CONNECT WITH US  

ಭ್ರಷ್ಟಾಚಾರ, ನಿದ್ದೆ ಸಿದ್ದು ಸಾಧನೆ

ಬೆಂಗಳೂರು: ರಾಜ್ಯದಲ್ಲಿ ಐದು ವರ್ಷ ಅಧಿಕಾರ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿದ್ದೆ ಮತ್ತು ಭ್ರಷ್ಟಾಚಾರ ಬಿಟ್ಟು ಬೇರೆ ಏನನ್ನೂ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದರು.

ನಗರದ ಜ್ಞಾನಜೋತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾಣಿಜೋದ್ಯಮಿಗಳು ಮತ್ತು ವೃತ್ತಿಪರರ ಜತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಬೆಂಗಳೂರನ್ನು ಸಂಪೂರ್ಣವಾಗಿ ಹಾಳು ಮಾಡಿದೆ.

ಉದ್ಯಮಿಗಳು ಬಿಜೆಪಿಗೆ ಮತ ನೀಡಿದರೆ ಸಾಲದು, ಬೆಂಗಳೂರಿನಿಂದ ಬಿಜೆಪಿ ಅಲೆಯ ಸುನಾಮಿ ಸೃಷ್ಟಿಸಿ ರಾಜ್ಯಾದ್ಯಂತ ಹಬ್ಬಿಸಬೇಕು ಎಂದು ಹೇಳಿದರು. ಐದು ವರ್ಷ ಯಾವುದೇ ಅಡೆತಡೆ ಇಲ್ಲದೇ ಬಿಜೆಪಿ ಅಧಿಕಾರ ಮಾಡುವಂತೆ ಆಶೀರ್ವಾದ ಮಾಡಿದರೆ ಕರ್ನಾಟಕವನ್ನು ಮಾದರಿ ರಾಜ್ಯವಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕರ್ನಾಟಕದಲ್ಲಿ ಜೆಡಿಎಸ್‌ ಅಧಿಕಾರ ನಡೆಸಲು ಸಾಧ್ಯವಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಜಿದ್ದಾಜಿದ್ದಿ ಇದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಗುಜರಾತ್‌ ಕೃಷಿ ಮಾದರಿಯನ್ನು ಅಳವಡಿಸಿ ಕರ್ನಾಟಕದ ಕೃಷಿ ಬಳಕೆ ಭೂಮಿಯನ್ನು 6 ಪಟ್ಟು ಹೆಚ್ಚಳ ಮಾಡಲಿದ್ದೇವೆ. ಮೂಲ ಸೌಕರ್ಯ ಅಭಿವೃದ್ಧಿ, ಕಾನೂನು ಸುವ್ಯವಸ್ಥೆ ನಮ್ಮ ಆದ್ಯತೆಯಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಅಭಿವೃದ್ಧಿ ಆಗಲ್ಲ: ಯುಪಿಎ ಆಡಳಿತದಲ್ಲಿ ದೇಶದ 70 ಕೋಟಿ ಜನರಿಗೆ ಸರ್ಕಾರದ ಸೌಲಭ್ಯ ತಲುಪುತ್ತಿರಲಿಲ್ಲ. 60 ಕೋಟಿ ಜನರಲ್ಲಿ ಬ್ಯಾಂಕ್‌ ಖಾತೆ ಇರಲಿಲ್ಲ. ನರೇಂದ್ರ ಮೋದಿಯವರ ಸರ್ಕಾರ ಬಂದ ನಂತರ 29 ಕೋಟಿ ಜನರಿಗೆ ಜನ್‌ಧನ್‌ ಖಾತೆ ಮಾಡಿಸಲಾಗಿದೆ. 10 ಕೋಟಿ ಕುಟುಂಬಕ್ಕೆ ಶೌಚಾಲಯ ಇರಲಿಲ್ಲ.

