
ಯಕ್ಷರಂಗದ ಸು’ಪ್ರಾಸ’ಸಿದ್ದ ರಾಜಕಾರಣಿ ಕುಂಬಳೆಯ ರಾಯರು
ಚುನಾವಣಾ ಕಣಕ್ಕಿಳಿದಾಗ ''ಗೆದ್ದರೆ ಎಂಎಲ್ಎ, ಸೋತರೆ ನಿಮ್ಮಲ್ಲೇ'' ಅಂದಿದ್ದರು....!
ವಿಷ್ಣುದಾಸ್ ಪಾಟೀಲ್, Nov 30, 2022, 5:42 PM IST

ಕೇರಳದ ಕನ್ನಡ ಮಣ್ಣು ಕಾಸರಗೋಡು ಯಕ್ಷರಂಗಕ್ಕೆ ಅನೇಕ ಪ್ರತಿಭಾವಂತರನ್ನು ನೀಡಿದ ಪುಣ್ಯ ಭೂಮಿ. ಅಂತಹ ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬ ಊರಿನಲ್ಲಿ ಹಲವು ಮಂದಿ ಕನ್ನಡದ ಮೇರು ಕಲೆ ಯಕ್ಷಗಾನ ರಂಗದ ಖ್ಯಾತ ನಾಮರು ಹುಟ್ಟಿ ಕನ್ನಡದ, ಶ್ರೇಷ್ಠ ಕಲೆಯ ಕೀರ್ತಿಯ ಪತಾಕೆಯನ್ನು ಹಾರಿಸಿದವರಿದ್ದಾರೆ. ಅದರಲ್ಲೂ ಕುಂಬಳೆ ಎಂದಾಕ್ಷಣ ಯಕ್ಷಗಾನ ರಂಗದಲ್ಲಿ ತತ್ ಕ್ಷಣ ನೆನಪಿಗೆ ಬರುವುದು ಕುಂಬಳೆ ಸುಂದರ ರಾವ್ ಅವರ ಹೆಸರು.
ಯಕ್ಷರಂಗದಲ್ಲಿ ಸುದೀರ್ಘ ಪಯಣದ ಮೂಲಕ ತನ್ನದೇ ಆದ ವೈಶಿಷ್ಟ್ಯಗಳ ಮೂಲಕ ಕರಾವಳಿಯಲ್ಲಿ ಮನೆ ಮಾತಾಗಿದ್ದು ಮಾತ್ರವಲ್ಲದೆ ರಾಜಕಾರಣಕ್ಕೂ ಧುಮುಕಿ ಶಾಸಕರಾಗಿ ವಿಧಾನ ಸಭೆಯನ್ನು ಪ್ರವೇಶಿಸಿದ ಕೀರ್ತಿ ಸುಂದರ ರಾಯರದ್ದು. ಅಭಿಮಾನಿಗಳೆಲ್ಲ ಅವರನ್ನು ಪ್ರೀತಿಯಿಂದ ಸುಂದರ ರಾಯರು ಎನ್ನುವುದು.
ಮಾತಿನ ಮೋಡಿಗಾರ
ಸುಂದರ ರಾವ್ ಅವರು ಯಕ್ಷಗಾನ ರಂಗ ಅದರಲ್ಲೂ ತಾಳಮದ್ದಳೆ ಕ್ಷೇತ್ರ ಕಂಡ ಅಪ್ರತಿಮ ಸಾಟಿಯಿಲ್ಲದ ವಾಗ್ಮಿಗಳಲ್ಲಿ ಒಬ್ಬರು. ಅವರ ವಾಕ್ಚಾತುರ್ಯವೇ ಅವರನ್ನು ವಿಧಾನಸಭೆಯ ಒಳಗೆ ಪ್ರವೇಶಿಸಲು ಒಂದು ಮಾರ್ಗವಾಯಿತು ಎನ್ನುತ್ತಾರೆ ಅವರಿಗೆ ಮತ ಹಾಕಿ ಆಯ್ಕೆ ಮಾಡಿದ ಸುರತ್ಕಲ್ ಭಾಗದ ಮತದಾರರು.
