CONNECT WITH US  

ಕೊಂಕಣಿ ಕರಾವಳಿ ಉತ್ಸವ

ಬೆಂಗಳೂರು: ರಾಷ್ಟ್ರೀಯತೆಯಲ್ಲಿ ಭಾರತೀಯರಾಗಿರುವ ನಾವೆಲ್ಲಾ ಒಂದೇ ಕುಟುಂಬದಂತೆ ಬದುಕಬೇಕು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ತಿಳಿಸಿದರು. ಕೊಂಕಣಿ ಕ್ಯಾಥೊಲಿಕ್‌ ಸಂಘಗಳ ಒಕ್ಕೂಟದಿಂದ ಭಾನುವಾರ ಸೇಂಟ್‌ ಜೋಸೆಫ್ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕೊಂಕಣ ಕರಾವಳಿ ಉತ್ಸವದಲ್ಲಿ ಮಾತನಾಡಿದರು.

ಬ್ಯಾರಿ, ಶೆಟ್ಟರು, ಕೊಂಕಣಿ ಎಂಬ ವಿವಿಧ ಸಮುದಾಯದ ಪ್ರತಿನಿಧಿಗಳಾದ ನಾವೆಲ್ಲರೂ ಭಾರತೀಯರು. ಭಾರತ ಮತ್ತು ಭಾರತೀಯತೆ ಎಂಬುದು ನಮ್ಮ ರಾಷ್ಟ್ರದ ಗುರುತು. ಈ ರಾಷ್ಟ್ರೀಯ ಮನೋಭಾವವೇ ನಮ್ಮೆಲ್ಲರನ್ನೂ ಒಗ್ಗೂಡಿಸಿರುವುದು. ಹೀಗಾಗಿ ನಾವೆಲ್ಲರೂ ಒಂದೇ ಕುಟುಂಬದಂತೆ ಬದುಕಬೇಕು ಎಂದರು.

ಸಾಮಾಜಿಕ ಕಾರ್ಯಕರ್ತೆ ಮಾರ್ಗರೇಟ್‌ ಫ್ರಾನ್ಸಿಸ್‌ ಫಟಾಡೊ ಮಾತನಾಡಿ, ಬಡವರ ದುಃಖವನ್ನು ನಿವಾರಿಸುವುದರಲ್ಲಿಯೇ ಹೆಚ್ಚು ಸಂತೋಷವಿದೆ. ಎಲ್ಲರೂ ಕೈಲಾದಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಒಕ್ಕೂಟದ ಅಧ್ಯಕ್ಷ ಎಡ್ವರ್ಡ್‌ ಡಿಸೋಜಾ ಮಾತನಾಡಿ, ಒಕ್ಕೂಟದ ವತಿಯಿಂದ ವಸತಿ ನಿಲಯ ನಿರ್ಮಿಸಲು ಬಿಡಿಎ ನಿವೇಶನಕ್ಕಾಗಿ 5 ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿದ್ದೇವೆ.

ನಮಗಿನ್ನು ನಿವೇಶನವೇ ಮಂಜೂರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎನ್‌.ಎ.ಹ್ಯಾರಿಸ್‌, ನಿವೇಶನ ಪಡೆಯಲು ನಡೆಸಬೇಕಾದ ಪ್ರಯತ್ನಗಳ ಬಗ್ಗೆ ಸಲಹೆ ನೀಡುವೆ. ಮುಂದಿನ ವರ್ಷ ಒಕ್ಕೂಟದ ಉತ್ಸವದ ವೇಳೆ ನಿವೇಶನ ಮಂಜೂರಾಗುವಂತೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಸಮುದಾಯದ ಸಾಧಕರಾದ ಮಾರ್ಗರೇಟ್‌ ಫ್ರಾನ್ಸಿಸ್‌ ಫಟಾಡೊ, ಕರ್ನಾಟಕ ಮುಖ್ಯ ಫೋಸ್ಟ್‌ ಮಾಸ್ಟರ್‌ ಜನರಲ್‌ ಚಾರ್ಲ್ಸ್‌ ಲೋಬೊ ಹಾಗೂ ಉದ್ಯಮಿ ಎಸ್‌.ಜಾರ್ಜ್‌ ಫರ್ನಾಂಡಿಸ್‌ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಾರೆನ್ಸ್‌ ಸಲ್ಡಾನಾ ಮತ್ತಿತರರು ಹಾಜರಿದ್ದರು.


Trending videos

Back to Top