ಮನಪಾ ಕಾಂಗ್ರೆಸ್‌ ಆಡಳಿತ ಅವ್ಯವಸ್ಥೆಯ ಆಗರ:ಶಾಸಕ ವೇದವ್ಯಾಸ್‌ ಕಾಮತ್‌ ಆರೋಪ

Team Udayavani, Nov 9, 2019, 4:27 AM IST

ಮಹಾನಗರ: ಕಳೆದ ಮಂಗಳೂರು ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹಾಗೂ ಜಾಹೀರಾತಿನಲ್ಲಿ ತುಂಬೆ ಹೊಸ ವೆಂಟೆಂಡ್‌ ಡ್ಯಾಂ ನಿರ್ಮಾಣ, ಕೇಬಲ್‌ ತಂತಿ ರಹಿತ ನಗರ ರಾಜ್ಯದಿಂದ 200 ಕೋಟಿ ರೂ. ವಿಶೇಷ ಅನುದಾನ, ಬೃಹತ್‌ ಕ್ರೀಡಾ ಸಂಕೀರ್ಣ, ರಾಜ್ಯದ ಎರಡನೇ ಐ.ಟಿ. ನಗರವಾಗಿ ಬದಲಿಸುವುದಾಗಿ ಹೇಳಿತ್ತು. ಆದರೆ ಪ್ರಣಾಳಿಕೆಯಲ್ಲಿ ಹೇಳಿದ್ದ ಯಾವ ಅಂಶವನ್ನು ಕೂಡ ಕಾಂಗ್ರೆಸ್‌ ತನ್ನ ಅವಧಿಯಲ್ಲಿ ಮಾಡಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್‌ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪಾಲಿಕೆ ಕಳೆದ ಐದು ವರ್ಷದಲ್ಲಿ ಆಸ್ತಿ ತೆರಿಗೆ ಸಹಿತ ಇತರ ಶುಲ್ಕಗಳ ಸಂಗ್ರಹ ಮಾಡಲು ನಿರ್ಲಕ್ಷ್ಯವಹಿಸಿದ ಪರಿಣಾಮ ಪಾಲಿಕೆಯ ಆದಾಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕೋಟ್ಯಾತರ ರೂ. ಸಂಗ್ರಹಕ್ಕೆ ಬಾಕಿ ಇದ್ದು ಪಾಲಿಕೆ ಆದಾಯ ಕುಂಠಿತವಾಗಲು ಕಾಂಗ್ರೆಸ್‌ ಆಡಳಿತ ನೇರ ಹೊಣೆ ಎಂದರು.

ಕಳೆದ ಚುನಾವಣೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಿಲ್ಲ ಎಂದು ಪ್ರಣಾಳಿಕೆ ಯಲ್ಲಿ ಘೋಷಿಸಿದ್ದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಕ್ಷಣ ಆಸ್ತಿ ತೆರಿಗೆ ಹೆಚ್ಚಳ ಮಾಡಿ ಜನರನ್ನು ವಂಚಿಸಿದೆ. ತೆರಿಗೆ ಸಂಗ್ರಹ ಮಾಡು ವಲ್ಲಿಯೂ ಪಾಲಿಕೆ ಆಡಳಿತ ತಾರತಮ್ಯ ನೀತಿ ಅನುಸರಿಸಿದೆ. ನಾಗರಿಕರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ತೆರಿಗೆ ಪಾವತಿಸಲು ಬಾಕಿ ಇರಿಸಿ ಕೊಂಡವರ ಬಗ್ಗೆ ಪಾಲಿಕೆ ಆಡಳಿತ ಯಾವುದೇ ಕ್ರಮ ವಹಿಸಿಲ್ಲ ಎಂದರು.

ನಗರದಲ್ಲಿ ಡೆಂಗ್ಯೂ, ಮಲೇರಿಯಾ ಹೆಚ್ಚಳವಾಗಿ ನೂರಾರು ಜನರು ಸಂಕಷ್ಟ ಎದುಎದುರಿಸುವ ಪರಿಸ್ಥಿತಿಗೆ ನೇರವಾಗಿ ಪಾಲಿಕೆಯ ಅಸಮರ್ಪಕ ಆಡಳಿತ ವ್ಯವಸ್ಥೆಯೇ ಕಾರಣ. ಪಾಲಿಕೆ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋದ ಕಾರಣದಿಂದ ನಗರದಲ್ಲಿ ಜನರು ಪರದಾಡುವಂತಾಗಿದೆ ಎಂದರು.

