ಕೈ ಹಿರಿಯರ ಮುನಿಸು
ವೇಣು ಕರೆದಿದ್ದ ಸಭೆಗೆ ಬಾರದ ಮುನಿಯಪ್ಪ , ಎಚ್ಕೆಪಿ, ಪರಂ
Team Udayavani, Oct 16, 2019, 6:10 AM IST
ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕರೆದಿದ್ದ ಸಭೆಗೆ ಗೈರು ಹಾಜರಾಗುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಸಿದ್ದ ರಾಮಯ್ಯ ನೇಮಕಕ್ಕೆ ಹಿರಿಯ ನಾಯಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಅವರನ್ನೇ ನೇಮಿಸಿದ್ದು ಹಿರಿಯರ ಅಸಮಾಧಾನಕ್ಕೆ ಕಾರಣ ವಾಗಿದೆ. ಹೀಗಾಗಿ ಡಿಸೆಂಬರ್‌ನಲ್ಲಿ ನಡೆಯಲಿರುವ 15 ಕ್ಷೇತ್ರಗಳ ಉಪ ಚುನಾವಣೆ ಸಿದ್ಧತೆ ಹಾಗೂ ಪಕ್ಷ ಸಂಘಟನೆ ಕುರಿತು ಚರ್ಚಿಸಲು ವೇಣುಗೋಪಾಲ್ ಕರೆದಿದ್ದ ಸಭೆಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ತೋರ್ಪಡಿಸಿದರು. ಹಿರಿಯ ನಾಯಕ ರಾದ ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಎಚ್.ಕೆ. ಪಾಟೀಲ್, ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಸಭೆಯಿಂದ ದೂರ ಉಳಿದ ಪ್ರಮುಖರು.
ವೇಣುರಿಂದಲೂ ಅಂತರ
ಸಿದ್ದರಾಮಯ್ಯ ಪಕ್ಷದಲ್ಲಿ ಏಕಾಂಗಿಯಾಗಿ ಎಲ್ಲ ನಿರ್ಧಾರಗಳನ್ನು ತೆಗೆದುಕೊಂಡು ಹಿರಿಯ ನಾಯಕ ರನ್ನು ಅವಗಣಿಸುತ್ತಿದ್ದಾರೆ ಎಂಬುದು ಇವರ ಆರೋಪ. ಜತೆಗೆ ಕೆ.ಸಿ. ವೇಣು ಗೋಪಾಲ್ ಕೂಡ ಸಿದ್ದ ರಾಮಯ್ಯ ಪರ ವಾಗಿದ್ದಾರೆ ಎಂದು ಅವರಿಂದ ಅಂತರ ಕಾಯ್ದು ಕೊಂಡಿದ್ದರು. ಈಗ ಸಿದ್ದರಾಮಯ್ಯ ಅವರನ್ನೇ ವಿಪಕ್ಷ ನಾಯಕರನ್ನಾಗಿ ನೇಮಕ ಮಾಡಿ ಅವರ ನೇತೃತ್ವ ದಲ್ಲೇ ಉಪ ಚುನಾವಣೆ ಸಭೆ ಗಳನ್ನು ಮಾಡು ತ್ತಿರುವುದರಿಂದ ಹಿರಿಯ ನಾಯ ಕರು ಸಭೆಯಿಂದ ದೂರ ಉಳಿದರು ಎಂದು ಹೇಳಲಾಗುತ್ತಿದೆ.
ಸಿದ್ದುಗೇ ಹೊಣೆ
ಈ ಬೆಳವಣಿಗೆಯ ನಡುವೆಯೇ ವೇಣುಗೋಪಾಲ್ ಮೂಲಕ ಉಪ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಹೈಕಮಾಂಡ್ ಜವಾಬ್ದಾರಿ ವಹಿಸಿದೆ. ಮಂಗಳವಾರ ಹಿರಿಯ ನಾಯಕರ ಪ್ರತ್ಯೇಕ ಸಭೆ ನಡೆಸಿದ್ದ ವೇಣುಗೋಪಾಲ್, 15 ಕ್ಷೇತ್ರಗಳ ಉಪ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಹೆಚ್ಚಿನ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮದು ಎಂದು ಸಿದ್ದುಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಪಕ್ಷದ ಹಿರಿಯ ನಾಯಕರ ವಿರೋಧದ ನಡುವೆಯೂ ಪಕ್ಷದ ಹೈ ಕಮಾಂಡ್ ನಿಮ್ಮ ಮೇಲೆ ವಿಶ್ವಾಸ ಇಟ್ಟು ಜವಾಬ್ದಾರಿ ನೀಡಿದ್ದು, ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಪಕ್ಷದಲ್ಲಿ ಉಂಟಾಗಿರುವ ಗೊಂದಲ ನಿವಾರಿಸಿ, ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಡಿಕೆಶಿ ಭವಿಷ್ಯ ನಾಳೆ ನಿರ್ಧಾರ
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಮಂಗಳವಾರವೂ ಸಿಹಿ ಸುದ್ದಿ ಸಿಗಲಿಲ್ಲ. ಮಂಗಳವಾರಕ್ಕೆ ನ್ಯಾಯಾಂಗ ಅವಧಿ ಮುಗಿದ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ಇನ್ನೂ 10 ದಿನಗಳ ವರೆಗೆ ನ್ಯಾಯಾಂಗ ಅವಧಿಯನ್ನು ವಿಸ್ತರಣೆ ಮಾಡಿತು. ಅತ್ತ ದಿಲ್ಲಿ ಹೈಕೋರ್ಟ್‌ನಲ್ಲಿ ಡಿಕೆಶಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಆರಂಭವಾಗಿದ್ದು, ಗುರುವಾರಕ್ಕೆ ಮುಂದೂಡಿಕೆಯಾಗಿದೆ. ಅನಾರೋಗ್ಯದ ಆಧಾರದ ಮೇಲೆ ಜಾಮೀನು ಕೊಡಿ ಎಂದು ಡಿಕೆಶಿ ಪರ ವಕೀಲರು ವಾದ ಮಂಡಿಸಿದರು. ಗುರುವಾರ ಇ.ಡಿ. ಪರ ವಕೀಲರು ವಾದ ನಡೆಸಲಿದ್ದಾರೆ.
