ಮಕ್ಕಳ ರಕ್ಷಣೆಗೆ ಸಹಾಯವಾಣಿ ಪೂರಕ: ನ್ಯಾ| ಸಿ.ಎಂ. ಜೋಶಿ

Team Udayavani, Jun 13, 2019, 6:10 AM IST

ಉಡುಪಿ: ವಿವಿಧ ರೀತಿಯಲ್ಲಿ ದೌರ್ಜನ್ಯಕ್ಕೊಳಗಾಗುವ ಮಕ್ಕಳನ್ನು ರಕ್ಷಿಸಲು ಮಕ್ಕಳ ಸಹಾಯವಾಣಿ (1098) ನೆರವಾಗುತ್ತದೆ. ಎಲ್ಲ ನಾಗರಿಕರಿಗೂ ಮಕ್ಕಳ ಸಹಾಯವಾಣಿಯ ಅರಿವು ಇರಬೇಕಾದುದು ಅವಶ್ಯ ಎಂದು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಜೋಶಿ ಹೇಳಿದರು.

ಜೂ.12ರಂದು ಕುಕ್ಕಿಕಟ್ಟೆಯ ಶ್ರೀ ಕೃಷ್ಣಬಾಲನಿಕೇತನದಲ್ಲಿ ಜರಗಿದ ಅಂತಾರಾಷ್ಟ್ರೀಯ ಬಾಲಕಾರ್ಮಿಕರ ದಿನಾಚರಣೆ ಮತ್ತು ಮಕ್ಕಳ ಸಹಾಯವಾಣಿ ಸಿಬಂದಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇತರ ಮಕ್ಕಳಿಗಿಂತಲೂ ವಲಸೆ ಕಾರ್ಮಿಕರ ಮಕ್ಕಳಿಗೆ ಸಹಾಯವಾಣಿಯ ಆವಶ್ಯಕತೆ ಹೆಚ್ಚು. ಬಡತನದ ಕಾರಣದಿಂದಲೂ ಮಕ್ಕಳನ್ನು ಬಸ್‌ ನಿಲ್ದಾಣ, ಪ್ರವಾಸಿ ಕೇಂದ್ರಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗುವುದು ಕಂಡುಬರುತ್ತಿದೆ. ಕೆಲವು ಮಕ್ಕಳನ್ನು ಕೆಲಸಕ್ಕೂ ಸೇರಿಸಲಾಗುತ್ತಿದೆ. ಇಂತಹ ಮಕ್ಕಳನ್ನು ರಕ್ಷಿಸಲು ಸಹಾಯವಾಣಿ ನೆರವಿಗೆ ಬರಲಿದೆ. ಸಹಾಯವಾಣಿ ಕಾರ್ಯಾಚರಣೆಯ ಕುರಿತು ಮಾಹಿತಿ ಇದ್ದಾಗ ಅದರ ಮೂಲಕ ಮಕ್ಕಳ ರಕ್ಷಣಾ ಕಾರ್ಯವನ್ನು ಕ್ಷಿಪ್ರವಾಗಿ ನಡೆಸಲು ಸಾಧ್ಯವಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದರು.

ವರ್ಷಕ್ಕೆ 2,500 ಕರೆಗಳು
ಕೋಲಾರ ಹೊರತುಪಡಿಸಿದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮಕ್ಕಳ ಸಹಾಯವಾಣಿ ಆರಂಭಗೊಂಡಿದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 2,500 ಕರೆಗಳು ಬಂದಿವೆ ಎಂದು ಪ್ರೋಗ್ರಾಂ ಕೋ-ಆರ್ಡಿನೇಟರ್‌ಚಿತ್ರಾ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅಧ್ಯಕ್ಷತೆ ವಹಿಸಿ ಮಕ್ಕಳ ರಕ್ಷಣೆಯ ಕುರಿತು ಪ್ರಮಾಣವಚನ ಬೋಧಿಸಿದರು. ಶ್ರೀ ಕೃಷ್ಣ ಸೇವಾಧಾಮ ಟ್ರಸ್ಟ್‌ನ
ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾವೇರಿ ಲೇಲೆ ಉಪಸ್ಥಿತರಿದ್ದರು. ಚೈಲ್ಡ್‌ ಲೈನ್‌ ಫೌಂಡೇಷನ್‌ನ ಅಯ್ಯಪ್ಪನ್‌ ವಂದಿಸಿದರು. ರಾಮಾಂಜಿ ಅವರನ್ನು ಸಮ್ಮಾನಿಸಲಾಯಿತು. ನಾರಾಯಣ ಬಿ.ಕೆ. ಸಮ್ಮಾನಿತರನ್ನು ಪರಿಚಯಿಸಿದರು.

ರೈಲ್ವೇ ನಿಲ್ದಾಣಗಳಲ್ಲಿಯೂ ಚೈಲ್ಡ್‌ ಹೆಲ್ಪ್ ಡೆಸ್ಕ್
ಬೆಂಗಳೂರು ಸೇರಿದಂತೆ ದೇಶದ 94 ರೈಲ್ವೇ ನಿಲ್ದಾಣಗಳಲ್ಲಿ ಚೈಲ್ಡ್‌ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ. ನಾನಾ ರೀತಿಯ ದೌರ್ಜನ್ಯಗಳಿಗೆ ಒಳಗಾಗಿ ರೈಲ್ವೇ ನಿಲ್ದಾಣಕ್ಕೆ ಬಂದಿರುವ ಮಕ್ಕಳ ರಕ್ಷಣೆಗಾಗಿ ಇದು ಕೆಲಸ ಮಾಡುತ್ತಿದೆ ಎಂದು ಚೈಲ್ಡ್‌ ಲೈನ್‌ ಇಂಡಿಯಾ ಫೌಂಡೇಶನ್‌ನ ದಕ್ಷಿಣ ವಲಯದ ಸೀನಿಯರ್‌ ಪ್ರೋಗ್ರಾಂ ಕೋ-ಆರ್ಡಿನೇಟರ್‌ ಚಿತ್ರಾ ಅಂಚನ್‌ ಹೇಳಿದರು.

ಸಮನ್ವಯತೆ ಅಗತ್ಯ: ಎಸ್‌ಪಿ
ಮಕ್ಕಳ ರಕ್ಷಣೆ ಕಾರ್ಯಯಶಸ್ವಿಯಾಗಬೇಕಾದರೆ ಇದಕ್ಕೆ ಸಂಬಂಧಿಸಿದ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದು ಅವಶ್ಯ. ತುರ್ತು ಸಂದರ್ಭಗಳಲ್ಲಿ ಮಗುವಿನ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಅನಂತರವಷ್ಟೇ ಕಚೇರಿಯ ಇತರ ಕೆಲಸಗಳತ್ತ ಗಮನ ಹರಿಸಬೇಕು ಎಂದು ಎಸ್‌ಪಿ ನಿಶಾ ಜೇಮ್ಸ್‌ ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