ಕಳಚಿಬಿತ್ತೇ ಘಟಬಂಧನ?

ಉ.ಪ್ರದೇಶದ ಉಪಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ಮಾಯಾ ನಿರ್ಧಾರ

Team Udayavani, Jun 4, 2019, 6:00 AM IST

ಲಕ್ನೋ: ಲೋಕಸಭೆ ಚುನಾವಣೆಯಲ್ಲಿ ಬಹುದೊಡ್ಡ ಯಶಸ್ಸು ಸಾಧಿಸುವ ಕನಸಿನೊಂದಿಗೆ ಉತ್ತರಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಎಸ್‌ಪಿ-ಬಿಎಸ್‌ಪಿ ಮಹಾಮೈತ್ರಿ ಫ‌ಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಳಚಿಕೊಳ್ಳುವ ಹಂತಕ್ಕೆ ತಲುಪಿದೆ. ಚುನಾವಣೆಯಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡದ ಹಿನ್ನೆಲೆಯಲ್ಲಿ ಸ್ವತಃ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರೇ ಮೈತ್ರಿ ಕಡಿದುಕೊಳ್ಳುವ ಸುಳಿವು ನೀಡಿದ್ದಾರೆ.

ಸೋಮವಾರ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಮಾಯಾವತಿ ಅವರು, “ರಾಜ್ಯದಲ್ಲಿ ಸದ್ಯದಲ್ಲೇ ನಡೆಯಲಿರುವ 11 ಅಸೆಂಬ್ಲಿ ಉಪಚುನಾವಣೆಗಳಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ’ ಎಂದು ಘೋಷಿಸಿದ್ದಾರೆ. ಈ ಮೂಲಕ ನಮಗೆ ಮಹಾಮೈತ್ರಿಯ ಅಗತ್ಯವಿಲ್ಲ ಎಂಬುದನ್ನು ಮಾಯಾ ಸ್ಪಷ್ಟಪಡಿಸಿದಂತಾಗಿದೆ.

ಅಖೀಲೇಶ್‌ ಬಗ್ಗೆಯೂ ಕಿಡಿ: ಸಭೆಯಲ್ಲಿ ಮಾತ ನಾಡಿದ ಮಾಯಾ, “ಇದೊಂದು ಅನುಪಯುಕ್ತ ಮೈತ್ರಿಯಾಗಿತ್ತು. ಯಾದವರ ಮತಗಳು ನಮಗೆ ಬಂದಿಲ್ಲ. ಅಖೀಲೇಶ್‌ ಯಾದವ್‌ ಅವರ ಕುಟುಂಬಕ್ಕೂ ಯಾದವರ ಮತಗಳನ್ನು ಸೆಳೆಯಲು ಸಾಧ್ಯವಾಗಲಿಲ್ಲ. ಯಾದ ವರ ಮತಗಳನ್ನು ಶಿವಪಾಲ್‌ ಯಾದವ್‌ ಹಾಗೂ ಕಾಂಗ್ರೆಸ್‌ ವಿಭಜಿಸಿದವು. ಹೀಗಾಗಿ, ಮುಂಬರುವ ಉಪಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ’ ಎಂದು ಹೇಳಿದ್ದಾರೆ. ಯಾದವರ ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ವಿಫ‌ಲರಾದ ಅಖೀಲೇಶ್‌ ಯಾದವ್‌ ಬಗ್ಗೆಯೂ ಮಾಯಾ ಕಿಡಿಕಾರಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮತಗಳನ್ನು ಪಡೆ ಯಲು ಇನ್ನು ಮುಂದೆ ಮಿತ್ರಪಕ್ಷಗಳ ಮೇಲೆ ಅವಲಂ ಬಿಸದೆ, ಪಕ್ಷದ ಸಂಘಟನೆಯನ್ನು ಬಲಪಡಿಸುವತ್ತ ಹೆಜ್ಜೆ ಹಾಕಿ ಎಂದು ಕಾರ್ಯಕರ್ತರಿಗೆ ಮಾಯಾ ಕರೆ ನೀಡಿದ್ದಾರೆ.

