Socotra Island: ಅನ್ಯಗ್ರಹದಂತೆ ಇರುವ ಸೊಕೊಟ್ರಾ ದ್ವೀಪ !

ಅಡುಗೆಯಲ್ಲಿ ಬಳಸುವ ತುಪ್ಪವನ್ನು ಇಲ್ಲಿಗೆ ಪರಿಚಯಿಸಿದವರು ಭಾರತೀಯರು

Team Udayavani, Mar 30, 2024, 10:59 AM IST

Socotra Island: ಅನ್ಯಗ್ರಹದಂತೆ ಇರುವ ಸೊಕೊಟ್ರಾ ದ್ವೀಪ !

ಪ್ರಪಂಚದಲ್ಲಿ ಪ್ರತಿಯೊಂದು ಪ್ರದೇಶವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಕೆಲವು ಜಾಗದಲ್ಲಿನ ವಿಶಿಷ್ಟತೆ ಬೇರೆಲ್ಲಿಯೂ ಇರುವುದಿಲ್ಲ. ಇಂತಹ ಹಲವಾರು ಪ್ರದೇಶಗಳು ಪ್ರಪಂಚದಲ್ಲಿ ಬಹಳಷ್ಟಿವೆ. ಒಮಾನ್‌ ರಾಷ್ಟ್ರದ ದಕ್ಷಿಣ ದಿಕ್ಕಿನಲ್ಲಿರುವ ಸೊಕೊಟ್ರಾ ದ್ವೀಪವು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ.

ಭೂಮಿಯ ಮೇಲಿನ ಅನ್ಯಲೋಕದ ಸ್ಥಳದಂತೆ ಮತ್ತು ಇದು ಯಾವುದೋ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದಂತೆ ಈ ಪ್ರದೇಶವಿರುವುದು ವಿಶೇಷ. ಭೂಮಿಯ ಮೇಲೆ ಈ ತರಹದ ಸ್ಥಳ ಇದೆಯಾ ಎಂದು ಬಹಳಷ್ಟು ಜನ ಆಶ್ಚರ್ಯ ಪಟ್ಟಿದ್ದಾರೆ. ಈ ದ್ವೀಪಕ್ಕೆ ಸಂಸ್ಕೃತದಲ್ಲಿ ಸುಖಧಾರ ದ್ವೀಪ ಎಂದು ಕರೆಯಲಾಗುತ್ತದೆ. ಅರೇಬಿಕ್‌ ಪ್ರಕಾರ ಸೊಕೊಟ್ರಾ ಶಬ್ದವು ಎರಡು ಪದಗಳಿಂದ ರೂಪುಗೊಂಡಿದೆ. ಒಂದು ಸೂಕ್‌ ಮತ್ತೂಂದು ಕೊಟ್ರಾ. ಸೂಕ್‌ ಎಂದರೆ ಬರ್ಜಾ. ಕೊಟ್ರಾ ಎಂದರೆ, ಡ್ರಾಗನ್‌ ಬ್ಲಿಡ್‌ ಟ್ರೀಯಿಂದ ತೊಟ್ಟಿಕ್ಕುವ ಅಂಟು ಅಥವಾ ರಸ ಎನ್ನುವ ಅರ್ಥವಿದೆ.

ಭೌಗೋಳಿಕ ವಿವರ:
ಭೌಗೋಳಿಕವಾಗಿ ನೋಡುವುದಾದರೆ, ಹಿಂದೂ ಮಹಾಸಾಗರದಲ್ಲಿನ ಯೆಮೆನ್‌ ಗಣರಾಜ್ಯದ ಭಾಗವಾಗಿರುವ ಈ ದ್ವೀಪ, ಆಫ್ರಿಕಾ ಖಂಡದ ಸೋಮಾಲಿಯಾ ದೇಶದ ತುತ್ತ ತುದಿಯಿಂದ ಪೂರ್ವಕ್ಕೆ 240 ಕಿಲೋ ಮೀಟರ್‌ (150 ಮೈಲಿ) ಮತ್ತು ಅರೇಬಿಯನ್‌ ಪೆನಿನ್ಸುಲಾದ ಯೆಮೆನ್‌ ರಾಷ್ಟ್ರದ ದಕ್ಷಿಣಕ್ಕೆ 380 ಕಿ.ಮೀ. ದೂರದಲ್ಲಿದೆ. ಈ ದ್ವೀಪವು ಸರಿಸುಮಾರು 132 ಕಿ.ಮೀ. ಉದ್ದ ಮತ್ತು 49.7 ಕಿ.ಮೀ. ಅಗಲವನ್ನು ಹೊಂದಿದೆ. ಒಟ್ಟು 3,796 ಚದರ ಕಿ.ಮೀ. ವಿಸ್ತೀರ್ಣವಿದೆ. ಭೌಗೋಳಿಕವಾಗಿ ಈ ಸ್ಥಳವನ್ನು ಮೂರು ಮುಖ್ಯ ವಲಯಗಳಾಗಿ ವಿಂಗಡಿಸಬಹುದು, ಕರಾವಳಿ ಬಯಲು ಪ್ರದೇಶ, ಸುಣ್ಣಕಲ್ಲಿನ ಪ್ರಸ್ಥಭೂಮಿ (limestone plateau) ಮತ್ತು ಹಜೀರ್‌ / ಹಗ್ಗಿಯರ್‌ ಪರ್ವತಗಳು (Hajhir / Hagghier mountains). ಯೆಮೆನ್‌, ಒಮಾನ್‌, ಸೌದಿ ಅರೇಬಿಯಾದ ದೇಶಗಳು ಹತ್ತಿರದಲ್ಲಿರುವುದರಿಂದ ಈ ದ್ವೀಪ ಅರೆ ಮರುಭೂಮಿಯ ಹವಾಮಾನವನ್ನು ಹೊಂದಿದೆ ಮತ್ತು ಸರಾಸರಿ ತಾಪಮಾನವು 25 ಡಿಗ್ರಿಗಳಿಗಿಂತ ಹೆಚ್ಚಾಗಿರುತ್ತದೆ. ಅಲ್ಪ ಪ್ರಮಾಣದಲ್ಲಿ ಮಳೆ ಇಲ್ಲಿ ಬೀಳುತ್ತದೆ. ಭಾರತದಂತೆ, ಜೂನ್‌ನಿಂದ ಸೆಪ್ಟಂಬರ್‌ ವರೆಗೂ ಇಲ್ಲಿ ಮುಂಗಾರು ಇರುತ್ತದೆ. ಇಲ್ಲಿನ ಮೂಲನಿವಾಸಿಗಳು ಸೊಕೊಟ್ರಾ ಎನ್ನುವ ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಾರೆ.

