“ಹಳ್ಳಿಹಕ್ಕಿ’ಯ ಸಚಿವಾಕಾಂಕ್ಷೆಗೆ ಎಸ್‌.ಟಿ. ಸೋಮಶೇಖರ್‌ ಅಪಸ್ವರ

Team Udayavani, Jan 26, 2020, 3:10 AM IST

ಮೈಸೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದ್ದಂತೆ, ಹಿಂದೆ ನಾವೆಲ್ಲ ಒಂದು ಎನ್ನುತ್ತಿದ್ದ 17 ಅನರ್ಹ ಶಾಸಕರಲ್ಲೇ ಭಿನ್ನ ರಾಗ ಕೇಳಿ ಬರುತ್ತಿದೆ. ಉಪ ಚುನಾವಣೆಯಲ್ಲಿ ಸೋತವರಿಗೂ ಸಚಿವ ಸ್ಥಾನ ನೀಡಬೇಕೆಂಬ ಅಡಗೂರು ಎಚ್‌.ವಿಶ್ವನಾಥ್‌ ಹೇಳಿಕೆಗೆ ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌ ಅಪಸ್ವರ ತೆಗೆದಿದ್ದಾರೆ.

ಶನಿವಾರ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಎಸ್‌.ಟಿ. ಸೋಮಶೇಖರ್‌ ಸುದ್ದಿಗಾರರೊಂದಿಗೆ ಮಾತನಾಡಿ, ಹುಣಸೂರು ಉಪ ಚುನಾವಣೆಯಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಹಾಗಾಗಿ, ಕ್ಷೇತ್ರ ಬಿಟ್ಟು ಕೊಡಿ, ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿ, ಮಂತ್ರಿ ಮಾಡುತ್ತೇವೆ. ಗೆಲ್ಲದೇ ಇದ್ದರೆ ಮಂತ್ರಿ ಮಾಡುವುದು ಕಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಎಚ್ಚರಿಸಿದ್ದರು. ಆದರೆ, ವಿಶ್ವನಾಥ್‌ ಅವರು ನಾನು ಗೆಲ್ಲುತ್ತೇನೆ ಎಂದು “ಬಿ’ ಫಾರಂ ಪಡೆದು, ಉಪ ಚುನಾವಣೆಗೆ ಸ್ಪರ್ಧಿಸಿ ವಿಫ‌ಲರಾದರು.

ಆರ್‌. ಶಂಕರ್‌ಗೆ ಸ್ಪರ್ಧೆ ಮಾಡದಂತೆ ಹೇಳಿದ್ದಕ್ಕೆ ಅವರು ಒಪ್ಪಿಕೊಂಡರು. ಅದರಂತೆ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡುತ್ತಾರೆ. ಆದರೆ, ಉಪ ಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಸ್ಥಾನ ಕೊಡುವುದು ಪಕ್ಷದ ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿಯವರಿಗೆ ಬಿಟ್ಟಿದ್ದು. ಮುಖ್ಯಮಂತ್ರಿಯವರು ಹೇಳಿದಂತೆ ನಡೆದುಕೊಳ್ಳುತ್ತಾರೆ. ಗೆದ್ದಿರುವ 11 ಮಂದಿಯನ್ನು ಮಂತ್ರಿ ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು.

ನಾನೇನು ಡಿಸಿಎಂ ಹುದ್ದೆ ಕೇಳ್ತಿಲ್ವಲ್ಲ? ಸೋಮಶೇಖರ್‌ಗೆ ವಿಶ್ವನಾಥ್‌ ತಿರುಗೇಟು
ಮೈಸೂರು: ಸೋತಿರುವ ಲಕ್ಷ್ಮಣ ಸವದಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿಲ್ವಾ?. ನಾನೇನು ಉಪ ಮುಖ್ಯಮಂತ್ರಿ ಸ್ಥಾನ ಕೇಳ್ತಿದ್ದೇನಾ? ಕೇಳ್ತಿರೋದು ಮಂತ್ರಿ ಸ್ಥಾನ ಮಾತ್ರ ಎಂದು ಅಡಗೂರು ಎಚ್‌.ವಿಶ್ವನಾಥ್‌ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿ, ಸೋತ ಮೇಲೂ ಅರುಣ್‌ ಜೇಟ್ಲಿಯವರ ಅನುಭವ ಬಳಕೆ ಆಗಲಿಲ್ವಾ?. ಹಾಗಾಗಿ, “ನಾನು ಹಿರಿಯ. ಈ ಹಿಂದೆ ಸಾಕಷ್ಟು ಬಾರಿ ಮಂತ್ರಿಯಾಗಿ ಕೆಲಸ ಮಾಡಿದ ನನ್ನ ಅನುಭವವನ್ನು ಬಳಕೆ ಮಾಡಿಕೊಳ್ಳಿ ಅನ್ನುತ್ತಿದ್ದೇನೆ ಅಷ್ಟೆ. ಚುನಾವಣೆಯಲ್ಲಿ ಸೋತವರು ಸಚಿವ ಸ್ಥಾನ ಕೇಳುವುದು ನೈತಿಕತೆ ಅಲ್ಲ ಎನ್ನುವುದು ಗೊತ್ತಿದೆ. ಆದರೆ, ಬಿಜೆಪಿಯವರಿಗಾಗಿ ನಾನು ಕಳಂಕ ಹೊತ್ತಿದ್ದೇನೆ. ಅಲ್ಲದೆ, ಯಡಿಯೂರಪ್ಪ ಮಾತು ಕೊಟ್ಟಿ¨ªಾರೆ. ಅದಕ್ಕಾಗಿ ಸ್ಥಾನ ಕೇಳುತ್ತಿದ್ದೇನೆ’ ಎಂದರು.

“ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದು ಯಡಿಯೂರಪ್ಪ ನನಗೆ ಹೇಳಿದ್ದು ನಿಜ. ಆದರೆ, ಸೋತರೆ ಸಚಿವ ಸ್ಥಾನ ಕೊಡುವುದು ಕಷ್ಟ ಎಂದು ಹೇಳಿರಲಿಲ್ಲ. ಆಗ ಸಚಿವ ಸ್ಥಾನದ ಬಗ್ಗೆ ಚರ್ಚೆಯೇ ಆಗಿರಲಿಲ್ಲ. ಈ ಕ್ಷಣಕ್ಕೂ ನಾವೆಲ್ಲಾ ಒಟ್ಟಾಗಿಯೇ ಇದ್ದೇವೆ. ಈ ತಂಡದಲ್ಲಿ ನಾನು ನಿರ್ಲಕ್ಷಕ್ಕೆ ಒಳಗಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ
ಬೆಳಗಾವಿ: ಸರಕಾರದಲ್ಲಿ ತಮ್ಮನ್ನು ಮುಂದುವರಿಸುವುದು ಅಥವಾ ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು. ಸಂಪುಟದಿಂದ ತಮ್ಮನ್ನು ಕೈಬಿಟ್ಟು, ಆರ್‌.ಶಂಕರ್‌ಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಕುರಿತು ಏನೂ ಮಾತನಾಡುವುದಿಲ್ಲ. ಈ ವಿಷಯದಲ್ಲಿ ಹೈಕಮಾಂಡ್‌ ನಿರ್ಧಾರ ಅಂತಿಮ ಎಂದರು.

ಬ್ಲ್ಯಾಕ್‌ವೆುಲ್‌ ಇಲ್ಲ: ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ ಎಚ್‌.ವಿಶ್ವನಾಥ್‌ ಹಾಗೂ ಎಂಟಿಬಿ ನಾಗರಾಜ್‌ ಅವರು ಭಾವನಾತ್ಮಕವಾಗಿ ಮುಖ್ಯಮಂತ್ರಿಗಳನ್ನು ಬ್ಲಾಕ್‌ವೆುಲ್‌ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅವರೆಲ್ಲರ ಬೆಂಬಲದಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ. ಯಾವುದೋ ಕಾರಣಕ್ಕೆ ಅವರು ಚುನಾವಣೆಯಲ್ಲಿ ಸೋತಿದ್ದಾರೆ. ನಮಗೂ ಸ್ಥಾನ ಬೇಕು ಎಂದು ಅವರು ಅಪೇಕ್ಷೆ ಪಡುವುದರಲ್ಲಿ ತಪ್ಪೇನೂ ಇಲ್ಲ ಎಂದರು.

ಡಿಸಿಎಂ ಹುದ್ದೆ: ಹೈಕಮಾಂಡ್‌ಗೆ ಬಿಟ್ಟಿದ್ದು
ಬಳ್ಳಾರಿ: ಕಳೆದ ಉಪಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ನೀಡುವುದು ಹಾಗೂ ತಮಗೆ ಡಿಸಿಎಂ ಸ್ಥಾನ ನೀಡೋದು ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಬಿಟ್ಟ ವಿಚಾರ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿ ಸಿದಂತೆ ಯಡಿಯೂರಪ್ಪ ಅವರು ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದರು.

ನಾನು ಉಪಮುಖ್ಯಮಂತ್ರಿ ಆಗಬೇಕು ಅನ್ನೋದು ಜನರ ಬೇಡಿಕೆ. ಅದನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ, ಡಿಸಿಎಂ ಸ್ಥಾನ ನೀಡುವ ಬಗ್ಗೆ ಪಕ್ಷದ ವರಿಷ್ಠರು ಹಾಗೂ ಸಿಎಂ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು. “ಶಾಸಕರ ಮೂರು ತಿಂಗಳ ಸಂಬಳ ಆಗಿಲ್ಲ ಎನ್ನುವುದು ವಿರೋಧ ಪಕ್ಷದವರ ಆರೋಪವಷ್ಟೇ. ಈ ಬಗ್ಗೆ ನನಗೂ ಗೊತ್ತಿಲ್ಲ. ಮಾಹಿತಿ ತಿಳಿದು ಮಾತನಾಡುವೆ. ನನ್ನ ವೇತನ ನೋಡಿಲ್ಲ. ನೋಡಿ ಪರಿಶೀಲನೆ ಮಾಡುವೆ’ ಎಂದು ಹೇಳಿದರು.

ತನಿಖೆ ನಂತರ ಕ್ರಮ: ಬಳ್ಳಾರಿ ವಿಮ್ಸ್‌ ಆಸ್ಪತ್ರೆಯಲ್ಲಿ ವ್ಹೀಲ್‌ಚೇರ್‌ ನೀಡದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ. ಇಂಥ ಘಟನೆಗಳನ್ನು ಬಿಹಾರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ನೋಡಿದ್ದೇವೆ. ಈಗ ಬಳ್ಳಾರಿಯಲ್ಲಿ ಇಂಥ ಘಟನೆ ನಡೆದಿದೆ. ತಪ್ಪಿತಸ್ಥರು ಯಾರೇ ಇದ್ದರೂ ತನಿಖೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