ಕಾನೂನುಬಾಹಿರ ಚಟುವಟಿಕೆ ತಡೆಗಟ್ಟಿ
ಗೌರವಯುತ ದುಡಿಮೆಯಿಂದ ಅಜರಾಮರ ಸ್ಥಾನ: ಡಿಸಿ ದಯಾನಂದ್
Team Udayavani, Aug 5, 2019, 5:37 PM IST
ಶಿವಮೊಗ್ಗ: ಸ್ಟೂಡೆಂಡ್ ಪೊಲೀಸ್ ಕೆಡೆಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಮಾತನಾಡಿದರು.
ಶಿವಮೊಗ್ಗ: ಗೌರವಯುತವಾದ ನಡತೆಯನ್ನು ಹೊಂದಿ ಸಮಾಜಕ್ಕಾಗಿ ದುಡಿದರೆ ಸಮಾಜದಲ್ಲಿ ನಾವು ಅಜರಾಮರವಾಗಿ ಉಳಿಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೆ. ಎ. ದಯಾನಂದ್ ಹೇಳಿದರು.
ನಗರದ ಡಾ| ಬಿ. ಆರ್. ಅಂಬೇಡ್ಕರ್ ಭವನದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆ ವತಿಯಿಂದ ಆಯೋಜಿಸಿದ್ದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕಾಣುವ ಸರಿ ತಪ್ಪುಗಳಿಗೆ ಕನ್ನಡಿಯಾಗಿರಬೇಕು. ಯಾವುದೇ ಕಾನೂನುಬಾಹಿರ ಘಟನೆಗಳು ಕಂಡರು ಸಹ ಅದನ್ನು ವಿರೋಧಿಸಿ ಸರಿ ದಾರಿಗೆ ತರುವ ಪ್ರಯತ್ನ ಮಾಡಬೇಕು. ಈ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಈ ನಿಟ್ಟಿನಲ್ಲಿ ವಿದ್ಯಾಭ್ಯಾಸದ ಜೊತೆಗೆ ಕಾನೂನು, ಸಮಯ ಪ್ರಜ್ಞೆ, ಮಾದಕ ವ್ಯಸನ ಮುಕ್ತವಾಗಿಸುವ ಕುರಿತು ಅರಿವು ಮೂಡಿಸಿ, ನಾಗರಿಕ ಸಮಾಜವನ್ನು ಸೃಷ್ಟಿಸಿ ಸ್ವಸ್ಥ ದೇಶವನ್ನು ನಿರ್ಮಿಸುವ ಉದ್ದೇಶದಿಂದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಘಟಕ ರಚಿಸುವ ಕಾರ್ಯವನ್ನು ಪೊಲೀಸ್ ಪಡೆ ಕೈಗೊಂಡಿದೆ ಎಂದರು. ಮನೋವೈದ್ಯ ಡಾ| ಅರವಿಂದ್ ಮಾತನಾಡಿ, ದೇಶದೆಲ್ಲೆಡೆ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದ್ದು ವ್ಯವಸ್ಥೆಯನ್ನು ಸರಿ ದಾರಿಗೆ ತರಲು ಯುವ ಜನತೆ ರಾಜಕೀಯ ಹಾಗೂ ಸಮಾಜದ ಮುಂದಾಳತ್ವ ವಹಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದರು. ಹಿರಿಯ ಪೊಲೀಸ್ ಅಧಿಕಾರಿಗಳಾದ ಮಂಜುನಾಥ್ ಅಣಜಿ, ದಾಹೂಲ್ ಸಾಬ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಇದ್ದರು.