CONNECT WITH US  

ಪರಿವರ್ತನೆಗೆ ಯುವಶಕ್ತಿ ಬಳಕೆಯಾಗಲಿ

ದಾವಣಗೆರೆ: ಸಮಾಜವನ್ನು ಸದಾ ದೂಷಿಸುವ ಬದಲು ಅದನ್ನು ಉತ್ತಮ ರೀತಿ ಪರಿವರ್ತಿಸಲು ಯುವಜನತೆ ತಮ್ಮ ಬುದ್ಧಿ ಮತ್ತು ಶಕ್ತಿ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಕಿವಿಮಾತು ಹೇಳಿದ್ದಾರೆ.

ಜಿಲ್ಲಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಎ.ಆರ್‌.ಜಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಶನಿವಾರ ಎ.ಆರ್‌.ಜಿ. ಕಾಲೇಜಿನ ಸೆಮಿನಾರ್‌ ಹಾಲ್‌ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯುವ ದಿನಾಚರಣೆ-2018ರ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ದೇಶ ಕಟ್ಟುವಲ್ಲಿ ಯುವಜನತೆ ಪಾತ್ರ ಅತೀ ಮಹತ್ವದ್ದು. ಸಮಾಜದ ಪರಿವರ್ತನೆ ಯುವಜನಾಂಗದ ಕೈಯಲ್ಲಿದೆ. ಇಂತಹ ಅಮೂಲ್ಯ ಕಾಯಕದಿಂದ ಯುವ ಜನಾಂಗ ವಿಮುಖರಾಗಬಾರದು ಎಂದರು.

18 ವರ್ಷ ತುಂಬಿದ ಯುವಜನತೆಗೆ ಸಂವಿಧಾನ ನಮ್ಮ ನಾಯಕರನ್ನು ಚುನಾಯಿಸುವ ಹಕ್ಕು ನೀಡಿದೆ. ಇದೊಂದು ಜವಾಬ್ದಾರಿಯುತ ಕರ್ತವ್ಯ. ನಮ್ಮ ಎಲ್ಲಾ ಹಕ್ಕು-ಬದ್ಧತೆ ನಿರ್ವಹಿಸಲು ಉತ್ತಮ ಜ್ಞಾನ ಬೇಕು. ಕೇವಲ ಪಠ್ಯದ ಜ್ಞಾನವಲ್ಲದೇ, ಬದುಕಿಗೆ ಉತ್ತಮ ಸಂದೇಶ ನೀಡುವ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯ, ಬುದ್ಧ, ಬಸವ, ವಿವೇಕಾನಂದರಂತಹ ಮಹಾನ್‌ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡು, ಅವರ ಮೌಲ್ಯ, ಆದರ್ಶ ಅಳವಡಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಯುವ ಶಕ್ತಿ ಬಳಸಿ ಏನೆಲ್ಲಾ ಬದಲಾವಣೆ ಮಾಡಬಹುದೆಂದು ವಿವೇಕಾನಂದರು ನಂಬಿದ್ದರು. ಅಗಾಧ ಶಕ್ತಿಯಿರುವ ಯುವಶಕ್ತಿ ಇಂದು ದುಶ್ಚಟಗಳಿಗೆ ದಾಸರಾಗುತ್ತಿರುವುದಕ್ಕೆ ಏನೇ ಕಾರಣಗಳಿದ್ದರೂ, ಅವನ್ನೆಲ್ಲಾ ಮೆಟ್ಟಿನಿಲ್ಲುವ ಸಂಕಲ್ಪ ಮಾಡಬೇಕಿದೆ. ಇಂದಿನ ಯುವಜನತೆಯಲ್ಲಿ ನಿರುತ್ಸಾಹ,
ಹುಡುಗಾಟಿಕೆ ಹೆಚ್ಚಾಗಿ ಕಾಣುತ್ತಿದ್ದೇವೆ. ಇಂತಹ ಮನೋಧೋರಣೆ ಬಿಟ್ಟು ಉತ್ತಮ ಆಲೋಚನೆ, ಚಿಂತನೆ ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು. 

ಮುಖ್ಯ ಅತಿಥಿಯಾಗಿದ್ದ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ನಮ್ಮೆಲ್ಲರಿಗೂ ಆಯ್ಕೆಗಳಿವೆ. ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದೆಂದು ತಿಳಿಯುವ ವಿವೇಚನೆ ಇದೆ. ಯಾವುದು ಸರಿ ಮತ್ತು ತಪ್ಪು ಎಂಬುದನ್ನ ಒಳಮನಸ್ಸು ಹೇಳುತ್ತಿರುತ್ತದೆ. ಒಳ ಮನಸ್ಸಿನ ಮಾತು ಕೇಳಿ ಹೆಜ್ಜೆ ಇಟ್ಟಲ್ಲಿ ಯುವಜನತೆ ತಪ್ಪು ಹಾದಿಯಲ್ಲಿ ಹೋಗಲು ಸಾಧ್ಯವಿಲ್ಲ ಎಂದರು.

