ಸಾವರ್ಕರ್‌; ಮುಂದುವರಿದ ಟಾಕ್‌ ವಾರ್‌

Team Udayavani, Oct 21, 2019, 3:09 AM IST

ವೀರ ಸಾವರ್ಕರ್‌ಗೆ “ಭಾರತ ರತ್ನ’ ನೀಡುವ ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯ ಅಂಶದ ಬಗ್ಗೆ ರಾಜಕೀಯ ನಾಯಕರ ವಾಕ್ಸಮರ ಭಾನುವಾರವೂ ಮುಂದುವರಿದಿದೆ. ಇದೇ ವಿಚಾರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೂಮ್ಮೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇದಕ್ಕೆ ಆಡಳಿತಾರೂಢ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಸಾವರ್ಕರ್‌ ಕುರಿತಾದ ರಾಜಕೀಯ ನಾಯಕರ ಟೀಕೆ-ಪ್ರತಿಟೀಕೆಗಳ ಝಲಕ್‌ ಇಲ್ಲಿದೆ.

ಕೋಮುವಾದ ಬಿತ್ತುವವರಿಗೆ ಭಾರತ ರತ್ನ ಬೇಡ: ಸಿದ್ದು
ಮೈಸೂರು: ಹಿಂದುತ್ವದ ಮೂಲಕ ಕೋಮವಾದ ಬಿತ್ತುವವರಿಗೆ ಭಾರತ ರತ್ನ ನೀಡುವುದು ಬೇಡ ಎಂದು ಪುನರುಚ್ಚರಿಸುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಾವರ್ಕರ್‌ಗೆ ಭಾರತ ರತ್ನ ನೀಡುವ ಶಿಫಾರಸ್ಸಿಗೆ ಮತ್ತೂಮ್ಮೆ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, “ನಾನು ಹಿಂದೂಗಳಿಗೆ ಭಾರತ ರತ್ನ ಕೊಡಬೇಡಿ ಎಂದು ಹೇಳಿಲ್ಲ. ನಾನು ಕೂಡು ಒಬ್ಬ ಹಿಂದೂ. ಹಿಂದುತ್ವದ ಮೂಲಕ ಕೋಮವಾದ ಬಿತ್ತುವವರಿಗೆ ಬೇಡ. ಹಿಂದೂ ಹೆಸರಿನಲ್ಲಿ ಬೆಂಕಿ ಹಚ್ಚುವವರಿಗೆ ಬೇಡ ಅಂತ ಹೇಳಿದ್ದೇನೆ.

ಸತ್ಯ ಹೇಳಿದ್ದಕ್ಕೆ ಬಿಜೆಪಿಯವರು ನನ್ನ ವಿರುದ್ಧ ಮುಗಿಬಿದ್ದಿದ್ದಾರೆ. ದೇಶದ ಅಭಿವೃದ್ಧಿಗೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಕೊಡುಗೆ ಅಪಾರ. ಅದಕ್ಕಾಗಿ ಅವರಿಗೆ ಭಾರತ ರತ್ನ ಕೊಡಲಾಗಿದೆ. ಸಾವರ್ಕರ್‌ ಹಿಂದೂ ಮಹಾಸಭಾದಲ್ಲಿದ್ದರು. ಹಿಂದುತ್ವ ಪ್ರತಿಪಾದಕರು ಎಂಬ ಕಾರಣಕ್ಕಾಗಿಯೇ ಬಿಜೆಪಿ ಅವರಿಗೆ ಭಾರತ ರತ್ನ ನೀಡಲು ಮುಂದಾಗಿದೆ. ಮಹಾತ್ಮ ಗಾಂಧಿಯನ್ನು ಕೊಂದ ಆರೋಪಿಗೆ ಈ ಪ್ರಶಸ್ತಿ ಕೊಡಬೇಡಿ. ಸಿದ್ಧಗಂಗಾಶ್ರೀಗಳಿಗೆ ಕೊಡಿ’ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.

