ಮಾದೋಡಿ ಕೆರೆ ಅರೆಬರೆ ಅಭಿವೃದ್ಧಿ

Team Udayavani, Jun 11, 2019, 6:00 AM IST

ಸವಣೂರು: ಬೆಳಂದೂರು ಗ್ರಾಮದ ಮಾದೋಡಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಕೆರೆ ಅಭಿವೃದ್ಧಿ ಕಾರ್ಯ ಆಮೆಗತಿಯಲ್ಲಿ ಸಾಗಿದ್ದು, ಸದ್ಯ ನನೆಗುದಿಗೆ ಬಿದ್ದಿದೆ. ಸುಮಾರು 50 ಲಕ್ಷ ರೂ. ಅಭಿವೃದ್ಧಿ ಯೋಜನೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಸಣ್ಣ ನೀರಾವರಿ ಇಲಾಖೆ ಮುಖಾಂತರ ಕೇರಳ ಮೂಲದ ಗುತ್ತಿಗೆದಾರರೊಬ್ಬರು ಮಾಡಿರುವ ಎಡವಟ್ಟಿನಿಂದಾಗಿ ಕಾಮಗಾರಿ ಪೂರ್ಣಗೊಳ್ಳದೆ ಕೆರೆ ಸುತ್ತ ಗಿಡಗಂಟಿಗಳು ಬೆಳೆದು ಅಂತರ್ಜಲ ಅಭಿವೃದ್ಧಿಯ ಮೂಲವಾಗಿದ್ದ ಕೆರೆ ನಿರುಯಪಯುಕ್ತವಾಗಿದೆ.

ಎಂದೂ ಬತ್ತದ ಮಾದೋಡಿ ಕೆರೆ
ಮಾದೋಡಿಯಲ್ಲಿನ ಮಾದೋಡಿ, ಕಟ್ಟತ್ತೋಡಿ, ಯಾವಾಜೆ ಪ್ರದೇಶಗಳ ಹಿರಿಯರು 70 ವರ್ಷಗಳ ಹಿಂದೆ ಐದು ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಈ ಭಾಗದಲ್ಲಿ ಕುಡಿಯುವ ನೀರು ಅಥವಾ ಕೃಷಿ ಬಳಕೆಗೆ ನೀರು ಸಮೃದ್ಧವಾಗಿತ್ತು.

ಸರಕಾರಕ್ಕೆ ಜಾಗ ಬಿಟ್ಟುಕೊಟ್ಟರು
ಕೆರಗಳನ್ನು ಅಭಿವೃದ್ಧಿಪಡಿಸಿ ಹೂಳೆತ್ತುವ ಕಾರ್ಯ ಮಾಡದಿದ್ದರೂ ಇಂದಿಗೂ ಆ ಕೆರೆಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಬೇಸಗೆಗೆ ನೀರಿನ ಬವಣೆ ಇಲ್ಲದಂತೆ ಮಾಡುತ್ತಿದೆ. ಐದು ವರ್ಷಗಳ ಹಿಂದೆ ಇಲ್ಲಿ ಕೆರೆ ಇರುವುದನ್ನು ಕಂಡ ಸುಳ್ಯ ಶಾಸಕ ಎಸ್‌. ಅಂಗಾರ ಈ ಕೆರೆಗಳನ್ನು ಅಭಿವೃದ್ಧಿ ಮಾಡಿದರೆ ಬೆಳಂದೂರು, ಕಾಣಿಯೂರು ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದು ಎನ್ನುವುದನ್ನು ಮನಗಂಡು ಮಾದೋಡಿ ಕೆರೆಯನ್ನು ಅಭಿವೃದ್ಧಿಪಡಿಸಲು ಮುಂದಾದರು. ಈ ಕೆರೆ ಖಾಸಗಿ ಭೂಮಿಯಲ್ಲಿದ್ದ ಕಾರಣ ಭೂಮಿಯ ಮಾಲಕಿ ಸುಶೀಲಾ ಜೆ. ರೈ ಕೆರೆ ಇರುವ ಹತ್ತು ಸೆಂಟ್ಸ್‌ ಜಾಗವನ್ನು ಸರಕಾರಕ್ಕೆ ಬಿಟ್ಟುಕೊಟ್ಟು ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು.

ಅನುದಾನ ಮಂಜೂರು
ಈ ಕೆರೆಗೆ ಸಣ್ಣ ನೀರಾವರಿ ಇಲಾಖೆ ಮುಖಾಂತರ 50 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿತ್ತು. ಇ – ಟೆಂಡರ್‌ ಮೂಲಕ ಕೇರಳ ಮೂಲದ ವ್ಯಕ್ತಿ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದರು. ಟೆಂಡರ್‌ ಪಡೆದು ಒಂದು ವರ್ಷದ ಬಳಿಕ ಕೆರೆ ಅಭಿವೃದ್ಧಿ ಕಾರ್ಯ ಮಾಡಲು ಪ್ರಾರಂಭಿಸಿದ್ದರೂ ಈವರೆಗೂ ಪೂರ್ಣಗೊಳಿಸಿಲ್ಲ.