ಲಾಭವಾಗಿದ್ದು ಮಾಯಾಗೆ: ಅಷ್ಟಕ್ಕೂ ಮಹಾ ಮೈತ್ರಿಯಿಂದ ಮಾಯಾಗೆ ಸ್ವಲ್ಪಮಟ್ಟಿಗಾದರೂ ಲಾಭವಾ ಗಿದ್ದು, ಅಖೀಲೇಶ್‌ ಕಳೆದುಕೊಂಡಿದ್ದೇ ಹೆಚ್ಚು. ಅಖೀಲೇಶ್‌ ಪತ್ನಿ ಡಿಂಪಲ್‌ ಯಾದವ್‌, ಇಬ್ಬರು ಸೋದರ ಸಂಬಂಧಿಗಳಾದ ಅಕ್ಷಯ್‌ ಹಾಗೂ ಧರ್ಮೇಂದ್ರ ಯಾದವ್‌ ಕೂಡ ಈ ಬಾರಿ ಸೋಲುಂಡಿದ್ದಾರೆ. ಎಸ್‌ಪಿ 2014ರಷ್ಟೇ ಸ್ಥಾನ ಗಳನ್ನು ಅಂದರೆ 5 ಸ್ಥಾನಗಳಲ್ಲಿ ಜಯಗಳಿಸಿದೆ. ಆದರೆ, 2014ರಲ್ಲಿ ಶೂನ್ಯ ಸಾಧನೆ ಮಾಡಿದ್ದ ಬಿಎಸ್‌ಪಿ ಬುಟ್ಟಿಗೆ ಈ ಬಾರಿ 10 ಸ್ಥಾನಗಳು ಸಿಕ್ಕಿವೆ. ಜನವರಿಯಲ್ಲಿ ರಚಿಸಲಾಗಿದ್ದ ಮಹಾ ಮೈತ್ರಿಯು 2022ರ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ವರೆಗೂ ಮುಂದುವರಿಯುತ್ತದೆ ಎಂದು ಅಖೀಲೇಶ್‌ ಈ ಹಿಂದೆ ಹೇಳಿದ್ದರು. ಆದರೆ, ಲೋಕಸಭೆ ಚುನಾವಣೆಯ ಫ‌ಲಿತಾಂಶವು ಇವರೆಲ್ಲರ ಲೆಕ್ಕಾಚಾರವನ್ನೂ ಬುಡಮೇಲು ಮಾಡಿದೆ.

ಆಂಧ್ರ, ತೆಲಂಗಾಣದಲ್ಲಿ ಆಪರೇಷನ್‌ ಕಮಲ?
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಉತ್ತಮ ಸಾಧನೆಗೈದ ಬಿಜೆಪಿ ಈಗ ತೆಲುಗು ರಾಜ್ಯಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ದಕ್ಷಿಣ ಭಾರತದಲ್ಲಿ ಬಲಿಷ್ಠ ಅಡಿಪಾಯ ನಿರ್ಮಿ ಸಲು ಮುಂದಾಗಿದೆ. ತೆಲಂಗಾಣದಲ್ಲಿ ಬಿಜೆಪಿ ಯತ್ತ ಜನರ ಒಲವು ಇರುವುದನ್ನೇ ಬಂಡವಾಳ ಮಾಡಿಕೊಂಡು, ಅದರಿಂದ ಸ್ಫೂರ್ತಿ ಪಡೆದು ಕೊಂಡಿರುವ ಪಕ್ಷ, ಆಂಧ್ರಪ್ರದೇಶ ಹಾಗೂ ತೆಲಂಗಾಣ ದಲ್ಲಿ ಟಿಡಿಪಿ ನಾಯಕರನ್ನು ಸೆಳೆಯಲು ತಂತ್ರ ಹೂಡಿದೆ ಎಂದು ಹೇಳಲಾಗಿದೆ. ಎರಡೂ ರಾಜ್ಯ ಗಳಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಹೀನಾಯ ಸೋಲು ಅನುಭವಿಸಿದ್ದರಿಂದ, ಆ ಪಕ್ಷದ ಅನೇಕ ನಾಯಕರು ತೀವ್ರ ಅಸಮಾಧಾನ ಗೊಂಡಿದ್ದಾರೆ. ಅಂಥವರನ್ನು ಬಿಜೆಪಿ ಈಗ ಸಂಪರ್ಕಿ ಸುತ್ತಿದ್ದು, ಆಪರೇಷನ್‌ ಕಮಲಕ್ಕೆ ಕೈಹಾಕಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಎರಡೂ ರಾಜ್ಯಗಳ ಕಾಂಗ್ರೆಸ್‌ ಹಿರಿಯ ನಾಯಕರನ್ನು ತಮ್ಮತ್ತ ಸೆಳೆದಿದ್ದ ಬಿಜೆಪಿ, ತಮ್ಮ ಪಕ್ಷದ ಟಿಕೆಟ್‌ ನೀಡಿ ಕಣಕ್ಕಿಳಿಸಿತ್ತು. ಈಗ ಟಿಡಿಪಿ ನಾಯಕರನ್ನೂ ಸೆಳೆದುಕೊಂಡು ಪಕ್ಷವನ್ನು ಬಲಿಷ್ಠಗೊಳಿಸುವ ಯೋಜನೆ ಹಾಕಿಕೊಂಡಿದೆ ಎಂದು ಮೂಲಗಳು ಹೇಳಿವೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