ಸು’ಪ್ರಾಸ’ಸಿದ್ದರು ರಾವ್ ಅವರು
ಪೌರಾಣಿಕ ಪ್ರಸಂಗಗಳ ಅನೇಕ ವಿಭಿನ್ನ ಪಾತ್ರಗಳಿಗೆ ಯಕ್ಷಗಾನ ರಂಗದಲ್ಲಿ ತನ್ನದೇ ಆದ ಪರಿಕಲ್ಪನೆಯಲ್ಲಿ ಹೊಸದೊಂದು ದಾರಿ ಮಾಡಿಕೊಟ್ಟು, ಇಂದಿಗೂ ಅವರನ್ನು ಅನುಕರಿಸುವಂತೆ, ಅನುಸರಿಸುವಂತೆ ಮಾಡಿದ ಮೇರು ಕಲಾವಿದರಲ್ಲಿ ಒಬ್ಬರು. ಅವರ ಮಾತುಗಳಲ್ಲಿ ಅರಳು ಹುರಿದಂತೆ ಪಟಪಟನೆ ನಿರರ್ಗಳವಾಗಿ ಕನ್ನಡದ ಶಬ್ದ ಭಂಡಾರ , ಸಂಸ್ಕೃತ ಶ್ಲೋಕಗಳು ಎಂತಹವರನ್ನೂ ಮಂತ್ರ ಮುಗ್ದರನ್ನಾಗಿಸುತ್ತಿದ್ದವು, ಸೆಳೆದು ಬಿಡುತ್ತಿದ್ದವು, ಸಾಂದರ್ಭಿಕವಾಗಿ ನಗೆಗಡಲಿನಲ್ಲಿ ತೇಲಿಸಿ ಬಿಡುತ್ತಿದ್ದವು. ಇತರೆಲ್ಲರಿಗಿಂತ ಭಿನ್ನವಾದದ್ದು ಅವರು ಮಾತನಾಡುತ್ತಿದ್ದ ಪ್ರಾಸಬದ್ಧ ಮಾತುಗಳು. ಹೂವಿನ ಮಾಲೆಯಂತೆ ಅರ್ಥಗರ್ಭಿತ ಪ್ರಾಸಬದ್ಧ ಮಾತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಅವರಲ್ಲಿ ಭಿನ್ನತೆಯನ್ನು ಕಾಣಿಸಿಕೊಡುತ್ತಿದ್ದವು.
ಗೆದ್ದರೆ ಎಂಎಲ್ಎ, ಸೋತರೆ ನಿಮ್ಮಲ್ಲೇ
1994 ರ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಸುರತ್ಕಲ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡ ರಾವ್ ಅವರು ಹೋರಾಟದಲ್ಲಿ ಗೆಲುವು ಸಾಧಿಸಿ ವಿಧಾನ ಸಭೆಯನ್ನು ಪ್ರವೇಶಿಸಿದ್ದರು. ಅವರ ಸಂಘ ಪರಿವಾರದ ನಂಟು,ಜನಪರ ಕಾಳಜಿ ಮತ್ತು ಜನರಲ್ಲಿ ಯಕ್ಷಗಾನ ಕ್ಷೇತ್ರಕ್ಕಿದ್ದ ಗೌರವ ಅವರನ್ನು ಅಭ್ಯರ್ಥಿಯಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. 1999 ರ ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಅವರು ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಶಾಸಕರಾದ ಬಳಿಕವೂ ಯಕ್ಷಗಾನ ಸೇವೆ ಮುಂದುವರಿಸಿದ್ದರು. 1994ರಲ್ಲಿ ಬಿಜೆಪಿ ರಾಜ್ಯದಲ್ಲಿ ಗೆದ್ದ 40 ಮಂದಿ ಶಾಸಕರಲ್ಲಿ ಒಬ್ಬರಾಗಿದ್ದರು.
ಧರ್ಮಸ್ಥಳ ಮಂಜುನಾಥೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರಾಗಿದ್ದ ಅವರು ಚುನಾವಣಾ ಕಣಕ್ಕಿಳಿಯುವ ವೇಳೆ ರಾಜಕೀಯ ಪ್ರವೇಶದ ಕುರಿತು ಯಕ್ಷಗಾನ ರಂಗದ ಆಪ್ತರು ಮೇಳ ಬಿಟ್ಟು ರಾಜಕೀಯವೇ ಎಂದು ಕೇಳಿದ್ದಕ್ಕೆ, ನಾನು ಗೆದ್ದರೆ ಎಂಎಲ್ಎ, ಸೋತರೆ ನಿಮ್ಮಲ್ಲೇ..ಎಂದು ಪ್ರಾಸಬದ್ಧವಾಗಿ ಉತ್ತರಿಸಿದ್ದರು ಎನ್ನುವುದನ್ನು ಅವರ ಆಪ್ತ ಒಡನಾಡಿಗಳು ನೆನಪಿಸಿಕೊಳ್ಳುತ್ತಾರೆ.
