ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹ ವಿಚಾರ: ಸಿಎಂ ಜತೆ ಚರ್ಚಿಸಿ ಮುಂದಿನ ನಿರ್ಧಾರ
Team Udayavani, Dec 3, 2022, 11:10 AM IST
ಉಡುಪಿ: ಸುರತ್ಕಲ್ ಟೋಲ್ ರದ್ದುಗೊಳಿಸಿ, ಅಲ್ಲಿನ ಶುಲ್ಕವನ್ನು ಹೆಜಮಾಡಿ ಟೋಲ್‌ನಲ್ಲಿ ವಿಲೀನಗೊಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಹೆಜಮಾಡಿ ಟೋಟ್ ದರ ಪರಿಷ್ಕರಣೆ ಸಂಬಂಧ ಇಂದು ತಾ.ಪಂ. ಕಚೇರಿಯಲ್ಲಿ ಜನ ಪ್ರತಿನಿಧಿಗಳ ಸಭೆ ನಡೆಯಿತು. ಮುಂದಿನ ವಾರದಲ್ಲಿ ಸಿಎಂ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು, ಅಲ್ಲಿಯತನಕ ಯಥಾಸ್ಥಿತಿ ಕಾಪಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸುರತ್ಕಲ್ ಟೋಲ್ ಶುಲ್ಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವುದಕ್ಕೆ ಜಿಲ್ಲೆಯ ಜನ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದರು.
ಸಚಿವ ಸುನಿಲ್ ಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಆನ್ ಲೈನ್ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದರು.
ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿ ಮುಂದಿನ ನಿರ್ಧಾರ ಮಾಡಲಾಗುವುದು. ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಸೂಚನೆ ನೀಡಿದರು.
ಇದನ್ನೂ ಓದಿ:ಚಿರತೆ ದಾಳಿಯಲ್ಲಿ ಮೃತಪಟ್ಟವರ ಕುಟುಂಬದವರಿಗೆ 15 ಲಕ್ಷ ರೂ.ಗಳ ಪರಿಹಾರ: ಸಿಎಂ ಬೊಮ್ಮಾಯಿ
ಸ್ಥಳೀಯ ವಾಹನಗಳಿಗೆ (ಕೆಎ 20) ಟೋಲ್ ಸಂಗ್ರಹ ವಿನಾಯತಿ ನೀಡುವುದನ್ನು ಮುಂದುವರಿಸಬೇಕು ಹಾಗೂ ಟೋಲ್ ವಿಲೀನದ ಸಮಸ್ಯೆಯನ್ನು ಆದಷ್ಟು ಬೇಗ ರಾಷ್ಟ್ರೀಯ ಮಟ್ಟದಲ್ಲಿ ಇತ್ಯರ್ಥ ಮಾಡಬೇಕೆಂದು ಜಿಲ್ಲಾ ಜನಪ್ರತಿನಿಧಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬೇಡಿಕೆ ಸಲ್ಲಿಸಿದರು.
ಶಾಸಕ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾ ರಾವ್, ಎಸ್ ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಸಭೆಯಲ್ಲಿದ್ದರು.
ಜಿಲ್ಲಾಧಿಕಾರಿ ಗರಂ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತುರ್ತು ಸಭೆಗೆ ವಿಳಂಬವಾಗಿ ಬಂದಿರುವುದಕ್ಕೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆ ನಡೆಯಿತು. ಸರಿಯಾದ ಸಮಯಕ್ಕೆ ಸಭೆಗೆ ಬರಲು ಸಾಧ್ಯವೇ ಇಲ್ಲವೇ ಎಂದು ಪ್ರಶ್ನಿಸಿದರು.