“ಭಾರತ ರತ್ನ’ವನ್ನು ಗಾಂಧಿ ಕುಟುಂಬಕ್ಕೇ ಕೊಡಬೇಕಾ?
ಕಲಬುರಗಿ: “ಭಾರತ ರತ್ನ’ವನ್ನು ಗಾಂಧಿ ಕುಟುಂಬಕ್ಕೇ ಕೊಡಬೇಕು ಎಂದು ಬರೆದುಕೊಟ್ಟಿದ್ದಾರಾ? ಅಂಬೇಡ್ಕರ್‌ ಅವರಿಗೆ ಏಕೆ ಭಾರತ ರತ್ನ ಕೊಡಲಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಅವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ್‌ ಸಾವರ್ಕರ್‌ಗೆ ಭಾರತ ರತ್ನ ಕೊಡಬೇಕು ಎನ್ನುವ ವಿಚಾರ ಚರ್ಚೆಯಲ್ಲಿದೆ.

ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ, ಮಹಾತ್ಮ ಗಾಂಧೀಜಿ ಹತ್ಯೆಗೆ ಸಾವರ್ಕರ್‌ ಸಂಚು ರೂಪಿಸಿದ್ದರೆಂದು ಹೇಳಿಕೆ ಕೊಟ್ಟಿ ದ್ದಾರೆ. ಇವರೇನು ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ಅಭ್ಯಸಿಸಿದ್ದಾ ರೆಯೇ? ಮಹಾತ್ಮ ಗಾಂಧಿ  ಹತ್ಯೆಯಲ್ಲಿ ಸಾವರ್ಕರ್‌, ಆರ್‌ಎಸ್‌ಎಸ್‌ ಪಾತ್ರವಿಲ್ಲ ಎಂದು ನ್ಯಾಯಾಲಯವೇ ಹೇಳಿದೆ. ಮುಖ್ಯವಾಗಿ ಸಿದ್ದರಾಮಯ್ಯಗೆ ಸ್ವಾತಂತ್ರ್ಯ ಹೋರಾಟದ ಗಂಧ ಗಾಳಿಯೂ ಗೊತ್ತಿಲ್ಲ . ಸ್ವಾತಂತ್ರ್ಯ ಹೋರಾಟದಲ್ಲಿ “ವೀರ್‌’ ಎನ್ನುವ ಬಿರುದು ಬಂದಿದ್ದು ಕೇವಲ ಸಾವರ್ಕರ್‌ಗೆ ಮಾತ್ರ. ಸಿದ್ದರಾಮಯ್ಯ ಇನ್ನೊಮ್ಮೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಓದಿ ತಿಳಿದುಕೊಳ್ಳಲಿ ಎಂದರು.

“ಕೈ’ 50 ಸೀಟು ಗೆದ್ದರೆ ರಾಜೀನಾಮೆ: “ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ 50 ಸೀಟು ಗೆಲ್ಲುವುದಕ್ಕೆ ಆಗಲ್ಲ. 50ಕ್ಕಿಂತ ಹೆಚ್ಚು ಸೀಟು ಗೆದ್ದರೆ ನಾನು ರಾಜೀನಾಮೆ ಕೊಡುತ್ತೇನೆ. 50ಕ್ಕಿಂತ ಕಡಿಮೆ ಸೀಟು ಬಂದರೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ’ ಎಂದು ರವಿಕುಮಾರ್‌ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯ ಹೇಳಿದ್ದು ಯಾವುದೂ ಆಗಿಲ್ಲ. ಅವರು ನೀಚ ರಾಜಕಾರಣ ಮಾಡುತ್ತಿದ್ದಾರೆ. ದಿನೇಶ್‌ ಗುಂಡೂರಾವ್‌ ಸಹ ಟೀಕೆ ಮಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆಗೆ ಬೇರೆ ಜಿಲ್ಲೆಯ ಗೋವಿಂದ ಕಾರಜೋಳ ಅವರನ್ನು ತಂದು ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಾರೆಂದು ಕೆಲವರು ಟೀಕೆ ಮಾಡುತ್ತಾ¤ರೆ. ಹಾಗಾದರೆ, ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಯಾವ ದೇಶದವರು ಎಂದು ಪ್ರಶ್ನಿಸಿದರು.

