40 ರೂ. ಟೋಲ್ಗೆ 4 ಲ.ರೂ. ಡ್ರಾ
Team Udayavani, Mar 13, 2017, 3:21 PM IST
ಕೋಟ: ವೈದ್ಯರೊಬ್ಬರು ಉಡುಪಿಯಿಂದ ಮುಂಬಯಿಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಸಾಸ್ತಾನ ಗುಂಡ್ಮಿ ಟೋಲ್ಗೇಟ್ನಲ್ಲಿ 40 ರೂ. ಟೋಲ್ ಶುಲ್ಕ ನೀಡುವಾಗ ಸಿಬಂದಿ ಅಚಾತುರ್ಯದಿಂದ 4 ಲಕ್ಷ ರೂ. ಡ್ರಾ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ ಎಂದು ಸ್ಥಳೀಯ ಮೂಲಗಳಿಂದ ತಿಳಿದು ಬಂದಿದೆ.
ಘಟನೆಯಿಂದ ಹಣ ಕಳೆದುಕೊಂಡ ಪ್ರಯಾಣಿಕ ವೈದ್ಯರು ಬೆಚ್ಚಿಬಿದ್ದು ಬೆಳಗ್ಗೆ ತನಕ ಟೋಲ್ನಲ್ಲಿ ಕುಳಿತು ಹಣ ವಾಪಸು ಪಡೆದಿದ್ದಾರೆ.
ವೈದ್ಯರು ರಾತ್ರಿ 9.30ರ ಸುಮಾರಿಗೆ ಉಡುಪಿಯಿಂದ ಮುಂಬಯಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಗುಂಡ್ಮಿ ಟೋಲ್ಗೇಟ್ನಲ್ಲಿ 40 ರೂ. ಶುಲ್ಕ ಪಾವತಿಸಲು ತನ್ನ ಎ.ಟಿ.ಎಂ. ಕಾರ್ಡ್ ನೀಡಿದ್ದಾರೆ. ಈ ಸಂದರ್ಭ ಸಿಬಂದಿ ಸ್ಪೈಪ್ ಮಾಡಿ ರಶೀದಿ ನೀಡಿದ್ದಾರೆ. ರಶೀದಿ ಸರಿಯಾಗಿ ಗಮನಿಸದ ವೈದ್ಯರು ಪ್ರಯಾಣ ಮುಂದುವರಿಸಿದ್ದು, ಕೋಟ ಸಮೀಪ ತೆರಳುವಾಗ ಮೊಬೈಲ್ಗೆ ಹಣ ಕಡಿತದ ಕುರಿತು ಸಂದೇಶ ಬಂತು. ಸಂದೇಶದಿಂದ 4 ಲಕ್ಷ ರೂ. ಡ್ರಾ ಆಗಿರುವುದು ತಿಳಿದು ಬಂತು. ಇದರಿಂದ ಬೆಚ್ಚಿಬಿದ್ದ ವೈದ್ಯರು ಟೋಲ್ ಪಾವತಿಸಿದ ರಶೀದಿ ಪರಿಶೀಲಿಸಿದ್ದು, ಅದರಲ್ಲಿಯೂ ನಾಲ್ಕು ಲಕ್ಷ ರೂ. ಪಾವತಿಯಾದ ಕುರಿತು ನಮೂದಾಗಿತ್ತು. ವಿಚಲಿತರಾದ ವೈದ್ಯರು ಟೋಲ್ಗೆ ಹಿಂದಿರುಗಿ ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡರು ಹಾಗೂ ಟೋಲ್ನಲ್ಲಿದ್ದ ಪೊಲೀಸರಿಗೂ ವಿಷಯ ತಿಳಿಸಿ ನ್ಯಾಯ ನೀಡುವಂತೆ ವಿನಂತಿಸಿದರು.
ಸಿಬಂದಿ ಅಚಾತುರ್ಯದಿಂದ ಈ ರೀತಿಯಾಗಿದ್ದು, ನಿಮ್ಮ ಹಣ ವಾಪಸು ನೀಡುತ್ತೇವೆ. ಆದರೆ ಈಗ ಟೋಲ್ನಲ್ಲಿ ನಾಲ್ಕು ಲಕ್ಷ ರೂ. ನಗದಿಲ್ಲ. ಆದ್ದರಿಂದ ಅಷ್ಟೇ ಮೊತ್ತದ ಚೆಕ್ ನೀಡುತ್ತೇವೆ ಎಂದು ಸಮಾಧಾನಪಡಿಸಲು ಅಲ್ಲಿನ ಅಧಿಕಾರಿಗಳು ಮುಂದಾದರು. ಇದರಿಂದ ಸಮಾಧಾನರಾಗದ ವೈದ್ಯರು ಅಷ್ಟೂ ಹಣ ನಗದು ನೀಡುವಂತೆ ಆಗ್ರಹಿಸಿ ಟೋಲ್ನಲ್ಲೇ ಕುಳಿತರು. ಅನಂತರ ಬೆಳಗ್ಗಿನ ಜಾವ ಟೋಲ್ನವರು ನಾಲ್ಕು ಲಕ್ಷ ರೂ. ಹೊಂದಿಸಿ ನೀಡಿದ್ದಾರೆ.
ನಗದು ವಾಪಸು ನೀಡಿ ಪ್ರಕರಣ ಸುಖಾಂತ್ಯಗೊಂಡ ಕಾರಣ ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.