ವಾರಕ್ಕೊಮ್ಮೆ ಶಾಲೆಯಿಂದ ಹೊರಗುಳಿದವರ ಸಮೀಕ್ಷೆ!

ಶಿಕ್ಷಣ ಇಲಾಖೆಯಿಂದ ಹೊಸ ಪ್ರಯೋಗ

Team Udayavani, Sep 24, 2019, 2:42 PM IST

ಶಿವಮೊಗ್ಗ: ವರ್ಷಕ್ಕೊಮ್ಮೆ ನಡೆಯುತ್ತಿದ್ದ ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೇ ಕಾರ್ಯದಲ್ಲಿ ಬದಲಾವಣೆ ತರಲು ಶಿಕ್ಷಣ ಇಲಾಖೆ ಸಜ್ಜಾಗಿದೆ.

ಮೊದಲು ವರ್ಷಕ್ಕೊಮ್ಮೆ ಸರ್ವೆ ನಡೆಸಿ ನಂತರ ಶಾಲಾ ವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಲಾಗುತಿತ್ತು. ಈ ವಿಷಯವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಈಗ ವಾರಕ್ಕೊಮ್ಮೆ ವರದಿ ನೀಡಲು ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಿದೆ. ಬಯಲು ಸೀಮೆ, ಬರ ಪೀಡಿತ ಜಿಲ್ಲೆಗಳಲ್ಲಿ ಗುಳೆ ಹೋಗುವ, ಮಕ್ಕಳನ್ನು ಕೂಲಿಗೆ ಕಳುಹಿಸುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದವು.

ಅಲ್ಲದೆ ವಲಸೆ, ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಆಸಕ್ತಿ ಕೊರತೆ, ರೋಗ-ರುಜಿನ, ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದರು. ಇಂತಹ ಮಕ್ಕಳನ್ನು ವರ್ಷಕ್ಕೊಮ್ಮೆ ಪತ್ತೆ ಹಚ್ಚುವುದರಿಂದ ಅವರಿಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ. 2017-18ರಲ್ಲಿ 82 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಇದನ್ನು ತಡೆಗಟ್ಟಲೆಂದು ಈಗ ವಾರಕ್ಕೊಮ್ಮೆ ವರದಿ ನೀಡಲು ಮುಂದಾಗಲಾಗಿದೆ. ಆಗಸ್ಟ್‌ 15ರಿಂದ ಈ ಕಾರ್ಯ ಪ್ರಗತಿಯಲ್ಲಿದ್ದು ರಾಜ್ಯಾದ್ಯಂತ ಸಾವಿರಾರು ಮಕ್ಕಳನ್ನು ಈಗಾಗಲೇ ಗುರುತಿಸಲಾಗಿದೆ.

ಪತ್ತೆ ಹೇಗೆ? :  ಒಂದು ವಾರ ಅಥವಾ ಅದಕ್ಕಿಂತ ಅಧಿ ಕ ಅವಧಿ  ಯವರೆಗೆ ವಿದ್ಯಾರ್ಥಿಗಳು ಶಾಲೆಯ ಗಮನಕ್ಕೆ ತಾರದೆ ದೂರ ಉಳಿದ್ದಲ್ಲಿ ಅಂತಹವರನ್ನು ಡ್ರಾಪೌಟ್‌ ಎಂದು ಪರಿಗಣಿಸಲಾಗುತ್ತದೆ. ಅಂತಹ ಮಕ್ಕಳ ಪಾಲಕರು, ಪೋಷಕರಿಗೆ ಹಾಜರಾತಿ ನೋಟಿಸ್‌ ನೀಡಲಾಗುತ್ತದೆ. ನಂತರ ಆಯಾ ಗ್ರಾಪಂ ಮಟ್ಟದ ಜನಪ್ರತಿನಿಧಿ ಗಳನ್ನು ವಿದ್ಯಾರ್ಥಿಗಳಿರುವ ಕಡೆ ಕರೆದೊಯ್ದು ಮನವೊಲಿಸಲಾಗುತ್ತದೆ. ಅಷ್ಟಕ್ಕೂ ಶಾಲೆಗೆ ಬಾರದಿದ್ದರೆ, ಹಾಜರಾತಿ ಆದೇಶ ಹೊರಡಿಸುವ ಅಧಿಕಾರ ಆಯಾ ಶಾಲೆಯವರಿಗಿದೆ.

ನಂತರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿ ಗೈರಾದ ವಿದ್ಯಾರ್ಥಿ ಸಮಿತಿ ಮುಂದೆ ಹಾಜರಾಗುವಂತೆ ನಿರ್ದೇಶನ ನೀಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಬಳಿಕವೂ ಮುಖ್ಯವಾಹಿನಿಗೆ ಬಾರದಿದ್ದರೆ ಜುವೆನೈಲ್‌ ಜಸ್ಟಿಸ್‌ ಬೋರ್ಡ್ (ಜೆಜೆಬಿ)ಯಲ್ಲಿರುವ ಪೊಲೀಸರ ಸಹಾಯ ಪಡೆಯಲಾಗುತ್ತದೆ. ಹೀಗೆ, ಡ್ರಾಪೌಟ್‌ ಆದವರನ್ನುಶಾಲೆಗೆ ಸೇರಿಸುವ ನಿಟ್ಟಿನಲ್ಲಿ ನಾನಾ ಹಂತಗಳಲ್ಲಿ

ನಿರಂತರ ಪ್ರಯತ್ನ ಮಾಡಲಾಗುತ್ತದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ವಾರದ ವರದಿ: ಇತ್ತೀಚೆಗೆ ಶಾಲೆಯಿಂದ ಮಕ್ಕಳು ಹೊರಗುಳಿಯುತ್ತಿರುವ ವಿಷಯವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ ಬಳಿಕ “ವಾರದ ವರದಿ’ ಸಂಗ್ರಹಿಸುವ ಕಾರ್ಯಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಶಿವಮೊಗ್ಗದಲ್ಲಿ 2019-20ನೇ ಸಾಲಿನಲ್ಲಿ ಸ್ಟೂಡೆಂಟ್ಸ್‌ ಅಚೀವ್‌ ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟ್‌ಂ (ಸ್ಯಾಟ್ಸ್‌) ಅಂಕಿ ಅಂಶದನ್ವಯ, ಒಟ್ಟು 1,172 ಮಕ್ಕಳು ಶಾಲೆಯಿಂದ

ಹೊರಗೆ ಉಳಿದಿದ್ದಾರೆ. ಅದರಲ್ಲಿ 6 ರಿಂದ 14 ವಯೋಮಾನದ 118 ಮಕ್ಕಳಿದ್ದರೆ, 14 ಮತ್ತು 15 ವಯಸ್ಸಿನ 516 ಹಾಗೂ 16ರ ಮೇಲ್ಪಟ್ಟವರು 538 ಮಕ್ಕಳಿದ್ದಾರೆ.

6 ರಿಂದ 14 ವಯೋಮಾನದ ಮಕ್ಕಳನ್ನು ಸುಲಭವಾಗಿ ಮರಳಿ ಶಾಲೆಗೆ ತರುವ ಕೆಲಸ ಮಾಡಬಹುದು. ಈಗಾಗಲೇ 118ರಲ್ಲಿ 50 ವಿದ್ಯಾರ್ಥಿಗಳಿಗೆ ಮುಖ್ಯವಾಹಿನಿಗೆ ತರಲಾಗಿದೆ. ಇನ್ನುಳಿದ ವಯೋಮಾನದಲ್ಲಿ 9ನೇ ತರಗತಿ ಅನುತ್ತೀರ್ಣರಾದ ನಂತರ ಶಾಲೆಗೆ ಬರಲು ಒಲವು ತೋರುವುದಿಲ್ಲ. ಹೀಗಾಗಿ, ನಿರೀಕ್ಷಿತ ಪ್ರಮಾಣದಲ್ಲಿ ಮಕ್ಕಳು ಶಾಲೆಗೆ ಮರು ಸೇರ್ಪಡೆ ಆಗುತ್ತಿಲ್ಲ ಎನ್ನುವುದು ಶಿಕ್ಷಣ ಇಲಾಖೆ ವಾದವಾಗಿದೆ.

2018-19ನೇ ಸಾಲಿನಲ್ಲಿ 6-14 ವರ್ಷದ 272 ಮಕ್ಕಳು ಡ್ರಾಪೌಟ್‌ ಆಗಿದ್ದು, ಅದರಲ್ಲಿ ಇನ್ನೂರು ಮಕ್ಕಳು ಶಾಲೆಗೆ ಮರಳಿದ್ದರು. ಈ ಮುಂಚೆ ಸಮೀಕ್ಷೆ ಮಾಡುವ ಮೂಲಕ ಡ್ರಾಪೌಟ್‌ ಆದ ವಿದ್ಯಾರ್ಥಿಗಳ ಸಂಖ್ಯೆಯನ್ನು ಪತ್ತೆ ಹಚ್ಚಲಾಗುತ್ತಿತ್ತು.