ಅಂದಾಜು ಎರಡು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಈ ಭಾಷೆಗೆ ಇದೆ. ಈ ಭಾಷೆಗೆ ಯಾವುದೇ ಲಿಪಿಯಿಲ್ಲ. ಇಲ್ಲಿನ ಪ್ರಮುಖ ಪಟ್ಟಣ ಹದಿಬು. ಜನಸಂಖ್ಯೆ 60,000. ಇಲ್ಲಿನ ಜನಾಂಗದ ಬಗ್ಗೆ ಹೇಳುವುದಾದರೆ, ಪ್ರಧಾನವಾಗಿ ಸೊಕೊಟ್ರಿಗಳು ಬಹುಸಂಖ್ಯಾಕರು, ಮಿಕ್ಕುಳಿದಂತೆ ಅಲ್ಪಸಂಖ್ಯಾಕ ಯೆಮೆನಿಗಳು, ಹದರೆಮ್‌ ಮತ್ತು ಮೆಹ್ರಿಸ್‌ ಜನಾಂಗದ ಜನರು ಇಲ್ಲಿದ್ದಾರೆ. ಈ ದ್ವೀಪವು ಗಲ್ಫ್ ಆಫ್ ಏಡೆನ್‌ ಬಳಿ ಆಯಕಟ್ಟಿನ ಸ್ಥಳದಲ್ಲಿದ್ದರೂ, ಸಮುದ್ರ ಪ್ರಯಾಣದ ನ್ಯಾವಿಗೇಶನ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದ ಸೊಕೊಟ್ರಾ ಎಂದಿಗೂ ಪ್ರಮುಖ ವ್ಯಾಪಾರ ಕೇಂದ್ರವಾಗಲಿಲ್ಲ. ಮುಂಗಾರಿನಲ್ಲಿ ಕಡಲ ತೀರಕ್ಕೆ ಅಪ್ಪಳಿಸುವ ರಭಸದ ಅಲೆಗಳಿಂದಾಗಿ ಇಲ್ಲಿನ ಸಮುದ್ರ ತೀರಗಳು ಹಡಗುಗಳನ್ನು ಲಂಗರು ಹಾಕುವುದಿಕ್ಕೆ ಯೋಗ್ಯವಾಗಿರಲಿಲ್ಲ.

ಇಲ್ಲಿನ ವಿಶೇಷ:
ಸೊಕೊಟ್ರಾವು ಕಠಿನ ಹವಾಮಾನವನ್ನು ಹೊಂದಿದೆ. ಅತ್ಯಂತ ಬಿಸಿ ಮತ್ತು ಶುಷ್ಕ ವಾತಾವರಣವಿರುವುದರಿಂದ ಈ ದ್ವೀಪವು ತುಂಬಾ ವಿಶಿಷ್ಟ ವಾಗಿದೆ. ಇಲ್ಲಿ ಕಂಡು ಬರುವ ವಿಭಿನ್ನ ಸಸ್ಯ ಮತ್ತು ಪ್ರಾಣಿಗಳ ಜೀವ ವೈವಿಧ್ಯಗಳ ಕಾರಣದಿಂದಾಗಿ ಪ್ರಪಂಚದ ವಿಚಿತ್ರವಾದ ಪ್ರದೇಶ ಎಂದು ಇದನ್ನು ಗುರುತಿಸಲಾಗಿದ್ದು, ಇಲ್ಲಿ ಕಾಣ ಸಿಗುವ ಪ್ರಾಣಿ, ಪಕ್ಷಿ , ಹೂಗಳು ಮತ್ತು ಇಲ್ಲಿರುವ ಸಸ್ಯ ರಾಶಿಗಳ ಮೂರನೇ ಒಂದು ಭಾಗವು ಪ್ರಪಂಚದ ಇತರ ಭಾಗದಲ್ಲಿ ಕಾಣಸಿಗುವುದಿಲ್ಲ ಎನ್ನುವುದು ಇಲ್ಲಿನ ವಿಶೇಷ. ಈ ಜಾಗ 825 ಸಸ್ಯ ಪ್ರಭೇದಗಳಿಗೆ ನೆಲೆಯಾಗಿದೆ, ಅವುಗಳಲ್ಲಿ 308 (37%) ಸ್ಥಳೀಯವಾಗಿವೆ. ಈ ಜಾತಿಯ ಗಿಡಗಳು ಭೂಮಿಯ ಮೇಲೆ ಎಲ್ಲಿಯೂ ಕಂಡುಬರುವುದಿಲ್ಲ. ಭೂಮಿಯ ಮೇಲೆ ಅನ್ಯಲೋಕದ ಸ್ಥಳವೆಂದೇ ಇದನ್ನು ಗುರುತಿಸಲಾಗುತ್ತಿದೆ. ವಿಶ್ವದ ಅತ್ಯುತ್ತಮ ಅಲೋವೇರ, ಅಂಬರ್‌, ಕಸ್ತೂರಿ, ಮುತ್ತುಗಳು ಮತ್ತಿತರ ವಸ್ತುಗಳು ಇಲ್ಲಿ ದೊರಕುತ್ತವೆ. ಕ್ರಿ.ಪೂ. 2,400 ವರ್ಷಗಳ ಹಿಂದಿನಿಂದಲೂ ಸೊಕೊಟ್ರಾ ದ್ವೀಪವು ಸುಗಂಧ ದ್ರವ್ಯ, ಮಿಹ್‌ರ್‌ ಮತ್ತು ಅಲೋವೇರ ಮಾತ್ರವಲ್ಲದೆ ಡ್ರ್ಯಾಗನ್‌ ಬ್ಲಡ್‌ ಮರದಿಂದ ಒಸರುವ ಅಂಟನ್ನು ರಫ್ತು ಮಾಡುತ್ತಿದ್ದ ಬಗ್ಗೆ ದಾಖಲೆಗಳು ಲಭ್ಯವಿದೆ. ಡ್ರ್ಯಾಗನ್‌ ಬ್ಲಡ್‌ ಟ್ರೀ ಮತ್ತು ಸೊಕೊಟ್ರಾದ ಮರುಭೂಮಿ ಗುಲಾಬಿ ಸೇರಿದಂತೆ ವಿಶಿಷ್ಟ ಸಸ್ಯ ಮತ್ತು ಪ್ರಾಣಿಗಳಿಗೆ ಈ ದ್ವೀಪವು ನೆಲೆಯಾಗಿದೆ.

