CONNECT WITH US  

ತರಕಾರಿ ಧಾರಣೆ ಗಗನಕ್ಕೆ : ಮತ್ತೆ ತತ್ತರಿಸಿದ ಜನತೆ

ಕೇರಳ ಜಲಪ್ರಳಯ ಪರಿಣಾಮ 

ಕಾಸರಗೋಡು: ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ ನೆರೆ ಯಿಂದಾಗಿ ಕೇರಳದಲ್ಲಿ ತರಕಾರಿ ಧಾರಣೆ ಗಗನಕ್ಕೇರುತ್ತಿದೆ. ಕರ್ನಾಟಕದ ಕೊಡಗು ಮತ್ತು ಕೇರಳದ ವಯನಾಡಿನಲ್ಲಿ ನೆರೆಯಿಂದಾಗಿ ಭಾರೀ ಪ್ರಮಾಣದಲ್ಲಿ ಕೃಷಿ ನಾಶನಷ್ಟ ಸಂಭವಿಸಿದ ಪರಿಣಾಮವಾಗಿ ತರಕಾರಿ ಧಾರಣೆ ಗಗನಕ್ಕೇರುವ ಮೂಲಕ ಈಗಾಗಲೇ ತತ್ತರಿಸಿರುವ ಜನರ ಮೇಲೆ ಇನ್ನೊಂದು ಹೊಡೆತ ಬಿದ್ದಿದೆ.

ಬಹುತೇಕ ಕೃಷಿ ನಾಶ
ನೆರೆಯಿಂದಾಗಿ ಬಹುತೇಕ ಕೃಷಿ ನಾಶ-ನಷ್ಟ ಸಂಭವಿಸಿದ್ದು ಈ ಕಾರಣದಿಂದ ಕ್ಯಾರೆಟ್‌ ಸಹಿತ ಬಹುತೇಕ ಎಲ್ಲÉ ತರಕಾರಿಗಳ ಬೆಲೆಹೆಚ್ಚಳವಾಗಿದೆ. ಅದೇ ವೇಳೆ ಕೆಲವೊಂದು ತರಕಾರಿ ಧಾರಣೆ ಕುಸಿಯುತ್ತಿದೆ. ಕ್ಯಾರೆಟ್‌ ಧಾರಣೆ ಬಹಳಷ್ಟು ಗಗನಕ್ಕೇರಿದೆ. ವಾರದ ಹಿಂದೆ ಕ್ಯಾರೆಟ್‌ ಕಿಲೋ ಒಂದಕ್ಕೆ 34 ರೂ. ಇತ್ತು. ಇದೀಗ ಕಾಸರಗೋಡಿನಲ್ಲಿ ಈ ಧಾರಣೆ 80 ರೂ.ಗೇರಿದೆ. ಸಾಮಾನ್ಯವಾಗಿ ಲಿಂಬೆಗೆ ಮಳೆಗಾಲದಲ್ಲಿ ಧಾರಣೆ ಕುಸಿಯುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಲಿಂಬೆಗೆ ಧಾರಣೆ ಹೆಚ್ಚಳವಾಗಿದೆ. ಕಿಲೋ ಒಂದಕ್ಕೆ 40 ರೂ.ಯಿಂದ 60 ರೂ.ಗೇರಿದೆ. ಬೆಂಡೆ ಧಾರಣೆ 30 ರೂ.ಯಿಂದ 50 ರೂ.ಗೇರಿದೆ. ತೊಂಡೆಕಾಯಿ ಧಾರಣೆ 40 ರೂ. ಯಿಂದ 56 ಕ್ಕೇರಿದೆ. ಪಡುವಲ ಕಾಯಿ ಧಾರಣೆ 40 ರೂ.ಯಿಂದ 60 ರೂ.ಗೇರಿದೆ. ಕ್ಯಾಪ್ಸಿಕೋ ಧಾರಣೆ 60 ರೂ.ಯಿಂದ 80 ಕ್ಕೇರಿದೆ. ಗೆಣಸು ಧಾರಣೆ 20 ರೂ. ಯಿಂದ 30 ರೂ.ಗೇರಿದೆ.

