ರಂಗೇರಿದ ಕಣ, ಆರೋಪಗಳಲ್ಲೇ ಕಾಲಹರಣ

Team Udayavani, Nov 17, 2019, 3:09 AM IST

ಡಿ.5ರಂದು ನಡೆಯಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಚುರುಕುಗೊಂಡಿದೆ. ಇದೇ ವೇಳೆ, ರಾಜಕೀಯ ನಾಯಕರ ಆರೋಪ, ಪ್ರತ್ಯಾರೋಪದ ಮಾತುಗಳು ಚುನಾವಣಾ ಪ್ರಚಾರಕ್ಕೆ ಕಳೆ ಕಟ್ಟುತ್ತಿದ್ದು, ಕಣ ನಿಧಾನವಾಗಿ ರಂಗೇರುತ್ತಿದೆ. ಮೈಸೂರು, ಹೊಸಪೇಟೆಗಳಲ್ಲಿ ಮಾತನಾಡಿದ ಸಿದ್ದರಾಮಯ್ಯನವರು, ಯಡಿಯೂರಪ್ಪ, ಅನರ್ಹ ಶಾಸಕರ ವಿರುದ್ಧ ಟೀಕಾಪ್ರಹಾರ ನಡೆಸಿದರೆ, ಮೈಸೂರಿನಲ್ಲಿ ಮಾತನಾಡಿದ ಬಿಜೆಪಿ ಸಂಸದ ಶ್ರೀನಿವಾಸ್‌ ಪ್ರಸಾದ್‌, ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ ಅವರು, ಸಿದ್ದು ಅವರನ್ನು ಗೇಲಿ ಮಾಡಿದರು. ಇದೇ ವೇಳೆ, ಹುಣಸೂರಿನಲ್ಲಿ ಮಾತನಾಡಿದ ಎಚ್‌.ವಿಶ್ವನಾಥ್‌ ಅವರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ವಿರುದ್ಧ ಹರಿಹಾಯ್ದರು. ಇದೇ ವೇಳೆ, ಗೋಕಾಕದಲ್ಲಿ ತಮ್ಮ ಟೀಕಾಪ್ರಹಾರ ಮುಂದುವರಿಸಿದ ರಮೇಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಲಖನ್‌ ಜಾರಕಿಹೊಳಿ, ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ವಾಕ್‌ಪ್ರಹಾರ ನಡೆಸಿದರು. ಪರಸ್ಪರರ ವಿರುದ್ಧ ಆರೋಪಗಳಲ್ಲೇ ಕಾಲಹರಣ ಮಾಡಿದ ರಾಜಕೀಯ ನಾಯಕರ ನಡುವಿನ ಮಾತಿನ ಚಕಮಕಿಯ ಸ್ಯಾಂಪಲ್‌ ಇದು.

ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ
ಬೆಳಗಾವಿ: “ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ ಹಸ್ತಕ್ಷೇಪ ಮಾಡಲು ಆರಂಭಿಸಿ, ನನ್ನ ತಲೆ ಮೇಲೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಕೂರಿಸಲು ಯತ್ನಿಸಿದ್ದಾರೆ. ಆಗ ನಾನೇಕೆ ಸುಮ್ಮನಿರಬೇಕು’ ಎಂದು ಗೋಕಾಕ್‌ನ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಕಿಡಿ ಕಾರಿದ್ದಾರೆ. ಗೋಕಾಕದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ ಜತೆಗೆ ಮುಂಚೆ ಉತ್ತಮ ಸಂಬಂಧವಿತ್ತು. ಈಗ ಜಗಳಕ್ಕೆ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪವೇ ಕಾರಣವಾಗಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಸೀನಿಯರ್‌ ಆದ ಬಳಿಕ ಮುಖ್ಯ ಮಂತ್ರಿ ಮಾಡಲು ನಮ್ಮದೇನೂ ಅಭ್ಯಂತರ ವಿಲ್ಲ.

