ಶ್ರೀ ಈಶಪ್ರಿಯತೀರ್ಥರ ಪ್ರಥಮ ಪರ್ಯಾಯ

ಉಡುಪಿ ಶ್ರೀ ಕೃಷ್ಣ ಮಠ: 250ನೇ ದ್ವೈವಾರ್ಷಿಕ ಪೂಜಾ ಕೈಂಕರ್ಯ

Team Udayavani, Jan 18, 2020, 1:00 AM IST

ಉಡುಪಿ: ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ಪೂಜೆಯ ಇತಿಹಾಸದಲ್ಲಿ 250ನೇ ಪರ್ಯಾಯ ಪೂಜೆ, ಅದಮಾರು ಮಠದ ಸರದಿ ಯಲ್ಲಿ 32ನೆಯ ಪರ್ಯಾಯ ಪೂಜೆ ಸನ್ನಿಹಿತವಾದ ಸಂದರ್ಭವನ್ನು ಕೃಷ್ಣ ನಗರಿ ಸಂತಸ, ಸಂಭ್ರಮಗಳಿಂದ ಇದಿರುಗೊಂಡಿದೆ.

ಶ್ರೀಮನ್ಮಧ್ವಾಚಾರ್ಯರಿಂದ ಪ್ರತಿಷ್ಠಾಪಿತವಾದ ಶ್ರೀಕೃಷ್ಣ ದೇವರಿಗೆ ಪೂಜೆಯನ್ನು ನೆರವೇರಿಸುವ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಪರ್ಯಾಯ ಎಂದು ಕರೆಯಲಾಗುತ್ತಿದೆ. 1238ರಿಂದ 1317ರ ವರೆಗೆ ಇದ್ದ ಮಧ್ವಾಚಾರ್ಯರಿಗೆ ಸುಮಾರು 50 ವರ್ಷ ವಯಸ್ಸಾಗುವ ಸಂದರ್ಭ ಶ್ರೀಕೃಷ್ಣನನ್ನು ಪ್ರತಿ ಷ್ಠಾಪಿಸಿ ಪೂಜೆಗಾಗಿ ಎಂಟು ಮಂದಿ ಯತಿ ಶಿಷ್ಯರನ್ನು ನೇಮಿಸಿದರು ಎಂಬುದು ಐತಿಹ್ಯ. ಇದರಲ್ಲಿ ಶ್ರೀ ಪಲಿಮಾರು ಮಠದ ಮೂಲಯತಿ ಶ್ರೀ ಹೃಷಿಕೇಶ ತೀರ್ಥರು ಆಶ್ರಮಜ್ಯೇಷ್ಠರು. ಅನಂತರ ಕ್ರಮವಾಗಿ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು, ಪೇಜಾವರ ಮಠದ ಆದ್ಯ ಯತಿಗಳು ಇದ್ದರು.

ಪಲಿಮಾರು ಶ್ರೀಗಳ ಪರ್ಯಾಯ ಸಮಾಪನ
ಇವರೆಲ್ಲರೂ 1522ರ ವರೆಗೆ ತಲಾ ಎರಡು ತಿಂಗಳ ಪೂಜೆಗಳನ್ನು ನಡೆಸುತ್ತಿದ್ದರು. ಇದನ್ನು ಎರಡು ವರ್ಷಗಳಿಗೆ ಪರಿವರ್ತಿಸಿದವರು ಸೋದೆ ಮಠದ ಶ್ರೀ ವಾದಿರಾಜ ಸ್ವಾಮಿಗಳು. 1522ರಲ್ಲಿ ಶ್ರೀ ಪಲಿಮಾರು ಮಠದ ಸ್ವಾಮೀಜಿಯವರಿಂದ ಈ ಎರಡು ವರ್ಷಗಳ ಪರ್ಯಾಯ ಪೂಜಾವಿಧಿ ಆರಂಭಗೊಂಡಿತು. ಈಗ 31 ಪರ್ಯಾಯ ಚಕ್ರಗಳು ಮುಗಿದು 32ನೆಯ ಚಕ್ರದಲ್ಲಿ ಮೊದಲ ಪರ್ಯಾಯವನ್ನು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ಜ. 17ರಂದು ಮುಕ್ತಾಯಗೊಳಿಸಿದ್ದಾರೆ. ಇದು ಅವರ ದ್ವಿತೀಯ ಪರ್ಯಾಯವಾಗಿದ್ದು, ಈ ಅವಧಿಯಲ್ಲಿ ಶ್ರೀಕೃಷ್ಣ ಮಠಕ್ಕೆ ಸ್ವರ್ಣಗೋಪುರ, ಶ್ರೀ ಮುಖ್ಯಪ್ರಾಣ ದೇವರಿಗೆ ಸ್ವರ್ಣ ಗೋಪುರ, 2 ವರ್ಷಗಳ ಅಖಂಡ ಭಜನೆ, ನಿತ್ಯ ಲಕ್ಷ ವಿಷ್ಣುಸಹಸ್ರನಾಮ ಪಠನದೊಂದಿಗೆ ಲಕ್ಷತುಳಸೀ ಅರ್ಚನೆಯನ್ನು ಸಮರ್ಪಿಸಿದ್ದಾರೆ. ಜ. 18ರಿಂದ ಮುಂದಿನ ಸರದಿ ಅದಮಾರು ಮಠದ್ದು. ಇದು ಶ್ರೀಕೃಷ್ಣ ಮಠ ದಲ್ಲಿ ನಡೆಯುತ್ತಿರುವ 250ನೆಯ ಪರ್ಯಾಯ.