ಒಡೆದ ಕಟ್ಟೆ ಸರಿಯಾಗಿಲ್ಲ
ಸುಮಾರು ಮೂರು ಮೀಟರ್‌ ಉದ್ದ, 45 ಮೀಟರ್‌ ಅಗಲ, 5 ಮೀಟರ್‌ ಆಳವಿರುವ ಈ ಕೆರೆಯ ಹೂಳೆತ್ತುವ ಕಾರ್ಯ ಮಾಡಿ ಕಾಮಗಾರಿಗಾಗಿ ಕಟ್ಟೆ ಒಡೆದು ಅಡಿಪಾಯ ಹಾಗೂ ಕರೆಯ ಸುತ್ತ ಕಲ್ಲು ಕಟ್ಟುವ ಕಾರ್ಯ ಮಾಡಲಾಗಿತ್ತು. ಆದರೆ ಒಂದು ಭಾಗದಲ್ಲಿ ಕಟ್ಟಿದ ಕಲ್ಲು ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿಯಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಒಂದು ವರ್ಷದಲ್ಲಿ ಕಾಮಗಾರಿ ನಡೆಸಿ ಬಿಲ್‌ ಪಡೆದ ಗುತ್ತಿಗೆದಾರ ನಾಪತ್ತೆಯಾಗಿದ್ದಾರೆ. ಅವರು ಇಲಾಖೆ ಅಧಿಕಾರಿಗಳ ಕೈಗೂ ಸಿಗುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.

ನಾವೇ ಕಟ್ಟೆ ಕಟ್ಟುತ್ತೇವೆ
ಇನ್ನೇನು ಮಳೆಗಾಲ ಪ್ರಾರಂಭವಾಗುವ ಹಂತದಲ್ಲಿದೆ. ಮತ್ತೆ ಕೆರೆ ಅಭಿವೃದ್ಧಿ ಕಾಮಗಾರಿ ದೂರದ ಮಾತು. ಇನ್ನೂ ಒಂದು ವರ್ಷ ಕಾಮಗಾರಿ ನಡೆಯುವುದು ಸಂಶಯ. ನಾಲ್ಕು ವರ್ಷಗಳಿಂದ ಕಾಮಗಾರಿ ಮುಗಿಸಲು ಸಾಧ್ಯವಾಗದ ಗುತ್ತಿಗೆದಾರ ಇನ್ನು ಮಳೆಗಾಲ ಪ್ರಾರಂಭವಾಗುವ ಹೊತ್ತಿಗೆ ಹೇಗೆ ಮುಗಿಸುತ್ತಾರೆ? ಈ ಬಾರಿ ಕಟ್ಟೆ ನಿರ್ಮಾಣದ ಕಾರ್ಯ ಮಾಡದಿದ್ದರೆ ನಾವೇ ಮಣ್ಣು ಹಾಕಿ ಕಟ್ಟೆ ನಿರ್ಮಿಸಿ ಈ ಮಳೆಗಾಲದಲ್ಲಿ ನೀರು ಶೇಖರಣೆ ಮಾಡುತ್ತೇವೆ ಎಂದು ಸ್ಥಳೀಯರಾದ ಉದಯ ರೈ ಮಾದೋಡಿ ತಿಳಿಸಿದ್ದಾರೆ.

ಕಾನೂನು ಕ್ರಮಕ್ಕೆ ಶಿಫಾರಸು
ನೀರಿನ ಮೂಲವಾದ ಮಾದೋಡಿ ಕೆರೆಯನ್ನು ಅಭಿವೃದ್ಧಿಪಡಿಸಬೇಕೆನ್ನುವ ಉದ್ದೇಶದಿಂದ ಅನುದಾನ ಮಂಜೂರು ಮಾಡಲಾಗಿದೆ. ಆದರೆ ಇ-ಟೆಂಡರ್‌ ವ್ಯವಸ್ಥೆಯಲ್ಲಿ ಎಲ್ಲಿಂದಲೋ ಬರುವ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣ ಮಾಡದೆ ಅರ್ಧದಲ್ಲಿ ಕೈಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಮುಗಿಸಬೇಕು ಎಂದು ಸಂಬಂಧಪಟ್ಟ ಇಲಾಖಾಧಿಕಾರಿಗೆ ಸೂಚಿಸಲಾಗಿದೆ. ತಪ್ಪಿದಲ್ಲಿ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮಕ್ಕೆ ಸರಕಾರಕ್ಕೆ ಶಿಫಾರಸು ಮಾಡಲಾಗುವುದು.
– ಎಸ್‌. ಅಂಗಾರ ಶಾಸಕರು, ಸುಳ್ಯ

ಕಟ್ಟುನಿಟ್ಟಿನ ಸೂಚನೆ
ಕಾಮಗಾರಿಯನ್ನು ಮುಗಿಸಬೇಕಿತ್ತು. ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡದೆ ತೊಂದರೆಯಾಗಿದೆ. ಕಾಮಗಾರಿ ತತ್‌ಕ್ಷಣ ಮುಗಿಸಿಕೊಡಬೇಕು ಎಂದು ಗುತ್ತಿಗೆದಾರರಿಗೆ ಕಟ್ಟು ನಿಟ್ಟಾಗಿ ಸೂಚನೆ ನೀಡಲಾಗಿದೆ. ಗುತ್ತಿಗೆದಾರ ರಮ್ಜಾನ್‌ ಹಬ್ಬ ಮುಗಿದ ಬಳಿಕ ಕಾಮಗಾರಿ ಮುಗಿಸಿಕೊಡುವುದಾಗಿ ಹೇಳಿದ್ದಾರೆ. ಇನ್ನೊಂದು ವಾರದಲ್ಲಿ ಕಾಮಗಾರಿ ಮುಗಿಸಲು ಸೂಚಿಸಲಾಗುವುದು.
– ಪರಮೇಶ್ವರ ನಾಯ್ಕ , ಎಂಜಿನಿಯರ್‌, ಸಣ್ಣ ನಿರಾವರಿ ಇಲಾಖೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