ಉಪ ಚುನಾವಣೆ ಸಿದ್ಧತೆಗೆ ಸಭೆ
ಉಪ ಚುನಾವಣೆಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಬೆಂಗಳೂರು ವಿಭಾಗದ ಆರು ಕ್ಷೇತ್ರ ಗಳ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸಂಬಂಧಪಟ್ಟ ಕ್ಷೇತ್ರಗಳ ವೀಕ್ಷಕರ ಅಭಿಪ್ರಾಯ ಸಂಗ್ರಹಿಸಿದರು.
ಅನರ್ಹ ಶಾಸಕರ ರಾಜೀನಾಮೆಯಿಂದ ತೆರವಾಗಿರುವ 15 ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ನಾಯಕರು ಅಭ್ಯರ್ಥಿ ಗಳ ಆಯ್ಕೆ ಬಗ್ಗೆ ಎಲ್ಲ ರೀತಿಯ ಲೆಕ್ಕಾಚಾರದ ಕುರಿತು ಚರ್ಚೆ ನಡೆಸಿದ್ದಾರೆ.
ಮಂಗಳವಾರ ಬೆಂಗಳೂರು ವಿಭಾಗದ ವ್ಯಾಪ್ತಿ ಯಲ್ಲಿ ಬರುವ ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಕೆ.ಆರ್.ಪುರ, ಹೊಸಕೋಟೆ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳ ವೀಕ್ಷಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಸಂಭಾವ್ಯ ಅಭ್ಯರ್ಥಿ ಗಳ ಆಯ್ಕೆ ಹಾಗೂ ಬಿಜೆಪಿಯಿಂದ ಅತೃಪ್ತರು ಪಕ್ಷಕ್ಕೆ ಆಗಮಿಸಿದರೆ, ಆ ಕ್ಷೇತ್ರಗಳಲ್ಲಿ ಆಗುವ ಪರಿಣಾಮಗಳ ಕುರಿತು ಚರ್ಚಿಸಿದ್ದಾರೆ.
ಕೆ.ಆರ್.ಪುರ, ಹೊಸಕೋಟೆ ಕ್ಷೇತ್ರಗಳಲ್ಲಿ 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಬಂಡಾಯ ಸಾರಿದರೆ ಅವರನ್ನು ಪಕ್ಷಕ್ಕೆ ಕರೆತರುವ ಕುರಿತಂತೆಯೂ ಚರ್ಚಿಸಲಾಗಿದ್ದು, ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಜವರಾಯ ಗೌಡ ಅವರನ್ನು ಪಕ್ಷಕ್ಕೆ ಸೆಳೆಯುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾಗಿದೆ. ಆದರೆ ನೀತಿ ಸಂಹಿತೆ ಲೆಕ್ಕಕ್ಕೆ ಇಲ್ಲದಂತಾಗಿದೆ. ರಾಜ್ಯ ಸರಕಾರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನಡೆದುಕೊಳ್ಳುತ್ತಿದೆ.
– ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮೂರಿನಲ್ಲಿ ಪಾನಿಪುರಿ, ಪಾನ್ ಮಸಾಲಾ ಮಾರುವವರು ಗುಜರಾತ್ ನವರು: ಸಿ.ಎಂ.ಇಬ್ರಾಹಿಂ
ಸಂಪುಟ ವಿಸ್ತರಣೆ ಕುರಿತು ಚರ್ಚೆಯಿಲ್ಲ: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ
ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ
ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ. 33 ಮೀಸಲಾತಿ; ಮಹಿಳೆಯರಿಗೆ ಮೀಸಲು
ನಿರಂತರ ಮಳೆಗೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ; ಶೀಘ್ರ ಭರ್ತಿಯಾಗಲಿದೆ ಯಗಚಿ ಜಲಾಶಯ