ಇವರ ಮನೆಯಲ್ಲಿದೆ ಸಾವಿರಾರು ಗಣಪ!

Team Udayavani, Sep 1, 2017, 2:21 PM IST

ಹೊಸನಗರ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಲಗಂಗಾಧರ ತಿಲಕರು ಭಾರತ ದೇಶದ ನಾಗರಿಕರನ್ನು ಒಟ್ಟಾಗಿ ಸೇರಿಸಲು ಮುಂದಾಗಿದ್ದರಿಂದ ನಮ್ಮ ದೇಶದಲ್ಲಿ ಈ ಹಬ್ಬಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ಭಾದ್ರಪದ ಶುಕ್ಲ ಚೌತಿಯಂದು ವಿಶ್ವದೆಲ್ಲೆಡೆ ಸಂಭ್ರಮ ಸಡಗರದಿಂದ ಪೂಜಿಸುವ “ಗಣಪತಿ ಹಬ್ಬ’
ಒಂದಾಗಿದೆ.

ಎಲ್ಲೆಲ್ಲೂ ಗಣೇಶೋತ್ಸವವು ದೇವಸ್ಥಾನ, ಮನೆ, ಗಣಪತಿ ಯುವಕ ಸಂಘಗಳು ವಿಘ್ನೇಶ್ವರನನ್ನು ಇಟ್ಟು ಪೂಜಿಸುವುದು ಸರ್ವೇ ಸಾಮಾನ್ಯ. ಆದರೆ ಹೊಸನಗರದ ಕೆ.ಎಸ್‌. ವಿನಾಯಕರ ಮನೆಯ ಗಣಪತಿ ಹಬ್ಬ ಅಂದರೆ ಅದು ನಿತ್ಯಾರಾಧನೆ. ಏಕೆಂದರೆ 1300ಕ್ಕೂ ಹೆಚ್ಚು ವಿಭಿನ್ನ ವಿನಾಯಕನ ಮೂರ್ತಿಯನ್ನು ಸಂಗ್ರಹಿಸಿ 15 ದಿನಗಳ ಕಾಲ ಪ್ರದರ್ಶನಕ್ಕೆ ಇಡುತ್ತಾರೆ. 

30 ವರ್ಷದ ಪ್ರಯತ್ನ: ಕೆ.ಎಸ್‌. ವಿನಾಯಕ ಶ್ರೇಷ್ಠಿ, ವೃತ್ತಿಯಲ್ಲಿ ವ್ಯಾಪಾರಿಗಳು, ಪ್ರವೃತ್ತಿಯಲ್ಲಿ ಸ್ವಯಂ ಸೇವಕರು, ಕಲಾ ಪೋಷಕರು, 30 ವರ್ಷದಿಂದ ಗಣಪನ ಮೇಲೆ ಭಕ್ತಿ ಹೆಚ್ಚಿದ್ದರಿಂದ ವಿನಾಯಕ ಲೋಕವನ್ನೇ ತಮ್ಮ ಮನೆಯಲ್ಲಿ ಸೃಷ್ಟಿಸಿದ್ದಾರೆ. ಇವರ ಮನೆಗೆ ಒಮ್ಮೆ ನೀವು ಹೋದರೆ
ಪ್ರೀತಿಯಿಂದ ನಿಮ್ಮನ್ನು ಸತ್ಕರಿಸಿ 1300ಕ್ಕೂ ಹೆಚ್ಚು ಗಣಪತಿಯನ್ನು ಬಗ್ಗೆ ಸವಿವರವಾಗಿ ವಿನಾಯಕ ಹಾಗೂ ಅವರ ಪತ್ನಿ ಗೀತಾ ತಿಳಿಸುತ್ತಾರೆ.

ತರಾವರಿ ಗಣಪ: ಹೇಗೆ ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಕಾಣಬಹುದೋ ಅದೇ ರೀತಿ ನಾಮ ಒಂದೇ ಆದರೆ ಅನೇಕ ವೈವಿಧ್ಯಮಯ ವಿನಾಯಕ ಮೂರ್ತಿಯನ್ನು  ನೋಡಬಹುದಾಗಿದೆ. ತರಕಾರಿಯಲ್ಲಿ ಅರಳಿದ ಗಣಪ, ನಾಟ್ಯ- ನೃತ್ಯ ಗಣಪ, ಮರದ ಗಣಪ, ಅಧಿಕಾರಿ ಗಣಪ, ಕಲ್ಲಿನ ಗಣಪ, ಗಾಜಿನ ಗಣಪ, ಬಾಲ್ಯ ಗಣಪ ಕಾಣಬಹುದಾಗಿದೆ. ಇದಲ್ಲದೇ ಪೋಸ್ಟ್‌ ಕಾರ್ಡ್‌ನಲ್ಲಿ ಗಣಪ, ನಾಟ್ಯದ ಗಣಪ, ಕ್ಯಾಲೆಂಡರ್‌ ಹತ್ತಿಯ ಗಣಪ, ತೋರಣ ಗಣಪ, ತೊಗಲು ಗೊಂಬೆಯ ಗಣಪ, ಇಂತಹ ವಿಭಿನ್ನ ಪ್ರಕಾರದ ಗೌರಿಪುತ್ರನನ್ನು ಒಂದೇ ವೇದಿಕೆಯಲ್ಲಿ ನೋಡಬಹುದು.

ಹವ್ಯಾಸ: ಯಾವುದೇ ಊರಿಗೆ ಇವರು ಹೋದರೂ ಬರುವಾಗ ವಿಘ್ನರಾಜನನ್ನು ಮನೆಗೆ ತರುತ್ತಾರೆ. ಕಾಶಿಯಿಂದ- ಕನ್ಯಾಕುಮಾರಿಯ ವರೆಗೆ ಅನೇಕ ಸ್ಥಳಗಳಿಗೆ ತೆರಳಿದ್ದ ಇವರು, ಅಲ್ಲಿನ ಶೈಲಿಯ ವಿನಾಯಕನನ್ನು ಸಂಗ್ರಹಿಸಿದ್ದಾರೆ. ಜೊತೆಗೆ ವಿದ್ಯಾರ್ಥಿ ಜೀವನದಲ್ಲಿ ಧಾರಾವಾಹಿ, ಕಾಮಿಕ್ಸ್‌ ಸಂಗ್ರಹಿಸುತ್ತಿದ್ದ ಹವ್ಯಾಸ ಇಂದು ವಿನಾಯಕರ ಮನೆಯಲ್ಲಿ ವಿನಾಯಕ ಲೋಕ ಸೃಷ್ಟಿ ಮಾಡಲು ಸಹಕಾರಿಯಾಗಿದೆ. ಸಹಸ್ರಾರು ಗಣಪನ ಮೂರ್ತಿ ಸಂಗ್ರಹದ ಇವರ ಹವ್ಯಾಸಕ್ಕೆ ಪತ್ನಿ ಗೀತಾ ವಿನಾಯಕ, ಮಗ ದೀಪಕ್‌, ಮಗಳು ದೀಪ್ತಿ ಮತ್ತು ಇವರ ಕುಟುಂಬ ಸದಾ ವಿನಾಯಕನ ಕಾಯಕದಲ್ಲಿ
ನೆರವಾಗಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