ನನ್ನ ತಲೆ ಮೇಲೆ ಈಗಲೇ ಕೂರಿಸಲು ಮುಂದಾ ದರೆ ಹೇಗೆ ಒಪ್ಪಲು ಸಾಧ್ಯ ಎಂದು ಟೀಕಿಸಿದರು. ತೋಳ ಬಂತು ತೋಳ ಅಲ್ಲ, ಈಗ ಹುಲಿ ಬಂತು ಹುಲಿಯಾಗಿದೆ ಎಂದು ಅವರು, “ಆಪರೇಷನ್‌ ಕಮಲ’ದ ವ್ಯಂಗ್ಯ ಮಾಡಿದ್ದ ಶಾಸಕಿ ಹೆಬ್ಬಾಳಕರ ಅವರಿಗೆ ಟಾಂಗ್‌ ನೀಡಿದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ಬಂದಾಗ ಹೆಬ್ಬಾಳಕರಗೆ ಯಾವುದೇ ಸ್ಥಾನಮಾನ ನೀಡದಂತೆ ಸಿದ್ದರಾಮಯ್ಯ, ಡಿಕೆಶಿ ಹಾಗೂ ದಿನೇಶ ಗುಂಡೂರಾವ್‌ ಸಮ್ಮುಖದಲ್ಲಿಯೇ ನಿರ್ಧಾರವಾಗಿತ್ತು. ಆದರೆ, ನಿಗಮ-ಮಂಡಳಿ ಕೊಟ್ಟರು. ಮುಂದೆ ಸಚಿವ ಸ್ಥಾನವೂ ಕೊಡಬಹುದಲ್ವೇ? ಎಂದು ಕಿಡಿಕಾರಿದರು.

ಹೆಬ್ಬಾಳಕರಗೆ ಟಿಕೆಟ್‌ ಕೊಡಿಸಿ ತಪ್ಪು ಮಾಡಿದೆ: ಹೆಬ್ಬಾಳಕರ ಸಚಿವೆಯಾದರೆ ಹೊಟ್ಟೆಕಿಚ್ಚು ಪಡುವ ಸಣ್ಣ ಮನುಷ್ಯ ನಾನಲ್ಲ. ಆಕೆಯ ಹಣೆಬರಹದಲ್ಲಿ ಇದ್ದರೆ ಸಚಿವೆಯಾಗಲಿ ತೊಂದರೆ ಇಲ್ಲ. ಆದರೆ, ಆಕೆಗಾಗಿ ದುಡಿದವರ ಬಗ್ಗೆ ಸ್ವಲ್ಪ ಚಿಂತೆ ಮಾಡಬೇಕಿತ್ತು. “ಟಿಕೆಟ್‌ ಕೊಡಿಸಬೇಡ, ಹೆಬ್ಬಾಳಕರ ಕೆಟ್ಟವಳು’ ಎಂದು ಬಹಳಷ್ಟು ಜನ ಹೇಳಿದರೂ ನಾನು ಕೇಳದೇ ಟಿಕೆಟ್‌ ಕೊಡಿಸಿ, ಗೆಲ್ಲಿಸಿ ತಪ್ಪು ಮಾಡಿದೆ ಎಂದು ರಮೇಶ ಹೇಳಿದರು.