ಯುವ ಜನಾಂಗ ತಮ್ಮ ಭವಿಷ್ಯದ ಬಗ್ಗೆ ಉನ್ನತ ಪರಿಕಲ್ಪನೆ ಹೊಂದಬೇಕು. ಪಶ್ಚಾತ್ತಾಪ ಪಡುವ ಹೆಜ್ಜೆ ನಿಮ್ಮದಾಗಬಾರದು. ಯಾವುದೇ ಸೋಲಿಗೆ ಹತಾಶರಾಗಬಾರದು. ಒಂದು ದಾರಿ ಮುಚ್ಚಿದರೆ, ಹತ್ತು ದಾರಿ ತೆರೆದಿರುತ್ತದೆ. ಅದನ್ನು ನೋಡುವ ಆಲೋಚನೆ ಹೊಂದಬೇಕು ಎಂದರು.

ಉಪನ್ಯಾಸ ನೀಡಿದ ಪ್ರೊ| ಮಲ್ಲಿಕಾರ್ಜುನ ಹಲಸಂಗಿ, 1985ರಲ್ಲಿ ಅಂತಾರಾಷ್ಟ್ರೀಯ ಯುವ ವರ್ಷಾಚರಣೆ ಆರಂಭವಾಗಿದ್ದು 2010ರಿಂದ ಅಂತಾರಾಷ್ಟ್ರೀಯ ಯುವ ದಿನವನ್ನು ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯದೊಡನೆ ಆಚರಿಸಲಾಗುತ್ತಿದೆ. ಈ ಬಾರಿಯ ಧ್ಯೇಯ ವಾಕ್ಯ ಸೇಫ್‌ ಸ್ಪೇಸ್‌ ಫಾರ್‌ ಯೂತ್‌ ಎಂಬುದಾಗಿದೆ. 

ಪ್ರಜ್ಞೆ, ಕರುಣೆ ಮತ್ತು ಸಮತೆ ಒಳಗೊಂಡಿರುವುದೇ ಮಾನವೀಯ ಸಮಾಜ. ಜಗತ್ತಿನಾದ್ಯಂತ ಯುವಜನರ ಸಂಖ್ಯೆ ಹೆಚ್ಚಿದ್ದು, ಯುಎನ್‌ಒ ಯುವಜನತೆಗೆ ಸವಾಲಾಗಿ ಕಂಡುಬರುವ ಶಿಕ್ಷಣ, ವ್ಯಸನ, ಜಾಗತೀಕರಣ, ಆರೋಗ್ಯ ಸೇರಿದಂತೆ 15 ಆದ್ಯತಾ ಕ್ಷೇತ್ರಗಳನ್ನು ಗುರುತಿಸಿ ಸುಧಾರಣೆಗೆ ಆಯ್ಕೆ ಮಾಡಿಕೊಂಡಿದೆ. ಆ ಮೂಲಕ ಉತ್ತಮ ಸಮಾಜ ಸ್ಥಾಪಿಸುವ ಆಶಯ ಹೊಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ವರ್ಣಾಶ್ರಮ ಸಂಸ್ಕೃತಿ ಪುನರೂಪಿಸುವ ರಾಜಕೀಯ ಗುಪ್ತಸೂಚಿ ಕಾಣುತ್ತಿದೆ. ರಾಜಕೀಯ ಆಗು-ಹೋಗು ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಯುವಜನತೆ ಗಮನ ಹರಿಸಿ, ಜವಾಬ್ದಾರಿಯಿಂದ ನಡೆದುಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕಾಧಿಕಾರಿ ಡಾ| ಜಿ. ರಾಘವನ್‌, 2016-17ನೇ ಸಾಲಿನಲ್ಲಿ ವಿಶ್ವದಲ್ಲಿ 28 ಲಕ್ಷ ಜನರು ಕುಡಿತದಿಂದ ಸಾವನ್ನಪ್ಪಿದ್ದಾರೆ. ಒಟ್ಟಾರೆ ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಮೊದಲೆಲ್ಲ ಮನೆಗಳಲ್ಲಿ ಕೂಡು ಕುಟುಂಬ, ಮನೆ ತುಂಬ ಮಕ್ಕಳಿರುತ್ತಿದ್ದರು.

ಈಗೀಗ ಪ್ರತ್ಯೇಕ ಕುಟುಂಬಗಳಲ್ಲಿ ಮಕ್ಕಳು ಒಂಟಿಯಾಗುತ್ತಿದ್ದಾರೆ. ಇಂತಹ ಮಕ್ಕಳ ಬಗ್ಗೆ ಹಚ್ಚಿನ ಗಮನ ಹರಿಸಬೇಕು. ದುಶ್ಚಟಗಳಿಗೆ ಮಾರುಹೋಗದಂತೆ ಎಚ್ಚರ ವಹಿಸಬೇಕಿದೆ ಎಂದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎಸ್‌.ತ್ರಿಪುಲಾಂಬ, ಎ.ಆರ್‌.ಜಿ. ಕಾಲೇಜಿನ ಪ್ರೊ| ಕೆ.ಎಸ್‌. ಬಸವರಾಜಪ್ಪ ಮಾತನಾಡಿದರು. ದುಶ್ಚಟಗಳ ದುಷ್ಪರಿಣಾಮಗಳ ಕುರಿತು ಎಆರ್‌ಜಿ ಕಾಲೇಜಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.


Trending videos

Back to Top