ವೃದ್ಧಿಮಾನ್ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್; ಮೈಕಲ್ ಹಸ್ಸಿ ಫಲಿತಾಂಶ ನೆಗೆಟಿವ್
Team Udayavani, May 15, 2021, 12:15 AM IST
ಹೊಸದಿಲ್ಲಿ : ಸನ್ರೈಸರ್ ಹೈದರಾಬಾದ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಅವರ ಕೊರೊನಾ ಟೆಸ್ಟ್ ವರದಿ ಮತ್ತೂಮ್ಮೆ ಪಾಸಿಟಿವ್ ಬಂದಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಮೈಕಲ್ ಹಸ್ಸಿ ಫಲಿತಾಂಶ ನೆಗೆಟಿವ್ ಬಂದಿದೆ.
ಈಗಾಗಲೇ ಹೊಸದಿಲ್ಲಿಯಲ್ಲಿ ಎರಡು ವಾರಗಳ ಕ್ವಾರಂಟೈನ್ ಪೂರೈಸಿರುವ ವೃದ್ಧಿಮಾನ್ ಸಾಹಾ, ಪಾಸಿಟಿವ್ ಬಂದ ಕಾರಣ ಮತ್ತೆ ಕ್ವಾರಂಟೈನ್ ಮುಂದುವರಿಸಬೇಕಿದೆ.
ಸಾಹಾ ವರದಿ ಪಾಸಿಟಿವ್ ಬಂದರೂ ಅವರಿಗೆ ಜ್ವರ ಮತ್ತಿತರ ಗಂಭೀರ ಲಕ್ಷಣವೇನೂ ಕಂಡುಬಂದಿಲ್ಲ. ಹೀಗಾಗಿ ಶೀಘ್ರದಲ್ಲೇ ಮತ್ತೂಂದು ಕೋವಿಡ್ ಟೆಸ್ಟ್ ನಡೆಸಲಾಗುವುದು. ಇದರ ಫಲಿತಾಂಶ ನೆಗೆಟಿವ್ ಬಂದರೆ ಸೋಮವಾರವೇ ಅವರು ಕ್ವಾರಂಟೈನ್ನಿಂದ ಬಿಡುಗಡೆಯಾಗಲಿದ್ದಾರೆ.
ಇದನ್ನೂ ಓದಿ :“ಎಸ್’ ಅಕ್ಷರ ದ್ವೇಷಿಗೆ ಹಾರ್ವರ್ಡ್ ವಿವಿಯಲ್ಲಿ ಸೀಟು! 2025ನೇ ವರ್ಷಕ್ಕೆ ಸಿಗಲಿದೆ ಪ್ರವೇಶ
ಹಸ್ಸಿ ಸಂಪೂರ್ಣ ಚೇತರಿಕೆ
ಮೈಕಲ್ ಹಸ್ಸಿ ಅವರ ಶುಕ್ರವಾರದ ಫಲಿತಾಂಶ ನೆಗೆಟಿವ್ ಬಂದಿದ್ದು, ಕೊರೊನಾದಿಂದ ಸಂಪೂರ್ಣ ಚೇತರಿಸಿದ್ದಾರೆ. ಅವರು ರವಿವಾರ ತವರಿಗೆ ವಾಪಸಾಗುವ ಸಾಧ್ಯತೆ ಇದೆ.
ಆದರೆ ಈ ಕುರಿತು ಪ್ರತಿಕ್ರಿಯಸಿರುವ ಸಿಎಸ್ಕೆ ಸಿಎಒ ಕಾಶೀ ವಿಶ್ವನಾಥ್, “ಹಸ್ಸಿ ಯಾವಾಗ ಭಾರತ ಬಿಡಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಅದೂ ಅಲ್ಲದೇ ಅವರು ಮಾಲ್ಡೀವ್ಸ್ಗೆ ತೆರಳುತ್ತಾರೋ ಅಥವಾ ನೇರವಾಗಿ ಆಸ್ಟ್ರೇಲಿಯಕ್ಕೆ ಹೋಗುತ್ತಾರೋ ಎಂಬುದು ಕೂಡ ತಿಳಿದು ಬಂದಿಲ್ಲ’ ಎಂದಿದ್ದಾರೆ.