ಟ್ವೀಟ್ ಮೂಲಕ ಸಿದ್ದುಗೆ ಕುಟುಕಿದ ಎಚ್‌ಡಿಕೆ
Team Udayavani, Oct 25, 2019, 4:36 AM IST
ಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹದಿನೈದು ಸ್ಥಾನಗಳನ್ನು ಗೆದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಬೇಕು. ಅನಂತರ ನೇರವಾಗಿ ಚುನಾವಣೆಗೆ ಹೋಗುತ್ತೇವೆ. ಜೆಡಿಎಸ್ ಜತೆ ಸೇರಲ್ಲ, ಅವರ ಜತೆ ಸೇರಿ ಅನುಭವಿಸಿದ್ದು ಸಾಕು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯನವರೇ ಯಾರ ಸಹವಾಸದಿಂದ ಯಾರು ಕೆಟ್ಟರು? ಯಾರು ಯಾರಿಗೆ ಕೇಡು ಬಗೆದರು? ಎಂದು ಆತ್ಮವಂಚನೆ ಇಲ್ಲದೆ ಹೇಳುವಿರಾ? ನಮ್ಮ ಸಹವಾಸ ಮಾಡಿ ಎಂದು ಸಿದ್ದರಾಮಯ್ಯನವರನ್ನು ಬೇಡಿದ್ದು ಯಾರು. ಅವರ ಮನೆ ಬಾಗಿಲಿಗೆ ಹೋಗಿದ್ದು ಯಾರು? ಸಹಕಾರ ಕೊಟ್ಟವರು ಯಾರು? ದಿನಕ್ಕೊಬ್ಬರ ಮೂಲಕ ನನ್ನನ್ನು ಟೀಕಿಸಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನೀವು ಕೊಟ್ಟ ಸಹಕಾರ ಎಂಥದ್ದು? ಸರಕಾರ ಬೀಳಿಸಿದ ಶಾಸಕರ ಎದೆ ಬಗೆದರೆ ಅಲ್ಲಿ ಕಾಣುತ್ತಿದ್ದವರು ಯಾರು? ಈ ಎಲ್ಲ ಪ್ರಶ್ನೆಗೆ ನೀವು ಪ್ರಾಮಾಣಿಕವಾಗಿ ಉತ್ತರಿಸುವಿರಾ? ನೀವು ಕೊಟ್ಟ ಸಹಕಾರಕ್ಕೆ ಬೆಂಬಲಕ್ಕೆ ನಾನು ಋಣಿ. ಈ ಜನ್ಮದಲ್ಲಿ ನಾನು ಮರೆಯಲಾರೆ. ನಿಮ್ಮ ಸಹವಾಸ ನಮಗೂ ಬೇಡ ಸಿದ್ದರಾಮಯ್ಯನವರೇ ಎಂದು ಕುಟುಕಿದ್ದಾರೆ.