ಸಾವರ್ಕರ್‌ ವಿರುದ್ಧದ ಹೇಳಿಕೆ ಹಿಂಪಡೆಯಲಿ
ಬೆಳಗಾವಿ: ವಿನಾಯಕ ದಾಮೋದರ ಸಾವರ್ಕರ್‌ ಅಪ್ಪಟ ದೇಶ ಭಕ್ತ. ರಾಷ್ಟ್ರಕ್ಕಾಗಿ ಹೋರಾಟ ಮಾಡಿದ ವೀರ ಪುರುಷ. ಇಂತವರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಲಘುವಾಗಿ ಮಾತನಾಡಿದ್ದನ್ನು ಕೂಡಲೇ ಹಿಂಪಡೆ ಯಬೇಕು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರಕ್ಕಾಗಿ ಹೋರಾಡಿದ ವೀರ ಪುರುಷರ ಬಗ್ಗೆ ಸಿದ್ದರಾಮಯ್ಯ ಈ ತರಹದ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಅವರ ಮಾನಸಿಕ ಸ್ಥಿತಿ ಬಯಲಾದಂತೆ ತೋರುತ್ತಿದೆ. ಮನಸೋ ಇಚ್ಛೆ ಹೇಳಿಕೆಯಿಂದ ಸ್ವಾತಂತ್ರ್ಯ ಯೋಧರಿಗೆ ಹಾಗೂ ರಾಷ್ಟ್ರಭಕ್ತರ ಮನಸ್ಸಿಗೆ ನೋವಾಗುತ್ತದೆ. ಸಿದ್ದರಾಮಯ್ಯ ಕೂಡಲೇ ಸಾವರ್ಕರ್‌ ಬಗ್ಗೆ ಹೇಳಿರುವ ಮಾತನ್ನು ಹಿಂಪಡೆಯಬೇಕು ಎಂದರು.

ಸಿದ್ದುಗೆ ಸಾವರ್ಕರ್‌ ಆತ್ಮಾಹುತಿ ಪುಸ್ತಕ ಕೊಡುತ್ತೇವೆ: ಸಿ.ಟಿ.ರವಿ
ಜಮಖಂಡಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ನಾಯಕರು ಹಾಗೂ ರಾಷ್ಟ್ರ ಪ್ರಶಸ್ತಿ ಬಗ್ಗೆ ಎಳ್ಳಷ್ಟೂ ಗೌರವವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರು ಒಂದು ಕುಟುಂಬವನ್ನು ಮಾತ್ರ ಓಲೈಸುತ್ತಿದ್ದಾರೆ. ಈ ಹಿಂದೆ ಡಾ| ಬಿ.ಆರ್‌.ಅಂಬೇಡ್ಕರ್‌ ಅವರನ್ನು ಒಂದು ಜಾತಿಯ ನಾಯಕನನ್ನಾಗಿ ಸೀಮಿತ ಮಾಡಿ, ಚುನಾವಣೆಯಲ್ಲಿ ಸೋಲಿಸಿ, ಮೂಲೆಗುಂಪು ಮಾಡುವ ಕೆಲಸವನ್ನು ಕಾಂಗ್ರೆಸ್‌ ಮಾಡಿತ್ತು. ಇಂದಿನ ಕಾಂಗ್ರೆಸ್‌, ವೀರ ಸಾರ್ವಕರ್‌ ಅವರನ್ನು ಹಿಂದೂ ಧರ್ಮಕ್ಕೆ ಮಾತ್ರ ಸೀಮಿತಗೊಳಿಸುತ್ತಿರುವುದು ಸರಿಯಲ್ಲ. ಸಿದ್ದರಾಮಯ್ಯನವರಿಗೆ ವೀರ ಸಾವರ್ಕರ್‌ ಅವರ ಆತ್ಮಾಹುತಿ ಪುಸ್ತಕ ಕಳಿಸಿ ಕೊಡುತ್ತೇವೆ. ಅದನ್ನು ಓದಿಯಾದರೂ ಅವರ ಬಗ್ಗೆ ತಿಳಿದುಕೊಳ್ಳಲಿ ಎಂದರು.

