ದಶಕ ಕಳೆದರೂ ಗಾಂಧಿ ಪ್ರತಿಮೆ ಅನಾಥ!

Team Udayavani, Oct 1, 2019, 5:02 PM IST

ಸಾಗರ: ಗಾಂಧಿ ಪ್ರತಿಮೆ ಈಗಲೂ ಅನಾಥವಾಗಿ ಬಿದ್ದಿದ್ದರೂ ಯಾರೊಬ್ಬರೂ ಗಮನಿಸದ ಸ್ಥಿತಿ ಸಾಗರದಲ್ಲಿ ನಿರ್ಮಾಣವಾಗಿದೆ. ಒಂದು ವರ್ಷದ ಕೆಳಗೆ ಈ ಬಗ್ಗೆ “ಉದಯವಾಣಿ’ ಗಮನ ಸೆಳೆದಿದ್ದರೂ ಪರಿಸ್ಥಿತಿ ಎಳ್ಳಷ್ಟು ಬದಲಾಗಿಲ್ಲ!

ಈಗ ನಗರಸಭೆಯಾಗಿ ಬದಲಾಗಿದ್ದರೂ, 2006ರಲ್ಲಿದ್ದ ಪುರಸಭೆ ಆಡಳಿತ ನಗರದ ಗಾಂಧಿನಗರ ವೃತ್ತದಲ್ಲಿ ಗಾಂಧಿ  ಪ್ರತಿಮೆ ಸ್ಥಾಪಿಸಲು ಅಂದಿನ ಅಧ್ಯಕ್ಷೆ ಸಾಬಿರಾ ಯೂಸೂಫ್‌ ಅವಧಿಯಲ್ಲಿ ಕೌನ್ಸಿಲ್‌ನ ಸಾಮಾನ್ಯ ಸಭೆಯಲ್ಲಿ ನಡವಳಿಕೆ ಮೂಲಕವೇ ನಿರ್ಣಯ ಕೈಗೊಂಡಿತ್ತು. 27 ಜನ ವಾರ್ಡ್‌ ಸದಸ್ಯರಿದ್ದ ಪುರಸಭೆಯ 2006ರ ನವೆಂಬರ್‌ 30ರ ಕೌನ್ಸಿಲ್‌ ಸಾಮಾನ್ಯ ಸಭೆಯಲ್ಲಿ ವಿಷಯ ಸಂಖ್ಯೆ 129(4)ರಲ್ಲಿ ನಾಲ್ಕು ಪ್ರತಿಮೆಗಳ ಸ್ಥಾಪನೆಗೆ ನಡವಳಿಕೆ ದಾಖಲಾಗಿದೆ. ಡಾ. ಬಿ.ಆರ್‌.ಅಂಬೇಡ್ಕರ್‌, ಸುಭಾಷ್‌ ಚಂದ್ರಬೋಸ್, ಮಹಾತ್ಮಾ ಗಾಂಧಿ  ಮತ್ತು ಮೌಲಾನಾ ಅಬ್ದುಲ್‌ ಕಲಾಮ್‌ ಆಜಾದ್‌ ಅವರ ಪ್ರತಿಮೆಗಳ ಸ್ಥಾಪನೆಗೆ ಅಂದಿನ ಪುರಸಭೆ ತೀರ್ಮಾನಿಸಿತ್ತು. ಈ ಹಿನ್ನೆಲೆಯಲ್ಲಿ ಜೋಗ ರಸ್ತೆಯ ಕಲಾವಿದ ಹರೀಶ್‌ ಆಚಾರ್‌ ಅವರಿಗೆ ಶಿಲ್ಪ ತಯಾರಿಸಲು ಬಾಯಿ ಮಾತಿನಲ್ಲಿ ಸೂಚನೆ ನೀಡಲಾಗಿತ್ತು. ಆ ಕಾಲದಲ್ಲಿ ಟೆಂಡರ್‌, ಆದೇಶ ಪತ್ರದ ಗೋಜಿಗೆ ಹೋಗದ, ಪರಿಚಯದ ಆಧಾರದಲ್ಲಿ ಹರೀಶ್‌ ಕೃಷ್ಣಶಿಲೆ ಬಳಸಿ ಗಾಂಧಿ  ಪ್ರತಿಮೆ ರೂಪಿಸಿದರು. ಸಿದ್ಧವಾದ ಪ್ರತಿಮೆಗೆ ಸುಮಾರು 60 ಸಾವಿರ ರೂ. ಈಗಾಗಲೇ ಖರ್ಚಾಗಿದೆ.

