US: ಬ್ರಿಟನ್ನಲ್ಲಿ ಹೆಚ್ಚು ವಿನಾಶದ ಅಣ್ವಸ್ತ್ರ ವ್ಯವಸ್ಥೆ ಸ್ಥಾಪನೆಗೆ ಅಮೆರಿಕ ಚಿಂತನೆ?
ಸಮರ ಕೈಮೀರಿದ್ದರಿಂದ ಈ ಕ್ರಮ
Team Udayavani, Jan 28, 2024, 1:01 AM IST
ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್, ಇಸ್ರೇಲ್-ಹಮಾಸ್ ಸಮರ ಕೈಮೀರಿರುವಂತೆಯೇ ಅಮೆರಿಕ ಯು.ಕೆ.ಯಲ್ಲಿ ಅಣ್ವಸ್ತ್ರ ವ್ಯವಸ್ಥೆ ಸ್ಥಾಪಿಸಲು ಮುಂದಾಗಿದೆ. ಈ ವ್ಯವಸ್ಥೆಯಲ್ಲಿ 1945ರಲ್ಲಿ ಹಿರೋಶಿಮಾದಲ್ಲಿ ಬೀಳಿಸಿದ ಅಣ್ವಸ್ತ್ರ ಬಾಂಬ್ಗಿಂತಲೂ ಮೂರು ಪಟ್ಟು ಹೆಚ್ಚು ವಿನಾಶಕಾರಿಯಾದ ಕ್ಷಿಪಣಿ ಸಿಡಿತಲೆಗಳ ಸಂಗ್ರಹ ಇರಲಿದೆ.
2008ರಲ್ಲಿ ರಷ್ಯಾ ಜತೆಗಿನ ಶೀತಲಸಮರದ ಪರಿಸ್ಥಿತಿ ಸುಧಾರಿಸಿದೆ ಎಂದು ಭಾವಿಸಿ ಅಮೆರಿಕವು ಅಣ್ವಸ್ತ್ರ ಕ್ಷಿಪಣಿಗಳನ್ನು ಬ್ರಿಟನ್ನಿಂದ ವಾಪಸ್ ಪಡೆದಿತ್ತು. ಇದೀಗ ರಷ್ಯಾ ಮತ್ತು ನ್ಯಾಟೋ ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸುವ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅಣ್ವಸ್ತ್ರ ವ್ಯವಸ್ಥೆ ಸ್ಥಾಪನೆಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಬ್ರಿಟನ್ನ ಸಫೋಲ್ಕ್ನಲ್ಲಿರುವ ಲೆಕನನ್ಹೀತ್ ವಾಯುನೆಲೆಯಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ಸ್ಥಾಪಿಸುವ ಸಾಧ್ಯತೆ ಇದೆ. ಈ ವರದಿಯನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಕಚೇರಿ ತಿರಸ್ಕರಿಸಿದ್ದು, ಅಂಥ ಒಪ್ಪಂದ ಮಾಡಿಕೊಳ್ಳುವ ಇರಾದೆಯೇ ಸರಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದೆ.