ಅಧಿಕಾರ ಕಳೆದುಕೊಂಡರೂ ಕೈನಲ್ಲಿ ನಿಲ್ಲದ ಬೇಗುದಿ

Team Udayavani, Aug 7, 2019, 3:08 AM IST

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಕಸರತ್ತು ವಿಳಂಬವಾಗುತ್ತಿರುವಂತೆ ಕಾಂಗ್ರೆಸ್‌ನಲ್ಲಿ ಎರಡೂ ಸದನಗಳ ಪ್ರತಿಪಕ್ಷ ನಾಯಕರ ನೇಮಕವೂ ಕಗ್ಗಂಟಾಗಿ ಪರಿಣಮಿಸಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೈಕಮಾಂಡ್‌ ಪಾಲಿಗೆ “ಬಿಸಿ ತುಪ್ಪ’ ವಾಗಿದ್ದು ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ ಎಂಬಂತಾಗಿದೆ.

ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರಾಗಿ ಮಾಡದಿದ್ದರೆ ಕುರುಬ ಸಮುದಾಯದ ಸಹಿತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗ ದೂರವಾಗಬಹುದೆಂಬ ಆತಂಕ ಒಂದು ಕಡೆಯಾದರೆ, ಅವರಿಗೆ ಪ್ರತಿಪಕ್ಷ ನಾಯಕ ಸ್ಥಾನ ನೀಡಿದರೆ ಮೂಲ ಕಾಂಗ್ರೆಸ್ಸಿಗರು ಅದರಲ್ಲೂ ಒಕ್ಕಲಿಗ, ಲಿಂಗಾಯತ, ದಲಿತ ಸಮುದಾಯದ ನಾಯಕರು ಮುನಿಸಿಕೊಂಡರೆ ಮತ್ತೂಂದು ರೀತಿಯ ಸಮಸ್ಯೆಗೆ ಕಾರಣವಾಗಬಹುದೆಂಬ ಭಯವೂ ಇದೆ.

ಸಿದ್ದರಾಮಯ್ಯ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಎರಡು ರಾಜ್ಯಗಳ ಉಸ್ತುವಾರಿ ನೀಡಿ ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳುವ ಚಿಂತನೆಯಿದೆಯಾದರೂ ಅದಕ್ಕೆ ಸಿದ್ದರಾಮಯ್ಯ ಸುತಾರಾಂ ಒಪ್ಪುತ್ತಿಲ್ಲ. ರಾಜ್ಯ ರಾಜಕಾರಣವೇ ನನಗೆ ಸಾಕು. ಇದೇ ನನ್ನ ಕೊನೆಯ ಚುನಾವಣೆ ಎಂದೂ ನಾಯಕರ ಮುಂದೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ, ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರ ಹೆಸರು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಕೇಳಿ ಬಂದಿತ್ತಾದರೂ ಅವರೂ ಸಹ ಸಿದ್ದರಾಮಯ್ಯ ಅವರೇ ಪ್ರತಿಪಕ್ಷ ನಾಯಕರಾಗಲಿ ಎಂಬ ಅಭಿಪ್ರಾಯ ಹೈಕಮಾಂಡ್‌ಗೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಸಿದ್ದರಾಮಯ್ಯ ಅವರ ಪರವೇ ಬ್ಯಾಟಿಂಗ್‌ ನಡೆಸಿದ್ದಾರೆ.

ಸಿದ್ದು ಕಾರ್ಯತಂತ್ರ: ಸಿದ್ದರಾಮಯ್ಯ ಅವರು ತಮಗೆ ಪ್ರತಿಪಕ್ಷ ಸ್ಥಾನ ಸಿಗದಿದ್ದರೆ ರಮೇಶ್‌ಕುಮಾರ್‌ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಮಾಡಿ, ಪರಿಷತ್‌ನಲ್ಲಿ ಎಸ್‌.ಆರ್‌.ಪಾಟೀಲ್‌ ಅವರಿಗೆ ಪ್ರತಿಪಕ್ಷ ನಾಯಕ ಸ್ಥಾನ ಕಲ್ಪಿಸಿ, ಕೃಷ್ಣ ಬೈರೇಗೌಡರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ , ಜಮೀರ್‌ ಅಹಮದ್‌, ನಸೀರ್‌ ಅಹಮದ್‌ ಅಥವಾ ತನ್ವೀರ್‌ ಸೇಠ್ ಅವರನ್ನು ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸುವುದು, ಪ್ರಚಾರ ಸಮಿತಿಗೆ ಎಚ್‌.ಸಿ. ಮಹದೇವಪ್ಪ ಅಥವಾ ಎಚ್‌.ಆಂಜನೇಯ ಅವರನ್ನು ನೇಮಿಸುವ ಕಾರ್ಯತಂತ್ರ ರೂಪಿಸಿದ್ದಾರೆ.

ಹೀಗೆ ಮಾಡುವುದರಿಂದ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ವರ್ಗಕ್ಕೆ ಅವಕಾಶ ಕೊಟ್ಟಂತಾಗುತ್ತದೆ ಎಂದು ಹೈಕಮಾಂಡ್‌ ಒಪ್ಪಿಸುವ ಚಿಂತನೆಯಲ್ಲಿದ್ದಾರೆ. ಒಂದೊಮ್ಮೆ ತಾವೇ ಪ್ರತಿಪಕ್ಷ ನಾಯಕರಾಗಿ ಮುಂದುವರಿಯುವುದಾದರೆ ಉಪ ನಾಯಕನ ಸ್ಥಾನ ಕೃಷ್ಣ ಬೈರೇಗೌಡರಿಗೆ ನೀಡಿ, ರಮೇಶ್‌ಕುಮಾರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸುವ ಯೋಚನೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಮಧ್ಯೆ, ಕಾಂಗ್ರೆಸ್‌ ಹೈಕಮಾಂಡ್‌ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಪಕ್ಷ ನಾಯಕರ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಭರ್ತಿ ವಿಚಾರದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರತ್ತಲೂ ನೋಡುತ್ತಿದೆ. ಶೀಘ್ರವೇ ಗುಲಾಂ ನಬಿ ಆಜಾದ್‌, ಅಹಮದ್‌ ಪಟೇಲ್‌, ಕೆ.ಸಿ.ವೇಣುಗೋಪಾಲ್‌, ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ಮೂಲ ಕಾಂಗ್ರೆಸ್ಸಿಗರ ತಂತ್ರ: ಸಮ್ಮಿಶ್ರ ಸರ್ಕಾರ ಪತನದ ನಂತರದ ಬೆಳವಣಿಗೆಗಳಲ್ಲಿ ಮೂಲ ಕಾಂಗ್ರೆಸ್ಸಿಗರಾದ ಡಿ.ಕೆ. ಶಿವಕುಮಾರ್‌, ಡಾ.ಜಿ.ಪರಮೇಶ್ವರ್‌, ಎಂ.ಬಿ.ಪಾಟೀಲ್‌, ಶಾಮನೂರು ಶಿವಶಂಕರಪ್ಪ , ಎಚ್‌.ಕೆ.ಪಾಟೀಲ್‌, ರಾಮಲಿಂಗಾರೆಡ್ಡಿ ಒಟ್ಟಾಗಿದ್ದು ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ನಿರ್ಲಿಪ್ತ ಧೋರಣೆ ಕಾರಣ ಎಂಬ ವಿಚಾರವನ್ನೇ ಹೈಕಮಾಂಡ್‌ ಮುಂದಿಟ್ಟಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕ ಸ್ಥಾನ ಮೂಲ ಕಾಂಗ್ರೆಸ್ಸಿಗರಿಗೆ ಸಿಗಬೇಕೆಂಬ ವಾದ ಮಂಡಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ಹಾಗೂ ಎಂ.ಬಿ.ಪಾಟೀಲ್‌ ಕೆಪಿಸಿಸಿ ಅಥವಾ ಪ್ರತಿಪಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಡಾ.ಜಿ.ಪರಮೇಶ್ವರ್‌ ಪ್ರತಿಪಕ್ಷ ನಾಯಕ ಸ್ಥಾನ ಬಯಸಿದ್ದಾರೆಂದು ಮೂಲಗಳು ತಿಳಿಸಿವೆ.

* ಎಸ್‌. ಲಕ್ಷ್ಮಿನಾರಾಯಣ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