CONNECT WITH US  

ಜೋಗಿಮಟ್ಟಿಯಲ್ಲಿ ಚಾರಣ ಸನ್ನಿಹಿತ

ಚಿತ್ರದುರ್ಗ: "ಬಯಲುಸೀಮೆಯ ಊಟಿ' ಎಂದೇ ಖ್ಯಾತಿ ಗಳಿಸಿರುವ ಜೋಗಿಮಟ್ಟಿ ವನ್ಯಜೀವಿ ಧಾಮಕ್ಕೆ ಪ್ರವಾಸಿಗರನ್ನು ಸೆಳೆಯಲು ಜೋಗಿಮಟ್ಟಿ ಚಾರಣಕ್ಕೆ ಅನುಮತಿ ನೀಡುವಂತೆ ಅರಣ್ಯ ಇಲಾಖೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದೆ.

ಅರಣ್ಯ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಗೆ 2-3 ತಿಂಗಳಲ್ಲಿ ಅನುಮತಿ ಸಿಗುವ ನಿರೀಕ್ಷೆ ಇದ್ದು, ಚಾರಣಪ್ರಿಯರಲ್ಲಿ ಸಂತಸ ಮೂಡಿಸಲಿದೆ. ಚಳಿಗಾಲ, ಮಳೆಗಾಲ ಸಂದರ್ಭದಲ್ಲಿ ಚಾರಣ ಮಾಡಲು ಪ್ರವಾಸಕ್ಕೆ ಹೋಗುವವರಿಗೆ ಚಾರಣದ ಸವಿ
ಸವಿಯಬಹುದು. ಜೋಗಿಮಟ್ಟಿ ಬೆಂಗಳೂರಿನಿಂದ ಕೇವಲ 200 ಕಿಮೀ ದೂರದಲ್ಲಿದೆ. 

ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹಿರಿಯೂರು ತಾಲೂಕುಗಳ 10,049 ಹೆಕ್ಟೇರ್‌ ಅರಣ್ಯದಲ್ಲಿ ಹರಡಿಕೊಂಡಿರುವ ಜೋಗಿಮಟ್ಟಿ ಅತಿ ಎತ್ತರದ ಸ್ಥಳ. ಸದಾ ಮಂಜು ಮುಸುಕಿದ, ಮೋಡ, ಗುಡ್ಡ, ಬೆಟ್ಟಗಳಿಂದ ಆವರಿಸಿದ್ದು 22 ಸಾವಿರ ಎಕರೆಯಷ್ಟು ವಿಸ್ತಾರವಾಗಿದೆ. ಸಮುದ್ರ ಮಟ್ಟದಿಂದ 1323 ಮೀಟರ್‌ ಎತ್ತರದ ಜೋಗಿಮಟ್ಟಿ ಗಿರಿಧಾಮವಷ್ಟೇ ಅಲ್ಲ, ಚಾರಣ ಪ್ರಿಯರನ್ನು ಕೈಬೀಸಿ ಕರೆಯುವ ಅತ್ಯಂತ ಪ್ರಶಾಂತ, ನಿರ್ಜನ ಪ್ರದೇಶವಾಗಿದೆ.

ರಾಜ್ಯದ ಹಲವು ಚಾರಣ ಪ್ರದೇಶಗಳ ಪಟ್ಟಿಯಲ್ಲಿ ಶೀಘ್ರದಲ್ಲೇ ಜೋಗಿಮಟ್ಟಿ ಸ್ಥಾನ ಪಡೆಯಲಿದೆ. ಚಿಕ್ಕಮಗಳೂರು ಸುತ್ತ ಮುತ್ತಲಿನ ಗುಡ್ಡ ಬೆಟ್ಟಗಳು, ಕುದುರೆಮುಖ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಿಡಿಲು ಮಲ್ಲಿಕಾರ್ಜುನ ಬೆಟ್ಟ, ಕೊಡಗು ಸಮೀಪದ ಬ್ರಹ್ಮಗಿರಿ- ನರಿಮಲೆ ಬೆಟ್ಟ, ಮಡಿಕೇರಿ ಸಮೀಪದ ತಡಿಯಂಡಮೋಳ್‌ ಬೆಟ್ಟ, ಉತ್ತರ ಕನ್ನಡ ಜಿಲ್ಲೆಯ ಗುಡ್ಡ ಬೆಟ್ಟಗಳು, ಹಾಸನ ಜಿಲ್ಲೆಯ ಹಲವು ಗುಡ್ಡ ಬೆಟ್ಟಗಳ ಸಾಲಿನಲ್ಲಿ ಜೋಗಿಮಟ್ಟಿ ಗಿರಿಧಾಮ ಚಾರಣ ತಾಣಗಗಳಾಗಿವೆ.

ಜೋಗಿಮಟ್ಟಿ ಗಿರಿಧಾಮದ ವ್ಯಾಪ್ತಿಯಲ್ಲಿ ಹಲವಾರು ಸಾಹಸ ತಾಣಗಳಿವೆ. ಈ ಎಲ್ಲ ಪ್ರದೇಶಗಳಲ್ಲಿ ಟ್ರಕ್ಕಿಂಗ್‌, ಸಾಹಸ ಟೂರಿಸಂ ಮಾಡಲು ಐತಿಹಾಸಿಕ ಕೋಟೆ ಕೊತ್ತಲುಗಳು, ನೈಸರ್ಗಿಕವಾಗಿರುವ ಗುಡ್ಡ, ಬೆಟ್ಟ, ಬತೇರಿಗಳು, ಭವಿಷ್ಯದ ಟ್ರಕ್ಕಿಂಗ್‌ ಪ್ರವಾಸೋದ್ಯಮವಾಗಿ ಹೊರಹೊಮ್ಮಿವೆ. ದುರ್ಗದ ವೈವಿಧ್ಯಕ್ಕೆ ಟ್ರಕ್ಕಿಂಗ್‌ ತಾಣಗಳು ಮತ್ತಷ್ಟು ಮೆರಗು ನೀಡಲಿವೆ.