ಕಾಂಗ್ರೆಸ್‌ ಪಕ್ಷ ಡಿಕೆಶಿ ಕೈಯಲ್ಲಿದೆ, ಇನ್ನು ಮುಂದೆ ನನ್ನದೇ ರಾಜ್ಯ ಎನ್ನುವ ಅಹಂಕಾರ ಹೆಬ್ಬಾಳ್ಕರಗೆ ಬಂತು. ರಾಜಕಾರಣದಲ್ಲಿ ಯಾರು ದೊಡ್ಡವರು, ಸಣ್ಣವರು ಎಂಬುದು ಹೆಬ್ಬಾಳಕರಗೆ ತಿಳಿಯಲಿಲ್ಲ. ಈ ಬಗ್ಗೆ ಸತೀಶ ಜಾರಕಿಹೊಳಿ ಹೋರಾಟ ಮಾಡಲಿಲ್ಲ, ಆತ ಹೋರಾಟಗಾರ ಅಲ್ಲ. ಹೆಬ್ಬಾಳಕರ ಮನೆಗೆ ಸತೀಶ ಚಹಾ ಕುಡಿಯೋಕೆ ಹೋಗುತ್ತಿದ್ದರು. ಹೆಬ್ಬಾಳಕರ ಪ್ರಭಾವಿ ಆಗಲು ಡಿಕೆಶಿ ಅಷ್ಟೇ ಅಲ್ಲ, ನಾವೂ ಕಾರಣರು ಎಂದು ಹೇಳಿದರು.

ಬಿಜೆಪಿ ಸೇರುವ ಹಿಂದಿನ ದಿನ ನಿದ್ದೆನೇ ಬರ್ಲಿಲ್ಲ: ಸುಪ್ರೀಂಕೋರ್ಟ್‌ ತೀರ್ಪು ಬಂದ ಬಳಿಕ ಬಿಜೆಪಿ ಸೇರ್ಪಡೆ ಆಗುವ ಹಿಂದಿನ ದಿನ ಒಂದು ನಿಮಿಷವೂ ನಿದ್ದೆ ಬಂದಿರಲಿಲ್ಲ. ಅನೇಕ ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದ ನಾನು ಇಂದಿರಾ ಗಾಂಧಿ , ರಾಜೀವ್‌ ಗಾಂಧಿ ಅವರ ಕಟ್ಟಾ ಅಭಿಮಾನಿ. ಈಗ ಕಾಂಗ್ರೆಸ್‌ನಲ್ಲಿ ಬ್ಯಾಗ್‌ ಹಿಡಿದು ಬಾಗಿಲು ಕಾಯುವವರು ಲೀಡರ್‌ ಆಗುತ್ತಿದ್ದಾರೆ. ಮಾಸ್‌ ಲೀಡರ್‌ಗಳಿಗೆ ಯಾವುದೇ ಬೆಲೆ ಇಲ್ಲ ಎಂದರು.

ಕಾಂಗ್ರೆಸ್‌ನಲ್ಲಿಯೇ ಇದ್ದಿದ್ದರೆ ನನ್ನನ್ನು ಸಂಪೂರ್ಣ ನಿರ್ನಾಮ ಮಾಡುತ್ತಿದ್ದರು ಎಂದು ಭಾವುಕರಾದ ರಮೇಶ ಅವರು, ಸಿದ್ದರಾಮಯ್ಯ ಪಕ್ಷವನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ದರ್ಪದ, ಡಿಕೆಶಿ ಪೋಸ್‌ ಕೋಡೋ ಲೀಡರ್‌ ಮಾತ್ರ. ಖರ್ಗೆ ಬ್ಲ್ಯಾಕ್‌ವೆುàಲ್‌ ಮಾಡಲ್ಲ, ಧೈರ್ಯವನ್ನೂ ಮಾಡಲ್ಲ. ಆದರೆ, ಸಿದ್ದರಾಮಯ್ಯ ಎರಡನ್ನೂ ಮಾಡಿ ಸಿಎಂ ಆಗಿಬಿಟ್ಟರು. ನನ್ನ ದು:ಖ ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ದು:ಖ ನುಂಗಿಕೊಳ್ಳ ಬೇಕಾದ ಅನಿವಾರ್ಯ ಸ್ಥಿತಿ ಇದೆ ಎಂದರು.