ಆದರೆ, 2019ರ ಆಗಸ್ಟ್‌ 8ರಂದು ವಿಡಿಯೋ ಕಾನ್ಫೆರೆನ್ಸ್‌ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಿಗೆ ನಿರ್ದೇಶನ ನೀಡಲಾಗಿದ್ದು, ಅದರನ್ವಯ ಆ.17ರಿಂದ ಪ್ರತಿ ವಾರ ವರದಿಯನ್ನು ಮುಖ್ಯ ಕಚೇರಿಗೆ ಕಳುಹಿಸಲಾಗುತ್ತಿದೆ. ಆಯಾ ಶಾಲೆಯ ತರಗತಿ ಶಿಕ್ಷಕರು ಗೈರಾದ ವಿದ್ಯಾರ್ಥಿಗಳ ಹಾಜರಾತಿ ವಿವರವನ್ನು ಹೆಡ್‌ ಮಾಸ್ಟರ್‌ಗೆ ನೀಡಬೇಕು. ಅವರು ಸಿಇಒಗಳಿಗೆ ಮಾಹಿತಿ ರವಾನೆ ಮಾಡುತ್ತಾರೆ. ತಾಲೂಕು ಹಂತದಲ್ಲಿ ಮಾಹಿತಿ ಕ್ರೋಢೀಕರಿಸಿ, ಜಿಲ್ಲಾ ಹಂತದ ಅ ಧಿಕಾರಿಗಳಿಗೆ ನೀಡಲಾಗುತ್ತದೆ. ಡಿಡಿಪಿಐಗಳಿಂದ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕರಿಗೆ ಕಳುಹಿಸಲಾಗುತ್ತಿದೆ. ಪ್ರತಿ ಶನಿವಾರ ವಾರವಿಡೀ ತರಗತಿಗೆ ಗೈರಾದ ವಿದ್ಯಾರ್ಥಿಗಳ ಹಾಜರಾತಿ ವಿವರ ನೀಡಲಾಗುತ್ತದೆ.

395 ಮಕ್ಕಳು ಗೈರು:  ಜಿಲ್ಲೆಯಲ್ಲಿ ಸೆ.9ರಿಂದ 14ರವರೆಗೆ ಒಟ್ಟು 395 ಮಕ್ಕಳು ಗೈರು ಹಾಜರಾಗಿದ್ದು ಅದರಲ್ಲಿ 26 ಮಂದಿ ಶಾಲೆಗೆ ಮತ್ತೆ ಹಾಜರಾಗಿದ್ದಾರೆ. ಸೆ.16ರಿಂದ 21ರವರೆಗೆ 377 ಮಕ್ಕಳು ಗೈರು ಹಾಜರಾಗಿದ್ದಾರೆ. ಪ್ರತಿ ಶನಿವಾರ ಹಾಜರಾತಿ ಅಧಿಕಾರಿಗಳು ಶಾಲೆಗಳಿಂದ ಮಾಹಿತಿ ಪಡೆದು ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳಿಗೆ ಸಲ್ಲಿಸುತ್ತಾರೆ. ನಂತರ ಮುಂದಿನಕ್ರಮಕ್ಕೆ ಸೂಚಿಸಲಾಗುತ್ತದೆ. ಗೈರಾದ ಮಕ್ಕಳಲ್ಲಿ ಭದ್ರಾವತಿ ಹಾಗೂ ಶಿವಮೊಗ್ಗದಲ್ಲಿ ಹೆಚ್ಚಿರುವುದು ವಿಶೇಷವಾಗಿದೆ. ಕಳೆದ ವಾರಶಿವಮೊಗ್ಗದಲ್ಲಿ ಭದ್ರಾವತಿ 110, ಹೊಸನಗರ 16, ಸಾಗರ 20, ಶಿಕಾರಿಪುರ 3, ಶಿವಮೊಗ್ಗ 191, ಸೊರಬ 7, ತೀರ್ಥಹಳ್ಳಿ 30 ಮಕ್ಕಳು ಗೈರಾಗಿದ್ದಾರೆ. 2019-20ನೇ ಸಾಲಿನಲ್ಲಿ ಈವರೆಗೆ ಒಟ್ಟು 42 ಗಂಡು, 26 ಹೆಣ್ಣು ಸೇರಿ 68 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ.

 

-ಶರತ್‌ ಭದ್ರಾವತಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