ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ
Team Udayavani, Jun 5, 2020, 11:13 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಯಾದಗಿರಿ: ಜಿಲ್ಲೆಯ ಶಹಾಪುರ ನಗರ ಠಾಣೆ ಕಾನ್ ಸ್ಟೇಬಲ್ ಅವರಿಗೆ ಕೋವಿಡ್ ಸೋಂಕು ದೃಡವಾಗಿದೆ.
ಈ ಹಿನ್ನಲೆಯಲ್ಲಿ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವಣೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯಲ್ಲಿ ಕೋವಿಡ್ ಸೋಂಕು ಕಂಡುಬಂದಿರುವ ಕಾರಣ ಪೂರ್ತಿ ಠಾಣೆಯನ್ನು ಸ್ಯಾನಿಟೈಸ್ ಮಾಡಿಸಲಾಗಿದೆ.
ಅಲ್ಲದೆ ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಭೀಮರಾಯನ ಗುಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪೊಲೀಸ್ ಸಿಬ್ಬಂದಿಗಳ ಗಂಟಲು ದ್ರವ ಮತ್ತು ರಕ್ತ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಕೋವಿಡ್ ಸೋಂಕಿತ ಕಾನ್ಸ್ ಸ್ಟೇಬಲ್ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಕಾರ್ಯ ನಡೆದಿದೆ. ಹಾಗೂ ಇವರ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪಟ್ಟಿ ಮಾಡಲಾಗುತ್ತಿದೆ.
ಕೋವಿಡ್ ಸೋಂಕಿತ ಕಾನ್ಸ್ ಸ್ಟೇಬಲ್ ಠಾಣೆಯಲ್ಲಿ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮಾತ್ರವಲ್ಲದೇ ಅವರನ್ನು ಇತ್ತೀಚೆಗೆ ತಾಲೂಕಿನ ಕೊಳ್ಳೂರ (ಎಂ) ಗ್ರಾಮದ ಹತ್ತಿರದ ಚೆಕ ಪೋಸ್ಟ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ.
ಇದೀಗ ಈ ಕಾನ್ಸ್ ಸ್ಟೇಬಲ್ ಗೆ ಸೋಂಕು ಹೇಗೆ ತಗುಲಿತು ಎನ್ನುವುದೇ ಯಕ್ಷ ಪ್ರಶ್ನೆಯಾಗಿದ್ದು ಸೋಂಕಿನ ಮೂಲವನ್ನು ಹುಡುಕಲಾಗುತ್ತಿದೆ.