ಸಾಂಪ್ರದಾಯಿಕ ಔಷಧಗಳಲ್ಲಿ ಚರ್ಮದ ಚಿಕಿತ್ಸೆಯಾಗಿ ಬಳಸಲಾಗುವ ಉತ್ತಮ ಗುಣಮಟ್ಟದ ಅಲೋವೆರಾ ಗಿಡಗಳು ನೈಸರ್ಗಿಕವಾಗಿ ಇಲ್ಲಿ ಬೆಳೆಯುತ್ತಿವೆ. ಭೂಮಿಯ ಮೇಲೆ ಕೆಲವೇ ಕೆಲವು ದ್ವೀಪಗಳು ಮಾತ್ರ ಹೆಚ್ಚಿನ ಸಂಖ್ಯೆಯ ಸ್ಥಳೀಯ ಪ್ರಭೇದಗಳನ್ನು ಹೊಂದಿವೆ. ಅವು ಸೊಕೋಟ್ರ, ಹವಾಯಿ ಮತ್ತು ಗ್ಯಾಲಪಗೋಸ್‌ ದ್ವೀಪಗಳು.

ಡ್ರ್ಯಾಗನ್‌ ಬ್ಲಡ್‌ ಟ್ರೀ- ಗೇಮ್‌ ಆಫ್ ಥ್ರೋನ್ಸ್‌ನಲ್ಲಿ ಕಂಡು ಬರುವ ಮರಗಳು ಇವೆಯಲ್ಲ, ಅದೇ ತರಹ ಮರಗಳು ಈ ದ್ವೀಪದಲ್ಲಿವೆ. ಅದನ್ನ ಡ್ರ್ಯಾಗನ್‌ ಬ್ಲಡ್‌ ಟ್ರೀ ಎಂದು ಕರೆಯುತ್ತಾರೆ. ಸಸ್ಯಶಾಸ್ತ್ರದ ವೆಜ್ಞಾನಿಕ ಹೆಸರು ಈDracaena cinnabari ಎನ್ನುತ್ತಾರೆ. ಈ ಜಾತಿಯ ಮರ ಬೇರೆಲ್ಲಿಯೂ ಬೆಳೆಯುವುದಿಲ್ಲ. ಈ ಗಿಡದ ತೊಗಟೆಯಿಂದ ಒಸರುವ ರಸವು ಔಷಧೀಯ ಗುಣ ಮತ್ತು ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಸ್ಥಳೀಯರು ನಂಬುತ್ತಾರೆ. ಮಧ್ಯ ಪ್ರಾಚೀನ ಯುಗದಲ್ಲಿ ಡ್ರ್ಯಾಗನ್‌ ಮರದ ರಕ್ತದಂತಹ ಕೆಂಪು ರಸವನ್ನು ಮಾಂತ್ರಿಕ ಮತ್ತು ರಸಾಯನ ಶಾಸ್ತ್ರದ ವಿದ್ಯೆಯಲ್ಲಿ ಬಳಸಲಾಗುತ್ತಿತ್ತು. ಇಲ್ಲಿನ ದಂತಕಥೆಯ ಪ್ರಕಾರ, ಯುದ್ಧದಲ್ಲಿ ಆಗುವ ಗಾಯಗಳನ್ನು ಅತೀ ಬೇಗ ವಾಸಿಮಾಡಿಕೊಳ್ಳುವುದಕ್ಕಾಗಿ ಡ್ರ್ಯಾಗನ್‌ ಮರದಿಂದ ಒಸರುವ ಈ ಅಂಟಿನಂತಹ ರಾಳವನ್ನು ಗ್ಲಾಡಿಯೇಟರ್‌ಗಳು ಮೈಮೇಲೆ ಉಜ್ಜಿಕೊಳ್ಳುತ್ತಿದ್ದರಂತೆ. ಹಿಂದಿನ ಕಾಲದಿಂದಲೂ ಈ ಮರಕ್ಕೆ ಅಮೂಲ್ಯವಾದ ಸ್ಥಾನವಿದ್ದು, ಇಂದಿಗೂ ಇದು ಪ್ರಾಶಸ್ತ್ಯ ಪಡೆದಿದೆ. ಈ ಮರಗಳಲ್ಲಿ ದೊರಕುವ ಅಂಟು, ಹಡಗು ನಿರ್ಮಾಣಕ್ಕೆ ಉಪಯೋಗಿಸಲಾಗುತ್ತಿತ್ತಂತೆ. ಈ ಅಂಟಿಗಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ಸೇರಿದಂತೆ ವಿವಿಧ ದೇಶಗಳಿಂದ ಬೇಡಿಕೆಯಿತ್ತು.

ಸಾಂಬ್ರಾಣಿ: ಈ ಪ್ರದೇಶದಲ್ಲಿ ಸಾಂಬ್ರಾಣಿ ಮರಗಳು ಇವೆ. ನಮ್ಮ ಲೋಭಾನದ ಅಂಟು ಈ ಮರಗಳಿಂದ ಉತ್ಪತ್ತಿಯಾಗುತ್ತದೆ. ಅದನ್ನು ಇಲ್ಲಿನ ಜನರು ಸಂಗ್ರಹಿಸಿ ಮಾರುತ್ತಿದ್ದರಂತೆ. ದೇಶ ವಿದೇಶಗಳಿಂದ ಈ ಪ್ರದೇಶದಿಂದ ಹಾದು ಹೋಗುವಾಗ, ಇಲ್ಲಿ ಉತ್ತಮ ದರ್ಜೆಯ ಲೋಭಾನ ಸೇರಿದಂತೆ ಇನ್ನಿತರೆ ವಸ್ತುಗಳ ಮಾರಾಟ ಇಲ್ಲಿ ನಡೆಯುತಿತ್ತು.

