ಈಗ ನಗು ನೋಡೋಣ! : ರೌಡಿ ಶೀಟರ್ಗೆ ಎಸ್ಪಿ ಕಪಾಳ ಮೋಕ್ಷ
Team Udayavani, Aug 31, 2019, 7:15 PM IST
ಚಾಮರಾಜನಗರ: ಗೌರಿ ಗಣೇಶ ಹಬ್ಬ ಹಾಗೂ ಮೊಹರಂ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ರೌಡಿ ಶೀಟರ್ಗಳ ಪರೇಡ್ ನಡೆಸಿದ ಎಸ್ಪಿ ಆನಂದಕುಮಾರ್, ಖಡಕ್ ಎಚ್ಚರಿಕೆ ನೀಡ್ತಿದ್ದರೂ ಹುಸಿ ನಗೆ ನಗುತ್ತಾ ನಿಂತಿದ್ದ ರೌಡಿ ಶೀಟರ್ ಒಬ್ಬನ ಕಪಾಳಕ್ಕೆ ಬಾರಿಸಿದ ಘಟನೆ ನಡೆಯಿತು.
ತಮ್ಮ ಮುಂದೆ ಕೈಕಟ್ಟಿ ನಿಂತಿದ್ದ ರೌಡಿಗಳಿಗೆ ಎಸ್ಪಿ ಎಚ್ಚರಿಕೆ ನೀಡುತ್ತಿದ್ದರು. ಹಾಗೆಯೇ ನಗರದ ಬಲ್ವೀರ್ ಸಿಂಗ್ ಎಂಬ ರೌಡಿ ಶೀಟರ್ಗೂ ಎಚ್ಚರಿಕೆ ನೀಡುತ್ತಿದ್ದರು. ಬಲ್ವೀರ್ ಸಿಂಗ್ ನನ್ನು ಕೋಮು ಭಾವನೆ ಕೆರಳಿಸುವ ಫೋಟೋವೊಂದನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿದ ಪ್ರಕರಣದಲ್ಲಿ ರೌಡಿ ಶೀಟರ್ ಪಟ್ಟಿಗೆ ಸೇರಿಸಲಾಗಿತ್ತು. ಆತನಿಗೆ ಬುದ್ದಿವಾದ ಹೇಳಿದ ಎಸ್ಪಿ, ಹೀಗೆ ಹಬ್ಬದ ಸಮಯದಲ್ಲಿ ಹಿಂಗಾಡಿದ್ರೆ, ಮಿಸುಕಾಡಿದ್ರೆ ಒದೆ ಬೀಳುತ್ತೆ. ಹೆಂಗ್ ಬೀಳುತ್ತೆ ಗೊತ್ತಾ? ಫೇಸ್ಬುಕ್ನಲ್ಲಿ ಅದು ಇದು ಅಪ್ಲೋಡ್ ಮಾಡೋದಲ್ಲ ಎಂದು ಜೋರಾಗಿ ಗದರಿದರು. ಹೀಗೆ ಹೇಳುತ್ತಿದ್ದರೂ ಬಲ್ವೀರ್ ಹುಸಿ ನಗೆ ನಗುತ್ತಿದ್ದ. ಇದರಿಂದ ಕೆರಳಿದ ಎಸ್ಪಿ ಆನಂದಕುಮಾರ್, ಇಷ್ಟಾದ್ರೂ ನಗ್ತಾನಲ್ಲ ಎಂದು ಕಪಾಳಕ್ಕೆ ಬಾರಿಸಿದರು. ಈವಾಗ ನಗು ನೋಡೋಣ. ನಗೋ ನಗ್ತಿಯಾ ಎಂದು ಮತ್ತೆ ಕಪಾಳ ಮೋಕ್ಷ ಮಾಡಿದರು.