕಂಡು ಸಂತಸ ವ್ಯಕ್ತ ಪಡಿಸಿದರು. ಪಂಚಾಯ್ತಿ ನಿರ್ಲಕ್ಷ್ಯದಿಂದ ನೀರಿನ ಕುಂಟೆ ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ಗ್ರಾಮಸ್ಥರು ಕುಂಟೆಯನ್ನು ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸಿದ್ದರು.

ಕೆರೆ-ಕುಂಟೆಗಳು ಗ್ರಾಮದ ಜೀವವಿದ್ದಂತೆ: ಪ್ರತಿ ಗ್ರಾಮದ ಜನರಿಗೆ ಹಾಗೂ ಜಾನುವಾರುಗಳಿಗೆ ಅನುಕೂಲವಾಗುವ ಕೆರೆ-ಕುಂಟೆಗಳು ಆ ಗ್ರಾಮದ ಜೀವವಿದ್ದಂತೆ. ಅಂತಹ ಕೆರೆಕುಂಟೆಗಳನ್ನು ಅಭಿವೃದ್ಧಿಗೊಳಿಸಿ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳು ವುದು ಸಮುದಾಯದ ಜವಾಬ್ದಾರಿಯಾಗಿದೆ. ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಗ್ರಾಮ ದ ಜನತೆ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯವನ್ನು ಶ್ಲಾಘಿಸಿದರು.

ಹಿಂದಿನ ಕಾಲದಲ್ಲಿ ದನಕರುಗಳ ನೀರಿಗಾಗಿ ಗ್ರಾಮದ ಮುಂದೆ ನೀರಿನ ಕುಂಟೆಗಳನ್ನು ನಿರ್ಮಿ ಸುತ್ತಿದ್ದರು. ಬಹು ರೀತಿಯಲ್ಲಿ ಉಪಯೋಗವಾ ಗುತ್ತಿದ್ದ ಕುಂಟೆಯನ್ನು ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಮತ್ತೆ ಹೊಸ ರೂಪ ಕೊಡಲಾಗುತ್ತಿದೆ ಎಂದರು.

ಗ್ರಾಪಂ ಸಭೆಯ ಚಿಂತನೆಗೆ ಕಾರ್ಯರೂಪ: ಸುಮಾರು 1 ಎಕರೆ ಪ್ರದೇಶದಲ್ಲಿದ್ದ ನೀರಿನ ಕುಂಟೆ ಸರಿಯಾದ ನಿರ್ವಹಣೆಯಿಲ್ಲದೆ ಮುಚ್ಚಿ ಹೋಗಿತ್ತು. ಹಳೆಯ ಕಾಲದ್ದಾಗಿದ್ದರಿಂದ ಕುಂಟೆಗೆ ಸುತ್ತಲೂ ತಡೆಗೋಡೆ ಇರಲಿಲ್ಲ. ಗ್ರಾಮದ ಮುಂಭಾಗದಲ್ಲೇ ಇರುವುದರಿಂದ ಇದಕ್ಕೊಂದು ಕಾಯಕಲ್ಪ ಕೊಡಬೇಕೆಂದು ಚಿಂತನೆ ನಡೆಸಿ ಪಂಚಾಯ್ತಿ ಸಭೆಯಲ್ಲಿ ಸದಸ್ಯರೊಂದಿಗೆ ಚರ್ಚೆ ನಡೆಸಲಾಯಿತು. ಈ ವೇಳೆ ಕುಂಟೆ ಸುತ್ತಲೂ ಕಲ್ಲಿನ ತಡೆಗೋಡೆ ನಿರ್ಮಿಸಿ, ನೀರು ಶಾಶ್ವತವಾಗಿ ನಿಲ್ಲುವಂತೆ ಮಾಡಬೇಕು. ಇದರಿಂದ ಕೆರೆಯಲ್ಲಿ ನೀರು ಇಂಗುವ ಮೂಲಕ ಅಂತರ್ಜಲ ವೃದ್ಧಿಯಾಗುತ್ತದೆ. ಕುಂಟೆಯ ಸುತ್ತ ಪಾರ್ಕ್‌ ನಿರ್ಮಾಣ ಮಾಡುವುದರಿಂದ ಗ್ರಾಮದ ಸೌಂದರ್ಯವೂ ಹೆಚ್ಚುತ್ತದೆ ಎಂದು ತೀರ್ಮಾನಿಸಿ ಅಭಿವೃದ್ಧಿ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪಂಚಾಯ್ತಿ ಅಧಿಕಾರಿಗಳು ತಿಳಿಸಿದರು.

ಮುಕ್ತಾಯದ ಹಂತದಲ್ಲಿ ಕಾಮಗಾರಿ: ಕುಂಟೆಯನ್ನು ಅಭಿವೃದ್ಧಿಗೊಳಿಸುವ ಕಾಮಗಾರಿ ಎರಡು ತಿಂಗಳ ಹಿಂದೆಯೇ ಆರಂಭವಾಗಿದ್ದು, ಸದ್ಯ ಮುಕ್ತಾಯದ ಹಂತದಲ್ಲಿದೆ. ಅಭಿವೃದ್ಧಿ ಕೆಲಸದ ಪರಿಶೀಲನೆಗೆ ತಾಪಂ ಕಾರ್ಯ ನಿರ್ವಣಾಧಿಕಾರಿ ಟಿ.ಎಸ್‌.ಶಿವರಾಮ್‌ ಭೇಟಿ ನೀಡಿದ್ದರು. ಈ ವೇಳೆ ಕಾಮಗಾರಿ ಉತ್ತಮ ರೀತಿಯಲ್ಲಿ ಸಾಗಿದೆ. ಆದರೆ ಕಾಮಗಾರಿಗೆ ಅಂದಾಜಿಸಿರುವ ಮೊತ್ತಕ್ಕಿಂತ ಹೆಚ್ಚಿನ ಹಣ ಖರ್ಚಾಗುತ್ತಿದೆ. ಜತೆಗೆ ಗುಣಮಟ್ಟದಲ್ಲಿ ಕುಂಟೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಅಲ್ಲದೆ ಕುಂಟೆಯಲ್ಲಿ ಇಳಿಯುವುದಕ್ಕೆ ಮೆಟ್ಟಿಲುಗಳ ನಿರ್ಮಾಣದ ಕುರಿತು ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಶಿವರಾಮ್‌ ಹೇಳಿದರು.

ಕಾಮಗಾರಿ ಪರಿಶೀಲನೆ ವೇಳೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಣ್ಣ, ಗ್ರಾಮ ಪಂಚಾಯ್ತಿ ಸದಸ್ಯ ರಮೇಶ್‌, ಮುಖಂಡರಾದ ನಾಗೇಶ್‌, ಗೋವಿಂದ ಯ್ಯ, ಪಂಚಾಯ್ತಿ ಕಾರ್ಯದರ್ಶಿ ಸಂಜಯ್‌ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