CONNECT WITH US  

ಮತ್ತೆ ಬಂದ ಯಜಮಾನ: ಆಗ ವಿಷ್ಣುವರ್ಧನ್‌ - ಈಗ ದರ್ಶನ್‌

51ನೇ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

ಫೆಬ್ರವರಿ 16 ದರ್ಶನ್‌ ಹುಟ್ಟುಹಬ್ಬ. ಅಭಿಮಾನಿಗಳ ಸಂಭ್ರಮ ಈಗಾಗಲೇ ಆರಂಭವಾಗಿದೆ. ಈ ನಡುವೆಯೇ ದರ್ಶನ್‌ ಅವರ 51ನೇ ಚಿತ್ರದ ಶೀರ್ಷಿಕೆ ಕುತೂಹಲ ಕೂಡಾ ಅಭಿಮಾನಿಗಳಲ್ಲಿದೆ. ತಮ್ಮ ನೆಚ್ಚಿನ ನಟನ ಚಿತ್ರದ ಟೈಟಲ್‌ ಏನಿರಬಹುದೆಂಬುದನ್ನು ತಿಳಿಯಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಅದು "ಯಜಮಾನ'. ಹೌದು, ದರ್ಶನ್‌ ಅವರ 51ನೇ ಚಿತ್ರಕ್ಕೆ "ಯಜಮಾನ' ಎಂದು ಟೈಟಲ್‌ ಇಡಲಾಗಿದೆ.

ಹಾಗಾಗಿ, ಮುಂದಿನ ದಿನಗಳಲ್ಲಿ ದರ್ಶನ್‌ ಅಭಿಮಾನಿಗಳು ಪ್ರೀತಿಯಿಂದ ಅವರನ್ನು ಯಜಮಾನ ಎಂದು ಕರೆಯಬಹುದು. ನಿಮಗೆ ಗೊತ್ತಿರುವಂತೆ "ಯಜಮಾನ' ಶೀರ್ಷಿಕೆಯಡಿ ಈಗಾಗಲೇ ಚಿತ್ರ ಬಂದಿದೆ. ವಿಷ್ಣುವರ್ಧನ್‌ ಅವರು ನಟಿಸಿರುವ ಈ ಚಿತ್ರ ದೊಡ್ಡ ಯಶಸ್ಸು ಕಂಡಿದೆ. ಈಗ 18 ವರ್ಷಗಳ ನಂತರ ಮತ್ತೆ ಈ ಟೈಟಲ್‌ ರಿಪೀಟ್‌ ಆಗಿದೆ. ಸಹಜವಾಗಿಯೇ ಈಗ ಹಳೆಯ ಯಶಸ್ವಿ ಹಾಗೂ ಸ್ಟಾರ್‌ ನಟರ ಚಿತ್ರಗಳ ಶೀರ್ಷಿಕೆಗಳು ಬಳಕೆಯಾಗುತ್ತಿವೆ.

ಈಗಾಗಲೇ ವಿಷ್ಣುವರ್ಧನ್‌ ಅವರ ಮತ್ತೂಂದು ಯಶಸ್ವಿ ಚಿತ್ರ "ಕೋಟಿಗೊಬ್ಬ' ಇಟ್ಟುಕೊಂಡು ಸುದೀಪ್‌ ಸಿನಿಮಾ ಮಾಡಿದ್ದಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ "ಯಜಮಾನ'. ದರ್ಶನ್‌ "ಯಜಮಾನ' ಟೈಟಲ್‌ನಡಿ ನಟಿಸುತ್ತಿರುವುದರಿಂದ ದರ್ಶನ್‌ ಅಭಿಮಾನಿಗಳ ಜೊತೆ ವಿಷ್ಣುವರ್ಧನ್‌ ಅವರ ಅಭಿಮಾನಿಗಳು ಕೂಡಾ ಚಿತ್ರದ ಬಗ್ಗೆ ಕುತೂಹಲ ಹೊಂದಿದ್ದಾರೆ. ಈ ಚಿತ್ರವನ್ನು ಬಿ.ಸುರೇಶ್‌ ಹಾಗೂ ಶೈಲಜಾ ನಾಗ್‌ ನಿರ್ಮಿಸುತ್ತಿದ್ದು, ಪಿ.ಕುಮಾರ್‌ ಈ ಸಿನಿಮಾದ ನಿರ್ದೇಶಕರು.

ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನಡೆದಿತ್ತು. ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಫೆಬ್ರವರಿ 19ರಿಂದ ಆರಂಭವಾಗಲಿದೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ,"ಬಹದ್ದೂರ್‌' ಚೇತನ್‌ ಸಂಭಾಷಣೆ,  ಶ್ರೀಶ ಕೂದುವಳ್ಳಿ ಛಾಯಾಗ್ರಹಣವಿದೆ. ಚಿತ್ರದಲ್ಲಿ ರವಿಶಂಕರ್‌, ದೇವರಾಜ್‌, ಧನಂಜಯ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. 

ಅಂದಹಾಗೆ, ದರ್ಶನ್‌ ಅವರ 50ನೇ ಚಿತ್ರ "ಕುರುಕ್ಷೇತ್ರ' ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬಿಝಿ. ಇನ್ನು, ಈ ಹಿಂದೆ ದರ್ಶನ್‌ "ಒಡೆಯರ್‌' ಸಿನಿಮಾದಲ್ಲಿ ನಟಿಸುತ್ತಾರೆ ಹಾಗೂ ಈ ಚಿತ್ರವನ್ನು ಸಂದೇಶ್‌ ನಾಗರಾಜ್‌ ನಿರ್ಮಿಸುತ್ತಾರೆಂಬ ಸುದ್ದಿಯನ್ನು ನೀವು ಕೇಳಿರುತ್ತೀರಿ. ಆರಂಭದಲ್ಲಿ ಈ ಚಿತ್ರವನ್ನು ಪವನ್‌ ಒಡೆಯರ್‌ ನಿರ್ದೇಶಿಸುತ್ತಾರೆಂದು ಹೇಳಲಾಗಿತ್ತು. ಆ ನಂತರ ಪವನ್‌ ಬದಲಾದ ಸುದ್ದಿಯೂ ಬಂತು.

ಎಲ್ಲಾ ಓಕೆ, ಹಾಗಾದರೆ "ಒಡೆಯರ್‌' ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆಂದು ನೀವು ಕೇಳಬಹುದು. ಅದಕ್ಕೆ ಉತ್ತರ ಎಂ.ಡಿ. ಶ್ರೀಧರ್‌. ಈಗಾಗಲೇ ಎಂ.ಡಿ.ಶ್ರೀಧರ್‌ ಅವರು ದರ್ಶನ್‌ ಜೊತೆ "ಪೊರ್ಕಿ' ಹಾಗೂ "ಬುಲ್‌ ಬುಲ್‌' ಸಿನಿಮಾ ಮಾಡಿದ್ದಾರೆ. ಈಗ "ಒಡೆಯರ್‌' ಚಿತ್ರ ಮಾಡುವ ಅವಕಾಶ ಸಿಕ್ಕಿದೆ. 

Trending videos

Back to Top