ಕೃತಕವಾಗಿ ರಕ್ತ ಉತ್ಪಾದನೆ ಮಾಡಲು ಅಸಾಧ್ಯ

Team Udayavani, May 15, 2019, 5:12 PM IST

ರಾಮನಗರ ತಾಲೂಕು ಬಿಡದಿ ಜ್ಞಾನವಿಕಾಸ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್‌ 51ನೇ ಬಾರಿಗೆ ರಕ್ತದಾನ ಮಾಡಿದರು.

ರಾಮನಗರ: ಜಗತ್ತಿನಲ್ಲಿ ಅನೇಕ ವಸ್ತುಗಳು ಕೃತಕವಾಗಿ ಉತ್ಪಾದನೆಯಾಗುತ್ತಿವೆ. ಆದರೆ ಕೃತಕವಾಗಿ ರಕ್ತವನ್ನು ಉತ್ಪಾದನೆ ಅಸಾಧ್ಯ. ಹೀಗಾಗಿ ಅಗತ್ಯ ಸಂದರ್ಭದಲ್ಲಿ ರಕ್ತದಾನ ಮಾಡಿ ಜೀವ ಉಳಿಸುವ ಪರೋಪಕಾರ ಮನೋಭಾವ ಬೆಳೆಸಿ ಕೊಳ್ಳಬೇಕು ಎಂದು ಜ್ಞಾನವಿಕಾಸ ವಿದ್ಯಾ ಸಂಘದ ನಿರ್ದೇಶಕ ಎಲ್.ಸತಿಶ್‌ ಚಂದ್ರ ಹೇಳಿದರು.

ತಾಲೂಕಿನ ಬಿಡದಿಯ ತಮ್ಮ ಸಂಸ್ಥೆಯಲ್ಲಿ ರೋಟರಿ ಬಿಡದಿ ಸೆಂಟ್ರಲ್ ಮತ್ತು ನಾರಾಯಣ ಹೃದಯಾಲಯ ಆಯೋಜಿಸಿದ್ದ ಉಚಿತ ರಕ್ತದಾನ ಶಿಬಿರ, ನೇತ್ರ ತಪಾಸಣೆ ಶಿಬಿರಗಳನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ: ಆರೋಗ್ಯ ವಂತ ಯುವಸಮುದಾಯ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು. ರಕ್ತಕ್ಕೆ ಯಾವುದೇ ಬಣ್ಣ, ಜಾತಿ, ಧರ್ಮ ಇಲ್ಲ. ರಕ್ತದಾನ ಪುಣ್ಯದ ಕೆಲಸ. ಅಪಘಾತ ಮುಂತಾದ ಸಂದರ್ಭಗಳಲ್ಲಿ ರಕ್ತದ ಕೊರತೆಯನ್ನು ನೀಗಿಸಲು ಇಂತಹ ಶಿಬಿರಗಳು ಸಹಕಾರಿ ಎಂದರು.

ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್‌ 51ನೇ ಬಾರಿಗೆ ರಕ್ತದಾನ: ತಾಪಂ ಅಧ್ಯಕ್ಷ ಗಾಣಕಲ್ ನಟರಾಜು ಅವರು 51ನೇ ಬಾರಿಗೆ ರಕ್ತದಾನ ಮಾಡಿ, ಯುವ ಸಮುದಾಯಕ್ಕೆ ಮಾದರಿ ಯಾದರು. ಈ ವೇಳೆ ಮಾತನಾಡಿ, ತಾವು 19ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ರಕ್ತದಾನ ಮಾಡಿದ್ದೆ. ಇಲ್ಲಿಯವರೆಗೆ 51 ಬಾರಿ ರಕ್ತದಾನ ಮಾಡಿರುವು ದಾಗಿ, ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ವರಿಗೆ ರಕ್ತ ಕೊಟ್ಟು ಬಂದಿರುವುದಾಗಿ ತಿಳಿಸಿದರು. ರಕ್ತದಾನದಿಂದ ದೇಹದ ಸ್ಥಿತಿಯ ಮೇಲೆ ಯಾವ ಅಡ್ಡ ಪರಿಣಾಮವು ಬೀರುವುದಿಲ್ಲ. ಜೀವವನ್ನು ಉಳಿಸಲು ಇದು ಸತ್ಕಾರ್ಯದ ಮಾರ್ಗ ಎಂದರು.

ರೋಟರಿ ಬಿಡದಿ ಸೆಂಟ್ರಲ್ ಅಧ್ಯಕ್ಷ ಬಿ.ಆರ್‌.ಆನಂದ್‌ ಮಾತನಾಡಿ, ರಕ್ತದಾನದ ಬಗ್ಗೆ ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಸಾಕಷ್ಟು ಜಾಗೃತಿ ಮೂಡಿಸುತ್ತಿವೆ.ಜನರಲ್ಲಿ ಇನ್ನು ಅರಿವು ಮೂಡಿಸುವ ಅವಶ್ಯಕವಿದೆ ಎಂದು ಅಭಿಪ್ರಾಯಪಟ್ಟರು.

115ಕ್ಕೂ ಹೆಚ್ಚು ಮಂದಿ ರಕ್ತದಾನ: ಶಿಬಿರದಲ್ಲಿ ಸುಮಾರು 115ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. 97 ಮಂದಿ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ಬೆಂಗಳೂರಿನ ಸಿಡಿ ಐ ಕೇರ್‌ ಸೆಂಟರ್‌ ಹಾಗೂ ನಾರಾಯಣ ಹೃದಯಾಲಯದ ವೈದ್ಯರು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಿದರು.

ಜ್ಞಾನವಿಕಾಸ ವಿದ್ಯಾಸಂಘದ ಖಜಾಂಚಿ ಹೊನ್ನಶೆಟ್ಟಿ(ರಾಜಣ್ಣ), ರೋಟರಿ ಬಿಡದಿ ಸೆಂಟ್ರಲ್ ಸಂಸ್ಥೆಯ ಕಾರ್ಯದರ್ಶಿ ಶಿವರಾಜು, ಸಮುದಾ ಯ ಸೇವೆ ನಿರ್ದೇಶಕ ಬಿ.ಎಂ.ವಸಂತ ಕುಮಾರ್‌, ರಘು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