ವನಿತಾ ಹಾಕಿ ತಂಡದ ಮಾಜಿ ನಾಯಕಿ ಎಲ್ವೆರಾ ಬ್ರಿಟೊ ನಿಧನ
Team Udayavani, Apr 26, 2022, 11:00 PM IST
ಬೆಂಗಳೂರು: ಭಾರತೀಯ ವನಿತಾ ಹಾಕಿ ತಂಡದ ಮಾಜಿ ನಾಯಕಿ ಎಲ್ವೆರಾ ಬ್ರಿಟೊ (81) ಅವರು ಮಂಗಳವಾರ ನಿಧನ ಹೊಂದಿದರು.
ಖ್ಯಾತ ತ್ರಿವಳಿ ಬ್ರಿಟೊ ಸಹೋದರಿಯರಲ್ಲಿ (ಇನ್ನಿಬ್ಬರು ರಿಟಾ, ಮಾಯಿ) ಹಿರಿಯರಾದ ಎಲ್ವೆರಾ 1960ರಿಂದ 1967ರ ವರೆಗೆ ದೇಶೀಯ ಹಾಕಿ ಕ್ರೀಡೆಯಲ್ಲಿ ಬಹಳಷ್ಟು ಸಾಧನೆ ಮಾಡಿದ್ದರು. ಅವರ ಸಾಧನೆಯಿಂದ ಕರ್ನಾಟಕ ತಂಡವು ಏಳು ಬಾರಿ ರಾಷ್ಟ್ರೀಯ ಪ್ರಶಸ್ತಿ ಜಯಿಸಿತ್ತು. ಅವರು ಆಸ್ಟ್ರೇಲಿಯ, ಶ್ರೀಲಂಕಾ ಮತ್ತು ಜಪಾನ್ ವಿರುದ್ಧದ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಇದನ್ನೂ ಓದಿ:ಬ್ಯಾಡ್ಮಿಂಟನ್ ಏಷ್ಯ ಚಾಂಪಿಯನ್ಶಿಪ್: ಸಾತ್ವಿಕ್-ಚಿರಾಗ್ ದ್ವಿತೀಯ ಸುತ್ತಿಗೆ
1965ರಲ್ಲಿ ಅವರು ಅರ್ಜುನ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು. ಈ ಪ್ರಶಸ್ತಿಗೆ ಭಾಜನರಾದ ಎರಡನೇ ಹಾಕಿ ವನಿತೆಯೆಂಬ ಗೌರವಕ್ಕೆ ಪಾತ್ರರಾಗಿದ್ದರು. ಅದಕ್ಕಿಂತ ಮೊದಲು ಅನ್ನೆ ಲಮ್ಸ್ಡೆನ್ (1961) ಈ ಪ್ರಶಸ್ತಿ ಪಡೆದಿದ್ದರು. ತನ್ನ ಸಹೋದರಿಯರಂತೆ ಎಲ್ವೆರಾ ಕೂಡ ಜೀವನದುದ್ದಕ್ಕೂ ಒಂಟಿಯಾಗಿದ್ದರು.