ಜಲ್ಲಿಕಟ್ಟು ಎತ್ತುಗಳ ಮೇಲೆ ಅಮಾನುಷ ದಾಳಿ: ವ್ಯಕ್ತಿ ಬಂಧನ
Team Udayavani, Jan 20, 2022, 6:35 PM IST
ಮಧುರೈ: ತಮಿಳುನಾಡಿನ ಮಧುರೈ ಜಿಲ್ಲೆಯ ಪಲಮೇಡು ಜಲ್ಲಿಕಟ್ಟು ಎಂಬಲ್ಲಿ ಗೂಳಿಗಳ ಮೇಲೆ ದೊಣ್ಣೆ ಯಿಂದ ಅಮಾನುಷವಾಗಿ ದಾಳಿ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮಧುರೈ ಪೊಲೀಸ್ ವರಿಷ್ಠಾಧಿಕಾರಿ ವಿ ಭಾಸ್ಕರನ್ ಗುರುವಾರ ತಿಳಿಸಿದ್ದಾರೆ.
ಜನವರಿ 15 ರಂದು ಗೂಳಿಗಳ ಮೇಲೆ ದಾಳಿ ಮಾಡಿದ್ದಕ್ಕಾಗಿ ‘ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪಾಲಮೇಡು ಜಲ್ಲಿಕಟ್ಟು ವೇಳೆ ಗೂಳಿಗಳ ಮೇಲೆ ದೊಣ್ಣೆ ಪ್ರಹಾರ ನಡೆಸಿದ ಆರೋಪದ ಮೇಲೆ ‘ಪ್ರಾಣಿ ಹಿಂಸೆ ತಡೆ ಕಾಯ್ದೆ’ಯಡಿ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಮಧುರೈ ಪೊಲೀಸರು ತನಿಖೆ ನಡೆಸಿ ಬಂಧಿಸಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಘಟನೆಯ ವಿಡಿಯೋ ಕೂಡ ವೈರಲ್ ಆಗಿದ್ದು, ಒಂದಾದರ ಮೇಲೆ ಒಂದರಂತೆ ಗೂಳಿಗಳ ತಲೆಗೆ ಅಮಾನುಷವಾಗಿ ಬಡಿಯಲಾಗಿದೆ.
ಜಲ್ಲಿಕಟ್ಟು ತಮಿಳುನಾಡಿನ ಸಾಂಪ್ರದಾಯಿಕ ಗೂಳಿ ಪಳಗಿಸುವ ಕ್ರೀಡೆಯಾಗಿದ್ದು, ರಾಜ್ಯದ ಹಲವಾರು ಭಾಗಗಳಲ್ಲಿ ಸುಗ್ಗಿಯ ಹಬ್ಬ ಪೊಂಗಲ್‌ನ ಆಚರಣೆಯ ಭಾಗವಾಗಿ ಆಡಲಾಗುತ್ತದೆ. ಕ್ರೀಡೆಯಲ್ಲಿ ಗೂಳಿಯನ್ನು ಗುಂಪಿನೊಳಗೆ ಬಿಡಲಾಗುತ್ತದೆ ಮತ್ತು ಭಾಗವಹಿಸಿದ ಹಲವು ಯುವಕರು ಅದನ್ನು ಪಳಗಿಸುವ ಸಲುವಾಗಿ ಗೂಳಿಯ ಭುಜವನ್ನು ಹಿಡಿಯಲು ಪ್ರಯತ್ನಿಸುತ್ತಾರೆ.