ಸಿದ್ದು ಹೇಳಿಕೆ ರಾಜಕೀಯ ಪ್ರೇರಿತ: ಪೇಜಾವರ ಶ್ರೀ
ಬಾಗಲಕೋಟೆ: ಮಹಾತ್ಮ ಗಾಂಧೀಜಿ ಹತ್ಯೆಯಲ್ಲಿ ವೀರ ಸಾವರ್ಕರ್‌ ಅವರ ಪಾತ್ರವಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನ್ಯಾಯಾಲಯದಲ್ಲಿ ಚರ್ಚೆ ನಡೆದಿದೆ. ಸಾವರ್ಕರ್‌ ಅವರ ಪಾತ್ರವಿಲ್ಲ ಎಂಬುದು ಸಾಬೀತಾಗಿದೆ.

ಅವರು ಗಾಂಧೀಜಿ ಹತ್ಯೆಯಲ್ಲಿ ಭಾಗಿಯಾಗಿದ್ದರೆ ಶಿಕ್ಷೆ ಕೊಡಬೇಕಿತ್ತು. ನಿರಪರಾಧಿ ಎಂದು ತೀರ್ಮಾನವಾಗಿದೆ. ಸಿದ್ದರಾಮಯ್ಯ ಯಾಕೆ ಹೀಗೆ ಮಾತನಾಡುತ್ತಾರೋ ಗೊತ್ತಿಲ್ಲ. ಅವರ ಹೇಳಿಕೆ ಸಂಪೂರ್ಣ ರಾಜಕೀಯ ಪ್ರೇರಿತ. ವೀರ ಸಾವರ್ಕರ್‌ ಅವರಿಂದಲೇ ಭಾರತದ ಸ್ವಾತಂತ್ರ್ಯಕ್ಕೆ ಬಲ ಬಂದಿತ್ತು. ಅವರು ಸ್ವಾತಂತ್ರ್ಯಕ್ಕಾಗಿ ಬಂಧನಕ್ಕೊಳ ಗಾದಾಗ ಸಮುದ್ರಕ್ಕೆ ಹಾರಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಜನರಿಗೆ ಸ್ಫೂರ್ತಿ ಕೊಟ್ಟು ದೊಡ್ಡ ಸಾಧನೆ ಮಾಡಿದ್ದಾರೆ. ಅವರಿಗೆ ಸರಿಯಾದ ಗೌರವ ಕೊಡಬೇಕು ಎಂದರು.

ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಅವರು ಏನೂ ಮಾಡಿಲ್ಲ. ಅಂತಹ ದೇಶಭಕ್ತರ ಬಗ್ಗೆ ಇಲ್ಲ, ಸಲ್ಲದ ಮಾತನಾಡಬಾರದು. ವಿವಾದಾತ್ಮಕ ಕೆಲಸ ಮಾಡಿದವರು ಟಿಪ್ಪು ಸುಲ್ತಾನ್‌. ಅಂತವರಿಗೆ ಇವರು ಬಹಳ ಗೌರವ ಕೊಡುತ್ತಾರೆ. ಟಿಪ್ಪು ಜಯಂತಿ ಮಾಡಲು ಹೋಗುತ್ತಾರೆ. ಟಿಪ್ಪು ವಿರುದ್ಧ ಕೊಡವರು, ಕೇರಳದವರು ಭಾರೀ ಅಸಮಾಧಾನ ಹೊಂದಿದ್ದಾರೆ. ವೀರ ಸಾವರ್ಕರ್‌ ವಿವಾದಾತೀತ ವ್ಯಕ್ತಿ. ಅಂತವರಿಗೆ ಅಗೌರವ ಸಲ್ಲಿಸುವುದು ಒಳ್ಳೆಯದಲ್ಲ. ನಾನು ನಿಷ್ಪಕ್ಷಪಾತವಾಗಿ ಇದನ್ನು ಹೇಳುತ್ತಿದ್ದೇನೆ ಎಂದರು.