ಅಶೋಕ ಪೂಜಾರಿ ಮನವೊಲಿಕೆ ಯತ್ನ
ಗೋಕಾಕ: ಗೋಕಾಕ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ವಂಚಿತರಾಗಿರುವ ಅಶೋಕ ಪೂಜಾರಿಯವರ ಮುನಿಸು ಶಮನಕ್ಕೆ ಕೇಂದ್ರ ಸಚಿವ ಸುರೇಶ ಅಂಗಡಿ ಅವರನ್ನೊಳಗೊಂಡು ಹಲವು ನಾಯಕರು ಶನಿವಾರ ಪ್ರಯತ್ನ ನಡೆಸಿದ್ದಾರೆ. ಭಾನುವಾರ ಸಂಜೆ ಯೊಳಗೆ ತಮ್ಮ ನಿರ್ಧಾರ ತಿಳಿಸುವುದಾಗಿ ಅಶೋಕ ಪೂಜಾರಿ ಹೇಳಿದ್ದಾರೆ.

ಈ ನಡುವೆ, ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಕೂಡ ಪುತ್ರ ಅಮರನಾಥ ಅವರೊಂದಿಗೆ ಮಾತುಕತೆ ನಡೆಸಿದರು. ಪೂಜಾರಿ ತಮಗೆ ಬೆಂಬಲ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದು, ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರಕಿಸಲು ಪ್ರಯತ್ನಿಸುವುದಾಗಿ ಹೇಳಿದರು. ಇದೇ ಹಿನ್ನೆಲೆಯಲ್ಲಿ ಶನಿವಾರ ಬೆಂಬಲಿಗರ ಸಭೆ ನಡೆಸಿದ ಅಶೋಕ ಪೂಜಾರಿ ಅವರು, “ಜಾರಕಿಹೊಳಿ ಬ್ರದರ್ಸ್‌ ಬಳಿ ಹಣ ಪಡೆದು ಸೈಲೆಂಟ್‌ ಆಗಿಲ್ಲ’ ಎಂದು ಹೇಳಿ ಮನೆ ದೇವರ ಮೇಲೆ ಆಣೆ ಪ್ರಮಾಣ ಮಾಡಿ, ಕಣ್ಣೀರು ಸುರಿಸಿದ್ದಾರೆ.

ದೋಸ್ತಿ ಸರ್ಕಾರದ ಅತೃಪ್ತ ಶಾಸಕ ಸಿದ್ದು
ಮೈಸೂರು: ಮೈತ್ರಿ ಸರ್ಕಾರದ ಅತೃಪ್ತ ಶಾಸಕ ಸಿದ್ದು ಎಂದು ಸಂಸದ ಶ್ರೀನಿವಾಸ್‌ ಪ್ರಸಾದ್‌ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್‌ಗೆ ಮುಖ್ಯಮಂತ್ರಿ, ಹಣಕಾಸು, ಇಂಧನ ಖಾತೆಗಳನ್ನೂ ಕೊಟ್ಟರು. ಸ್ವತ: ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಮುಖ್ಯಮಂತ್ರಿಗೆ 20-30 ಪತ್ರ ಬರೆದರೆ. ಆದರೆ, ಒಂದಕ್ಕೂ ಉತ್ತರ ಬರೆಯಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ, ದೋಸ್ತಿ ಸರ್ಕಾರದಲ್ಲಿ ಸಿದ್ದರಾಮಯ್ಯ ಅತೃಪ್ತ ಶಾಸಕರಾಗಿರಲಿಲ್ವಾ ಎಂದು ಪ್ರಶ್ನಿಸಿದರು.