ಯುನೆಸ್ಕೋ ವಿಶ್ವ ಪರಂಪರೆಯ ತಾಣ: ಈ ದ್ವೀಪದಲ್ಲಿರುವ ವಿಶಿಷ್ಟ ಸಸ್ಯ ಪ್ರಭೇದಗಳು, ಪ್ರಾಣಿ ಪಕ್ಷಿಗಳ ಸಂಕುಲವನ್ನು ಸಂರಕ್ಷಿಸಲು 2008ರಲ್ಲಿ ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ.

ಭಾರತದೊಂದಿಗಿನ ನಂಟು:
ಈ ದ್ವೀಪಕ್ಕೆ ಸಂಸ್ಕೃತದಲ್ಲಿ ಸುಖಧಾರ ದ್ವೀಪ ಎಂದು ಕರೆಯಲಾಗುತ್ತದೆ, ಕಾಲಕ್ರಮೇಣ ಬಳಕೆಯಲ್ಲಿ ಇಂದು ಅಪಭ್ರಂಶವಾಗಿ ಸೊಕೊಟ್ರಾವಾಗಿದೆ. ಸಂಶೋಧಕ ಪೀಟರ್‌ ಡಿ ಗೀಸ್ಟ್‌ ನೇತೃತ್ವದಲ್ಲಿ, ಇಲ್ಲಿ ಸಂಶೋಧನೆ ನಡೆಸಿದಾಗ ಪ್ರಾಚೀನ ಭಾರತೀಯ ಬ್ರಾಹ್ಮಿà ಮತ್ತು ಖರೋಷ್ಟಿ ಲಿಪಿಗಳಲ್ಲಿನ ಬರಹಗಳುಳ್ಳ ವಸ್ತುಗಳು ಇಲ್ಲಿ ದೊರೆತಿವೆ. ಇವು ಎರಡನೇ ಶತಮಾನದಿಂದ ನಾಲ್ಕನೇ ಶತಮಾನದ ವರೆಗಿನ ಹಿಂದಿನ ಅವಧಿಯವು ಎಂದು ಹೇಳಲಾಗುತ್ತಿದೆ. ಅವರ ಸಂಶೋಧನೆಯ ಪ್ರಕಾರ, ದ್ವೀಪಕ್ಕೆ ಭೇಟಿ ನೀಡಿದ ವಸಾಹತುಗಾರರು, ನಾವಿಕರು ಮತ್ತು ವ್ಯಾಪಾರಿಗಳು ಇಲ್ಲಿನ ಗುಹೆಗಳಲ್ಲಿ ಆಶ್ರಯ ಪಡೆದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಬರಹಗಳಲ್ಲಿ ಗುಹೆಯಲ್ಲಿ ಆಶ್ರಯ ಪಡೆದಿದ್ದ ವಿವಿಧ ನಾವಿಕರು ಮತ್ತು ವಸಾಹತುಗಾರರ ಹೆಸರುಗಳನ್ನು ಒಳಗೊಂಡಿವೆ ಎಂದು ಅನ್ವೇಷಿಸಿದ್ದಾರೆ. ಇವರೆಲ್ಲರ ಹೆಸರು ಮತ್ತು ಊರು ಅಖಂಡ ಭಾರತ ದೇಶಕ್ಕೆ ಸಂಬಂಧಿಸಿದಾಗಿದೆ. ಇಲ್ಲಿನ ಕ್ಯಾಂಬೆ ಕೊಲ್ಲಿಯಲ್ಲಿ ದೊರೆತ ಒಂದು ಬರಹದಲ್ಲಿ, ಹಸ್ತಕವಪ್ರದ ವಿಷ್ಣುಸೇನ ಎನ್ನುವ ಹೆಸರನ್ನು ಬ್ರಾಹ್ಮಿ ಲಿಪಿಯಲ್ಲಿ ಕೆತ್ತಲಾಗಿದೆ. ಇನ್ನೊಂದು ಬರಹದಲ್ಲಿ ಉಪಶೀಲ ಎನ್ನುವ ಗಾಂಧಾರದ (ಇಂದಿನ ಅಫ್ಘಾನಿಸ್ತಾನ) ವ್ಯಕ್ತಿಯ ಹೆಸರನ್ನು ಖರೋಷ್ಟಿ ಲಿಪಿಯಲ್ಲಿ ಕೆತ್ತಲಾಗಿದೆ.

ಭಾರತ, ಆಫ್ರಿಕ ಮತ್ತು ಅರೇಬಿಯಾದ ಕಡಲು ಮಾರ್ಗದ ಆಯಕಟ್ಟಿನ ಜಾಗದಲ್ಲಿ ಈ ಪ್ರದೇಶವಿದ್ದಿದ್ದರಿಂದ ಇಲ್ಲಿ ಭಾರತೀಯ ವ್ಯಾಪಾರಿಗಳು ಸಾವಿರಾರು ವರ್ಷಗಳ ಹಿಂದೆಯೇ ಈ ಪ್ರದೇಶದ ಮುಖಾಂತರ ಹಾದು ಹೋಗುತ್ತಿದ್ದರು ಮತ್ತು ಕೆಲವರು ಇಲ್ಲಿ ನೆಲೆಸಲು ಪ್ರಾರಂಭಿಸಿದ್ದರು. ಹಾಗೆಯೇ ಭಾರತೀಯ ವ್ಯಾಪಾರಿಗಳು ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಅಂದಿನ ಅಖಂಡ ಭಾರತದ ಉತ್ತರದ ವ್ಯಾಪಾರಿಗಳು ಒಳನಾಡಿನಿಂದ ಗುಜರಾತಿನ ಕರಾವಳಿಯಲ್ಲಿರುವ ಭರೂಚ್‌ ನಗರದಿಂದ ಅರಬಿ ಸಮುದ್ರ ಮಾರ್ಗವಾಗಿ ಪಯಣಿಸುತ್ತಿದ್ದರೆನ್ನುವುದಕ್ಕೆ ಇಲ್ಲಿ ದೊರೆತ ದಾಖಲೆಗಳು ಬಲವಾದ ಪುರಾವೆ ನೀಡುತ್ತವೆ. ಇದಕ್ಕೆ ಪೂರಕವೆಂಬಂತೆ ಹರಪ್ಪ ಮೊಹಂಜೋದಾರೋ ಸಮಯದಿಂದಲೂ ಅರಬ್‌ ರಾಷ್ಟ್ರಗಳೊಂದಿಗೆ ಭಾರತೀಯರು ವ್ಯಾಪಾರ ವಹಿವಾಟು ನಡೆಸುತ್ತಿದ್ದ ದಾಖಲೆಗಳು ಒಮಾನ್‌ನಲ್ಲಿ ದೊರೆತಿವೆ.

