ವಿವಿಧ ಬೇಡಿಕೆ‌ ಈಡೇರಿಕೆಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ

ಅಂಗನವಾಡಿ ನೌಕರರಿಂದ ಹಕ್ಕೊತ್ತಾಯ

Team Udayavani, Sep 7, 2019, 12:08 PM IST

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ವಿಜಯಪುರ: ಐಸಿಡಿಎಸ್‌ ಯೋಜನೆಗೆ ವೈಜ್ಞಾನಿಕವಾಗಿ ಅನುದಾನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅಂಗನವಾಗಿ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಭಾರತಿ ವಾಲಿ, ಅಂಗನವಾಡಿ ನೌಕರರ ಮೂಲಭೂತ ಹಾಗೂ ನ್ಯಾಯ ಸಮ್ಮತ ಬೇಡಿಕೆಗಳ ಈಡೇರಿಸುವಲ್ಲಿ ಸರ್ಕಾರ ನಿರಂತರ ನಿರ್ಲಕ್ಷ್ಯ ಮಾಡುತ್ತಿದೆ. ಮಕ್ಕಳ ಮನೋವಿಕಾಸ, ದೈಹಿಕ ಬೆಳವಣಿಗೆಗಳಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಪ್ರಮುಖ ಎಂಬುದನ್ನು ಹಲವು ಸಂಶೋಧನೆಗಳು ದೃಢ‌ಪಡಿಸಿವೆ. ಇಷ್ಟಿದ್ದರೂ ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ದೂರಿದರು.

ದೇಶದ ಮಹತ್ವದ ಯೋಜನೆ ಹಾಗೂ ಅಂನಗವಾಡಿ ಕೇಂದ್ರಗಳು ಅಡಕಗೊಂಡಿರುವ ಐಸಿಡಿಎಸ್‌ ಯೋಜನೆಗೆ ಅಗತ್ಯ ಅನುದಾನ ನೀಡಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಇದು ಅಂಗನವಾಡಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಳವಳಕಾರಿ ಸಂಗತಿ ಎಂದರು.

ಸುನಂದಾ ನಾಯಕ ಮಾತನಾಡಿ, ಇತ್ತೀಚೆಗೆ ಪ್ರಕಟಿಸಲಾಗಿರುವ ಕರಡು ಶಿಕ್ಷಣ ನೀತಿ ಸಹ ಐಸಿಡಿಎಸ್‌ಗೆ ಮಾರಕವಾದ ಹಲವು ಕ್ರಮಗಳನ್ನು ಒಳಗೊಂಡಿದೆ. ಶಿಕ್ಷಣದ ವ್ಯಾಪಾರೀಕರಣದ ಮೇಲೆ ಈ ನೀತಿ ಒತ್ತು ಕೊಡುತ್ತಿದೆ. 3ರಿಂದ 8 ವರ್ಗಗಳವರೆಗಿನ ಮಕ್ಕಳನ್ನು ಶಾಲಾ ಶಿಕ್ಷಣದ ಒಂದು ಘಟ್ಟ ಎಂದು ಪರಿಗಣಿಸಲಾಗಿದೆ. ಶಾಲಾ ಪೂರ್ವ ಶಿಕ್ಷಣೋದ್ಯಮದಲ್ಲಿ 20 ಸಾವಿರ ಕೋಟಿ ರೂ. ವ್ಯವಹಾರ ನಡೆಯುವಂತೆ ಉತ್ತೇಜಿಸುವುದು ಈ ನೀತಿ ಉದ್ದೇಶ. ಹಲವು ರಾಜ್ಯಗಳಲ್ಲಿ ಈಗಾಗಲೇ ಸಮೂಹ ಅಥವಾ ಶಾಲಾ ಸಂಕೀರ್ಣಗಳ ಹೆಸರಿನಲ್ಲಿ, ಐದು ಅಂಗನವಾಡಿ ಕೇಂದ್ರಗಳು ಒಂದೇ ಕೋಣೆಯಲ್ಲಿ ಕೆಲಸ ಮಾಡುತ್ತಿವೆ, ಇದು ಅವೈಜ್ಞಾನಿಕ ಎಂದು ಹರಿಹಾಯ್ದರು.

ಅಶ್ವಿ‌ನಿ ತಳವಾರ ಮಾತನಾಡಿ, ಎಲ್ಲ ಮಕ್ಕಳಿಗೂ ಶಾಲಾ ಪೂರ್ವ ಶಿಕ್ಷಣವನ್ನು ಅಂಗನವಾಡಿ ಮಾದರಿಯಲ್ಲೇ ನೀಡುವುದು ಅತ್ಯಂತ ಸೂಕ್ತ, ಈ ಹಿನ್ನೆಲೆಯಲ್ಲಿ ಎಲ್ಲ ಅಂಗನವಾಡಿಗಳು ಸಮರ್ಪಕ ಕುಡಿಯುವ ನೀರು ಮತ್ತು ನೈರ್ಮಲ್ಯವಿರುವ ಅಗತ್ಯ ಮೂಲ ಸೌಕರ್ಯ, ಅಗತ್ಯ ಕಲಿಕೆಯ ಸಾಮಗ್ರಿಗಳು, ಉತ್ತಮ ಗುಣಮಟ್ಟದ ಆಹಾರ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಹೋರಾಟ ಬೆಂಬಲಿಸಿ ಮಾತನಾಡಿದರು.

ಧರಣಿ ಸ್ಥಳದಲ್ಲೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಯಿತು. ಸುರೇಖಾ ರಜಪೂತ, ಸರಸ್ವತಿ ಮಠ, ಸುವರ್ಣಾ ಹಲಗಣಿ, ದಾನಮ್ಮ ಗುಗ್ಗರೆ, ಪ್ರತಿಭಾ ಕುರಡೆ, ಶೋಭಾ ಕರಾಡೆ, ಜಯಶ್ರೀ ಪೂಜಾರಿ, ಉಷಾ ಕುಲಕರ್ಣಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