ಆದರೆ ಅದಾಗಿ ಎರಡೇ ತಿಂಗಳಲ್ಲಿ ಕಾಂಗ್ರೆಸ್‌ ಅವಧಿ  ಮುಗಿದಿತ್ತು. ಪುರಸಭೆ ಹೋಗಿ ನಗರಸಭೆಯಾದ ಹಂತದಲ್ಲಿನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಇಂತಹದ್ದೊಂದು ತೀರ್ಮಾನದ ಕುರಿತು ಜನಪ್ರತಿನಿ ಧಿಗಳಾಗಲಿ, ಅಧಿಕಾರಿಗಳಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. ಇತ್ತ ಒಂದೆರಡು ಬಾರಿ ಕಚೇರಿಗೆ ಹೋಗಿ ತಾವು ಕೆತ್ತಿದ ಶಿಲ್ಪದ ಕುರಿತು ಹರೀಶ್‌ ಮಾಹಿತಿ ನೀಡಿದರೂ ಆಡಳಿತ ಅಲುಗಾಡಲಿಲ್ಲ. ಕಾಲಚಕ್ರ ತಿರುಗಿ ಬಿಜೆಪಿ ಆಡಳಿತ ಹೋಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ಪರಿಸ್ಥಿತಿ ಬದಲಾಗಲಿಲ್ಲ. ಖುದ್ದು ಕಾಂಗ್ರೆಸ್‌ರಿಗೆ, ಅವತ್ತು ಕೂಡ ಪುರಸಭೆಯ ಸದಸ್ಯರಾಗಿದ್ದ ತೀ.ನ. ಶ್ರೀನಿವಾಸ್‌ ಅಂತಹವರಿಗೆ ವಿಷಯ ಮರೆತು ಹೋಗಿದೆ. ಗಾಂಧಿ ಪ್ರತಿಮೆ ವಿಷಯದಲ್ಲಿನ ನಿರ್ಲಕ್ಷ ಸಲ್ಲದು. ಆ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಸೂಚನೆ ನೀಡುತ್ತೇನೆ.

ಆದಷ್ಟು ಶೀಘ್ರ ಕಲಾವಿದರಿಂದ ಗಾಂಧಿ ಮೂರ್ತಿ ಪಡೆದುಕೊಂಡು ನಿಗದಿಯಾದ ಸ್ಥಳದಲ್ಲಿ ಸ್ಥಾಪನೆ ಮಾಡಲು ಸೂಚನೆ ನೀಡುತ್ತೇನೆ ಎಂದು ತೀ.ನ. ಪ್ರತಿಕ್ರಿಯಿಸಿದರೂ ನೆಲಕ್ಕೆ ಒರಗಿದ್ದ ಗಾಂಧಿ  ಪ್ರತಿಮೆಗೆ ಒಂದು ಅಡಿ ಆಚೀಚೆ ಚಲಿಸುವ ಭಾಗ್ಯವೂ ಸಿಗಲಿಲ್ಲ. ಆದರೆ ಆಡಳಿತ ಮಾತ್ರ ಬದಲಾಗಿ ಬಿಜೆಪಿಗೆ ಬಹುಮತ ಲಭಿಸಿದೆ. ವಾಸ್ತವವಾಗಿ ಬೇಸ್‌ಮೆಂಟ್‌ ಮತ್ತು ಸಣ್ಣಪುಟ್ಟ ಕೆಲಸ ಎಲ್ಲ ಮುಗಿಸಿದರೆ ಇನ್ನೂ 20-30 ಸಾವಿರ ರೂ.ಗಳಲ್ಲಿ ಪ್ರತಿಮೆ ಸ್ಥಾಪನೆಯ ಕೆಲಸ ಮುಗಿದು ಹೋಗುತ್ತದೆ. ಆದರೆ ಕಲಾವಿದರು ಕೆಲಸ ಮಾಡುವ ಶೆಡ್‌ ಬಳಿ ಆಕಾಶ ನೋಡುತ್ತ ಒರಗಿರುವ ಗಾಂಧಿ  ಶಿಲ್ಪದ ಮುಖದಲ್ಲಿ ಮಾತ್ರ ಮಾಸದ ನಗುವಿರುವುದು ಗಾಂಧಿ ಜಯಂತಿಯ ಭಾಷಣಗಳ ಸಂದರ್ಭದಲ್ಲಿ ಬೇರೆಯದೇ ಅರ್ಥ ಕೊಡುವಂತಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