ಶಿಷ್ಯಪೂಜಾ ಪರಂಪರೆ
ಈ ಬಾರಿ ಶ್ರೀ ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಈಶಪ್ರಿಯತೀರ್ಥರ ಪರ್ಯಾಯ ಪೀಠಾರೋಹಣ. ಇವರು ಪರಂಪರೆ ಯಲ್ಲಿ 33ನೆಯ ಯತಿ. 31ನೆಯ ಸ್ವಾಮೀಜಿಯವರಾಗಿದ್ದ ಶ್ರೀ ವಿಬುಧೇ ತೀರ್ಥ ಶ್ರೀಪಾದರು 1956-57 ಮತ್ತು 1972-73ರಲ್ಲಿ ಎರಡು ಪರ್ಯಾಯ ಪೂಜೆಗಳನ್ನು ನಡೆಸಿ, 1988-89 ಮತ್ತು 2004-06ರಲ್ಲಿ ತಮ್ಮ ಶಿಷ್ಯ, 32ನೆಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಂದ ಪರ್ಯಾಯ ಪೂಜೆಗಳನ್ನು ನಡೆಸಿದರು. ತಾವಿರುವಾಗಲೇ ಶಿಷ್ಯರಿಂದ ಪರ್ಯಾಯ ಪೂಜೆಯನ್ನು ನಡೆಸಿದ ಎರಡನೆಯ ಯತಿ ಇವರು. ಶ್ರೀ ವಾದಿರಾಜಸ್ವಾಮಿಗಳು 1598-99ರ ಪರ್ಯಾಯ ಪೂಜೆಯನ್ನು ಶಿಷ್ಯ ಶ್ರೀ ವೇದವೇದ್ಯತೀರ್ಥರಿಂದ ನಡೆಸಿದ್ದರು. ಆಗ ವಾದಿರಾಜಸ್ವಾಮಿಗಳಿಗೆ 116 ವರ್ಷ ವಯಸ್ಸು. ಆ ವೇಳೆ ಸೋಂದೆಯಲ್ಲಿದ್ದು ಎರಡು ವರ್ಷ ಪರ್ಯಾಯ ಪೂಜಾ ವ್ರತಸ್ಥರಾಗಿದ್ದರು. ವೇದವೇದ್ಯತೀರ್ಥರಿಗೆ ಆಗ 76 ವರ್ಷ. ಅವರು ಒಟ್ಟು ಎರಡು ಪರ್ಯಾಯ ಪೂಜೆಗಳನ್ನು ನಡೆಸಿದರು. ತಮ್ಮ ಗುರುಗಳು ಹಾಕಿಕೊಟ್ಟ ಪರಂಪರೆಯಂತೆ ಶ್ರೀ ವಿಶ್ವಪ್ರಿಯತೀರ್ಥರು ಎರಡು ಪರ್ಯಾಯ ಪೂಜೆಗಳನ್ನು ನಡೆಸಿ ಈಗ ತಮ್ಮ ಪಟ್ಟಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಪರ್ಯಾಯ ಪೂಜೆಯನ್ನು ನಡೆಸಲಿದ್ದಾರೆ.

