ಗಡಿ ಗ್ರಾಮಗಳಲ್ಲಿ ಕನ್ನಡ ಸಮರ್ಪಕ ಅನುಷ್ಠಾನಕ್ಕೆ ಕ್ರಮ

ವಿವಿಧೆಡೆ ಕನ್ನಡ ಕಲರವಕನ್ನಡಾಂಬೆ ಭಾವಚಿತ್ರ ಮೆರವಣಿಗೆಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Team Udayavani, Nov 2, 2019, 1:20 PM IST

ಯಾದಗಿರಿ: ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಯಾದಗಿರಿ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕನ್ನಡವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಹೇಳಿದರು.

ನಗರದ ಸರಕಾರಿ ಪ.ಪೂ ಕಾಲೇಜು ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 64ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ 2018-19ನೇ ಸಾಲಿನಲ್ಲಿ ಹಂತ-ಹಂತವಾಗಿ 51 ಲಕ್ಷ ರೂ. ಬಿಡುಗಡೆಗೊಳಿಸಿದ್ದು, ಈ ಪೈಕಿ ಒಟ್ಟು 17 ಸಂಘ- ಸಂಸ್ಥೆಗಳಿಗೆ 1ನೇ ಕಂತಿನ ಅನುದಾನವಾಗಿ 45.90 ಲಕ್ಷ ರೂ. ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿದೆ. ಅಲ್ಲದೇ, ಕನ್ನಡ ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲೆಯಲ್ಲಿ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ, ಗಿರಿಜನ ಉತ್ಸವ, ಜನಪರ ಉತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಡ್ಡಾಯ ಮೀಸಲಾತಿ ಸಿಗಲಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ವಿಭಾಗ ತೆರೆಯಲಾಗಿದೆ. ಡಾ| ಸರೋಜಿನಿ ಮಹಿಷಿ ವರದಿಯನ್ವಯ ಎಲ್ಲ ಸರ್ಕಾರಿ/ ಖಾಸಗಿ ಸಂಸ್ಥೆಗಳ ಕಾರ್ಖಾನೆ, ಉದ್ದಿಮೆಗಳಲ್ಲಿ ನೇಮಕಾತಿ ಮಾಡಿಕೊಳ್ಳುವಾಗ ಕನ್ನಡಿಗರಿಗೆ ಕಡ್ಡಾಯವಾಗಿ ಮೀಸಲಾತಿ ದೊರೆಯುವಂತೆಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ: ಕರ್ನಾಟಕವೆಂಬುದು ಕೇವಲ ಒಂದು ಭೂ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕವೆಂದರೆ ಒಂದು ಸಂಸ್ಕೃತಿ, ಒಂದು ಜನ ಸಮುದಾಯ, ಒಂದು ಜೀವನ ಪದ್ಧತಿ ಎಂಬ ವಿಶಾಲ ಅರ್ಥ ಹೊಂದಿದೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಷಯ. ಜಿಲ್ಲೆ-ರಾಜ್ಯಾದ್ಯಂತ ಸಮಸ್ತ ನಾಗರಿಕರು ಶಾಂತಿಯುತ, ಸಹಬಾಳ್ವೆ ನಡೆಸುವಂತಾಗಲಿ ಎಂದು ತಾಯಿ ಭುವನೇಶ್ವರಿ ದೇವಿ ಪ್ರಾರ್ಥಿಸಿದರು.

ಬ್ರಿಟಿಷರ ಅ ಧಿಕಾರದಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕ ಏಕೀಕರಣದ ಕನಸನ್ನು ಡೆಪ್ಯೂಟಿ ಚೆನ್ನಬಸಪ್ಪ ಕಂಡಿದ್ದರು. ಅವರು 1865ರಲ್ಲಿ ಚಾಲನೆ ನೀಡಿದ ಚಳವಳಿ ಒಂದು ನೂರು ವರ್ಷಗಳವರೆಗೆ ನಿರಂತರ ಹೋರಾಟ ನಡೆಸಿದ ಫಲವಾಗಿ 1956ರ ನ.1ರಂದು ಒಂದುಗೂಡಿ, ಕರ್ನಾಟಕ ರಾಜ್ಯ ಉದಯವಾಯಿತು. ನ.1, 1956ರಲ್ಲಿ ಮೈಸೂರು ರಾಜ್ಯವೆಂದು ಕರೆದರೆ 1973ರ ನ.1ರಂದು ಅಂದಿನ ಮುಖ್ಯಮಂತ್ರಿ ದಿ| ದೇವರಾಜ ಅರಸು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿದರು ಎಂದು ತಿಳಿಸಿದರು.