ನಾನು ಬ್ರಾಹ್ಮಣ ಅಲ್ಲ…!
ಕುಂಬಳೆ ಸುಂದರ್ ರಾವ್ ಅವರ ಪಾಂಡಿತ್ಯ, ಅವರ ವರ್ಚಸ್ಸು, ಸಂಸ್ಕೃತ ಪಾಂಡಿತ್ಯ, ಮಾತುಗಾರಿಕೆ ನೋಡಿ ಯಕ್ಷರಂಗದ ಅನೇಕರು, ಅವರ ಅಭಿಮಾನಿಗಳು, ಪ್ರೇಕ್ಷಕರು ಅವರು ಬ್ರಾಹ್ಮಣರೆಂದೇ ಭಾವಿಸಿದ್ದರು. ಇದಕ್ಕೆ ಕಾರಣವಾಗಿದ್ದು ಅವರು ಧರ್ಮಸ್ಥಳ ಕ್ಷೇತ್ರ ಮಾಹಾತ್ಮೆ ಪ್ರಸಂಗದಲ್ಲಿ ಮಾಡುತ್ತಿದ್ದ ‘ಗೋವಿಂದ ದೀಕ್ಷಿತ’ ಎಂಬ ಪಾತ್ರ. ತಪ್ಪು ಕಾರ್ಯಗಳನ್ನು ಬ್ರಾಹ್ಮಣನೊಬ್ಬ(ಗೋವಿಂದ ದೀಕ್ಷಿತ) ಮಾಡಿದಾಗ ಧರ್ಮ ದೇವತೆಗಳು ಪ್ರಶ್ನಿಸಿ ದಂಡಿಸಲು ಮುಂದಾದಾಗ, ನಾನು ಬ್ರಾಹ್ಮಣನಲ್ಲ … ನಾನು ಶೆಟ್ಟಿಗಾರ ಎಂದು ತನ್ನ ಸಮಾಜದ ಹೆಸರು ಹೇಳಿ ಹಾಸ್ಯ ಮಾಡುತ್ತಿದ್ದರು.
ಕುಂಬಳೆಯ ನಾರಾಯಣ ಮಂಗಳದಲ್ಲಿ ನೇಕಾರ ಸಮುದಾಯದ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ ಮಾರ್ಚ್ 20ರಲ್ಲಿ ಜನಿಸಿದ ಸುಂದರ ರಾಯರು ಸಂಸ್ಕೃತ ಶಾಲೆಯಲ್ಲಿ 7 ನೇ ತರಗತಿಯವರೆಗೆ ಶಿಕ್ಷಣ ಪಡೆದರು. ಮುಜಂಗಾವು ಪಾರ್ಥಸಾರಥಿ ದೇವಾಲಯದ ಯಕ್ಷಗಾನ ಸಂಘದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಬಣ್ಣದ ವೇಷದ ದೈತ್ಯ ಪ್ರತಿಭೆ ಕುಂಬಳೆ ಕುಟ್ಯಪ್ಪು ಅವರ ನೆರವಿನ ಮೂಲಕ ಯಕ್ಷಗಾನ ತಿರುಗಾಟಕ್ಕೆ ಬಂದವರು.
ತೆಂಕು ತಿಟ್ಟಿನ ಪ್ರಸಿದ್ಧ ಕಲಾವಿದರ ತವರೂರಾದ ಕುಂಬಳೆಯ ಕುಟ್ಯಪ್ಪು, ದೂಮಪ್ಪು,ನಾರಾಯಣ ಹಾಸ್ಯಗಾರ ಅವರೆಲ್ಲರ ಹಾದಿಯಲ್ಲಿ ಕೀರ್ತಿಯ ಉತ್ತುಂಗಕ್ಕೆ ಏರಿದವರು ಸುಂದರ್ ರಾವ್ ಅವರು.