ಶ್ರೀ ಈಶಪ್ರಿಯತೀರ್ಥರು ಎಂಜಿನಿಯರಿಂಗ್‌ ಪದವಿ ಬಳಿಕ 2014ರಲ್ಲಿಸನ್ಯಾಸ ಸ್ವೀಕರಿಸಿದರು. ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಲ್ಲಿ ಶಾಸ್ತ್ರಾಧ್ಯಯನ ನಡೆಸುತ್ತಿದ್ದು, ಇದೇ ಪ್ರಥಮ ಬಾರಿಗೆ ಪರ್ಯಾಯ ಪೀಠ ಏರುವ ಅವಕಾಶ ಇವರದಾಗಿದೆ.

“ಪರ್ಯಾಯದ ಎಲ್ಲ ಪ್ರಕ್ರಿಯೆಗಳೂ ಮೂಲ ಸಂಪ್ರದಾಯ ದಂತೆ ನಡೆಯುವುದು. ಹೆಚ್ಚಿನ ಯಾವುದೇ ವ್ಯತ್ಯಾಸಗಳು ಇಲ್ಲ. ಗುರುಗಳ ಆಶಯಗಳನ್ನು ಅನುಸರಿಸಿ ಕೊಂಡು ಮುಂದುವರಿಯುವೆ’ ಎಂದು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಯುವ ಯತಿಗೆ ಭವ್ಯ ಸ್ವಾಗತ
ಶ್ರೀ ಈಶಪ್ರಿಯ ತೀರ್ಥರನ್ನು ವಿದ್ಯುದ್ದೀಪಾಲಂಕಾರದಿಂದ ಅಲಂಕೃತ ಗೊಂಡು ಸಜ್ಜಾಗಿ ಉಡುಪಿ ನಗರ ಸ್ವಾಗತಿಸಿತು. ನೂರಾರು ಗೂಡುದೀಪ, ಪಾರಂಪರಿಕ ಸಿಂಗಾರ, ಪ್ಲಾಸ್ಟಿಕ್‌ರಹಿತ ಅಲಂಕಾರಗಳು ಮನಸೂಗೊಳ್ಳುತ್ತಿವೆ. ಜೋಡುಕಟ್ಟೆಯಿಂದ ಹಳೆ ಡಯಾನ ಸರ್ಕಲ್‌, ಕೊಳದಪೇಟೆ, ತೆಂಕುಪೇಟೆ ಮಾರ್ಗಗಳ ಇಕ್ಕೆಲಗಳಲ್ಲಿ ಜನಸಂದಣಿ ಕಾದುನಿಂತು ಸ್ವಾಮೀಜಿ ಯವರನ್ನು ಸ್ವಾಗತಿಸಿದರು.

