ISIS ಗೆ ನೇಮಕ: ತಮಿಳುನಾಡು, ತೆಲಂಗಾಣದಲ್ಲಿ ಎನ್ಐಎ ದಾಳಿ
Team Udayavani, Sep 16, 2023, 10:15 PM IST
ನವದೆಹಲಿ: ತಮಿಳುನಾಡು, ತೆಲಂಗಾಣ ರಾಜ್ಯಗಳ 31 ಸ್ಥಳಗಳಲ್ಲಿ ಶನಿವಾರ ಎನ್ಐಎ ದಾಳಿ ನಡೆಸಿದೆ. ಉಗ್ರ ಸಂಘಟನೆ ಐಎಸ್ಐಎಸ್ಗೆ ನೇಮಕ ಮಾಡಲು ಯುವಕರ ಮನವೊಲಿಕೆ ಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಕೆಲವು ಡಿಜಿಟಲ್ ಸಾಧನಗಳು, ಪ್ರಾದೇಶಿಕ ಭಾಷೆಗಳು ಮತ್ತು ಅರೆಬಿಕ್ ಭಾಷೆಗಳಲ್ಲಿ ಇರುವ ದಾಖಲೆಗಳು, ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ, 60 ಲಕ್ಷ ರೂ. ನಗದು, 18,200 ಅಮೆರಿಕನ್ ಡಾಲರ್ಗಳೂ ಸಿಕ್ಕಿವೆ ಎಂದು ನವದೆಹಲಿಯಲ್ಲಿ ಎನ್ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ವಕ್ತಾರರು ತಿಳಿಸಿದ್ದಾರೆ.
ಕೊಯಮತ್ತೂರಿನ 22, ಚೆನ್ನೈನ 3, ಕೊಡಿಯನಲ್ಲೂರಿನ ಒಂದು, ಹೈದರಾಬಾದ್ನ 5 ಸ್ಥಳಗಳ ಮೇಲೆ ನಡೆಸಲಾಗಿರುವ ದಾಳಿಯಲ್ಲಿ ಮೊಬೈಲ್ ಫೋನ್, ಲ್ಯಾಪ್ಟಾಪ್, ಹಾರ್ಡ್ಡಿಸ್ಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಇರುವ ಮಾಹಿತಿಯನ್ನು ಅಧ್ಯಯನ ನಡೆಸಲಾಗುತ್ತಿದೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.