ಸಿದ್ದುಗೆ ಸಾವರ್ಕರ್‌ ಹೆಸರು ಹೇಳುವ ಯೋಗ್ಯತೆ ಇಲ್ಲ
ಶಿವಮೊಗ್ಗ: ಸಾವರ್ಕರ್‌ ಹೆಸರು ಹೇಳಲು ಸಿದ್ದರಾಮಯ್ಯಗೆ ಯೋಗ್ಯತೆಯಿಲ್ಲ. ಯಾವ, ಯಾವ ಪಕ್ಷದಲ್ಲಿದ್ರೋ ಗೊತ್ತಿಲ್ಲ. ಈಗ ಸೋನಿಯಾ ಗಾಂಧಿ  ಮೆಚ್ಚಿಸಲು ಸಾವರ್ಕರ್‌ ಬಗ್ಗೆ ಮಾತಾಡ್ತಿದ್ದಾರೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬ್ರಿಟಿಷರು ಸಾಗರದಾಚೆಗಿನ ಜೈಲಿನಲ್ಲಿ ಸಾವರ್ಕರ್‌ ಅವರನ್ನು ಇಟ್ಟಿದ್ದರು. ಸಿದ್ದರಾಮಯ್ಯ ಒಮ್ಮೆ ಹೋಗಿ ಆ ಜೈಲನ್ನು ನೋಡಿಕೊಂಡು ಬರಲಿ. ಇಂದು ಬೇರೆ, ಬೇರೆ ಕಾರಣಕ್ಕೆ ಕಾಂಗ್ರೆಸ್ಸಿಗರು ಜೈಲಿಗೆ ಹೋಗ್ತಿದ್ದಾರೆ.

ಆದರೆ, ಸಾವರ್ಕರ್‌ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದವರು. ಅವರು ಇದ್ದ ಜೈಲು ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ಕೊಟ್ಟ ಜಾಗ. ಗಾಂಧೀಜಿ ಶಾಂತಿಯುತವಾಗಿ ಹೋರಾಟ ಮಾಡಿದರೆ, ಸಾವರ್ಕರ್‌, ಭಗತ್‌ ಸಿಂಗ್‌, ಚಂದ್ರಶೇಖರ್‌ ಆಜಾದ್‌ ಕ್ರಾಂತಿ ಮಾರ್ಗದಲ್ಲಿ ಹೋರಾಟ ಮಾಡಿದ್ರು. ಇತಿಹಾಸ ಗೊತ್ತಿರದ ಸಿದ್ದರಾಮಯ್ಯ ಹುಚ್ಚುಚ್ಚಾಗಿ ಮಾತನಾಡ್ತಾರೆ. ಕೇಂದ್ರ ಸರ್ಕಾರ ಭಾರತ ರತ್ನವನ್ನು ಯಾರಿಗೆ ಕೊಡಬೇಕು ಎಂದು ಯೋಚನೆ ಮಾಡುತ್ತದೆ. ಇಂದಲ್ಲಾ ನಾಳೆ ಸಿದ್ಧಗಂಗಾ ಶ್ರೀಗಳಿಗೂ ಭಾರತ ರತ್ನ ಸಿಗುತ್ತದೆ ಎಂದರು.

ಸಿದ್ದರಾಮಯ್ಯ ಹಿರಿಯ ರಾಜಕಾರಣಿಯಾಗಿದ್ದು, ವೀರ ಸಾವರ್ಕರ್‌ ಬಗ್ಗೆ ಕೀಳಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಸಿದ್ದರಾಮಯ್ಯನವರು ಮೊದಲು ಇತಿಹಾಸ ಓದಿ, ವೀರ ಸಾವರ್ಕರ್‌ ಬಗ್ಗೆ ತಿಳಿದುಕೊಳ್ಳಲಿ.
-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ಸಾವರ್ಕರ್‌ ಅವರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿಲ್ಲವೆಂದು ನಾನು ಹೇಳಲ್ಲ. ಆದರೆ, ಸಾವರ್ಕರ್‌ ಸ್ಥಾಪಿಸಿದ್ದ ಹಿಂದೂ ಮಹಾಸಭಾದಲ್ಲಿ ನಾಥುರಾಮ್‌ ಗೋಡ್ಸೆ ಸದಸ್ಯರಾಗಿದ್ದು, ಮಹಾತ್ಮಗಾಂಧಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್‌ 7ನೇ ಆರೋಪಿ ಆಗಿದ್ದರು.
-ವಿ.ಎಸ್‌.ಉಗ್ರಪ್ಪ ಮಾಜಿ ಸಂಸದ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