ನವೀಕರಣ ಅಲೆದಾಟ
ಉದ್ದಿಮೆ ಪರವಾನಿಗೆ ನವೀಕರಣದಲ್ಲಿ ಉದ್ದಿಮೆದಾರರಿಗೆ ತೊಂದರೆ ನೀಡಲಾಗಿದೆ. ಉದ್ದಿಮೆ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿದರೆ 7-8 ತಿಂಗಳುಗಳ ಕಾಲ ಕಚೇರಿಯಿಂದ ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ದಿಮೆದಾರರಿಗೆ ಬ್ಯಾಂಕ್‌ ಲೋನ್‌ ಇನ್ನಿತರ ವ್ಯವಹಾರಗಳಿಗೆ ಪರವಾನಿಗೆ ಕಡ್ಡಾಯವಾಗಿದ್ದು, ಪರವಾನಿಗೆ ನವೀಕರಣಗೊಳಿಸುವುದನ್ನು ತಡ ಮಾಡುವುದರಿಂದ ಉದ್ದಿಮೆದಾರರು ಸಂಕಷ್ಟ ಪಡುತ್ತಿದ್ದಾರೆ. ಉದ್ದಿಮೆದಾರರಿಂದ ಕಸ ವಿಲೇವಾರಿಗೂ ಶುಲ್ಕ ವಸೂಲಿ ಮಾಡುತ್ತಿದ್ದು ಎಲ್ಲಿಯೂ ಕೂಡ ಸಮರ್ಪಕವಾಗಿ ಕಸ ಸಂಗ್ರಹಣೆ ಆಗುತ್ತಿಲ್ಲ. ಉದ್ದಿಮೆ ಪರವಾನಿಗೆ ನವೀಕರಣವನ್ನು ಸಕಾಲದಲ್ಲಿ ನವೀಕರಿಸದೆ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಈ ಕಾರಣದಿಂದ ಪಾಲಿಕೆಗೆ ಬರಬೇಕಾದ ಆದಾಯ ಕೂಡ ಕುಂಠಿತವಾಗಿದೆ. ಇದರಿಂದಾಗಿ ಮಂಗಳೂರಿನ ಅಭಿವೃದ್ಧಿಗೆ ಹಿನ್ನೆಡೆಯಾ ಗುತ್ತಿದೆ. ಆಡಳಿತದಲ್ಲಿ ಸಂಪೂರ್ಣ ವಿಫಲವಾದ, ಜನರಿಗೆ ವಂಚಿಸಿದ ಕಾಂಗ್ರೆಸ್‌ಗೆ ಮತ್ತೆ ಅಧಿಕಾರ ಸಿಗಬಾರದು. ನಗರದ ಪ್ರಜ್ಞಾವಂತ ನಾಗರಿಕರು ಒಂದಾಗಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ಸಕಾಲ ಎಂದರು.
ಪ್ರಭಾ ಮಾಲಿನಿ, ಜಿತೇಂದ್ರ ಕೊಟ್ಟಾರಿ, ಭಾಸ್ಕರಚಂದ್ರ ಶೆಟ್ಟಿ, ಸಂಜಯ್‌ ಪ್ರಭು ಉಪಸ್ಥಿತರಿದ್ದರು.

ಸಮರ್ಪಕ ನೀರು ಪೂರೈಕೆಗೆ ಕ್ರಮ ವಹಿಸಿಲ್ಲ
ನಗರಕ್ಕೆ ನೀರು ಸರಬರಾಜು ಮಾಡುವ ವ್ಯವಸ್ಥೆಯಲ್ಲೂ ಪಾಲಿಕೆ ಆಡಳಿತ ಸಂಪೂರ್ಣ ವಿಫಲವಾಗಿದೆ. ಅವೈಜ್ಞಾನಿಕವಾಗಿ ನೀರಿನ ದರ ಏರಿಸಿರುವ ಕಾಂಗ್ರೆಸ್‌ ಸಮರ್ಪಕ ನೀರು ಪೂರೈಕೆಗೆ ಕ್ರಮ ವಹಿಸಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ತುಂಬೆ ವೆಂಟೆಡ್‌ ಡ್ಯಾಂಗೆ ಆರಂಭಿಕ 25 ಕೋ.ರೂ.ಅನುದಾನ ನೀಡಿದ್ದರು. ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಆಡಳಿತ ಅನುದಾನ ನೀಡುವ ಬದಲು ಸಾಲದ ರೂಪದಲ್ಲಿ ಹಣ ಒದಗಿಸಿದೆ. ಸಾಲದ ಹಣವನ್ನು ಮರು ಪಾವತಿಸ ಬೇಕಾಗಿದೆ. ಸರಕಾರದಿಂದ ಅನುದಾನ ಒದಗಿಸುವುದು ಆಗಿನ ಕಾಂಗ್ರೆಸ್‌ ಜನಪ್ರತಿನಿಧಿಗಳಿಗೆ ಸಾಧ್ಯವಾಗಿರಲಿಲ್ಲ ಎಂದರು.

ಕಸ ವಿಲೇವಾರಿ ವೈಫಲ್ಯಕ್ಕೆ ಕಾಂಗ್ರೆಸ್‌ ಆಡಳಿತ ನೇರ ಹೊಣೆ
ಕಸ ಸಂಗ್ರಹ – ಸಾಗಾಟ, ವಿಲೇವಾರಿಗೆ ಪಾಲಿಕೆ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. ಆದರೆ ಕಸ ವಿಲೇವಾರಿ ಇಂದಿಗೂ ಸಮರ್ಪಕವಾಗಿಲ್ಲ. ಪಚ್ಚನಾಡಿಯ ಅವೈಜ್ಞಾನಿಕ ಸಂಸ್ಕರಣಾ ಘಟಕ ಮತ್ತು ತ್ಯಾಜ್ಯ ಸಂಗ್ರಹದಿಂದ ಉಂಟಾದ ದುರಂತವೇ ಇದಕ್ಕೆ ನಿದರ್ಶನವಾಗಿದೆ. ಕಸ ವಿಲೇವಾರಿ ವೈಫಲ್ಯಕ್ಕೆ ಕಾಂಗ್ರೆಸ್‌ ಆಡಳಿತ ನೇರ ಹೊಣೆಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಆರೋಪಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