ಪರಿಹಾರ ಕಲ್ಪಿಸಲು ಬದ್ಧ: ಅತಿವೃಷ್ಟಿಯ ಕಾರಣ ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಗಳಲ್ಲಿ ಪ್ರವಾಹ ಉಂಟಾಗಿ, ಸಂಕಷ್ಟಕ್ಕೆ ಗುರಿಯಾದ ಜನರಿಗೆ ಸಂತ್ರಸ್ತ ಜನತೆಗೆ ಸಾಂತ್ವನ ಹೇಳಿದ ಜಿಲ್ಲಾಧಿಕಾರಿಗಳು, ಸಂತ್ರಸ್ತರಿಗೆ ನೀಡಬಹುದಾದ ಎಲ್ಲ ಪರಿಹಾರ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಅಭಯ ನೀಡಿದರು.

ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸೇವೆ ಒದಗಿಸುವ ದೃಷ್ಟಿಯಿಂದ ಜಿಲ್ಲಾಡಳಿತ ಭವನದಲ್ಲಿ ಇ-ಆμàಸ್‌ ಆರಂಭಿಸಲಾಗಿದೆ. ಎಲ್ಲ ನಾಗರಿಕ ಸೇವೆ ಒಂದೇ ಸೂರಿನಡಿ ನೀಡುವ ಉದ್ದೇಶದೊಂದಿಗೆ ಯಾದಗಿರಿ ನಗರದ ತಹಸೀಲ್‌ ಕಚೇರಿ ಆವರಣದಲ್ಲಿ ಕರ್ನಾಟಕ ಒನ್‌ ಸಮಗ್ರ ನಾಗರಿಕ ಸೇವಾ ಕೇಂದ್ರ ಆರಂಭಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಬ್ಲಿಡ್‌ ಬ್ಯಾಂಕ್‌ ತೆರೆಯಲಾಗಿದೆ ಎಂದು ವಿವರಿಸಿದರು.

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ: ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್‌ ನಂತರದ ವಿವಿಧ ಕೋರ್ಸ್‌ಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮ ಬಾರಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮಂಜೂರಿಸಲು 172 ಲಕ್ಷ ರೂ.ನಿಗದಿಪಡಿಸಿದ್ದು, ಒಟ್ಟು 394 ವಿದ್ಯಾರ್ಥಿಗಳಿಗೆ 78.84 ಲಕ್ಷ ರೂ.ಅನುದಾನ ಮಂಜೂರಿಸಲಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮ ಬಾರಿಗೆ ಉತ್ತೀರ್ಣರಾದ ಒಟ್ಟು 625 ವಿದ್ಯಾರ್ಥಿಗಳಿಗೆ 24.92 ಲಕ್ಷ ರೂ.ಅನುದಾನ ಮಂಜೂರಿಸಲಾಗಿದೆ ಎಂದರು.

ಮಾದರಿ ಜಿಲ್ಲೆ ಮಾಡೋಣ: ನೀತಿ ಆಯೋಗವು ಗುರುತಿಸಿದ ಮಹತ್ವಾಕಾಂಕ್ಷಿ ಯಾದಗಿರಿ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಮೂಲಭೂತ ಸೌಕರ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ಕೈಗೊಂಡ ಕಾಮಗಾರಿ ಸಮರ್ಪಕ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರು, ಅಧಿಕಾರಿಗಳು, ವೈದ್ಯರು, ಸರ್ವರು ಬದ್ಧತೆಯಿಂದ ತನು, ಮನದಿಂದ ದುಡಿಯೋಣ. ಈ ಮೂಲಕ ಯಾದಗಿರಿಯನ್ನು ಮಾದರಿ ಜಿಲ್ಲೆಯಾಗಿ ರೂಪಿಸೋಣ ಎಂದರು.

ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್‌ ವಜ್ಜಲ್‌, ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ರೊಟ್ನಡಗಿ, ಜಿಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್‌ ಸೋನವಣೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ, ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ.ರಜಪೂತ್‌, ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ, ಪೌರಾಯುಕ್ತ ರಮೇಶ ಸುಣಗಾರ, ತಹಶೀಲ್ದಾರ್‌ ಚನ್ನಮಲ್ಲಪ್ಪ

ಘಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. ಲಿಂಗೇರಿ ಸ್ಟೇಷನ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ತಂಡದವರು ನಾಡಗೀತೆ ಹಾಡಿದರು. ಉಪನ್ಯಾಸಕಿ ಡಾ| ಜ್ಯೋತಿಲತಾ ತಡಿಬಿಡಿಮಠ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