ನಮ್ಮ ಸರ್ಕಾರ ದೇಶದಲ್ಲಿ 7.50 ಕೋಟಿ ಶೌಚಾಲಯ ನಿರ್ಮಿಸಿದೆ ಎಂದು ಅಂಕಿ ಅಂಶಗಳ ಸಹಿತವಾಗಿ ವಿವರಿಸಿದರು. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ವಿವಿಧ ಯೋಜನೆಯಡಿ ಕರ್ನಾಟಕಕ್ಕೆ ಲಕ್ಷಾಂತರ ರೂ.ಗಳ ಅನುದಾನ ಹಂಚಿಕೆ ಮಾಡಿದೆ.

ಆದರೆ, ನಿರೀಕ್ಷೆಯಷ್ಟು ಅಭಿವೃದ್ಧಿ ಆಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾ ನಿದ್ದೆಯಲ್ಲಿ ಇರುವುದರ ಜತೆಗೆ ಭ್ರಷ್ಟಾಚಾರದ ಪದಕವನ್ನು ಕೊರಳಿಗೆ ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು. ಉದ್ಯೋಗ ಎಂದರೆ ನೌಕರಿ ನೀಡುವುದಲ್ಲ. ಯಾವ ಸರ್ಕಾರವು ಶೇ.100ರಷ್ಟು ಉದ್ಯೋಗ ನೀಡಲು ಸಾಧ್ಯವಿಲ್ಲ. ಮುದ್ರಾ ಯೋಜನೆಯಯಡಿ 9 ಕೋಟಿ ಯುವಕರಿಗೆ ಸಾಲ ನೀಡಿದ್ದೇವೆ.

ಒಂದು ನೀತಿ ಒಬ್ಬ ನಾಯಕ ಜತೆ ಹೆಜ್ಜೆ ಹಾಕಿದರೆ ದೇಶ ಅಭಿವೃದ್ಧಿಯಾಗುತ್ತದೆ. ದೇಶ ತನ್ನನ್ನು ತಾನು ರಕ್ಷಿಸಿಕೊಳ್ಳ ಬಲ್ಲದು ಎಂಬ ತಾಕತ್ತು ಇರುವ ಇಸ್ರೇಲ್‌ ಮತ್ತು ಅಮೆರಿಕದ ಸಾಲಿಗೆ ಭಾರತ ಸೇರಿದೆ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್‌, ಸಂಸದರಾದ ಪಿ.ಸಿ.ಮೋಹನ್‌, ಅನಿಲ್‌ ಜೈನ್‌ ಮೊದಲಾದವರು ಇದ್ದರು.