ಪರ್ಯಾಯೋತ್ಸವದ ವಿಧಿವಿಧಾನ
ಪರ್ಯಾಯ ಪೀಠವೇರಲಿರುವ ಶ್ರೀಪಾದರಿಂದ ಆರಂಭದಲ್ಲಿ ಕಾಪು ಬಳಿಯ ದಂಡತೀರ್ಥದಲ್ಲಿ ಸ್ನಾನ, ಜೋಡುಕಟ್ಟೆಗೆ ಆಗಮನ, ಅಲ್ಲಿ ಪರ್ಯಾಯೋತ್ಸವದ ದಿನ ಮಾತ್ರ ಮಠಾಧೀಶರು ಪೇಟ ಸುತ್ತಿಕೊಳ್ಳುವ ಸಂಪ್ರದಾಯ, ಅಲ್ಲಿಂದ ವಿವಿಧ ಬ್ಯಾಂಡ್‌ ಸೆಟ್‌, ವಾದ್ಯೋಪಕರಣಗಳು-ಟ್ಯಾಬ್ಲೋಗಳ ವೈಭವದ ಮೆರವಣಿಗೆ, ಭಾವೀ ಪರ್ಯಾಯ ಪೀಠಾಧೀಶರ ಪಟ್ಟದ ದೇವರಾದ ಚತುಭುìಜ ಶ್ರೀಕಾಳೀಮರ್ದನ ಕೃಷ್ಣನ ಪ್ರತಿಮೆಯನ್ನು ಪಲ್ಲಕಿಯಲ್ಲಿರಿಸಿ ಹಿಂದಿನಿಂದ ಅದಮಾರು ಮಠಾಧೀಶರು, ಅನಂತರ ಆಶ್ರಮ ಜೇಷ್ಠತ್ವದಂತೆ ಕೃಷ್ಣಾಪುರ ಮೊದಲಾದ ಶ್ರೀಗಳು ವೈಭವದ ಮೆರವಣಿಗೆಯಲ್ಲಿ ರಥಬೀದಿಗೆ ಆಗಮನ, ರಥಬೀದಿಗೆ ಪ್ರವೇಶವಾಗುತ್ತಿದ್ದಂತೆ ವಾಹನದಿಂದ ಇಳಿದು ಹಾಸುಗಂಬಳಿಯ ಮೇಲೆ ಆಗಮಿಸಿ ಮೊದಲು ಕನಕನ ಕಿಂಡಿಯ ಮೂಲಕ ದೇವರ ದರ್ಶನ, ನವಗ್ರಹದಾನ ಪ್ರದಾನ, ಚಂದ್ರೇಶ್ವರ, ಅನಂತೇಶ್ವರ ದರ್ಶನ, ಕೃಷ್ಣಮಠದ ಮುಂಭಾಗ ನಿರ್ಗಮನ ಪೀಠಾಧೀಶರಿಂದ ಆಗಮನ ಪೀಠಾಧೀಶರಿಗೆ ಸ್ವಾಗತ, ಮಧ್ವಸರೋವರದಲ್ಲಿ ಪಾದ ಪ್ರಕ್ಷಾಳನ, ದೇವರ ದರ್ಶನ, ಅಕ್ಷಯಪಾತ್ರೆಯ ಹಸ್ತಾಂತರ, ಸರ್ವಜ್ಞ ಸಿಂಹಾಸನ ಆರೋಹಣ, ಬಳಿಕ ಬಡಗು ಮಾಳಿಗೆಯಲ್ಲಿ ಪರ್ಯಾಯ ಶ್ರೀಪಾದರಿಂದ ಇತರ ಮಠಾಧೀಶರಿಗೆ ಗಂಧ್ಯದ್ಯುಪಚಾರ. ಈ ಬಾರಿ ದರ್ಬಾರ್‌ ಸಭೆ ಮೊದಲ ಬಾರಿಗೆ ಅಪರಾಹ್ನ 2.30ಕ್ಕೆ ಸಂಪನ್ನಗೊಳ್ಳಲಿದೆ.

ಹಿರಿಯ ಶ್ರೀಪಾದರಿಂದಲೇ ಕಿರಿಯರಿಗೆ ಹಸ್ತಾಂತರಅದಮಾರು ಕಿರಿಯ ಶ್ರೀಪಾದರು ಪರ್ಯಾಯ ಪೂಜೆಯನ್ನು ಮಾಡುವುದಾದರೂ ಮೊದಲು ಹಿರಿಯರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸರ್ವಜ್ಞಪೀಠದಲ್ಲಿ ಕುಳಿತು ಬಳಿಕ ಶಿಷ್ಯರನ್ನು ಕುಳ್ಳಿರಿಸುತ್ತಾರೆ. 1988ರಲ್ಲಿ
ಶ್ರೀ ವಿಬುಧೇಶತೀರ್ಥರೂ ಇದೇ ರೀತಿ ಮಾಡಿದ್ದರು. ಆಗ ಅವರು ಮೊದಲು ಸರ್ವಜ್ಞ ಪೀಠಾರೋಹಣ ಮಾಡಿ ಬಳಿಕ ಶ್ರೀ ವಿಶ್ವಪ್ರಿಯತೀರ್ಥರನ್ನು ಕುಳ್ಳಿರಿಸಿದ್ದರು. ಅದೇ ಸಂಪ್ರದಾಯವನ್ನು ಶ್ರೀ ವಿಶ್ವಪ್ರಿಯತೀರ್ಥರು ಮುಂದು ವರಿಸುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