Crime: ಯುವತಿಯೊಂದಿಗೆ ಪರಾರಿ: ಯುವಕನ ಪೋಷಕರ ಹತ್ಯೆ
Team Udayavani, Aug 20, 2023, 9:22 PM IST
ಸೀತಾಪುರ: ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಮಗ ಓಡಿ ಹೋಗಿದಕ್ಕೆ, ಇದೇ ದ್ವೇಷದಿಂದ ಆತನ ತಂದೆ ಮತ್ತು ತಾಯಿಯನ್ನು ಯುವತಿಯ ಕಡೆಯವರು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ವರ್ಷಗಳ ಹಿಂದೆ, ನೆರೆಮನೆಯಲ್ಲಿ ವಾಸಿಸುತ್ತಿದ್ದ ಯುವತಿಯೊಂದಿಗೆ ಮಗ ಓಡಿ ಹೋಗಿದ್ದ. ಈ ಸಂಬಂಧ ಯುವತಿಯ ಪೋಷಕರು ದಾಖಲಿಸಿದ್ದ ದೂರಿನ ಮೇರೆಗೆ ಯುವಕ ಜೈಲು ಪಾಲಾಗಿದ್ದ. ಕೆಲ ದಿನಗಳ ಹಿಂದೆ ಆತ ಜೈಲಿನಿಂದ ಬಿಡುಗಡೆಯಾಗಿದ್ದ. ಶುಕ್ರವಾರ ಯುವಕನ ಮನೆಗೆ ನುಗ್ಗಿದ ಯುವತಿಯ ಕಡೆಯವರು, ಆತನ ಪೋಷಕರನ್ನು ಥಳಿಸಿ, ಹತ್ಯೆ ಮಾಡಿದ್ದಾರೆ.