ದ್ವೀಪದಲ್ಲಿನ ಹೋಕ್‌ ಗುಹೆಯಲ್ಲಿ 4ನೇ ಶತಮಾನದ ವಿಗ್ರಹಗಳು ದೊರೆತಿವೆ. ಈ ಗುಹೆಯಲ್ಲಿ ಸಿಕೋಟ್ರಿ ಮಾತ ಎನ್ನುವ ದೇವರನ್ನು ಪೂಜಿಸುತ್ತಿದ್ದರು. ಭಾರತೀಯ ನಾವಿಕರು ಮತ್ತು ವ್ಯಾಪಾರಿಗಳು, ಸಮುದ್ರ ಮಾರ್ಗದಿಂದ ಹಾದು ಹೋಗುವಾಗ, ಯಾವುದೇ ಅಡಚಣೆಗಳು ಎದುರಾಗದಿರಲಿ ಎಂದು ಇಲ್ಲಿ ಪ್ರಾರ್ಥಿಸುತ್ತಿದ್ದರು. ಚಿಕ್ಕದಾದ ಮರದ ಹಡಗನ್ನು ಪೂಜಿಸಿ ದೇವತೆಯ ಪಾದದಲ್ಲಿಟ್ಟು ನಮಸ್ಕರಿಸುತ್ತಿದ್ದರಂತೆ. ಈಗ ಗುಜರಾತಿನಲ್ಲಿ ಕಂಡು ಬರುವ ಸಿಕೋಟ್ರಿ ಮಾತಾ ಎನ್ನುವ ದೇವಸ್ಥಾನಗಳು ಈ ಸೊಕೊಟ್ರಾದಲ್ಲಿ ಪ್ರಾರಂಭಿಸಿದ ನಂಬಿಕೆಯಿಂದ ಪೂಜಿಸಲ್ಪಡುತ್ತಿವೆ ಎಂದು ಹೇಳಲಾಗುತ್ತಿದೆ. ಈ ದೇವತೆ, ನಾವಿಕರು ಮತ್ತು ವ್ಯಾಪಾರಿಗಳಿಗೆ ರಕ್ಷಣೆ ನೀಡುತ್ತಿದ್ದಳಂತೆ.

ಸಾವಿರಾರು ವರ್ಷಗಳ ಹಿಂದಿನಿಂದಲೂ ಭಾರತದೊಂದಿಗಿನ ಸಂಬಂಧದ ಕುರಿತಾಗಿ ಹೇಳುವಾಗ, ಒಂದು ಮಹತ್ವದ ವಿಷಯ ಪ್ರಸ್ತಾವಿಸಬೇಕು. ನಾವು ದೈನಂದಿನ ಅಡುಗೆಯಲ್ಲಿ ಬಳಸುವ ತುಪ್ಪವನ್ನು ಇಲ್ಲಿಗೆ ಪರಿಚಯಿಸಿದವರು ಭಾರತೀಯರು. ಇಂದು ಅತೀ ಹೆಚ್ಚು, ಉತ್ಕೃಷ್ಟ ಮಟ್ಟದ ತುಪ್ಪ ಇಲ್ಲಿ ತಯಾರಾಗಿ ಪಕ್ಕದ ರಾಷ್ಟ್ರಗಳಿಗೆ ಇಲ್ಲಿಂದ ರಫ್ತು ಮಾಡಲಾಗುತ್ತದೆ.

ಪೋರ್ಚುಗೀಸರ ಆಕ್ರಮಣ: ಭಾರತದ ಸಂಪತ್ತಿನ ಬಗ್ಗೆ ಇದ್ದ ರೋಚಕ ವಿಷಯಗಳಿಂದ ಆಕರ್ಷಿತರಾಗಿದ್ದ ಪೋರ್ಚುಗೀಸರು, ನಾವಿಕ ವಾಸ್ಕೋಡಗಾಮನ ಮುಖಾಂತರ ಭಾರತಕ್ಕೆ ಸಮುದ್ರ ಮಾರ್ಗವನ್ನ ಕಂಡುಹಿಡಿಯುತ್ತಾರೆ, ಅನಂತರ ತಮ್ಮ ದೊಡ್ಡ ಸೈನ್ಯದೊಂದಿಗೆ ಆಫ್ರಿಕಾದಿಂದ ಹಿಡಿದು, ಯಮೆನ್‌, ಒಮಾನ್‌, ಪಾಕಿಸ್ಥಾನ್‌, ಭಾರತದ ಕರಾವಳಿ ಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆಯುತ್ತ ಹೋಗುತ್ತಾರೆ. ಹಿಂದೂ ಮಹಾಸಾಗರ, ಅರಬಿ ಸಮುದ್ರದ ಕಡಲುಮಾರ್ಗಗಳ ಮೇಲೆ ಸಂಪೂರ್ಣ ಹಿಡಿತವನ್ನು ಅವರು ಹೊಂದುತ್ತಾರೆ.

1507ರಲ್ಲಿ, ಅಫೊನ್ಸೊ ಡಿ ಅಲ್ಬುಕರ್ಕ್‌ ಅವರೊಂದಿಗೆ ಟ್ರಿಸ್ಟಾವೊ ಡ ಕುನ್ಹಾ ನೇತೃತ್ವದಲ್ಲಿ ಪೋರ್ಚುಗೀಸ್‌ ನೌಕಾಪಡೆಯು ಸೊಕೊಟ್ರಾದಲ್ಲಿ ಇಳಿದು ಅಲ್ಲಿ ಆಳ್ವಿಕೆ ನಡೆಸುತ್ತಿದ್ದ ಮೆಹರಾ ಸುಲ್ತಾನರ ವಿರುದ್ಧ ಯುದ್ಧ ಮಾಡಿ ಜಯಿಸಿದ ಅನಂತರ ಆ ಬಂದರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ.