ಇದೇ ವೇಳೆ ಟೊಮೆಟೋ ಧಾರಣೆ ಕುಸಿದಿದೆ. ಟೊಮೆಟೋ ಧಾರಣೆ 20 ರೂ.ಯಿಂದ 10ಕ್ಕಿಳಿದಿದೆ. ಇದರಿಂದ ಗ್ರಾಹಕರು ತಕ್ಕ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಅಲಸಂಡೆ, ಸಣ್ಣ ನೀರುಳ್ಳಿ, ಹಸಿ ಮೆಣಸು, ಬಟಾಟೆ ಮೊದಲಾದವುಗಳ ಧಾರಣೆ ತಕ್ಕ ಮಟ್ಟಿಗೆ ಕುಸಿದಿದೆ. ಅದೇ ಸಂದರ್ಭದಲ್ಲಿ ಹಣ್ಣುಹಂಪಲು ಧಾರಣೆ ಗಗನಕ್ಕೇರುತ್ತಿದೆ. ಕದಳಿ, ನೇಂದ್ರ, ಮೈಸೂರು ಬಾಳೆ ಹಣ್ಣು ಮೊದಲಾದವುಗಳ ಧಾರಣೆ ಹೆಚ್ಚಳವಾಗಿದೆ. ಮೈಸೂರು ಕಿಲೋಗೆ 40 ರೂ. ಇದ್ದರೆ, ನೇಂದ್ರ ಕಿಲೋ ಒಂದಕ್ಕೆ 50 ರೂ. ಇದ್ದರೆ ಕದಳಿಗೆ 65 ರೂ. ಇದೆ. ಮುಸುಂಬಿಗೆ 60 ರೂ., ಆರೆಂಜ್‌ಗೆ 80 ರೂ., ದಾಳಿಂಬೆಗೆ 80 ರೂ., ದ್ರಾಕ್ಷೆಗೆ 80 ರೂ., ಚಿಕ್ಕುಗೆ 80 ರೂ. ಧಾರಣೆಯಿದೆ.

ಮೀನು ಧಾರಣೆ ಕುಸಿತ  
ಟ್ರಾಲಿಂಗ್‌ ಸಂದರ್ಭದಲ್ಲಿ ಮೀನಿನ ಧಾರಣೆ ಗಗನಕ್ಕೇರಿತು. ಆದರೆ ಟ್ರಾಲಿಂಗ್‌ ನಿಷೇಧ ಹಿಂದೆೆಗೆದುಕೊಂಡ ಬಳಿಕ ಕೆಲವು ದಿನಗಳಲ್ಲಿ ಮೀನಿನ ಧಾರಣೆಯಲ್ಲಿ ಮತ್ತೆ ಹೆಚ್ಚಳವಾಗಿತ್ತು. ಆದರೆ ದಿನಕಳೆದಂತೆ ಮೀನಿನ ಧಾರಣೆ ಕುಸಿಯುತ್ತಾ ಬಂದಿದೆ. ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ಮೀನು ಲಭಿಸುತ್ತಿರುವುದರಿಂದ ಮೀನಿನ ಧಾರಣೆ ಕುಸಿಯಲು ಕಾರಣವಾಗಿದೆ ಎಂದು ಬೆಸ್ತರು ಹೇಳುತ್ತಿದ್ದಾರೆ. ಮೀನಿನ ಧಾರಣೆ ಕುಸಿತದಿಂದಾಗಿ ಬೆಸ್ತರಿಗೆ ಸೂಕ್ತ ಲಾಭ ಲಭಿಸುತ್ತಿಲ್ಲ. ಮೀನುಗಾರಿಕೆಗೆ ಹಾಕಿದ ಹಣವೂ ಲಭಿಸುತ್ತಿಲ್ಲ ಎಂಬುದು ಬೆಸ್ತರ ಅಂಬೋಣ.

ಕೇರಳದ ಕಾಸರಗೋಡು ಮತ್ತು ತಿರುವನಂತಪುರ ಹೊರತು ಪಡಿಸಿ 12 ಜಿಲ್ಲೆಗಳಲ್ಲಿ ಹಿಂದೆಂದೂ ಕಾಣದ ನೆರೆ ಮತ್ತು ಕರ್ನಾಟಕದ ಕೊಡಗಿನಲ್ಲಿ ಜಲ ಪ್ರಳಯದ ಹಿನ್ನೆಲೆಯಲ್ಲಿ ತರಕಾರಿ ಧಾರಣೆ ಹೆಚ್ಚಳವಾಗಿದೆ. ಇದರಿಂದಾಗಿ ತರಕಾರಿ ಮಾರಾಟ ಕೂಡಾ ಕುಸಿದಿದೆ. ತರಕಾರಿ ಖರೀದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಭಯವಾಗುತ್ತಿದೆ. ತರಕಾರಿ ಧಾರಣೆ ಹೆಚ್ಚಳದಿಂದ ಗ್ರಾಹಕರು, ವರ್ತಕರೂ ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ.
- ರಾಮಚಂದ್ರ
ತರಕಾರಿ ವ್ಯಾಪಾರಿ


Trending videos

Back to Top