ರಾಹುಲ್‌ ಗಾಂಧಿಗೆ ಸವಾಲ್‌: ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಬ್ಬನೇ ಒಬ್ಬ ಉದ್ಯಮಿಯ ಸಾಲ ಮನ್ನಾ ಮಾಡಿದ್ದನ್ನು ದಾಖಲ ಸಹಿತ ತೋರಿಸಿ ಎಂದು ರಾಹುಲ್‌ ಗಾಂಧಿಗೆ ಸವಾಲು ಹಾಕಿದ  ಅಮಿತ್‌ ಶಾ, ಸರ್‌.ಎಂ.ವಿಶ್ವೇಶ್ವರಯ್ಯ ಅವರ ಹೆಸರನ್ನೇ ಸರಿಯಾಗಿ ಉಚ್ಚರಿಸಲು ರಾಹುಲ್‌ ಅವರಿಗೆ ಬರಲ್ಲ. ಸಾಲ ಮನ್ನಾ ಮತ್ತು ಅನುತ್ಪಾದಕ ಆಸ್ತಿಯ ವ್ಯತ್ಯಾಸ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಗಬ್ಬರ್‌ ಪದಬಳಕೆ ಸರಿಯಲ್ಲ: ಜಿಎಸ್‌ಟಿ ವ್ಯವಸ್ಥೆಯನ್ನು ಗಬ್ಬರ್‌ಸಿಂಗ್‌ ಟ್ಯಾಕ್ಸ್‌ ಎಂದು ರಾಹುಲ್‌ ಗಾಂಧಿ ಟೀಕೆ ಮಾಡುತ್ತಿದ್ದಾರೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಯಾವುದೂ ಏಕಪಕ್ಷಿಯ ನಿರ್ಧಾರವಾಗಿಲ್ಲ. ಜಿಎಸ್‌ಟಿ ಕೌನ್ಸೆಲಿಂಗ್‌ನಲ್ಲಿ 13 ಮಂದಿ ಕಾಂಗ್ರೆಸ್‌ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಿದ್ದರು, ಅವರಲ್ಲಿ  6 ಮಂದಿ ಬರಲಿಲ್ಲ. ಈಗ ಮೂವರು ಮಾತ್ರ ಬರುತ್ತಿದ್ದಾರೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಏನಾಗುತ್ತಿದೆ ಎಂಬುದನ್ನೇ ರಾಹುಲ್‌ಗಾಂಧಿ ಅವರ ಪಕ್ಷದವರೇ ಅವರಿಗೆ ಮಾಹಿತಿ ನೀಡಿಲ್ಲ. ಆದರೂ, ಗಬ್ಬರ್‌ಸಿಂಗ್‌ ಟ್ಯಾಕ್ಸ್‌ ಎಂದು ಟೀಕೆ ಮಾಡುತ್ತಾರೆ. ರಾಜಕಾರಣದಲ್ಲಿ ಇಂತಹ ಪದ ಬಳಕೆ ಸರಿಯಲ್ಲ ಎಂಬ ಸಲಹೆ ನೀಡಿದರು.

ನದಿ ಜೋಡಣೆ ಆರಂಭವಾಗಿದೆ: ನದಿ ಜೋಡಣೆ ಕಾರ್ಯವನ್ನು ವಾಜಪೆಯಿ ಆರಂಭಿಸಿ, ಅನುದಾನ ಹಂಚಿಕೆಯೂ ಮಾಡಿದ್ದರು. ನಂತರ ಬಂದ ಯುಪಿಎ ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ ಹಾಗೂ ಅವರಲ್ಲಿ ಆರ್ಥಿಕ ಶಿಸ್ತು ಇರಲಿಲ್ಲ. ಮೋದಿ ಸರ್ಕಾರ ಈಗ ನಾಲ್ಕು ಯೋಜನೆ ಹಾಕಿಕೊಂಡಿದೆ. ಹಂತ ಹಂತವಾಗಿ ನದಿ ಜೋಡಣೆ ಕಾರ್ಯ ನಡೆಯುತ್ತಿದೆ. ದಕ್ಷಿಣದ ನದಿ ನೀರು ಹಂಚಿಕೆ ಬಿಕ್ಕಟ್ಟು ಸುಪ್ರೀಂ ಕೋರ್ಟ್‌ನಲ್ಲಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದರೆ ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಅಮಿತ್‌ ಶಾ ಭರವಸೆ ನೀಡಿದರು.

ವಾಜಪೇಯಿ ಸರ್ಕಾರದ ಆರಂಭದಲ್ಲಿ 4.4ರಷ್ಟಿದ್ದ ಜಿಡಿಪಿ, ಸರ್ಕಾರ ಮುಗಿಯುವ ವೇಳೆಗೆ 8.5ಕ್ಕೆ ಏರಿಕೆಯಾಗಿತ್ತು. ಆರ್ಥಿಕ ತಜ್ಞ ಡಾ.ಮನಮೋಹನ್‌ ಸಿಂಗ್‌ ಅವರು 8.5ರಿಂದ 4.4ಕ್ಕೆ ಇಳಿಸಿದ್ದಾರೆ. ಮೋದಿ ಸರ್ಕಾರದ ಅದನ್ನು 7.4ಕ್ಕೆ ಏರಿಸಿದೆ. ಕಾಂಗ್ರೆಸ್‌ನಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
-ಅಮಿತ್‌ ಶಾ

Trending videos

Back to Top