ಭಾರತಕ್ಕೆ ಹೋಗುವ ಮಾರ್ಗದಲ್ಲಿ ಈ ಆಯಕಟ್ಟಿನ ಸ್ಥಳದಲ್ಲಿ ತಮ್ಮ ರಕ್ಷಣ ನೆಲೆಯನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು. ಆದರೆ ಇಲ್ಲಿನ ಸೂಕ್ತ ಬಂದರಿನ ಕೊರತೆ, ಕಠಿನ ಹವಮಾನ ಮತ್ತು ಬರಡು ಭೂಮಿಯಂತಹ ಪ್ರದೇಶ, ಇವೆಲ್ಲದರ ಕಾರಣದಿಂದ ಇವರ ರಕ್ಷಣ ಪಡೆಯು ಕ್ಷಾಮ ಮತ್ತು ಅನಾರೋಗ್ಯಕ್ಕೆ ತುತ್ತಾಯಿತು. ಇಲ್ಲಿ ಲಾಭಕ್ಕಿಂತ, ನಷ್ಟವೇ ಜಾಸ್ತಿಯೆಂದು, ಪೋರ್ಚುಗೀಸರು 1511ರಲ್ಲಿ ದ್ವೀಪವನ್ನು ತ್ಯಜಿಸುತ್ತಾರೆ. ಆಗ ಮೆಹರಾ ಸುಲ್ತಾನರು, ದ್ವೀಪದ ನಿಯಂತ್ರಣವನ್ನು ಮರಳಿ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ.

ಬ್ರಿಟಿಷರ ಆಳ್ವಿಕೆ: ಭಾರತವನ್ನು ವಸಾಹತುವನ್ನಾಗಿ ಬ್ರಿಟಿಷರು ತಮ್ಮ ಕೈವಶ ಮಾಡಿಕೊಂಡಿದ್ದಾಗ, ಹಲವು ಬಾರಿ ಈ ದ್ವೀಪವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಪ್ರಯತ್ನಿಸಿದರು 1834ರಲ್ಲಿ ಬ್ರಿಟಿಷರು ದ್ವೀಪವನ್ನು ಖರೀದಿಸಲು ಪ್ರಯತ್ನಿಸಿ ವಿಫ‌ಲರಾಗುತ್ತಾರೆ. ಅಲ್ಲಿನ ಸುಲ್ತಾನ ಮಾರಾಟಕ್ಕೆ ಒಪ್ಪುವುದಿಲ್ಲ. ಕೊನೆಗೆ 1880ರ ದಶಕದಲ್ಲಿ, ಇಲ್ಲಿನ ಸುಲ್ತಾನನು, ಬ್ರಿಟಿಷ್‌ ರಕ್ಷಣೆಯನ್ನು ಪಡೆಯಲು ಒಪ್ಪಿ ಕರಾರು ಮಾಡಿಕೊಳ್ಳುತ್ತಾನೆ. ಹತ್ತೊಂಬತ್ತನೇ ಶತಮಾನಕ್ಕೂ ಮೊದಲು, ಭಾರತ, ಪೂರ್ವ ಆಫ್ರಿಕ ದೇಶಗಳು ಮತ್ತು ಅರಬ್‌ ರಾಷ್ಟ್ರಗಳನ್ನು ಸಂಪರ್ಕಿಸಲು ಆಫ್ರಿಕಾ ಖಂಡವನ್ನು ಸುತ್ತಿ ಬಳಸಿ ಭಾರತವನ್ನು ತಲುಪಬೇಕಾಗುತಿತ್ತು. ಕಡಿಮೆ ಸಮಯ ಮತ್ತು ಇಂಧನವನ್ನು ಉಳಿಸುವ ನಿಟ್ಟಿನಲ್ಲಿ ಈಜಿಪ್ಟ್ ರಾಷ್ಟ್ರದ ಬಳಿ ಸೂಯೆಜ್‌ ಕಾಲುವೆಯನ್ನು ನಿರ್ಮಿಸಲಾಯಿತು. ಯಾವಾಗ ಸೂಯೆಜ್‌ ಕಾಲುವೆ ನಿರ್ಮಾಣವಾಯಿತೋ, ಆಗ ಈ ಸೊಕೊಟ್ರಾ ದ್ವೀಪದ ಮೇಲೆ ಬ್ರಿಟಿಷರು ಹಿಡಿತ ಸಾಧಿಸಿದರು. ಭಾರತಕ್ಕೆ ಸಮುದ್ರ ಮಾರ್ಗವಾಗಿ ತೆರಳುವ ಹಡಗುಗಳನ್ನು ನಿಯಂತ್ರಿಸಲು ದ್ವೀಪವು ನಿರ್ಣಾಯಕ ಪಾತ್ರವಹಿತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಮುಂಬಯಿ ಪಟ್ಟಣ ಪ್ರಮುಖ ಲ್ಯಾಂಡಿಂಗ್‌ ಬಂದರು ಆಗಿದ್ದರಿಂದ, ಸೊಕೊಟ್ರಾ ಬಾಂಬೆ ಪ್ರಸಿಡೆನ್ಸಿಯ ಭಾಗವಾಯಿತು ಮತ್ತು ಅಲ್ಲಿಂದ ಬ್ರಿಟಿಷ್‌ ಭಾರತದ ಭಾಗವಾಗಿ ಆಡಳಿತ ನಡೆಸಲಾಯಿತು.

ಇದು 1937 ವರೆಗೂ ಬಾಂಬೆ ಪ್ರಸಿಡೆನ್ಸಿಯ ಭಾಗವಾಗಿತ್ತು. ಅನಂತರ ಈ ದ್ವೀಪವನ್ನು ಪ್ರತ್ಯೇಕಿಸಿ ಗಲ್ಫ್‌ ಆಫ್ ಏಡೆನ್‌ ಪ್ರೊಟೆಕ್ಟರೇಟ್‌ ಅಡಿಯಲ್ಲಿ ಇರಿಸಲಾಯಿತು. ಭಾರತದಿಂದ ಬ್ರಿಟಿಷರು ಹೊರಟು ಹೋದ ಮೇಲೆ, ಈ ದ್ವೀಪವು ಸಹ ಸ್ವತಂತ್ರಗೊಂಡಿತು.