34 ಸ್ಥಾನ ಗೆದ್ದಿದ್ದ ಜೆಡಿಎಸ್‌ಗೆ ಗುಲಾಂ ನಬಿ ಆಜಾದ್‌, ಅಶೋಕ್‌ ಗೆಲ್ಹೋಟ್‌ ಬಂದು ಕಾಂಗ್ರೆಸ್‌ ಪಕ್ಷದಿಂದ ಬೇಷರತ್‌ ಬೆಂಬಲವನ್ನು ಘೋಷಿಸಿ ದಾಗ ಸಿದ್ದರಾಮಯ್ಯ ಅವರನ್ನು ಕೇಳಿಕೊಟ್ಟರಾ? ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಸಿದ್ದರಾಮಯ್ಯ ಯಾವುದೋ ಮೂಲೆಯಲ್ಲಿ ತೂಕಡಿಸುತ್ತಾ ಕುಳಿತಿದ್ದರು ಎಂದು ಲೇವಡಿ ಮಾಡಿದರು. ದೋಸ್ತಿ ಸರ್ಕಾರ ಬಿದ್ದ ಮೇಲೆ ಎಚ್‌.ಡಿ.ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಿದ್ದ ರಾಮಯ್ಯ ಅವರು ವಾಚಾಮ ಗೋಚರವಾಗಿ ಬೈದಾಡಿಕೊಳ್ಳುತ್ತಿದ್ದಾರೆ ಎಂದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೋದಲ್ಲಿ ಬಂದಲ್ಲಿ ನಾನೇ ಮುಂದಿನ ಮುಖ್ಯಮಂತ್ರಿ, ಮುಂದಿನ ಬಾರಿ ದಸರಾ ಉದ್ಘಾಟನೆಯನ್ನೂ ನಾನೇ ಮಾಡುತ್ತೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಸಿದ್ದರಾಮಯ್ಯ ಸಂಪುಟದ 17 ಮಂತ್ರಿಗಳು ನೆಗೆದು ಬಿದ್ರು, ಕಾಂಗ್ರೆಸ್‌ 130 ರಿಂದ 70 ಸ್ಥಾನಕ್ಕೆ ಕುಸಿಯಿತು. ಸಿದ್ದರಾಮಯ್ಯ ಅವರೇ ಚಾಮುಂ ಡೇಶ್ವರಿಯಿಂದ ಕದ್ದು ಹೋಗಿ ಬಾದಾಮಿಯಲ್ಲಿ ನಿಂತು 1,600 ಮತಗಳಲ್ಲಿ ಗೆದ್ದರು. ಮುಖ್ಯಮಂತ್ರಿಯಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂಬ ನಂಬಿಕೆ ಇದ್ದಿದ್ದರೆ ಬಾದಾಮಿಗೆ ಏಕೆ ಓಡಿ ಹೋಗುತ್ತಿದ್ರಿ ಎಂದು ಟೀಕಿಸಿದರು.

ಸತೀಶ ಸಿಎಂ ಆಗಲಿ ಎಂದಾಗ ಲಖನ್‌ಗೆ ಸಿಟ್ಟು: ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಎಂದು ಲಖನ್‌ ಬಳಿ ಈ ಹಿಂದೆ ಹೇಳಿಕೊಂಡಿದ್ದೆ. ಇದು ಲಖನ್‌ಗೆ ಸಹಿಸಲು ಆಗದೇ ಸಿಟ್ಟು ಬಂದು ನನ್ನೊಂದಿಗೆ ಜಗಳವಾಡಿದ. ಲಖನ್‌ ನನ್ನ ಜತೆಗೆ ಇದ್ದು ಮೋಸ ಮಾಡಿದ್ದು ದುಃಖವಾಗಿದೆ. ಇದನ್ನು ನೆನೆದು ಜೀವನದಲ್ಲಿ ಜಿಗುಪ್ಸೆ ಬರುವ ಹಾಗೇ ಆಗಿದೆ. ನಮ್ಮ ಐವರು ಸಹೋದರರಲ್ಲಿ ಇಷ್ಟು ದಿನಗಳ ಕಾಲ ಲಖನ್‌ ಆಟವಾಡಿದ್ದ. ಸಹೋದ ರರನ್ನು ಬೇರೆ ಮಾಡಿ ಅವನು ಲಾಭ ಮಾಡಿಕೊಂ ಡಿದ್ದಾನೆ ಎಂದು ರಮೇಶ ವಾಕ್ಸಮರ ನಡೆಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