ಡಿಎಚ್ಎಫ್ಎಲ್ನಿಂದ 3,689 ಕೋಟಿ ರೂ.ವಂಚನೆ: ಪಿಎನ್ಬಿ
Team Udayavani, Jul 11, 2020, 9:59 AM IST
ಹೊಸದಿಲ್ಲಿ: ಬ್ಯಾಂಕೇತರ ಹಣಕಾಸು ಸಂಸ್ಥೆ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್ಎಫ್ಎಲ್) 3,688.58 ಕೋಟಿ ರೂ. ವಂಚಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಆರೋಪಿಸಿದೆ. ಈ ಸಂಬಂಧ ಆರ್ಬಿಐಗೆ ಅದು ಮಾಹಿತಿ ನೀಡಿದೆ.
ಮುಂಬಯಿನ “ದೊಡ್ಡ ಕಾರ್ಪೊರೇಟ್ ಶಾಖೆ’ಯಲ್ಲಿನ ಡಿಎಚ್ಎಫ್ಎಲ್ನ ಖಾತೆಯಲ್ಲಿ ಈ ವಂಚನೆ ಬೆಳಕಿಗೆ ಬಂದಿದೆ ಎಂದು ಬ್ಯಾಂಕ್ ತಿಳಿಸಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬ್ಯಾಂಕ್ ವರದಿ ಮಾಡಿದ ನಾಲ್ಕನೇ ಹಗರಣವಿದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗಳು ಕೂಡ ಈ ಸಂಸ್ಥೆಯ ಖಾತೆಯನ್ನು ಈಗಾಗಲೇ “ಫ್ರಾಡ್ ಅಕೌಂಟ್’ ಪಟ್ಟಿಗೆ ಸೇರಿಸಿವೆ.
ಡಿಎಚ್ಎಫ್ಎಲ್, ವಿವಿಧ ಬ್ಯಾಂಕ್ ಗಳಿಂದ ಪಡೆದಿರುವ ಸಾಲಕ್ಕೆ ಸಂಬಂಧಿಸಿದಂತೆ ಭಾರತೀಯ ದಿವಾಳಿತನದ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಜಾರಿ ನಿರ್ದೇಶನಾಲಯಗಳು ಕೂಡ ಕಂಪನಿಯ ಅವ್ಯವಹಾರಗಳ ಕುರಿತು ತನಿಖೆ ನಡೆಸುತ್ತಿವೆ.