‘ನನ್ನಲ್ಲಿ ನೃತ್ಯದಲ್ಲಿ ಕೊರತೆಯಿತ್ತು, ಆದರೂ ಯಾರೂ ಅದನ್ನು ಗುರುತಿಸಲಿಲ್ಲ ಎಂದು ಹಲವು ಕಡೆಗಳಲ್ಲಿ ಹೇಳಿಕೊಂಡಿದ್ದರು ಸುಂದರ ರಾಯರು. ಮಲೆಯಾಳ ಭಾಷೆ ಮಾತೃ ಭಾಷೆಯಾದರೂ ಕನ್ನಡಕ್ಕೆ ಅವರ ಕೊಡುಗೆ ಅವಿಸ್ಮರಣೀಯ.
ಕೂಡ್ಲು, ಕುಂಡಾವು, ಸುರತ್ಕಲ್ ಮತ್ತು ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಯಕ್ಷ ಸೇವೆಯಲ್ಲಿ ಅವರ ಹಲವು ಪಾತ್ರಗಳು ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದವು. ಬಹುಬೇಗ ಮುಖ್ಯ ಪಾತ್ರಗಳನ್ನು ನಿರ್ವಹಿಸಿ ಖ್ಯಾತಿಯ ಶಿಖರ ಏರಿದ ಅವರು ಶೇಣಿ ಗೋಪಾಲಕೃಷ್ಣ ಭಟ್ ಸೇರಿ ಹಲವು ದಿಗ್ಗಜರ ಒಡನಾಟ ಹೊಂದಿದವರು.
ಅವರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಸಾವಿರಾರು ಸನ್ಮಾನಗಳು ಸಂದಿವೆ. ಸರಳ ವ್ಯಕ್ತಿತ್ವದ ಸುಂದರ್ ರಾವ್ ಅವರು ಕಲಾಪ್ರೇಮವನ್ನು ಕೊನೆಯವರೆಗೆ ಉಳಿಸಿಕೊಂಡು ಶಕ್ತಿ ಮೀರಿ ನ್ಯಾಯ ಸಲ್ಲಿಸಿದ್ದರು. ಕೇಂದ್ರ ಯುವಜನ ಇಲಾಖೆಯ ಪರಿಣಿತ ಸಮಿತಿ ಸದಸ್ಯ, ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
88 ರ ಹೆರೆಯದಲ್ಲಿ ವಯೋಸಹಜವಾಗಿ ಇಹಲೋಕದ ಯಾತ್ರೆ ಮುಗಿಸಿರುವ ಸುಂದರ್ ರಾವ್ ಅವರ ಸಾಧನೆ ಎಲ್ಲ ಯುವ ಯಕ್ಷಗಾನ ಕಲಾವಿದರಿಗೆ ಸ್ಫೂರ್ತಿ ಎನ್ನಬಹುದು. ಕಲಾವಿದನೊಬ್ಬ ಕಲಾಪ್ರೌಢಿಮೆಯಿಂದಲೇ ಎಲ್ಲವನ್ನೂ ಗೆಲ್ಲಬಹುದು ಎನ್ನುವುದನ್ನು ತೋರಿಸಿಕೊಟ್ಟು, ಕಾಯ ಅಳಿದರೂ ಕೀರ್ತಿ ಅಮರವಾಗಿ ಉಳಿಯಬಲ್ಲುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

38 ವರ್ಷಗಳ ನಂತರ,ನಾನು ಚಿತ್ರದ ಮುಖ್ಯ ಪೋಸ್ಟರ್ನಲ್ಲಿದ್ದೇನೆ: ಅನುಪಮ್ ಖೇರ್ ಸಂಭ್ರಮ

ಪೋಷಕಾಂಶ ಹಾಗೂ ಖನಿಜಾಂಶಗಳ ಆಗರ: ನಿತ್ಯ ಸಂಜೀವಿನಿ ಈ ಎಳನೀರು…

ಮೈಗ್ರೇನ್ ಎಂಬ ತಲೆಶೂಲೆ…ಇದರ ಲಕ್ಷಣಗಳೇನು? ಮೈಗ್ರೇನ್ಗೆ ಇದೆ ಮನೆ ಮದ್ದು

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ಬಾಯಲ್ಲಿ ಇಟ್ಟರೆ ಬೆಣ್ಣೆ ತರ ಕರಗುವ ಮೃದುವಾದ ಪೈನಾಪಲ್ ಕೇಸರಿಬಾತ್ ರೆಸಿಪಿ…
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