ಟ್ರಕ್ಕಿಂಗ್‌ ಸ್ಥಳಗಳಿವು: ಜೋಗಿಮಟ್ಟಿಯ ಸಾಲು ಸಾಲು ಗುಡ್ಡ ಬೆಟ್ಟಗಳು, ಚಿನ್ಮೂಲಾದ್ರಿ ಬೆಟ್ಟ, ಧವಳಪ್ಪನಗುಡ್ಡ, ಈರಣ್ಣನ ಕಲ್ಲು ಬೆಟ್ಟ, ಕಡ್ಲೆಕಟ್ಟೆ ಕಣಿವೆ, ಗೋಡೆಗವಿ, ಗಾಳಿಗುಡ್ಡ, ಚಿರತೆಕಲ್ಲು, ಅಂಕೋಲೆಗುತ್ತಿ, ಸೀಳುಗಲ್ಲು, ದೇವರಹಳ್ಳ, ಪಾಂಡವಮಟ್ಟಿ, ಅಹೋಬಲ ನರಸಿಂಹಸ್ವಾಮಿ ಬೆಟ್ಟ, ಕಿಂದರಿ ಬೆಟ್ಟ, ಬಗರಿ ಬಂಡೆ, ಹಿಮ್ಮತ್‌ ಕೇದಾರ್‌, ಭೂತಪ್ಪನಬೆಟ್ಟ (ವಜ್ರ), ಹನುಮನ ಕಲ್ಲು, ಸಣ್ಣ ಬಿದರೆ ಕಲ್ಲು, ಕೆನ್ನೆಡಲು, ಚಿಕ್ಕಸಿದ್ದವ್ವನಹಳ್ಳಿ, ಕೊಳಾಳ್‌ ಕೆಂಚಾವಧೂತರ ಸಮೀಪದ ವಜ್ರ, ಐರಾನ್‌ ಗುಡ್ಡ, ಬೆಳ್ಳಿ ಗುಡ್ಡಗಳು ಬಯಲು ಸೀಮೆಯಲ್ಲಿ ಚಾರಣ ಮಾಡಲು ಯೋಗ್ಯ ಸ್ಥಳಗಳಾಗಿವೆ.

ಈ ಸ್ಥಳಗಳು ಊಟಿಯ ವಾತಾವರಣವನ್ನು ನೆನಪಿಸುತ್ತವೆ. ಮುಂಜಾನೆಯ ಮಂಜನ್ನು ಸೀಳಿಕೊಂಡು ಪಯಣಿಸುವ ಚಾರಣಿಗರಿಗೆ ರಸ್ತೆಯ ಅಕ್ಕಪಕ್ಕದ ಕಲ್ಲುಗಳ ಮೇಲೆ ಕುಳಿತ ನವಿಲುಗಳು ಸ್ವಾಗತ ಕೋರುತ್ತವೆ. ಗಿರಿ ಶಿಖರಗಳ ತುದಿಗೆ
ಮೋಡಗಳು ಮುತ್ತಿಕ್ಕಿ ಮಳೆ ಸುರಿಯುವ ದೃಶ್ಯ ಮನಮೋಹಕ.

ಚಿತ್ರದುರ್ಗದ ಬಸ್‌ ನಿಲ್ದಾಣದಿಂದ ಮದಕರಿ ವೃತ್ತದ ಮೂಲಕ 8 ಕಿಮೀ ಕಾಡಿನ ಮಧ್ಯೆ ಸಾಗಿದರೆ ಜೋಗಿಮಟ್ಟಿ ಪ್ರದೇಶ ಸಿಗುತ್ತದೆ. ಜೋಗಿಮಟ್ಟಿ ಚಾರಣಕ್ಕೆ ಹಲವು ಮಾರ್ಗಗಳಿದ್ದು ಕೋಟೆ, ಚಂದ್ರವಳ್ಳಿ, ಆಡುಮಲ್ಲೇಶ್ವರ, ಜೋಗಿಮಟ್ಟಿಗೆ ಯಾವುದೇ ಮಾರ್ಗದಿಂದ ಹೋಗಬಹುದಾಗಿದೆ. ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಚಾರಣ ಮಾಡಲಿರುವ
ಪ್ರತಿ ವ್ಯಕ್ತಿಗೆ 200 ರೂ. ಶುಲ್ಕ ನಿಗದಿ ಮಾಡುವಂತೆ ಕೋರಲಾಗಿದೆ. ಈ ಹಣವನ್ನು ಮಾರ್ಗದರ್ಶಿಗೆ ನೀಡಲಾಗುತ್ತದೆ. 25 ರೂ. ಪ್ರವೇಶ ಶುಲ್ಕ, ರಾತ್ರಿ ಅರಣ್ಯ ಟೆಂಟ್‌ ಗಳಲ್ಲಿ ಉಳಿದುಕೊಂಡರೆ ಪ್ರತಿ ವ್ಯಕ್ತಿಗೆ 500 ರೂ. ನಿಗದಿ ಮಾಡುವಂತೆ ಪ್ರಸ್ತಾವನೆಯಲ್ಲಿ ಕೋರಲಾಗಿದೆ. 
 ಕೆ.ಆರ್‌. ಮಂಜುನಾಥ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ.

„ಹರಿಯಬ್ಬೆ ಹೆಂಜಾರಪ್ಪ


Trending videos

Back to Top