ರಷ್ಯನ್ನರ ಪ್ರಾಬಲ್ಯ: ಬ್ರಿಟಿಷ್‌ ಆಳ್ವಿಕೆಯ ಅಂತ್ಯವಾದ ಅನಂತರ, ಯೆಮನ್‌ ರಾಷ್ಟ್ರದಲ್ಲಿ ಶೀತಲ ಸಮರ ಪ್ರಾರಂಭ ವಾಯಿತು. ಕೊರಿಯಾ ದೇಶದಂತೆ, ಇಲ್ಲಿಯೂ ದೇಶ ಉತ್ತರ ಯಮೆನ್‌ ಮತ್ತು ದಕ್ಷಿಣ ಯಮೆನ್‌ ಎಂದು ಎರಡು ಭಾಗಗಳಾಗಿ ವಿಭಜಿಸಲ್ಪಟ್ಟಿತು. ಎರಡು ಕಡೆಯೂ ವಿಭಿನ್ನ ರಾಜಕೀಯ ಶಕ್ತಿಗಳು ಅಧಿಕಾರ ಪಡೆದವು. ದಕ್ಷಿಣ ಯೆಮೆನ್‌, ಸೊಕೊಟ್ರಾ ದ್ವೀಪದ ಜತೆಗೆ ಸೋವಿಯತ್‌ ಪ್ರಭಾವಕ್ಕೆ ಒಳಪಟ್ಟಿತು. ಮಾರ್ಕ್ಸ್ ವಾದಿಗಳು ಅಧಿಕಾರ ವಹಿಸಿಕೊಂಡಂತೆ, ಪೀಪಲ್ಸ್‌ ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್ ಯೆಮೆನ್‌ ಅನ್ನು ಘೋಷಿಸಲಾಯಿತು – ವಿಶ್ವದ ಏಕೈಕ ಅರಬ್‌ ಕಮ್ಯುನಿಸ್ಟ್‌ ರಾಜ್ಯವೆನ್ನುವ ಹೆಸರು ಪಡೆಯಿತು.

ರಷ್ಯನ್ನರು ಇಲ್ಲಿಗೆ ಬರಲು ಪ್ರಮುಖ ಕಾರಣ, ಈ ಪ್ರದೇಶದಲ್ಲಿದ್ದ ತೈಲ ನಿಕ್ಷೇಪಗಳು ಹಾಗೂ ಪ್ರಪಂಚದ ಪ್ರಮುಖ ಸಮುದ್ರ ಮಾರ್ಗವೆಂದು ಗುರುತಿಸಿದ್ದ ಕಾರಣದಿಂದ ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳ ಮೇಲೆ ಕಣ್ಣಿಡಲು ತಮ್ಮ ರಕ್ಷಣ ನೆಲೆಯನ್ನು ಇಲ್ಲಿ ಸ್ಥಾಪಿಸಿದರು. ಅನಂತರ ದ್ವೀಪವನ್ನು ಮುಕ್ತ ಜಗತ್ತಿಗೆ ನಿರ್ಬಂಧ ಹೇರಿ, ಇದರ ಬಳಕೆಯನ್ನು ಕೇವಲ ಸೋವಿಯತ್‌ ಮತ್ತು ದಕ್ಷಿಣ ಯೆಮೆನ್‌ ಮಿಲಿಟರಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ.

ಯೆಮೆನ್‌ ಗಣರಾಜ್ಯ:
ಈ ಮೊದಲು ವಿಭಜನೆಗೊಂಡಿದ್ದ ಯೆಮೆನ್‌ ರಾಷ್ಟ್ರ, 1990ರಲ್ಲಿ ಸೋವಿಯತ್‌ ರಾಷ್ಟ್ರಗಳ ಒಕ್ಕೂಟದ ಪತನದ ಅನಂತರ, ಪುನರ್‌ ಏಕೀಕರಣಗೊಂಡಿತು. ಬಳಿಕ ಮಾತ್ರ ದ್ವೀಪವನ್ನು ಮತ್ತೂಮ್ಮೆ ಜಗತ್ತಿಗೆ ತೆರೆಯಲಾಯಿತು. ಅಂದಿನಿಂದ ಈ ದ್ವೀಪ, ಪ್ರವಾಸಿಗರನ್ನು, ಸಂಶೋಧಕರು ಮತ್ತು ಮಾನವಶಾಸ್ತ್ರಜ್ಞರು ಭೇಟಿ ನೀಡಿ ಸಂಶೋಧನೆ ನಡೆಸುತ್ತಿದ್ದಾರೆ. ಅದ್ಭುತವಾದ ಸಮುದ್ರ ತೀರಗಳು, ವಿಶಿಷ್ಟ ಜಾತಿಯ ಗಿಡಮರಗಳು ಮತ್ತು ದೊಡ್ಡದಾದ ಅತೀ ಸುಂದರ ಕಣಿವೆ ಪ್ರದೇಶಗಳು ಇಲ್ಲಿದ್ದರೂ, ಯೆಮೆನ್‌ನಲ್ಲಿನ ರಾಜಕೀಯ ಅನಿಶ್ಚಿತತೆ, ಆಂತರಿಕ ಯುದ್ಧಗಳು ಮತ್ತು ಪಕ್ಕದ ಸೋಮಾಲಿಯಾ ಕಡಲ್ಗಳ್ಳರ ಹಾವಳಿಯಿಂದ ಪ್ರವಾಸೋದ್ಯಮದಿಂದ ಈ ದ್ವೀಪವು ಜನರಿಂದ ದೂರವೇ ಉಳಿದಿದೆ. ಅಭಿವೃದ್ಧಿಯು ಮರೀಚಿಕೆಯಾಗಿದೆ.

