4.53 ಲಕ್ಷ ಮೌಲ್ಯದ ಗಾಂಜಾ ವಶ

Team Udayavani, Nov 9, 2019, 2:50 PM IST

ಶಹಾಪುರ: ಎರಡು ಗ್ರಾಮಗಳಲ್ಲಿ ಹತ್ತಿ ಬೆಳೆ ಮಧ್ಯೆ ಅಕ್ರಮವಾಗಿ ಬೆಳೆಯಲಾಗಿದ್ದ 4.53 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬೆನಕನಹಳ್ಳಿ ಮತ್ತು ಬೀರನೂರ ಗ್ರಾಮದ ಹೊಲಗಳಿಗೆ ದಾಳಿ ಮಾಡಿದ ಪೊಲೀಸರು ಗಾಂಜಾ ವಶ ಪಡಿಕೊಂಡಿದ್ದಾರೆ.

ಬೆನಕನಹಳ್ಳಿ ರೈಲ್ವೆ ಕಾಮಗಾರಿ ಪಕ್ಕದಲ್ಲಿ ಹರಿದು ಹೋದ ಹಳ್ಳಕ್ಕೆ ಕೊಂಡಿರುವ ಸರ್ವೇ ನಂಬರ್‌119ರ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಪರಿಶೀಲಿಸಿದರು. ಹತ್ತಿ ಹೊಲದ ಮಧ್ಯೆ ಹಾಕಲಾಗಿದ್ದ ಗಾಂಜಾ ಬೆಳೆ ವಶಕ್ಕೆ ಪಡೆದುಕೊಂಡಿದ್ದು, ಹಸಿ ಗಾಂಜಾ 2. 10 ಲಕ್ಷ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.

ಜಮೀನಿನ ಮಾಲೀಕ ಆರೋಪಿ ಮಲ್ಲಪ್ಪ ಬಸಪ್ಪ ದೊಡ್ಡಮನಿ ಹಾಗೂ ಜಮೀನನ್ನು ಪಾಲಿಗೆ ಮಾಡಿದ್ದ ಎನ್ನಲಾದ ಆರೋಪಿ ಹುಲಗಪ್ಪ ಭೀಮರಾಯ ದೊಡ್ಡಮನಿ ಬಂಧನಕ್ಕೆ ಹಡುಕಾಟ ನಡೆಸಿದ್ದು, ಸುಳಿವು ಅರಿತ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಅದರಂತೆ ತಾಲೂಕಿನ ಬೀರನೂರ ಸೀಮಾಂತರದ ಪರಸಾಪುರದ ಹನುಮಯ್ಯ ಮಲ್ಲಯ್ಯ ಮರಡಿ ಹೊಲದಲ್ಲಿ 2.43 ಲಕ್ಷ ರೂ. ಮೌಲ್ಯದ 54 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ ಆರೋಪಿ ಹನುಮಯ್ಯ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರಿಸಿದ್ದಾರೆ. ಅಕ್ರಮ ಗಾಂಜಾ ಬೆಳೆದ ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದು, ಈ ಕುರಿತು ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ಹೆಚ್ಚಿನ ಲಾಭಕ್ಕಾಗಿ ತಮ್ಮ ಸ್ವಂತ ಹೊಲಗಳಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಹೊಲದ ಮಾಲೀಕರು ಮತ್ತು ಜಮೀನು ಪಾಲಿಗೆ ಮಾಡಿದ ಇಬ್ಬರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಾಗವಾನ್‌ ಮತ್ತು ಡಿವೈಎಸ್‌ಪಿ ಶಿವನಗೌಡ ಮಾರ್ಗದರ್ಶನದಲ್ಲಿ ಸಿಪಿಐ ಹನುಮರಡ್ಡೆಪ್ಪ ನೇತೃತ್ವದಲ್ಲಿ ತಾಲೂಕು ದಂಡಾ ಧಿಕಾರಿ ಜಗನಾಥರಡ್ಡಿ, ಪಿಎಸ್‌ಐ ಎಂ.ಎ. ಚಂದ್ರಕಾಂತ ಹಾಗೂ ಪರಿಕ್ಷಾರ್ಥದ ಪಿಎಸ್‌ಐಗಳಾದ ಹನುಮಂತಪ್ಪ, ಚಂದ್ರಶೇಖರ, ಎಚ್‌ಸಿಗಳಾದ ಮಲ್ಲಣ್ಣ, ಹೊನ್ನಪ್ಪ, ಶರಣಪ್ಪ ಮತ್ತು ಪಿಸಿಗಳಾದ ವೆಂಕಟೇಶ, ಗೋಕುಲ ಹುಸೇನಿ, ಭಾಗಣ್ಣ, ಭೀಮನಗೌಡ, ವೀರೇಶ, ನಾಗರಡ್ಡಿ ದಾಳಿಯಲ್ಲಿ ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