*ಪಿ.ಎಸ್‌.ರಂಗನಾಥ, ಮಸ್ಕತ್‌

ಟಾಪ್ ನ್ಯೂಸ್

ಮೂಳೂರು-ಅಡ್ಡೂರು ಜೋಡುಕರೆ ಕಂಬಳ: ಪ್ರಥಮ ವರ್ಷದ “ಗುರುಪುರ ಕಂಬಳ ಸಂಭ್ರಮ’ಕ್ಕೆ ಚಾಲನೆ

ಮೂಳೂರು-ಅಡ್ಡೂರು ಜೋಡುಕರೆ ಕಂಬಳ: ಪ್ರಥಮ ವರ್ಷದ “ಗುರುಪುರ ಕಂಬಳ ಸಂಭ್ರಮ’ಕ್ಕೆ ಚಾಲನೆ

Moodabidri ಪೋಕ್ಸೊ ಪ್ರಕರಣ: ತಲೆಮರೆಸಿಕೊಂಡಿದ್ದ ಶಿಕ್ಷಕ ಸೆರೆ

Moodabidri ಪೋಕ್ಸೊ ಪ್ರಕರಣ: ತಲೆಮರೆಸಿಕೊಂಡಿದ್ದ ಶಿಕ್ಷಕ ಸೆರೆ

1-qwewqeqw

Hockey; ಐದು ಪಂದ್ಯಗಳ ಸರಣಿ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ನಾಲ್ಕನೇ ಸೋಲು

Surathkal ಕಳ್ಳನ ಬಂಧನ: 3 ಲಕ್ಷ ರೂ. ಮೌಲ್ಯದ ಸೊತ್ತುಗಳ ವಶ

Surathkal ಕಳ್ಳನ ಬಂಧನ: 3 ಲಕ್ಷ ರೂ. ಮೌಲ್ಯದ ಸೊತ್ತುಗಳ ವಶ

1-wqewqeqw

Paris Olympics: ಹುದ್ದೆ ತ್ಯಜಿಸಿದ ಮೇರಿಕಾಮ್‌

CongressLok Sabha Polls 2024: ಮನೆ ಮನೆಗೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌

Lok Sabha Polls 2024: ಮನೆ ಮನೆಗೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌

1-kash-1

Congress ಪ್ರಭಾವಿ ಶಾಸಕ‌ ಕಾಶಪ್ಪನವರ ಸಂಕಷ್ಟ ಪರಿಹಾರಕ್ಕೆ ಅಯ್ಯಪ್ಪನ ಮೊರೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sulthan Bathery: ವಯನಾಡ್ ನ ಗಣಪತಿವಟ್ಟಂ “ಸುಲ್ತಾನ್‌ ಬತ್ತೇರಿ”ಯಾಗಿ ಬದಲಾಗಿದ್ದು ಹೇಗೆ?

Sulthan Bathery: ವಯನಾಡ್ ನ ಗಣಪತಿವಟ್ಟಂ “ಸುಲ್ತಾನ್‌ ಬತ್ತೇರಿ”ಯಾಗಿ ಬದಲಾಗಿದ್ದು ಹೇಗೆ?

Cholera ಆತಂಕ ಹೆಚ್ಚಿಸಿದ ಕಾಲರಾ..; ರೋಗ ಲಕ್ಷಣಗಳೇನು? ತಡೆಯುವ ವಿಧಾನವೇನು?

Cholera; ಆತಂಕ ಹೆಚ್ಚಿಸಿದ ಕಾಲರಾ..; ರೋಗ ಲಕ್ಷಣಗಳೇನು? ತಡೆಯುವ ವಿಧಾನವೇನು?

Queen Elizabeth 2 ship-ದುಬೈ ಕಡಲಿನ ಮೇಲೆ ತೇಲಾಡುವ: ಅರಮನೆ ಕ್ವೀನ್‌ ಎಲಿಝಬೆತ್‌-2

Queen Elizabeth 2 ship-ದುಬೈ ಕಡಲಿನ ಮೇಲೆ ತೇಲಾಡುವ: ಅರಮನೆ ಕ್ವೀನ್‌ ಎಲಿಝಬೆತ್‌-2

Who is Angkrish Raghuvanshi?

IPL 2024: ಮೊದಲ ಪಂದ್ಯದಲ್ಲೇ ಸದ್ದು ಮಾಡಿದ 18ರ ಹುಡುಗ; ಯಾರು ಈ ಆಂಗ್ಕ್ರಿಶ್ ರಘುವಂಶಿ?

Snakes Village; ಇದು ಹಾವುಗಳ ಗ್ರಾಮ, ಇಲ್ಲಿ ಜನಸಂಖ್ಯೆಗಿಂತ ಹೆಚ್ಚಿದೆಯಂತೆ ಹಾವುಗಳ ಸಂಖ್ಯೆ

Snakes Village; ಇದು ಹಾವುಗಳ ಗ್ರಾಮ… ಇಲ್ಲಿ ಹಾವುಗಳು ಕೂಡ ಮನೆಯ ಸದಸ್ಯರೇ

MUST WATCH

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

ಹೊಸ ಸೇರ್ಪಡೆ

ಮೂಳೂರು-ಅಡ್ಡೂರು ಜೋಡುಕರೆ ಕಂಬಳ: ಪ್ರಥಮ ವರ್ಷದ “ಗುರುಪುರ ಕಂಬಳ ಸಂಭ್ರಮ’ಕ್ಕೆ ಚಾಲನೆ

ಮೂಳೂರು-ಅಡ್ಡೂರು ಜೋಡುಕರೆ ಕಂಬಳ: ಪ್ರಥಮ ವರ್ಷದ “ಗುರುಪುರ ಕಂಬಳ ಸಂಭ್ರಮ’ಕ್ಕೆ ಚಾಲನೆ

Moodabidri ಪೋಕ್ಸೊ ಪ್ರಕರಣ: ತಲೆಮರೆಸಿಕೊಂಡಿದ್ದ ಶಿಕ್ಷಕ ಸೆರೆ

Moodabidri ಪೋಕ್ಸೊ ಪ್ರಕರಣ: ತಲೆಮರೆಸಿಕೊಂಡಿದ್ದ ಶಿಕ್ಷಕ ಸೆರೆ

1-qwewqeqw

Hockey; ಐದು ಪಂದ್ಯಗಳ ಸರಣಿ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ನಾಲ್ಕನೇ ಸೋಲು

Surathkal ಕಳ್ಳನ ಬಂಧನ: 3 ಲಕ್ಷ ರೂ. ಮೌಲ್ಯದ ಸೊತ್ತುಗಳ ವಶ

Surathkal ಕಳ್ಳನ ಬಂಧನ: 3 ಲಕ್ಷ ರೂ. ಮೌಲ್ಯದ ಸೊತ್ತುಗಳ ವಶ

1-wqewqeqw

Paris Olympics: ಹುದ್ದೆ ತ್ಯಜಿಸಿದ ಮೇರಿಕಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.